ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ನಿಮಾನ್ಸ್ ಬೆಂಗಳೂರು ಸಹಯೋಗದಲ್ಲಿ ಚಿಟಗುಪ್ಪ ತಾಲೂಕಿನ ಬೋರಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮವನ್ನು ಈಚೆಗೆ ಆಯೋಜಿಸಲಾಯಿತು.
ಯುವ ಸ್ಪಂದನ ಪರಿವರ್ತಕ ಲಕ್ಷ್ಮಣ್ ಪಿ.ಮಚ್ಕೊರೆ ಮಾತನಾಡಿ, ʼವಿದ್ಯಾರ್ಥಿಗಳಿಗೆ ಯಾವುದಾದರೂ ಮಾನಸಿಕ, ದೈಹಿಕ, ಶೈಕ್ಷಣಿಕ ತೊಂದರೆಗಳಿಗೆ ಒಳಗಾಗಿದ್ದರೆ ನಿಮ್ಮ ಸಮಸ್ಯೆಗಳಿಗೆ ನಮ್ಮ ಯುವ ಸ್ಪಂದನ ಕೇಂದ್ರ ಸೂಕ್ತ ಮಾರ್ಗದರ್ಶನ ಒದಗಿಸುವ ಕೆಲಸ ಮಾಡುತ್ತದೆʼ ಎಂದರು.
ʼಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಸಂಪೂರ್ಣ ಉಚಿತ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಸರಳವಾಗಿ ಓದಿರುವ ವಿಷಯವನ್ನು ಮನನ ಮಾಡಿಕೊಳ್ಳುವುದು ಹೇಗೆ, ಆಧುನಿಕ ಕಾಲಘಟ್ಟದಲ್ಲಿ ಮೊಬೈಲ್ ಜಗತ್ತಿನಿಂದ ಹಾಗೂ ಮಾನಸಿಕವಾಗಿ ಹೇಗೆ ಗಟ್ಟಿಯಾಗಬೇಕು ಎಂಬ ವಿಷಯ ಕುರಿತು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ
ಕನ್ನಡ ಸಹ ಶಿಕ್ಷಕ ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸತಿ ಶಾಲೆ ಪ್ರಾಂಶುಪಾಲ ವಿಜಯಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.