ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದ ಸಮೀಪದ ರಸ್ತೆಯಲ್ಲಿ ನಡೆದಿದೆ.
ಬೀದರ್ ನಗರದ ಗೌಳಿವಾಡ ಬಡಾವಣೆಯ ಭೀಮವ್ವಾ ಶಿವರಾಜ ಮಂಠಾಳೆ (56) ಮೃತರು. ಮೃತರಿಗೆ ಒಬ್ಬರು ಪುತ್ರ, ಪುತ್ರಿ ಇದ್ದಾರೆ. ಈ ಘಟನೆಯು ಬೀದರ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಔರಾದ್ ತಾಲೂಕಿನ ವಡಗಾಂವ(ದೇ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಜಮಗಿ ಗ್ರಾಮದ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಎಂದಿನಂತೆ ಬೆಳಿಗ್ಗೆ ಕರ್ತವ್ಯಕ್ಕೆ ತೆರಳಿದ್ದ ವೇಳೆ ಬೀದರ್ ಹೊರವಲಯದ ಕೋಳಾರ ಕೈಗಾರಿಕಾ ಪ್ರದೇಶದ ಕಂಪನಿಯೊಂದರ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವರದಿ ಮಾಹಿತಿ : ಸಿಟಿಜನ್ ಜರ್ನಲಿಸ್ಟ್ , ಸಂತೋಷ ಬೋರೆ