ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಂತರ ಶ್ರಮಿಸುತ್ತಿದೆ ಎಂದು ಬೀದರ್ ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ ನುಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಲಯಪಾಲಕರು, ನಿಲಯ ಮೇಲ್ವಿಚಾರಕರು, ಕಿರಿಯ ನಿಲಯ ಮೇಲ್ವಿಚಾರಕರು ಹಾಗೂ ‘ಡಿ ಗ್ರೂಪ್’ ಸಿಬ್ಬಂದಿಗಳಿಗಾಗಿ ಜಿಲ್ಲಾ ಕನ್ನಡ ಭವನದಲ್ಲಿ ಆಯೋಜಿಸಿದ ವಿಶೇಷ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಇಲಾಖೆ ಇನ್ನೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಇಲಾಖೆಗೆ ಒಳ್ಳೆಯ ಹೆಸರು ತರಲು ಸಿಬ್ಬಂದಿ ಹೊಣೆಗಾರಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಇಲಾಖೆಯಿಂದ ನಿರ್ವಹಿಸಲಾಗುತ್ತಿರುವ ವಸತಿ ಶಾಲೆ ಮತ್ತು ವಸತಿ ನಿಲಯಗಳ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳು ಅತಿ ಹೆಚ್ಚಿನ ಅಂಕ ಪಡೆದು ಉತೀರ್ಣರಾಗುತ್ತಿರುವುದು ಶ್ಲಾಘನೀಯ. ಈ ಮಕ್ಕಳು ಮುಂದೆ ಐ.ಎ.ಎಸ್., ಕೆ.ಎ.ಎಸ್. ಹುದ್ದೆ ಪಡೆಯಲು ಈಗಿನಿಂದಲೇ ಪೂರ್ವ ತಯ್ಯಾರಿ ನಡೆಸಬೇಕು. ಸತತ ಅಭ್ಯಾಸ ಮತ್ತು ಸಮರ್ಪಣಾ ಮನೋಭಾವ ಮಾತ್ರ ಜೀವನದಲ್ಲಿ ಯಶಸ್ಸು ತಂದುಕೊಡಬಲ್ಲವು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗೀತಾ ಬಿರಾದಾರ ಮಾತನಾಡಿ, ‘ಮಕ್ಕಳಿಗೆ ಎಲ್ಲಾ ಸೌಕರ್ಯ ಇಲಾಖೆ ನೀಡುತ್ತಿದೆ. ಇದನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸಿ ಇಲಾಖೆಗೆ ಕೀರ್ತಿ ತರಬೇಕು’ ಎಂದು ನುಡಿದರು.
ಆರೋಗ್ಯಕರ ಬೆಳವಣಿಗೆಗೆ ಗುಣಮಟ್ಟದ ಪೌಷ್ಠಿಕ ಆಹಾರದ ಪಾತ್ರ ಕುರಿತು ಮಾತನಾಡಿದ ಡಾ.ಸುಧೀರಾ ಸುಲಗುಂಟೆ ಮಾತನಾಡಿ, ಇಂದಿನ ಮಕ್ಕಳಿಗೆ ಆಹಾರ ಕ್ರಮದ ಬಗ್ಗೆ ಅರಿವಿಲ್ಲ. ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಹೈ ಬಿ.ಪಿ., ಮಧುಮೇಹ ಸೇರಿದಂತೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ನಿಲಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವಲ್ಲಿ ನಿಷ್ಕಾಳಜಿ ಮಾಡದಂತೆ ಅವರು ಸಲಹೆ ನುಡಿದರು.
ಗುಣಮಟ್ಟದ ಆಹಾರ ಸಾಮಗ್ರಿಗಳ ಸರಬರಾಜು ಶುಚಿ ರುಚಿಯಾದ ಆಹಾರ ತಯ್ಯಾರಿಕೆ ಕುರಿತು ವಿ.ಬಿ.ಹಿರೇಗೌಡರು ಹಾಗೂ ಅಗ್ನಿ ಅವಘಡ ತಡೆಯುವಿಕೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ನವೀನ್ ಬಾಬು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಮಕ್ಕಳ ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆ ಕುರಿತು ಗೌರಿಶಂಕರ ಮಕ್ಕಳ ರಕ್ಷಣಾಧಿಕಾರಿಗಳು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಶಾಲೆಗಳ ಪೈಕಿ ಅತ್ಯಧಿಕ ಅಂಕ ಪಡೆದ ಪ್ರವಾಲಿಕಾ ಭಾಸ್ಕರ ರೆಡ್ಡಿ, ಮಹಾದೇವ ಸಿದ್ದಪ್ಪ, ಹರೀಶ ಸಂತೋಷ, ಗಾಯತ್ರಿ ಅನಿಲ ಹಾಗೂ ಇತರೆ ನಿಲಯಾರ್ಥಿಗಳನ್ನು ಸತ್ಕರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತರ ಮೇಲಿನ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಅಶೋಕ ಶೇರಿಕಾರ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ವ್ಹಿ.ಬಿ ಹೀರೆಗೌಡರ್, ವಿಠಲ ಸೇಡಮಕರ್, ರವೀಂದ್ರ ಮೇತ್ರೆ ಮತ್ತು ಪ್ರಾಂಶುಪಾಲರಾದ ಚನ್ನಬಸವ ಹೇಡೆ, ನೀಲಕಂಠ ಕಾಂಬಳೆ ಉಪಸ್ಥಿತರಿದ್ದರು