ಬೀದರ್ ನಗರದ ಹೃದಯ ಭಾಗದಲ್ಲಿರುವ ಪಾಪನಾಶಿನಿ ಶಿವಲಿಂಗ ದೇವಸ್ಥಾನದ ಬಳಿಯ ಪಾಪನಾಶ ಕೆರೆಗೆ ಕಲುಷಿತ ನೀರು ಹರಿದು ಅಪಾರ ಸಂಖ್ಯೆಯ ಮೀನುಗಳು ಸಾವನ್ನಪ್ಪಿವೆ.
‘ಕೆರೆಯಲ್ಲಿ ಮೀನುಗಳ ಮಾರಣ ಹೋಮಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ. ಕೆರೆ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗಾಗಿ ಕೈಗೊಂಡಿದ್ದ ಕಾಮಗಾರಿ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ರೋಹನ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ʼವಿಷಕಾರಿ ನೀರು ಕೆರೆಗೆ ಹರಿದು ಮೀನುಗಳು ಸತ್ತಿವೆ. ಇದರಿಂದ ಕೆರೆ ಸುತ್ತಲೂ ದುರ್ವಾವಾಸನೆ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೆರೆ ಸಂರಕ್ಷಣೆಗೆ ಮುಂದಾಗಬೇಕುʼ ಎಂದು ಆಗ್ರಹಿಸಿದ್ದಾರೆ.

ʼಐತಿಹಾಸಿಕ ಪಾಪನಾಶ ಕೆರೆಗೆ ಸುತ್ತಮುತ್ತಲಿನ ಚರಂಡಿ ನೀರು ಸೇರಿದಂತೆ ಪೂಜೆಗೆ ಬಳಸಿದ ಹೂ, ಹಣ್ಣು, ಬಾಳೆದಿಂಡು, ಕಬ್ಬು ಹಾಗೂ ಅಲಂಕಾರಿಕ ವಸ್ತುಗಳನ್ನು ಕೆರೆಯಂಗಳದಲ್ಲಿ ಚೆಲ್ಲಲಾಗಿದೆ. ಕೆರೆ ತುಂಬೆಲ್ಲಾ ತ್ಯಾಜ್ಯದ ರಾಶಿ ಹರಡಿಕೊಂಡು ಎಲ್ಲೆಡೆ ದುರ್ಗಂಧಕ್ಕೆ ಕಾರಣವಾಗಿ ಕೆರೆಯಲ್ಲಿನ ಮೀನುಗಳು ಸಾಯುತ್ತಿವೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ನಿರ್ದೇಶನ ಪಾಲನೆಯಾಗುತ್ತಿಲ್ಲʼ ಎಂದು ರೋಹನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೆಲ ತಿಂಗಳ ಹಿಂದೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹2 ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಕೆರೆಯಂಚಿನಲ್ಲಿ ಗ್ರಿಲ್, ವಿದ್ಯುತ್ ದೀಪ ಅಳವಡಿಸಿದ್ದಾರೆ. ಆದರೆ ಸೂಕ್ತ ನಿರ್ವಹಣೆ ಕೊರತೆಯಿಂದ ಜನರು ಘನ ತ್ಯಾಜ್ಯ ಕೆರೆಗೆ ಸುರಿಯುತ್ತಿದ್ದಾರೆ. ಈ ಹಿಂದೆ ಕೆರೆ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ, ಮರಗಳು ಒಣಗಿ ನಿಂತಿರುವುದು ಪರಿಸರ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

ʼಬೀದರ್ ನಗರಕ್ಕೆ ಅತೀ ಮುಖ್ಯ ನೀರಿನ ಮೂಲವಾದ ಪಾಪನಾಶ ಕೆರೆ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಕಲುಷಿತಗೊಂಡಿರುವುದು ನೋವಿನ ಸಂಗತಿ. ಕೆರೆಯ ನೀರು ಖಾಲಿ ಆಗುತ್ತಿರುವ ಬಗ್ಗೆ ತಿಂಗಳ ಹಿಂದೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೂ ಕೆರೆ ನೀರಿನ ಹೊರ ಹರಿವು ನಿಲ್ಲಿಸುವ ಕಾರ್ಯ ಮಾಡಲಿಲ್ಲ. ಇದೀಗ ಕೆರೆಯಲ್ಲಿ ಮೀನುಗಳ ಸಾವು ನಡೆದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆʼ ಎಂದು ಕರ್ನಾಟಕ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ವಿನಯ್ ಕುಮಾರ್ ಮಾಳಗೆ ತಿಳಿಸಿದ್ದಾರೆ.
ʼಕೂಡಲೇ ಮೀನುಗಳ ಸಾವಿನ ಬಗ್ಗೆ ವಿವರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಕ್ಷಣ ಆದೇಶ ಹೊರಡಿಸಲು ಕೋರುವೆ ಎಂದು ಈದಿನ.ಕಾಮ್ ಗೆ ತಿಳಿಸಿದ್ದಾರೆ.
ʼಪಾಪನಾಶ ಕೆರೆಯಲ್ಲಿ ವಿಷಪೂರಿತ ನೀರು ಸೇರಿದ ಕಾರಣಕ್ಕೆ ಮೀನುಗಳು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೆರೆ ನಿರ್ವಹಣೆ ನಗರಸಭೆ ವ್ಯಾಪ್ತಿಗೆ ಒಳಪಡುತ್ತದೆ. ಈ ಕುರಿತು ನಾನು ಕೆರೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆʼ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಆಯುಕ್ತ ಜಯಗೋಪಾಲ್ ಈದಿನ.ಕಾಮ್ ಗೆ ತಿಳಿಸಿದ್ದಾರೆ.

ಈ ಸಂಬಂಧ ಬೀದರ್ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್ ಅವರನ್ನು ʼಈದಿನ.ಕಾಮ್ʼ ಸಂಪರ್ಕಿಸಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.