ಕಬ್ಬು ಪೂರೈಸಿದ ರೈತರಿಗೆ ಆರೇಳು ತಿಂಗಳಾದರೂ ಕಬ್ಬಿನ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳು ಶೀಘ್ರದಲ್ಲಿ ಕಬ್ಬಿನ ಬಾಕಿ ಹಣ ಪಾವತಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ನೇತ್ರತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ರೈತರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ರೈತ ಮುಖಂಡರು ಮಾತನಾಡಿ, ʼರೈತರ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಹಲವು ಬಾರಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕಾರ್ಖಾನೆಗಳಲ್ಲಿನ ಸಕ್ಕರೆ ಜಪ್ತಿ ಮಾಡಿದ್ದೀರಿ. ಆದರೆ ಇಲ್ಲಿಯವರೆಗೆ ಕಬ್ಬು ಬೆಳೆಗಾರರ ಬಾಕಿ ಹಣ ಜಮೆ ಮಾಡಲಿಲ್ಲ. ಇದರಿಂದ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಸಲು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹2,700 ನಿಗದಿಯಂತೆ ಎಲ್ಲ ರೈತರ ಖಾತೆಗೆ ಜಮೆ ಮಾಡಬೇಕು. ಭಾಲ್ಕೆಶ್ವರ, ನಾರಂಜಾ ಮತ್ತು ಬಿಕೆಎಸ್‌ಕೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ಕೆಲ ರೈತರಿಗೆ ಕಬ್ಬಿನ ಹಣ ಜಮೆಯಾಗಿದೆ. ಉಳಿದ ರೈತರ ಬಾಕಿ ಹಣ ಶೀಘ್ರದಲ್ಲಿ ಜಮೆ ಮಾಡಬೇಕು. ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಅವರು ಬೆಲೆ ನಿಗದಿಪಡಿಸಿದಂತೆ ಪ್ರತಿ ಟನ್ ಕಬ್ಬಿಗೆ ಇನ್ನೂ ₹50 ಕೊಡಬೇಕುʼ ಎಂದು ಆಗ್ರಹಿಸಿದರು.

ʼಸಮಯಕ್ಕೆ ತಕ್ಕಂತೆ ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದಾರೆ. ಆದರೆ ಸಕಾಲಕ್ಕೆ ರೈತರಿಗೆ ಹಣ ಪಾವತಿಸುವ ಕಾರ್ಯ ಕಾರ್ಖಾನೆಗಳು ಮಾಡಲಿಲ್ಲ. ಇದು ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಎಂಬುದು ವಿಷಾದ ಸಂಗತಿ. ಜಿಲ್ಲೆಯ ರೈತರು ತಮ್ಮ ಹಕ್ಕು ಕೇಳುತ್ತಿದ್ದಾರೆ ಹೊರತು ಭಿಕ್ಷೆ ಅಲ್ಲ. ಈಗಲಾದರೂ ರೈತರ ಬೇಡಿಕೆಗಳಿಗೆ ಸ್ಪಂದಿಸಿ ತಕ್ಷಣವೇ ರೈತರ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಸೇರಿದಂತೆ ರೈತ ಸಂಘದ ಪ್ರಮುಖರಾದ ಶ್ರೀಮಂತ ಬಿರಾದಾರ, ಶಂಕ್ರೆಪ್ಪಾ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಬಾಬುರಾವ ಜೋಳದಾಬಕಾ, ಸುಭಾಷ ರಗಟೆ, ನಾಗಯ್ಯಾ ಸ್ವಾಮಿ, ಪ್ರವೀಣ ಕುಲಕರ್ಣಿ, ಪ್ರಕಾಶ ಬಾವಗೆ, ಸತೀಶ ನನ್ನೂರೆ, ರೇವಣಸಿದ್ದಪ್ಪ ಯರಬಾಗ, ಮಲ್ಲಿಕಾರ್ಜುನ ಬಿರಾದಾರ, ಸುಮಂತ ಗ್ರಾಮಲೆ, ವಿಠಲ ಪಾಟೀಲ, ಧೂಳಪ್ಪಾ ಆಣದೂರ, ಮಲ್ಲಿಕಾರ್ಜುನ ಚಕ್ಕಿ, ವಿಶ್ವನಾಥ ಧರಣೆ, ಬಸಪ್ಪಾ ಆಲೂರ, ರಾಜಕುಮಾರ ಪಾಟೀಲ ಸೇರಿದಂತೆ ಅನೇಕ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಕಳೆದ ಮೂರು ವರ್ಷದಲ್ಲಿ 39 ಬಾಲ ಕಾರ್ಮಿಕರ ರಕ್ಷಣೆ : ಬೇಕಿದೆ ಇನ್ನಷ್ಟು ಬಿಗಿ ಕ್ರಮ!