ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಮರ್ಥರಾದರೆ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಅದರಲ್ಲೂ ಆರ್ಥಿಕ ಸ್ವಾವಲಂಬನೆ ಮಹತ್ವದ್ದಾಗಿದೆ ಎಂದು ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ. ನುಡಿದರು.
ಬೀದರ್ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲಿಡುತ್ತಿದ್ದಾರೆ. ಅನೇಕ ಆಯ್ಕೆಗಳು ಇಂದು ಮಹಿಳೆಯರ ಮುಂದಿವೆ. ವಿದ್ಯಾರ್ಥಿನಿಯರು ನಿಖರವಾದ ಗುರಿ, ಕಠಿಣ ಪರಿಶ್ರಮದಿಂದ ಏನಾದರೂ ಸಾಧಿಸಬಹುದಾಗಿದೆʼ ಎಂದರು.
ʼಸಮಾಜದಲ್ಲಿ ಉನ್ನತ ಶಿಕ್ಷಣ ಮುಗಿದ ತಕ್ಷಣ ಮದುವೆಯಾಗಲು ಒತ್ತಾಯಿಸಲಾಗುತ್ತದೆ. ಅನಾವಶ್ಯಕ ವಿಷಯಗಳನ್ನು ಕಿವಿಗೆ ಹಾಕಿಕೊಳ್ಳದೆ, ಏಕಾಗ್ರತೆಯಿಂದ ಪ್ರಯತ್ನದ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಹೆಚ್ಚಿನ ಗಮನ ನೀಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಇಲಾಖೆಯ ಉಪ ನಿಬಂಧಕಿ ಮಂಜುಳಾ ಅವರು ಮಾತನಾಡಿ, ʼಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳಿ ಆಮೇಲೆ ಇತರರು ತಾವೇ ನಿಮ್ಮನ್ನು ಗೌರವಿಸುವ ಕಾಲ ಬರುತ್ತದೆ. ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಸಾಧನೆ ಮುಖ್ಯ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಬಲರಾಗಬೇಕಾದ ಅನಿವಾರ್ಯತೆಯಿದೆʼ ಎಂದರು.
ಬೀದರ್ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಯಶ್ರೀ ಪ್ರಭಾ ಮಾತನಾಡಿ, ʼಯಾವ ದೇಶದಲ್ಲಿ ಮಹಿಳೆಯರಿಗೆ ಗೌರವದಿಂದ ಕಾಣುತ್ತಾರೆಯೋ ಆ ದೇಶ ತುಂಬಾ ಅಭಿವೃದ್ಧಿ ಹೊಂದುತ್ತದೆ. ಮಹಿಳೆಯರಿಗೆ ಪೆನ್ನಿನ ಶಕ್ತಿಯ ಅವಶ್ಯಕತೆಯಿದೆ ಎಂದರು.

ಸಿಂಡಿಕೇಟ್ ಸದಸ್ಯ ವಿಠ್ಠಲ್‌ದಾಸ ಪ್ಯಾಗೆ ಮಾತನಾಡಿ, ʼಮಹಿಳೆಯರ ಸಬಲೀಕರಣವೆಂದರೆ ಮನೆಯಲ್ಲಿ ಕೆಲಸ ಮಾಡುವ ಹೆಣ್ಣುಮಗಳ ಶ್ರಮಕ್ಕೂ ಸಹ ಅಷ್ಟೇ ಬೆಲೆ ಕೊಡಬೇಕು. ಆಗ ಮಾತ್ರ ನಿಜವಾದ ಮಹಿಳಾ ಸಬಲೀಕರಣವಾಗುತ್ತದೆ. ಸಾವಿತ್ರಿಬಾಯಿ ಜ್ಯೋತಿಬಾ ಫುಲೆ ಅವರ ಕೊಡುಗೆ ಮಹತ್ತರವಾದದ್ದು. ಬಡತನ, ಅನಕ್ಷರತೆ, ಶಕ್ತಿ, ಮುಕ್ತಿಗಾಗಿ ಸಂವಿಧಾನ ಬಂದ ಮೇಲೆ ಮಹಿಳಾ ವಿದ್ಯಾಭ್ಯಾಸದ ಅನುಕೂಲತೆಗಳು ಒದಗಿವೆ. ಇಂದು ಮಹಿಳೆಯರಿಗೆ ವಿಚಾರ ಮಾಡುವ ಸ್ವಾತಂತ್ರ್ಯ ಅವಶ್ಯಕತೆಯಿದೆʼ ಎಂದರು.
ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ ಟಿ. ಅವರು ಮಾತನಾಡಿ, ʼಮಹಿಳೆಯ ದೊಡ್ಡ ಸಾಧನೆಯೆಂದರೆ ಜನ್ಮ ನೀಡುವ ಶಕ್ತಿಯಿರುವುದು ಕೇವಲ ಮಹಿಳೆಯರಿಗೆ ಮಾತ್ರವೆನ್ನಬಹದು. ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀದರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಮಾತನಾಡಿ, ʼಮಹಿಳೆಗೆ ಆರ್ಥಿಕ ಸ್ವಾವಲಂಬನೆ, ಧೈರ್ಯ ಇದ್ದಲ್ಲಿ ಮಾತ್ರ ಮಹಿಳೆಯರು ಸಾಧನೆ ಮಾಡಲು ಸಾಧ್ಯ. ಮಹಿಳೆಯರಿಗೆ ಹಿಂಸಿದರೆ ಸಮಾಜ ಉದ್ಧಾರವಾಗುವುದಿಲ್ಲ. ಎಲ್ಲರೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸೋಣʼ ಎಂದು ತಿಳಿಸಿದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಕೆ.ಎ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ಎಚ್.ಎಸ್. ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ ಸಾವಳಗಿ, ಶಿವನಾಥ ಪಾಟೀಲ, ಸಚಿನ್ ಶಿವರಾಜ, ಅರ್ಜುನ ಮರೆಪ್ಪ ಕನಕ, ಅಬ್ದುಲ್ ಸತ್ತಾರ್, ವೈಷ್ಣವಿ ಪಾಟೀಲ್ ಹಾಗೂ ಶೋಭಾ ಪಾಟೀಲ್ ಅವರು ಮಹಿಳೆಯರ ಕುರಿತು ಮಾತನಾಡಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಅನ್ನದಾತರ ಸಾವಿಗೆ ಕೊನೆಯಿಲ್ಲ : 5 ವರ್ಷಗಳಲ್ಲಿ 100 ದಾಟಿದ ರೈತರ ಆತ್ಮಹತ್ಯೆ ಸಂಖ್ಯೆ
ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವೀಂದ್ರನಾಥ.ವಿ.ಗಬಾಡಿಯವರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಡಾ.ಮುಸ್ತಾಖೀಮ್ ಗಾಯನ ನಡೆಸಿಕೊಟ್ಟರು. ಡಾ.ಸಂತೋಷಿ ಎಂ. ಹಾಗೂ ಡಾ.ಸುಹಾಸಿನಿ ಸಾವಳೆ ಪ್ರಾರ್ಥನಾ ಗೀತೆ ಹಾಡಿದರು. ಡಾ.ಸುನೀತಾ ಮಹೇಶ್ವರಿ ವಂದಿಸಿದರು. ಡಾ.ಸುರೇಖಾ ಬಿರಾದಾರ ನಿರೂಪಿಸಿದರು.