ʼದೇಶಪ್ರೇಮಿ ಯುವಾಂದೋಲನʼ ಸಂಘಟನೆಯಿಂದ ರಾಜ್ಯಾದ್ಯಂತ ಏಪ್ರಿಲ್ 14 ರಿಂದ 26ರವೆಗೆ ಹಮ್ಮಿಕೊಂಡಿರುವ ʼಸಂವಿಧಾನ ಯುವಯಾನʼ ಬೈಕ್ ಜಾಥಾ ಮಂಗಳವಾರ ಬೀದರ್ ನಗರ ತಲುಪಿತು. ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತಿಸಲಾಯಿತು.
ಬೀದರ್ ಬಸವ ಮಂಟಪದ ಮಾತೆ ಸತ್ಯದೇವಿ ಮಾತಾಜಿ ಅವರು ಮಾತನಾಡಿ, ʼಯುವಕರು ದೇಶ ಕಟ್ಟುವ ಹಾಗು ಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದುʼ ಎಂದು ಶುಭ ಹಾರೈಸಿದರು.
ಮುಖಂಡ ಶಿವಯ್ಯ ಸ್ವಾಮಿ ಅವರು ಮಾತನಾಡಿ, ʼಸಂವಿಧಾನದ ಆಶಯದಂತೆ ನಾವೆಲ್ಲರೂ ನಮ್ಮ ಹಕ್ಕು ಪಡೆಯಬೇಕು, ಕರ್ತವ್ಯ ನಿರ್ವಹಿಸಬೇಕು. ಎಲ್ಲರಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರ ಗುತ್ತಿಗೆ ಎಂಬ ಆಧುನಿಕ ಜೀತ ಪದ್ಧತಿಯನ್ನು ರದ್ದುಗೊಳಿಸಿ ಸುಭದ್ರ ಉದ್ಯೋಗ ಕೊಡುವ ಕೆಲಸ ಸರ್ಕಾರ ಮಾಡಬೇಕುʼ ಎಂದು ನುಡಿದರು.
ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಶ್ರೀಕಾಂತ ಸ್ವಾಮಿ, ನಿಜಾಮುದ್ದೀನ್, ರಮೇಶ್ ಮಠಪತಿ , ಜಗದಿಶ್ವರ ಬಿರಾದಾರ, ಮಹೇಶ್ ಗೋರನಾಳಕರ್, ಗುರುದಾಸ್ ಅಮದಲಪಾಡ್ ಅವರು ಜಾಥಾ ಉದ್ದೇಶಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಯ ವಾಡಿಯಿಂದ ಏ.14ರಂದು ಆರಂಭಗೊಂಡಿರುವ ಬೈಕ್ ಯಾತ್ರೆ ಏ.26ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಸಮಾವೇಶದಂದು ಮುಕ್ತಾಯಗೊಳ್ಳಲಿದೆ.
ಧರ್ಮಕ್ಕಿಂತ ದೇಶ ಮುಖ್ಯ : ಬಸವಲಿಂಗ ಪಟ್ಟದ್ದೇವರು
ಏಪ್ರಿಲ್ 26 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂವಿಧಾನ ಸಂರಕ್ಷಣಾ ಸಮಾವೇಶ ಪ್ರಚಾರದ ಸಂವಿಧಾನ ಯುವಯಾನ ತಂಡ ಭಾಲ್ಕಿ ತಲುಪಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಜಾಥಾಕ್ಕೆ ಸ್ವಾಗತಿಸಿದರು.

ಧರ್ಮಕ್ಕಿಂತ ದೇಶ ಮುಖ್ಯ, ನಮ್ಮ ದೇಶದ ಸಂಸ್ಕೃತಿ, ಧರ್ಮ ಎಲ್ಲವು ಉಳಿಯಬೇಕಾದರೆ ಸಂವಿಧಾನ ರಕ್ಷಣೆ ಆಗಬೇಕು. ಈ ಬೈಕ್ ಜಾಥಾ ಸಮಾವೇಶ ಬಹಳ ಮುಖ್ಯ, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕುʼ ಡಾ. ಬಸವಲಿಂಗ ಪಟ್ಟದ್ದೇವರು ಕರೆ ನೀಡಿದರು.
ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಭಾರತೀಯ ಸಂವಿಧಾನದ ಆಶಯಗಳು ವಚನಗಳಲ್ಲಿ ಕಾಣುತ್ತೇವೆ, ಹಾಗೆಯೇ ಶರಣರ ವಚನಗಳ ಮೌಲ್ಯಗಳು ಸಂವಿಧಾನದಲ್ಲಿ ಕಾಣುತ್ತವೆ. ಸಂವಿಧಾನ ರಕ್ಷಣೆ ಮಾಡುವ ಈ ಬೈಕ್ ಜಾಥಾ ಅಭಿಯಾನ ಮತ್ತು ಸಮಾವೇಶ ಯಶಸ್ವಿಯಾಗಲಿʼ ಎಂದು ಶುಭ ಹಾರೈಸಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ಶಶಿಧರ್ ಕೋಸಂಬೆ ಸೇರಿದಂತೆ ಮತ್ತಿತರರು ಜಾಥಾಕ್ಕೆ ಶುಭ ಕೋರಿ ಬೀಳ್ಕೊಟ್ಟರು.
ಸಂವಿಧಾನ ಯುವಯಾನ ತಂಡದ ಪ್ರಮುಖರಾದ ಸರೋವರ ಬೆಂಕಿಕೆರೆ, ಹೇಮಂತ್ ಸಕಲೇಶಪುರ, ರಾಜೇಂದ್ರ ರಾಜವಾಳ, ದುರ್ಗೇಶ ಬರಗೂರ್, ಮರಿಸ್ವಾಮಿ,ಟೋಪಣ್ಣ ಕೋಮಟೆ, ಯಮುನಾ, ರವಿ ನವಲಹಳ್ಳಿ, ಶರಣು, ಗೀತಾ ಹೊಸಮನಿ, ಕೌಶಲ್ಯ, ರವಿ ಯಮನೂರ್, ಶಾಂತಾ, ಉಮೇಶ, ಚನ್ನಕೇಶವ್ ಅವರು ಜಾಥಾ ಕೈಗೊಂಡಿದ್ದಾರೆ.