ಬೀದರ್ ನಗರದ ಗುರುನಾನಕ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಮೂಹಿಕ ಯೋಗಾಭ್ಯಾಸ ನಡೆಯಿತು.
ಭಾರತ ಸರ್ಕಾರ ಆಯುಶ್ ಇಲಾಖೆಯ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಗುರುನಾನಕ ಶಿಕ್ಷಣ ಸಂಸ್ಥೆ, ಇಂಟರ್ನ್ಯಾಶನಲ್ ನ್ಯಾಚುರೋಪತಿ ಆರ್ಗನೈಜೇಶನ್, ಸೂರ್ಯ ಫೌಂಡೇಶನ್ ಹಾಗೂ ಪತಂಜಲಿ ಸಂಸ್ಥೆಯ ಆಯೋಜಕತ್ವದಲ್ಲಿ ನಡೆದ ಯೋಗ ದಿನಾಚಾರಣೆ ಕಾರ್ಯಕ್ರಮಕ್ಕೆ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ.ಎಸ್.ಬಲಬೀರ ಸಿಂಗ್ ಅವರು ಚಾಲನೆ ನೀಡಿದರು.
ಸಂಸ್ಥೆಯ ಮುಖ್ಯಸ್ಥರಾದ ರೇಷ್ಮಾ ಕೌರ್ ಮಾತನಾಡಿ, ʼಯೋಗ ಭಾರತದ ಪರಂಪರೆಯ ಕೊಡುಗೆಯಾಗಿದೆ, ಯೋಗವು ದೇಹ ಮನಸ್ಸನ್ನು ಒಳಗೊಂಡಿದೆ. ಮನುಷ್ಯ ಹಾಗೂ ಪ್ರಕೃತಿ ಮಧ್ಯದ ಬಾಂಧವ್ಯವೇ ಯೋಗ,ಯೋಗ ಬದುಕು ಬದಲಿಸುವ ಮತ್ತು ಅರಳಿಸುವ ವಿಧಾನವಾಗಿದೆ, ಜೊತೆಗೆ ಯೋಗ ಸಂಯಮ, ಸಾರ್ಥಕತೆಯನ್ನು ಒಳಗೊಂಡಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನ ಉತ್ತಮವಾಗಿಸುತ್ತದೆʼ ಎಂದರು.
ಸೂರ್ಯ ಫೌಂಡೇಶನ್ ಹಾಗೂ ಐಎನ್‌ಒ ರಾಜ್ಯ ಸಂಯೊಜಕ ಗುರುನಾಥ ರಾಜಗೀರಾ ಮಾತನಾಡಿ, ʼಯೋಗಕ್ಕೆ
ಸಾವಿರಾರು ವರ್ಷಗಳ ಇತಿಹಾಸವಿದ್ದು, ಭಾರತದ ಕರೆಗೆ ಓಗೊಟ್ಟು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸೂರ್ಯ ಫೌಂಡೇಶನ್ ಹಾಗೂ ಐಎನ್‌ಒ ವತಿಯಿಂದ ದೇಶಾದ್ಯಂತ ಎಂಟು ಸಾವಿರ ಕಡೆ ಮತ್ತು ಬೀದರ ಜಿಲ್ಲೆಯಲ್ಲಿ ಇಪ್ಪತ್ತೊಂದು ಕಡೆ ಯೋಗ ದಿನಾಚರಣೆ ಯಶಸ್ವಿಯಾಗಿ ನಡೆಸಲಾಗಿದೆʼ ಎಂದರು.

ಯೋಗ ಶಿಕ್ಷಕ ಹಾಗೂ ಐಎನ್‌ಒ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಅವರ ಅತ್ಯುತ್ತಮ ಯೋಗ ತರಬೇತಿ ಹಾಗೂ ಯೋಗಪಟು ಆನಂದ ಅವರ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು, ಬಳಿಕ ಇವರ ಸೇವೆಯನ್ನು ಮನಗಂಡು ಗುರುನಾನಕ್ ಶಿಕ್ಷಣ ಸಂಸ್ಥೆಯವರು ವಿಶೇಷ ಸನ್ಮಾನ ಮಾಡಿ ಪ್ರೋತ್ಸಾಹಿಸಿದರು.
ಇದನ್ನೂ ಓದಿ : ಬೀದರ್ | ಯೋಗದಿಂದ ಆರೋಗ್ಯ ವೃದ್ಧಿ : ಶಾಸಕ ಪ್ರಭು ಚವ್ಹಾಣ
ಪ್ರಮುಖರಾದ ಗುರು ನಾನಕ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಮೇಶ್ವರರಾವ್, ಮಾಜಿ ಕರ್ನಲ್ ಆರ್.ಡಿ.ಸಿಂಗ್, ಆನಂದ ರೆಡ್ಡಿ, ಶಿವಕುಮಾರ ಸ್ವಾಮಿ, ಸಚಿನ ಸೋಲಪುರೆ, ಯೊಗೆಂದ್ರ ಯದಲಾಪುರೆ, ಶಿವಮೂರ್ತಿ ಬಟನಾಪುರೆ ಸೇರಿದಂತೆ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.