ಬೀದರ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೀದರ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಬೀದರ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 8ರಂದು ಆಯೋಜಿಸಲು ತೀರ್ಮಾನಿಸಲಾಗಿದೆ.
ಸಮ್ಮೆಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ ಬೆಲ್ದಾಳೆ ಅವರನ್ನು ಆಯ್ಕೆ ಮಾಡಿ ಅವರ ನಿವಾಸದಲ್ಲಿ ಗೌರವಿಸಲಾಯಿತು.
ಈ ವೇಳೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼಇಂದಿನ ದಿನಮಾನಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕುಸಿಯುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವು ಜನಸಾಮಾನ್ಯರಲ್ಲಿ ಹೊಸ ಹುಮ್ಮಸ್ಸು ಬರಲಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಬೆಳೆಸಿ, ಉಳಿಸಲು ಇದು ಪೂರಕ ವಾತಾವರಣ ಕಲ್ಪಿಸಲಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆʼ ಎಂದು ಭರವಸೆ ನೀಡಿದರು
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಕನ್ನಡ ಸಾಹಿತ್ಯ ಪರಿಷತ್ತು ಕೇವಲ ನಗರಕ್ಕೆ ಸೀಮಿತಗೊಳಿಸದೆ ಗ್ರಾಮೀಣ ಜನರಿಗೆ ಮುಟ್ಟಿಸಿ ಅವರಲ್ಲಿ ಕನ್ನಡ ಕಂಪು ಪಸರಿಸಲು ಈ ಹಿಂದೆ ಮನ್ನಳ್ಳಿ, ಅಲಿಯಂಬರ ಗ್ರಾಮಗಳಲ್ಲಿ ಸಮ್ಮೇಳನ ಏರ್ಪಡಿಸಲಾಗಿತ್ತು. ಇದೀಗ ದಕ್ಷಿಣ ಮತಕ್ಷೇತ್ರದ ಕಸಾಪ ಆಜೀವ ಸದಸ್ಯರ ಬೇಡಿಕೆ ಸ್ಪಂದಿಸಲು ಪರಿಷತ್ತು ಕಟಿಬದ್ದವಾಗಿದೆ. ಹಿರಿಯ ಸಾಹಿತಿ ಪಂಡಿತ ಬಸವರಾಜ ಅವರನ್ನು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | 15 ತಿಂಗಳಾದರೂ ಪದವೀಧರ ಶಿಕ್ಷಕರಿಗಿಲ್ಲ ನಾಲ್ಕು ತಿಂಗಳ ಪಗಾರ!
ಸಮಾರಂಭದಲ್ಲಿ ಜಿಲ್ಲಾ ಕಸಾಪದ ಶಿವಶಂಕರ ಟೋಕರೆ., ಟಿ.ಎಮ್ ಮಚ್ಚೆ, ಸಿದ್ಧಾರೂಢ ಭಾಲ್ಕೆ, ವೀರಶೆಟ್ಟಿ ಚೆನ್ನಶೆಟ್ಟಿ, ಶ್ರೀನಿವಾಸರೆಡ್ಡಿ, ಪ್ರವೀಣ ಪಟೋದಿ, ಶಿವಕುಮಾರ ಅಷ್ಟೂರ ಇದ್ದರು. ದಕ್ಷಿಣ ಮತಕ್ಷೇತ್ರದ ಕಸಾಪ ಯುವ ಘಟಕ ಅಧ್ಯಕ್ಷ ಬಸವರಾಜ ಬಶೆಟ್ಟಿ ಸ್ವಾಗತಿಸಿದರು. ಕಸಾಪ ವಲಯ ಅಧ್ಯಕ್ಷ ಚೇತನ ಸೊರಳ್ಳಿ ನಿರೂಪಿಸಿದರು. ಸ್ವಾಗತ ಸಮಿತಿ ಕೋಶಾಧ್ಯಕ್ಷ ಸಂತೋಷ ರೆಡ್ಡಿ ವಂದಿಸಿದರು.