ಭಾಲ್ಕಿ ಪಟ್ಟಣದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಏ.21 ಮತ್ತು 22 ರಂದು ನಡೆಯಲಿರುವ ವಚನ ಜಾತ್ರೆ-2025, ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 26ನೆಯ ಸ್ಮರಣೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ, ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ಮನವಿ ಮಾಡಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ವಚನ ಜಾತ್ರೆ-2025 ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 26ನೆಯ ಸ್ಮರಣೋತ್ಸವ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ʼಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಬದುಕಿನುದ್ದಕ್ಕೂ ಬಸವತತ್ವ ಪ್ರಚಾರ ಪ್ರಸಾರದ ಜತೆಗೆ ಶೈಕ್ಷಣಿಕ, ಸಾಮಾಜಿಕ ಸೇವೆಗೈದು ಈ ಭಾಗಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಡಾ.ಚನ್ನಬಸವ ಪಟ್ಟದ್ದೇವರ ವಿಚಾರಧಾರೆಗಳನ್ನು ಜನಮಾಸಕ್ಕೆ ತಲುಪಿಸುವ ನಿಟ್ಟಿನಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿವರ್ಷ ಸ್ಮರಣೋತ್ಸವ, ವಚನ ಜಾತ್ರೆ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆʼ ಎಂದರು.
ʼಈ ವರ್ಷವೂ ಎರಡು ದಿವಸ ಅರ್ಥಪೂರ್ಣವಾಗಿ ವಚನ ಜಾತ್ರೆ, ಸ್ಮರಣೋತ್ಸವ ಆಚರಣೆಗೆ ಯೋಜನೆ ರೂಪಿಸಲಾಗಿದ್ದು, ಕರ್ನಾಟಕದ ರಾಜ್ಯಪಾಲರು ಸೇರಿದಂತೆ ನಾಡಿನ ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಭರದ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆಯ ಸದ್ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಎರಡು ದಿನದ ಸಮಾರಂಭ ಯಶಸ್ವಿಗೊಳಿಸಬೇಕುʼ ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಎರಡು ದಿನದ ಸಮಾರಂಭದ ಯಶಸ್ವಿಗೆ ವಿವಿಧ ಕಾರ್ಯಕ್ರಮಗಳು ಆಯೋಜಿಸುತ್ತಿದ್ದೇವೆ. ಪ್ರವಚನ, ವಚನ ಪಾರಾಯಣ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಅನುಭಾವ ಗೋಷ್ಠಿ ಸೇರಿ ಮುಂತಾದ ಅರ್ಥಪೂರ್ಣ ಕಾರ್ಯಕ್ರಮ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದು ಕೊಳ್ಳಬೇಕುʼ ಎಂದು ತಿಳಿಸಿದರು.
ʼಗಡಿಭಾಗದಲ್ಲಿ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅದ್ಭುತ ಕ್ರಾಂತಿಯನ್ನು ಮಾಡಿದ್ದಾರೆ. ಪೂಜ್ಯರ ಚಿಂತನೆ, ಆದರ್ಶಗಳನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ಜನಮಾನಸಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ ಜಿಲ್ಲೆಗೆ ಏ.16ರಂದು ಸಿಎಂ, ಡಿಸಿಎಂ ಪ್ರವಾಸ : ನಾನಾ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸಾಹಿತಿ ಕಲ್ಯಾಣರಾವ ಪಾಟೀಲ್, ಶಶಿಕಾಂತ ದುರ್ಗೆ, ಮುಖ್ಯಗುರು ಬಾಬು ಬೆಲ್ದಾಳ ಸೇರಿದಂತೆ ಹಲವರು ಇದ್ದರು.