ಬೇಸಿಗೆಯ ಕೆಂಡ ಬಿಸಿಲು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನ, ಇಂತಹ ರಣ ಬಿಸಿಲಿನ ಧಗೆಯಿಂದ ತತ್ತರಿಸಿದ ಜಿಲ್ಲೆಯ ಜನ ಮನೆಯಿಂದ ಹೊರಬಾರದ ಪರಿಸ್ಥಿತಿಯಲ್ಲಿದ್ದರೆ, ಕಾಡಿನಲ್ಲಿ ವಾಸಿಸುವ ವನ್ಯ ಜೀವಿಗಳದ್ದು ಹೇಳತೀರದ ಸಂಕಟ. ಜೀವಜಲಕ್ಕಾಗಿ ಕಾಡಿನಿಂದ ನಾಡಿಗೆ ವಲಸೆ ಬರುವ ವನ್ಯಜೀವಿಗಳ ದಾಹ ನೀಗಿಸುವ ಕಾರ್ಯ ಅಕ್ಷರಶಃ ಈ ಕಾಲದ ಮಾನವೀಯತೆಗೆ ಸಾಕ್ಷಿಯಾಗಿದೆ.
ವನ್ಯಜೀವಿಗಳ ಮೇಲೆ ಅಪಾರ ಪ್ರೀತಿ, ಕಾಳಜಿ ಇಟ್ಟುಕೊಂಡಿರುವ ʼಸ್ವಾಭಿಮಾನಿ ಗೆಳೆಯರ ಬಳಗʼ ಯುವಕರು ವನ್ಯ ಸಂಕುಲ ಸಂರಕ್ಷಣೆಗಾಗಿ ಟೊಂಕಕಟ್ಟಿ ನಿಂತು, ಸ್ವಯಂ ಪ್ರೇರಿತರಾಗಿ ಕಳೆದ ನಾಲ್ಕು ವರ್ಷದಿಂದ ಬೇಸಿಗೆಯಲ್ಲಿ ವನ್ಯಜೀವಿಗಳ ದಾಹ ತಣಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೀದರ್ ತಾಲ್ಲೂಕಿನ ಮನ್ನಳ್ಳಿ, ದೇವ-ದೇವ ವನ, ಚಿಟ್ಟಾ ಹಾಗೂ ನೌಬಾದ್ ಹೊರವಲಯದ ಅರಣ್ಯ ಪ್ರದೇಶ ಸೇರಿದಂತೆ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪ್ರದೇಶದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಹತ್ತಾರು ಕಡೆ ಕೃತಕ ನೀರಿನ ತೊಟ್ಟಿ ನಿರ್ಮಿಸಿ ಪ್ರಾಣಿಗಳಿಗೆ ನೀರುಣಿಸುವ ಕೆಲಸದಿಂದ ಸೈ ಎನಿಸಿಕೊಂಡಿದ್ದಾರೆ.

ʼಜಿಲ್ಲೆಯ ನಾನಾ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳಿವೆ. ಆದರೆ, ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರಿತಪಿಸುತ್ತವೆ. ಪ್ರತಿ ವರ್ಷ ಜಿಲ್ಲೆಯಲ್ಲಿ 38 ರಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತದೆ. ಕಾಡಿನ ಸುತ್ತಲಿರುವ ಕೆರೆ, ಕಟ್ಟೆ, ಹಳ್ಳಗಳು ಬಹುತೇಕ ಒಣಗುತ್ತವೆ. ಇದರಿಂದಾಗಿ ಪ್ರಾಣಿ-ಪಕ್ಷಿಗಳು ಆಹಾರ, ನೀರು ಅರಸಿ ಅಲೆದಾಡುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಪ್ರಾಣಿ, ಪಕ್ಷಿಗಳು ಎಲ್ಲೆಲ್ಲಿ ನೀರಿಗಾಗಿ ಸಂಕಟ ಎದುರಿಸುತ್ತಿವೆಯೋ ಅಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ ನೀರು ತುಂಬಿಸಲಾಗುತ್ತಿದೆʼ ಎಂದು ಸ್ವಾಭಿಮಾನಿ ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಡಶೆಟ್ಟಿ ಹೇಳುತ್ತಾರೆ.
ಸ್ವಾಭಿಮಾನಿ ಗೆಳೆಯರ ಸಾಮಾಜಿಕ ಕಾರ್ಯ :
ʼಸ್ವಾಭಿಮಾನಿ ಗೆಳೆಯರ ಬಳಗ ಹುಟ್ಟಿಕೊಂಡು ನಾಲ್ಕು ವರ್ಷ ಕಳೆದಿದೆ. ಜಿಲ್ಲೆಯ ವಿವಿಧ ತಾಲ್ಲೂಕು, ಗ್ರಾಮ ಘಟಕ ಸೇರಿ 200ಕ್ಕೂ ಅಧಿಕ ಬಳಗದ ಸದಸ್ಯರಿದ್ದಾರೆ. ಶಿಕ್ಷಕರು, ಪ್ರಾಧ್ಯಾಪಕರು, ವ್ಯಾಪಾರಿಗಳು, ಖಾಸಗಿ ಕಂಪನಿ ಉದ್ಯೋಗಿಗಳು ಬಳಗದ ಕಾರ್ಯಕರ್ತರು. ಎಲ್ಲರೂ ಸ್ವಯಂ ಪ್ರೇರಿತರಾಗಿ ಸ್ವಂತ ಹಣ ಸಂಗ್ರಹಿಸಿ ವಿವಿಧ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿವರ್ಷ ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಉಚಿತ ನೋಟ್ ಬುಕ್ ವಿತರಿಸುತ್ತಾರೆ. ಇನ್ನು ಚಳಿಗಾಲದಲ್ಲಿ ನಿರ್ಗತಕರಿಗೆ, ವೃದ್ಧರಿಗೆ ಹೊದಿಕೆ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳು ಕೈಗೊಳ್ಳುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ವೈಯಕ್ತಿಕ ಕೆಲಸದೊಂದಿಗೆ ಬಳಗದೊಂದಿಗೆ ಮಾಡುವ ಅಳಿಲು ಸೇವೆ ಸಂತೃಪ್ತಿ ನೀಡುತ್ತದೆʼ ಎನ್ನುವುದು ಸದಸ್ಯರ ಅಭಿಪ್ರಾಯ.
ನೀರಿಗಾಗಿ ಮಣ್ಣು, ಸಿಮೆಂಟ್ ತೊಟ್ಟಿ ಖರೀದಿ :
ಬೀದರ್ ನಗರದಲ್ಲಿ 30 ಜನ ಬಳಗದ ಸದಸ್ಯರಿದ್ದಾರೆ. ಒಂದೊಂದು ಅರಣ್ಯ ಪ್ರದೇಶವನ್ನು ತಲಾ ಮೂವರು ಹಂಚಿಕೊಂಡಿದ್ದು, ತೊಟ್ಟಿಗಳಲ್ಲಿ ವಾರಕ್ಕೆ ಎರಡು ಬಾರಿ ಹೋಗಿ ನೀರು ತುಂಬುತ್ತಾರೆ. ಅಗತ್ಯ ಇರುವ ಕಡೆಗಳಲ್ಲಿ ಕಾಡಿನಲ್ಲಿ ಸಿಮೆಂಟ್ನಿಂದ ನಿರ್ಮಿಸಿದ್ದಾರೆ. ಕಾಡಿನಲ್ಲಿ ನೀರು ಸಿಗದಕ್ಕೆ ಬೈಕ್ ಮೇಲೆ ನೀರಿನ ಕ್ಯಾನ್ ತೆಗೆದುಕೊಂಡು ನೀರು ಶೇಖರಿಸುತ್ತಾರೆ. ಒಂದೊಂದು ತೊಟ್ಟಿಗಳು 120-150 ಲೀಟರ್ ಸಾಮರ್ಥ್ಯವುಳ್ಳ ತೊಟ್ಟಿಗಳಿದ್ದು, ಖಾಲಿ ಆಗದಂತೆ ತುಂಬಿಸುತ್ತಾರೆ. ಕಳೆದ ಮೂರು ವರ್ಷದಿಂದ ಕುಂಬಾರರ ಬಳಿ ಮಣ್ಣಿನ ತೊಟ್ಟಿ ಖರೀದಿಸಿ ಶಾಲಾ-ಕಾಲೇಜುಗಳ ಸಮೀಪದ ಗಿಡ-ಮರಗಳಿಗೆ, ಮನೆಗಳ ಮುಂದೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯವೂ ಮುಂದುವರೆದಿದೆ.

ನವಿಲು, ಜಿಂಕೆ, ತೋಳ, ಕಾಡುಹಂದಿ, ಹದ್ದು, ನವಿಲು, ನರಿ, ಮಂಗ ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳು ಕಾಡಿನಲ್ಲಿ ನಿರ್ಮಿಸಲಾದ ಕೃತಕ ತೊಟ್ಟಿಯಲ್ಲಿ ಸಂಗ್ರಹಿಸಲಾದ ನೀರು ಸೇವಿಸಿ ದಾಹ ನೀಗಿಸಿಕೊಳ್ಳುತ್ತವೆ. ನಗರ ಬಿವ್ಹಿಬಿ ಕಾಲೇಜು, ಕರ್ನಾಟಕ ಫಾರ್ಮಸಿ ಕಾಲೇಜು ಆವರಣ, ಶಿವನಗರ ಫುಟಪಾತ್ ಸೇರಿದಂತೆ ನಾನಾ ಕಡೆ ಕಟ್ಟಲಾದ 50ಕ್ಕೂ ಹೆಚ್ಚಿನ ಮಣ್ಣಿನ ತೊಟ್ಟಿಯ ನೀರು ಪಕ್ಷಿಗಳ ಬಾಯಾರಿಕೆಗೆ ಸಹಕಾರಿಯಾಗಿವೆʼ ಎಂದು ಬಳಗದ ಸದಸ್ಯ ನೀಲಕಂಠ ವಿವರಿಸುತ್ತಾರೆ.
ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ
ʼಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದೆ, ವನ್ಯಜೀವಿಗಳ ಸಂಖ್ಯೆಯೂ ತಕ್ಕಮಟ್ಟಿಗೆ ಇದೆ. ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕೆಲವು ಕಡೆ ಅಗತ್ಯ ವ್ಯವಸ್ಥೆ ಕಲ್ಪಿಸಿದರೆ, ಉಳಿದ ಕಡೆಗಳಲ್ಲಿ ನಿರ್ಲಕ್ಷಿಸುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳು ನೀರು, ಆಹಾರಕ್ಕಾಗಿ ಪರದಾಡುತ್ತಿವೆ. ವನ್ಯಸಂಕುಲ ಜೊತೆಗೆ ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚು ಒತ್ತು ನೀಡಬೇಕಾಗಿದೆʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಏ.16ರಂದು ಸಿಎಂ ಸಿದ್ದರಾಮಯ್ಯ ಬೀದರ್ ಜಿಲ್ಲೆ ಪ್ರವಾಸ
ಬೇಸಿಗೆಯ ರಣಬಿಸಿಲಿಗೆ ತತ್ತರಿಸಿ ಕಾಡಿನಿಂದ ನಾಡಿಗೆ ಬರಲಾಗದೆ ಸಂಕಟ ಅನುಭವಿಸುತ್ತಿರುವ ವನ್ಯಜೀವಿಗಳ ಮೌನ ರೋಧನೆ ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು ಆಲಿಸಿ ತಮ್ಮ ಸ್ವಂತ ಖರ್ಚಿನಲ್ಲಿ ದಾಹ ನೀಗಿಸುವ ಮಾನವೀಯ ಕಾರ್ಯ ನಿಜಕ್ಕೂ ಮಾದರಿʼ ಎಂದು ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
872216028 I want to be memeber