ಭಾಲ್ಕಿ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ ಕಚೇರಿ ಎದುರು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಎರಡ್ಮೂರು ದಿನಗಳಿಂದ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಹೋರಾಟಕ್ಕೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
ಗ್ರಾಮ ಆಡಳಿತಾಧಿಕಾರಿಗಳಿಗೆ ಪ್ರತ್ಯೇಕ ಕಟ್ಟಡ, ಮೂಲ ಸೌಲಭ್ಯ, ವೇತನ ಶ್ರೇಣಿ ನಿಗದಿ, ಅನುಕಂಪದ ಹುದ್ಧೆ ನೇಮಕಾತಿ ತಿದ್ದುಪಡಿ, ಜೀವಹಾನಿ ಪರಿಹಾರ ₹50 ಲಕ್ಷ ರೂ, ವರ್ಗಾವಣೆ ವಿಶೇಷ ಮಾರ್ಗಸೂಚಿ ರಚನೆ, ಪ್ರಯಾಣ ಭತ್ಯೆ ಹೆಚ್ಚಿಸುವುದು, ಒಂದು ತಿಂಗಳ ವೇತನ ಹೆಚ್ಚುವರಿ ಸೇರಿ ಸುಮಾರು 23 ಬೇಡಿಕೆ ಈಡೇರಿಕೆಗೆ ಗ್ರಾಮ ಆಡಳಿತಾಧಿಕಾರಿಗಳ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನ್ಯಾಯಯುತವಾಗಿವೆ.ಸರಕಾರ ಕೂಡಲೇ ಸ್ಪಂದಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಕನ್ನಡಪರ, ದಲಿತಪರ, ಮರಾಠಾ, ಸರಕಾರಿ ನೌಕರರ, ಕಸಾಪ ಸೇರಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಸರಕಾರಿ ನೌಕರರ ಸಂಘದ ಭಾಲ್ಕಿ ತಾಲ್ಲೂಕಾಧ್ಯಕ್ಷ ಚಂದ್ರಶೇಖರ ಬನ್ನಾಳೆ ಮಾತನಾಡಿ, ʼಗ್ರಾಮ ಆಡಳಿತಾಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಹಲವು ಸವಾಲುಗಳ ನಡುವೆ ಉತ್ತಮ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು ನ್ಯಾಯಯುತವಾಗಿದ್ದು, ಎಲ್ಲ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಬೇಕುʼ ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ ವಿಶ್ವವಿದ್ಯಾಲಯ ಎಡವಟ್ಟು : ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳ ಸರಮಾಲೆ
ಪ್ರತಿಭಟನೆಯಲ್ಲಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಅಹ್ಮದ ಸಾಬ್ ಮುಲ್ಲಾ, ಉಪಾಧ್ಯಕ್ಷ ಸೋಮನಿಂಗ್ ಸಿರಸ್ಯಾದ್, ಪ್ರಧಾನ ಕಾರ್ಯದರ್ಶಿ ಸಂತೋಷ ಚವ್ಹಾಣ, ಖಜಾಂಚಿ ಬಾಬು ನಂದುರಕರ್, ವೀರಣ್ಣ ತಗಾರೆ, ವಿನೋದ ರಾಠೋಡ, ನಾಜೀಮ, ಅಂಬರೀಶ್, ಅರ್ಚನಾ, ಪಾರ್ವತಿ, ನೇತ್ರಾವತಿ ಸೇರಿದಂತೆ ಮತ್ತಿತರಿದ್ದರು.