ರಸ್ತೆ ಸುರಕ್ಷತಾ ನಿಯಮ ಮೀರಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಇಬ್ಬರು ಚಾಲಕರಿಗೆ ತಲಾ ₹10 ಸಾವಿರ ದಂಡವನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣ ಜೆಎಂಎಫ್‌ಸಿ ನ್ಯಾಯಾಲಯ ವಿಧಿಸಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸಿದವರ ವಿರುದ್ದ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಸಿದ್ದೇಶ್ವರ ಅವರು ಡ್ರಿಂಕ್ ಮತ್ತು ಡ್ರೈವ್ ಅಡಿಯಲ್ಲಿ ಎರಡು ಪ್ರಕರಣಗಳು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಬಸವಕಲ್ಯಾಣ ತಾಲ್ಲೂಕಿನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯವು ಇಬ್ಬರು ವಾಹನ ಚಾಲಕರಿಗೆ ದಂಡ ವಿಧಿಸಿ ಆದೇಶಿಸಿದೆ.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ಮತ್ತು ಅಪಘಾತದಲ್ಲಿ ಅಮಾಯಕರ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿರುವವರ ವಿರುದ್ದ ಅಭಿಯಾನ ಹಮ್ಮಿಕೊಂಡಿದೆ.
ಸಾರ್ವಜನಿಕರು ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ, ತಪ್ಪದೇ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.