ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ಜನ ಆರೋಗ್ಯ ಕೇಂದ್ರ ನಿಮಾನ್ಸ್ ಸಹಯೋಗದಲ್ಲಿ ಬೀದರ್ ಯುವ ಸ್ಪಂದನ ಕೇಂದ್ರ ವತಿಯಿಂದ ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ನಡೆಯಿತು.
ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಲಕ್ಷ್ಮಣ್ ಪಿ. ಮಚ್ಕೊರೆ ಮಾತನಾಡಿ, ʼವಿದ್ಯಾರ್ಥಿಗಳು ಮಾನಸಿಕ, ದೈಹಿಕ, ಶೈಕ್ಷಣಿಕ ತೊಂದರೆಗೆ ಒಳಗಾದರೆ ಯುವ ಸ್ಪಂದನ ಕೇಂದ್ರ ಸೂಕ್ತ ಮಾರ್ಗದರ್ಶನ ಒದಗಿಸುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಸರಳವಾಗಿ ಓದಿ ಮನನ ಮಾಡಿಕೊಳ್ಳುವುದು ಹೇಗೆ ಹಾಗೂ ಆಧುನಿಕ ಮೊಬೈಲ್ ಜಗತ್ತಿನಿಂದ ಹಾಗೂ ಮಾನಸಿಕವಾಗಿ ಹೇಗೆ ಗಟ್ಟಿಯಾಗಬೇಕುʼ ಎಂಬ ವಿಷಯ ಮಂಡಿಸಿದರು.
ಚಿಟಗುಪ್ಪ ತಾಲ್ಲೂಕು ಕಸಾಪ ಅಧ್ಯಕ್ಷ ಅನೀಲಕುಮಾರ್ ಸಿಂಧೆ ಮಾತನಾಡಿ, ʼಎಲ್ಲರ ಸಹಕಾರದೊಂದಿಗೆ ಕನ್ನಡ ಗಟ್ಟಿಗೊಳಿಸುವ ಕೆಲಸ ಮಾಡೋಣ. ನಾಡು-ನುಡಿ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯವಿದೆʼ ಎಂದು ಹೇಳಿದರು.
ಎನ್‌ಎಸ್‌ಎಸ್ ಅಧಿಕಾರಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಶಾಂತಕುಮಾರ್ ಪಾಟೀಲ್ ಹಾಗೂ ಆಂಗ್ಲ ವಿಭಾಗದ ಮುಖ್ಯಸ್ಥ ವೀರಶೆಟ್ಟಿ ಮೈಲೂರಕರ್ ಕಾರ್ಯಕ್ರಮದ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಚಿಟಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗೆ ನೂತನ ತಾಲ್ಲೂಕಾಧ್ಯಕ್ಷರಾಗಿ ನೇಮಕರಾದ ಅನಿಲಕುಮಾರ್ ಸಿಂಧೆ ಅವರನ್ನು ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಮೊಬೈಲ್ ಹೆಚ್ಚು ಬಳಸಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಚಟ್ನಳ್ಳಿಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.