ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕರೇತರ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕೆಂದು ಆಗ್ರಹಿಸಿದ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿಯೋಗ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬೀದರ್ ಜಿಲ್ಲೆಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ನಿಯೋಗ ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪ ಅವರ ನಿವಾಸದಲ್ಲಿ ಭೇಟಿಯಾಗಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ತೆರವಾದ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಅನೇಕ ವರ್ಷಗಳಿಂದ ರಾಜ್ಯದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಶೈಕ್ಷಣಿಗ ಪ್ರಗತಿಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಿವೆ. ಆದರೆ, ನಿವೃತ್ತಿ, ನಿಧನದಿಂದ ತೆರವಾದ ಹಿನ್ನೆಲೆ ಕಳೆದ ಹಲವು ವರ್ಷಗಳಿಂದ ಸಂಸ್ಥೆಗಳು ಶಿಕ್ಷಕರ ಕೊರತೆ ಎದುರಿಸುವಂತಾಗಿವೆ. ಇದರಿಂದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಬೇಕುʼ ಎಂದು ಗಮನ ಸೆಳೆದರು.
ಕಳೆದ ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಕುಸಿತವಾಗುತ್ತಿದೆ. ಇದರಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆಯೂ ಕಾರಣವಾಗಿದೆ. ಇದರಿಂದ ಫಲಿತಾಂಶದಲ್ಲಿ ವ್ಯತ್ಯಾಸ ಬರುತ್ತಿರುವುದು ಕಾಣಬಹುದು. ಮಕ್ಕಳ ಹಿತದೃಷ್ಟಿಯಿಂದ ಶೀಘ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕುʼ ಎಂದು ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ʼರಾಜ್ಯದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ಹುದ್ದೆ ಖಾಲಿ ಇರುವ ಬಗ್ಗೆ ಗಮನಕ್ಕಿದೆ. ಆ.11ರಿಂದ ನಡೆಯಲಿರುವ ಅಧಿವೇಶನದಲ್ಲಿ ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿಕೊಡಲಾಗುವುದುʼ ಎಂದು ಭರವಸೆ ನೀಡಿದರು.
ಇದಕ್ಕೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಸ್.ಸಿ.ಮಹಾದೇವಪ್ಪ ಅವರನ್ನು ಭೇಟಿಯಾದ ನಿಯೋಗ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಂದ ಶೈಕ್ಷಣಿಗ ಪ್ರಗತಿಗೆ ತೊಡಕಾಗುತ್ತಿದ್ದು, ಹುದ್ದೆಗಳ ಭರ್ತಿಗೆ ಮನವಿ ಮಾಡಿದರು. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನಿತ ಶಿಕ್ಷಣ ಸಂಸ್ಥೆಗಳು ಮೂಲಸೌಕರ್ಯ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಸ್ಪಂದಿಸಬೇಕೆಂದು ಬೇಡಿಕೆ ಮಂಡಿಸಿದರು.
ಇದನ್ನೂ ಓದಿ : ಬೀದರ್ | ಆದಿಜಾಂಬವ ಅಭಿವೃದ್ದಿ ನಿಗಮಕ್ಕೆ ₹100 ಕೋಟಿ ಅನುದಾನ ಕೊಡಿ
ನಿಯೋಗದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥರಾದ ನಂದಾದೀಪ ಬೊರಾಳೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಪದಾಧಿಕಾರಿಗಳಾದ ಕೆ.ಪುಂಡಲಿಕರಾವ್, ದಶರಥ ದೊಡ್ಡಿ, ಎಲ್.ಜಿ.ಗುಪ್ತಾ, ಕಾಶಿನಾಥ ಚಲವಾ, ತಿಪ್ಪಣ್ಣಾ ಶಿವಪುರೆ, ಡಿ.ವಿ.ಗುರು, ಬಾಬು ಟೈಗರ್, ಕಿರಣಕುಮಾರ ಭಾಟಸಾಂಗವಿ,ಕ್ರಾಂತಿ ಕಲವಾಡಿಕರ, ಸುಭಾಷ ಹುಲಸೂರೆ, ಮಲ್ಲಿಕಾರ್ಜುನ ಹಲಮಂಡೆ ಮತ್ತಿತರರಿದ್ದರು.