ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುವ ಕೆಲಸ ಜನವಾದಿ ಮಹಿಳಾ ಸಂಘಟನೆ ಮಾಡುತ್ತಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿದರು.
ಹುಮನಾಬಾದ್ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ʼಕಳೆದ 36 ವರ್ಷಗಳಿಂದ ಜನವಾದಿ ಮಹಿಳಾ ಸಂಘಟನೆ ನೊಂದ ಮಹಿಳೆರ ಧ್ವನಿಯಾಗಿ ಕಾರ್ಯನಿರ್ವಹಿಸಿಸುತ್ತಿದೆʼ ಎಂದರು.
ʼ1981ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ದೇಶಾದ್ಯಂತ ಸುಮಾರು 1.20 ಕೋಟಿಗೂ ಅಧಿಕ ಮಹಿಳಾ ಸದಸ್ಯರನ್ನು ಹೊಂದಿದ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿ ಹೊರಹೊಮ್ಮಿದೆ. ಬೀದರ್ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಎಲ್ಲ ಬಗೆಯ ಶೋಷಣೆ ನಡೆಯುತ್ತಿರುವುದು ಖಂಡನೀಯವಾಗಿದೆ. ಕೋಮು ಸಾಮರಸ್ಯ, ಜನಾಂಗೀಯ ನಿಂದನೆ, ಧಾರ್ಮಿಕ ಅಸಹನೆ ಹುಟ್ಟು ಹಾಕಲಾಗುತ್ತಿದೆ. ಇದರಿಂದಾಗಿ ಎಲ್ಲ ಧರ್ಮಗಳ ಮಹಿಳೆಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಜನಾಂಗೀಯ ದ್ವೇಷ ಹರಡದಂತೆ ನೋಡಿಕೊಳ್ಳಬೇಕಾಗಿದೆʼ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ʼದುಡಿಯುವ ಜನರೆಲ್ಲರೂ ಒಂದೇ. ಜಗತ್ತಿನ ಮಹಿಳೆಯರೆಲ್ಲರೂ ಒಂದೇ ಆಗಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ, ದೌರ್ಜನ್ಯ ತಡೆಯಬೇಕಾದರೆ, ನಾವೆಲ್ಲ ಸಂಘಟಿತರಾಗಬೇಕು. ಜನವಾದಿ ಸಂಘಟನೆಯ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರತಿ ಗ್ರಾಮ, ಪಟ್ಟಣ, ತಾಲ್ಲೂಕುಗಳಲ್ಲಿ ಜನವಾದಿ ಸಂಘಟನೆ ಕಟ್ಟುವ ಅಗತ್ಯವಿದೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ನಿರ್ಮಾಣವಾಗದ ಸ್ವಂತ ಕಟ್ಟಡ : ಯರನಳ್ಳಿ ಗ್ರಾಮ ಪಂಚಾಯಿತಿಗೆ ಆರೋಗ್ಯ ಕೇಂದ್ರವೇ ಆಸರೆ!
ಸಂಘಟನೆಯ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಗಡ್ಡೆ, ಹುಮನಾಬಾದ್ ಪುರಸಭೆ ಸಮುದಾಯದ ಸಂಘಟನಾಧಿಕಾರಿ ಮೀನಾಕುಮಾರಿ ಬೋರಾಳಕರ್, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ, ಸಿಐಟಿಯು ಜಿಲ್ಲಾ ಸಂಚಾಲಕಿ ಶ್ರೀದೇವಿ ಚೂಡೆ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ರೇಖಾ ಹಮೀಲಪೂರಕರ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಮೆಂಡೋಳೆ, ಶೀಲಾ ರೆಡ್ಡಿ, ಸುನೀತಾ ಭೋಲಾ, ಮಹೇಶ್ವರಿ ಪೋಚಂಪಳ್ಳಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.