ದ್ವಿಚಕ್ರ ವಾಹನದ ಸೈಲೆನ್ಸರ್‌ನಿಂದ ಅಧಿಕ ಮತ್ತು ಕರ್ಕಶ ಶಬ್ದ ಮಾಡುವ ವಾಹನಗಳನ್ನು ಸೀಜ್ ಮಾಡಿ ಆ ವಾಹನಗಳ 61 ಸೈಲೆನ್ಸರ್ ತೆಗೆದು ಬುಲ್ಡೋಜರ್ ಮೂಲಕ ನಿಷ್ಕ್ರಿಯಗೊಳಿಸಿದ್ದೇವೆ. ವಾಹನಗಳಿಗೆ ಹೆಚ್ಚು ಶಬ್ಧ ಬರುವ ಸೈಲೆನ್ಸರ್ ಅಳವಡಿಸಿದರೆ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ನಗರದ ಗ್ಯಾರೇಜ್ ಮಾಲೀಕರಿಗೆ ಈಗಾಗಲೇ ಈ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಬೀದರ್ ಜಿಲ್ಲಾ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ ಎಲ್ ತಿಳಿಸಿದರು.
ಬೀದರ್ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಪೊಲೀಸರು ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. “ಸಾರ್ವಜನಿಕರು ತಮ್ಮ ಅಮೂಲ್ಯವಾದ ಜೀವ ರಕ್ಷಣೆಗೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಮರೆಯಬಾರದು” ಎಂದು ಹೇಳಿದರು.
“ಕಳೆದ ವರ್ಷ ರಸ್ತೆ ಅಪಘಾತದಿಂದ 332 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ತಂಡ ವಿಶ್ಲೇಷಣೆ ಮಾಡಿದಾಗ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ ಮತ್ತು ಕಾರು ಚಾಲನೆ ಮಾಡುವಾಗ ಸಿಟ್ ಬೆಲ್ಟ್ ಹಾಕದೇ ಇರುವುದಕ್ಕೆ ಈ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದು, ಸಾರ್ವಜನಿಕರಲ್ಲಿ ಹಾಗೂ ಶಾಲೆ-ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೆಲ್ಮೆಟ್ ಧರಿಸದೇ ಚಾಲನೆ ಮಾಡುವವರಿಗೆ ದಂಡ ಹಾಕುವ ಬದಲಾಗಿ ಆ ದಂಡದ ಮೊತ್ತದಲ್ಲಿ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ನಿಷೇಧಿತ ಮಾದಕ ವಸ್ತು ʼಚರಸ್ʼ ಸಾಗಾಟ; ಕಾರು ಸಹಿತ ಆರೋಪಿ ಬಂಧನ
“ಬೀದರ್ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಹೆಲ್ಮೆಟ್ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಹೆಲ್ಮೆಟ್ ಧರಿಸಿದವರನ್ನು ಕರೆಯಿಸಿ ನಗರದಲ್ಲಿ ನಡೆದ ರಸ್ತೆ ಅಪಘಾತ ಸಿಸಿಟಿವಿ ಫೂಟೇಜ್ ತೆಗೆದು ಅದರ ತುಣುಕಗಳ ವಿಡಿಯೋ ತೋರಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಢಿಸಲಾಗುತ್ತಿದೆ. ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಚಾಲನೆ ಮಾಡುವುದಿಲ್ಲವೆಂದು ಸಾರ್ವಜನಿಕರಿಂದ ಶಪಥ ಮಾಡಿಸಲಾಗುತ್ತಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕ ಕೆ ಎಂ ಸತೀಶ, ಗಾಂಧಿಗಂಜ್ ಪೊಲೀಸ್ ಠಾಣೆಯ ಸಿಪಿಐ ಹನುಮರೆಡ್ಡೆಪ್ಪಾ, ನ್ಯೂಟೌನ್ ಪೊಲೀಸ್ ಠಾಣೆಯ ಸಿಪಿಐ ವೆಂಕಟೇಶ, ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕಪೀಲದೇವ ಸೇರಿದಂತೆ ಇತರರು ಇದ್ದರು.