ಪಹಣಿಯಲ್ಲಿ ವಕ್ಫ್ ನಮೂದು ವಿಚಾರಕ್ಕೆ ಸಂಬಂಧಿಸಿದಂತೆ ʼಬಸವಣ್ಣನಂತೆ ಹೊಳ್ಯಾಗ ಜಿಗಿಯಬೇಕು, ಇಲ್ಲವಾದರೆ ಸಾಬ್ರು ಆಗಿʼ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ.
ಬೀದರ್‌ನಲ್ಲಿ ಸೋಮುವಾರ ನಡೆದ ವಕ್ಫ್ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಶಾಸಕ ಯತ್ನಾಳ್ ನೀಡಿರುವ ಹೇಳಿಕೆ ಅವಿವೇಕತನದ್ದು. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇತಿಹಾಸ ಅರಿತು ಮಾತನಾಡಬೇಕು. ಬಸವಣ್ಣನವರು ಮಾನವ ಕಲ್ಯಾಣಕ್ಕಾಗಿ ಕ್ರಾಂತಿ ಮಾಡಿದ್ದರು. ಅವರು ಹೊಳೆಯಲ್ಲಿ ಜಿಗಿದಿರಲಿಲ್ಲ. ಹಾಗೆ ಜಿಗಿದಿದ್ದರೆ ಯತ್ನಾಳ್ ಅವರ ತಂದೆ-ತಾಯಿ ಅವರಿಗೆ ಬಸವಣ್ಣನವರ ಹೆಸರು ಇಡುತ್ತಿರಲಿಲ್ಲ ಎಂದು ಧನ್ನೂರ ತಿಳಿಸಿದ್ದಾರೆ.
ಬಸವಣ್ಣ ಕ್ರಾಂತಿಯೋಗಿ, ಧೀರ ಪ್ರವಾದಿ. 12ನೇ ಶತಮಾನದಲ್ಲಿ ಶತ ಶತಮಾನಗಳ ಮೌಢ್ಯ, ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ, ಸಮಾನತೆ ಸಮಾಜ ನಿರ್ಮಿಸಿದ್ದರು. ಅವರು ಜನ್ಮವೆತ್ತ ಜಿಲ್ಲೆಯಲ್ಲೇ ಜನಿಸಿದ ಯತ್ನಾಳರು ಜೋಶ್‌ನಲ್ಲಿ
ಬಸವಣ್ಣನವರ ಕುರಿತು ತಪ್ಪು ಸಂದೇಶ ಹೋಗುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬೌದ್ದರ ಧಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ
ʼಒಂದನ್ನಾಡಲು ಹೋಗಿ ಒಂಬತ್ತನ್ನಾಡುವ ಡಂಬಕರ ಮೆಚ್ಚ ನಮ್ಮ ಕೂಡಲಸಂಗಮದೇವʼ ಎಂದು ಬಸವಣ್ಣ ಹೇಳಿದ್ದಾರೆ. ಬಸವ ಧರ್ಮದವರೇ ಆದ ಯತ್ನಾಳ್ ಅವರಿಗೆ ನಾಲಿಗೆ ಹಿಡಿತ ತಪ್ಪಿದ, ಅರಿವಿಲ್ಲದ ಪುಢಾರಿಯಂತೆ ಮಾತನಾಡುವುದು ಶೋಭೆ
ತರುವುದಿಲ್ಲ ಎಂದಿದ್ದಾರೆ. ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿ, ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಕ್ಕೆ ಯತ್ನಾಳ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.