ಶಾಲಾ ಶಿಕ್ಷಣ ಇಲಾಖೆ 9ನೇ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವ ಪ್ರಸ್ತಾವ ಕೈಬಿಡದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ಎಚ್ಚರಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿಯ ಹೆಚ್ಚುವರಿ ಆಯುಕ್ತರ ಹೆಸರಿಗೆ ಬರೆದ ಮನವಿ ಪತ್ರವನ್ನು ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಷ ಅವರಿಗೆ ಸಲ್ಲಿಸಿದರು.
ʼವಿಶೇಷ ತರಗತಿ ಪ್ರಸ್ತಾವ ಅವೈಜ್ಞಾನಿಕ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಾರ್ಷಿಕ ಶಾಲಾ ಅವಧಿ ನಿಯಮದ ಉಲ್ಲಂಘನೆಯೂ ಆಗಲಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಈಗಾಗಲೇ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆʼ ಎಂದು ಹೇಳಿದ್ದಾರೆ.
ʼಕಲ್ಯಾಣ ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಅಧಿಕ ತಾಪಮಾನ ಇರುವ ಕಾರಣ ಮಕ್ಕಳಿಗೆ ಶಾಲೆಗೆ ತೆರಳಲು ಸಮಸ್ಯೆಯಾಗಲಿದೆ. ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಹೀಗಾಗಿ ವಿಶೇಷ ತರಗತಿ ಪ್ರಸ್ತಾವ ಕೈಬಿಡಬೇಕುʼ ಎಂದು ಬೇಡಿಕೆ ಮಂಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ತಂಗಿಯನ್ನು ಪ್ರೀತಿಸಿದಕ್ಕೆ ಯುವಕನನ್ನು ಕೊಲೆಗೈದ ಸಹೋದರರು
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೆಬೂಬ್ ಪಟೇಲ್, ಉಪಾಧ್ಯಕ್ಷ ಸಂತೋಷ್ ಚಲುವಾ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಬಿರಾದಾರ, ಸಂಘಟನಾ ಕಾರ್ಯದರ್ಶಿ ಮಾಧವ್ ಗಣೇಶ, ಖಜಾಂಚಿ ಸಿದ್ದಮ್ಮ ಆರ್.ಎಚ್. ಮತ್ತಿತರರು ಇದ್ದರು.