ಕಳೆದ ಒಂದು ವರ್ಷದಿಂದ ಭಾಲ್ಕಿ ತಾಲೂಕಿನ ಮಳಜಾಪುರ, ಚಳಕಾಪುರ ಮತ್ತಿತರೆಡೆ ದಲಿತರ ಮೇಲೆ ದೌರ್ಜನ್ಯ ನಡೆದಿದೆ. ದಲಿತ ಮೇಲೆ ಸುಳ್ಳು ಪ್ರಕರಣಗಳು, ದಾಖಲಾಗಿದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಜನರ ಧ್ವನಿ ಸಂಘಟನೆ ಬಸವಕಲ್ಯಾಣ ತಾಲ್ಲೂಕು ಘಟಕದಿಂದ ಧರಣಿ ನಡೆಸಲಾಯಿತು.
ಬಸವಕಲ್ಯಾಣ ನಗರದ ಮಿನಿ ವಿಧಾನಸೌಧ ಎದುರು ಸಂಘಟನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಧರಣಿ ನಡೆಸಿ ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ʼಭಾಲ್ಕಿ ತಾಲ್ಲೂಕಿನ ತಳವಾಡ (ಕೆ) ಗ್ರಾಮದ ಲಿಂಗಾಯತ ಸಮಾಜದ ಮಹಿಳೆ ಬಹಿರಂಗವಾಗಿ ದಲಿತ ಯುವಕನಿಗೆ ಜಾತಿ ನಿಂದನೆ ಮಾಡಿದ್ದಾರೆ. ಮಹಿಳೆ ವಿರುದ್ಧ ದಲಿತ ದೌರ್ಜನ್ಯಯಡಿ ಕೇಸ್ ದಾಖಲಾದರೂ ಬಂಧನವಾಗದೇ ಅದೇ ದಿನ ಆ ಮಹಿಳೆಗೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಭಾಲ್ಕಿ ತಾಲೂಕಿನ ರಾಚಪ್ಪಗೌಂಡಗಾಂವ ಗ್ರಾಮದ ದಲಿತ ವೃದ್ಧೆಯ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. ಮರೂರ್ ಗ್ರಾಮದ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಮೂರು ಎಕರೆ ಜಮೀನನ್ನು 13 ಜನ ಸವರ್ಣೀಯರು ಸ್ವಾಧೀನಪಡಿಸಿಕೊಂಡರೂ ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ ಎಂದು ದೂರಿದರು.
ʼಕಳೆದ ಏಪ್ರಿಲ್ ತಿಂಗಳಲ್ಲಿ ಭಾಲ್ಕಿ ತಾಲ್ಲೂಕಿನ ಮಳಜಾಪುರ ಗ್ರಾಮಕ್ಕೆ ಆಗಮಿಸಿದ್ದ ಸಂವಿಧಾನ ಜಾಥಾ ಪ್ರವೇಶ ಸಮಯದಲ್ಲಿ ಜಾತಿವಾದಿಗಳ ಗುಂಪು ಜಾಥಾದ ಒಳಗೆ ನುಗ್ಗಿ ಹಲ್ಲೆ ನಡೆಸಿದ್ದರು. ಅದೇ ತಾಲ್ಲೂಕಿನ ಚಳಕಾಪೂರ ಗ್ರಾಮದ ಹನುಮಾನ ಜಾತ್ರಾ ಮೆರವಣಿಗೆಯಲ್ಲಿ ಉಂಟಾದ ಜಗಳದಲ್ಲಿ ಸವರ್ಣಿಯರು ದಲಿತರ ಓಣಿಗೆ ನುಗ್ಗಿ ಮನಬಂದಂತೆ ಮಹಿಳೆಯರ, ವೃದ್ಧರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೂ ಕೂಡಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿಲ್ಲ. ನವೆಂಬರ್ 4 ರಂದು ಖಟಕ ಚಿಂಚೋಳಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪೊಲೀಸರು 76 ಜನರ ವಿರುದ್ಧ ಪ್ರಕರಣ ದಾಖಲಿಸಿ, ಮರುದಿನವೇ ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಭಾಲ್ಕಿ ಡಿವೈಎಸ್ಪಿ ದೌರ್ಜನ್ಯಕ್ಕೊಳಕ್ಕಾದ 119 ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜಾತಿವಾದಿ ಪ್ರದರ್ಶಿಸಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರನ್ನು ಕೂಡಲೇ ಅಮಾನತು ಮಾಡಬೇಕು. ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದ ಅಮಾಯಕ ದಲಿತರ ಮತ್ತು ಸವರ್ಣೀಯರ ಹೆಸರು ಪ್ರಕರಣದಿಂದ ಕೈಬಿಡಬೇಕು. ಮರೂರ್ ಗ್ರಾಮದ ಶಿವರಾಜ ಮೂಲಗೆ ಅವರ ಜಮೀನು ಸ್ವಾಧೀನ ಪಡಿಸಿಕೊಂಡಿದನ್ನು ಹಿಂದುರುಗಿಸಿ ದಬ್ಬಾಳಿಕೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಬೇಕು. ಹುಲಸೂರ ತಾಲೂಕಿನ ಮಿರಕಲ್ ತಾಂಡಾ ರೈತರು ಉಳುಮೆ ಮಾಡುವ ಜಮೀನಿನ ದಾಖಲೆ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಇದನ್ನೂ ಕೂಡಲೇ ಹಿಂಪಡೆಯಬೇಕು.ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ : ಪ್ರಕರಣ ದಾಖಲು; ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಈ ವೇಳೆ ಜನರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಮಾರುತಿ ಡಿ.ಕಾಂಬಳೆ, ಸಂಘಟನೆಯ ಹಿರಿಯ ಮುಖಂಡ ತಿಪ್ಪಣ್ಣ ವಾಲಿ, ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ, ತಾಲೂಕು ಉಪಾಧ್ಯಕ್ಷ ರತ್ನದೀಪ ಗಾಯಕವಾಡ, ಪ್ರಧಾನ ಕಾರ್ಯದರ್ಶಿ ಸೋಮನಾಥ ಮುಡಬೇಕರ, ಕಾರ್ಯದರ್ಶಿ ಅವಿನಾಶ ಫುಲಬನೆ,ಸುಭಂ ಕಾಂಬಳೆ, ಪಂಕಜ ಪಡಸಾಲೆ, ವಿಜಯ ಕಾಂಬಳೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.