ʼಯುವಕರು ಕಥೆ, ಕಾದಂಬರಿ, ನಾಟಕ, ಕವಿತೆ ಸೇರಿ ಎಲ್ಲ ಪ್ರಕಾರದ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಅಧ್ಯಯನದಿಂದ ಶಬ್ದಸಂಪತ್ತು ಹೆಚ್ಚಿಸಿಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಾಹಿತಿ, ತಾಲೂಕು ಖಜಾನೆ ಅಧಿಕಾರಿ ಮಾಣಿಕ ನೇಳಗಿ ಅಭಿಪ್ರಾಯಪಟ್ಟರು.
ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ದಸರಾ ಕವಿಗೋಷ್ಠಿ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ʼಕವನಗಳು ಜನರ ಮನಸ್ಸಿಗೆ ತಟ್ಟುವ ಜೊತೆಗೆ ಎಚ್ಚರಗೊಳಿಸಿ ಪರಿವರ್ತಿಸುವ ಮಹತ್ಕಾರ್ಯ ಮಾಡುತ್ತವೆʼ ಎಂದು ನುಡಿದರು.
ಕನ್ನಡದ ಆದಿಕವಿ ಪಂಪ, ಪೊನ್ನ, ರನ್ನ ಸೇರಿದಂತೆ ಅನೇಕರು ರಾಜಾಶ್ರಯದಲ್ಲಿದ್ದ ಕವಿಗಳಾದರೂ ಸಹ ಕಾವ್ಯಧರ್ಮವನ್ನು ಮರೆತವರಿಲ್ಲ. ಅವರ ವಿಚಾರಗಳು ಇಂದಿಗೂ ಜನರನ್ನು ಆಕರ್ಷಿಸುವಲ್ಲಿ ಮಹತ್ತರ ಸ್ಥಾನ ಪಡೆದಿವೆ. ಬಳಿಕ ವಚನಕಾರರು, ಕೀರ್ತನಕಾರರು, ದಲಿತಕವಿಗಳು, ಬಂಡಾಯ ಸಾಹಿತಿಗಳು ಸ್ವಾತಂತ್ರ್ಯ ವಿಚಾರಗಳು ವ್ಯಕ್ತಪಡಿಸಿದ್ದು ವಿಶಿಷ್ಟವಾಗಿದೆʼ ಎಂದರು.
ʼಸಹಜವಾಗಿ ಹುಟ್ಟಿದ ಕಾವ್ಯ ಜನರ ಮನಸ್ಸನ್ನು ಶಾಶ್ವತವಾಗಿ ಹಿಡಿದಿಡುವ ಕೆಲಸ ಮಾಡುತ್ತದೆ. ದಸರಾ ಕೇವಲ ನಾಡಿನ ವೈಭವ ಪರಿಚಯಿಸುವ ಹಬ್ಬವಾಗದೇ ನಾಡಿನ ಪ್ರಗತಿಗೆ ಪೂರಕವಾಗಿ ಬಡವರ ಶೋಷಿತರ, ದಮನಿತರ ಸಂಭ್ರಮದ ಹಬ್ಬವಾಗಲಿʼ ಎಂದರು.
ಶಿಕ್ಷಕ ಪ್ರಕಾಶ ದೇಶಮುಖ ಆಶಯ ನುಡಿ ವ್ಯಕ್ತಪಡಿಸಿ, ʼಕವನಗಳು ಸಾಮಾಜಿಕ ಬದ್ದತೆ, ಸಮಾಜಮುಖಿ ಚಿಂತನೆ ಒಳಗೊಂಡಿರಬೇಕು. ಬದುಕಿನ ವಾಸ್ತವಿಕತೆಯ ಪರಿಚಯ ಕವನಗಳ ರೂಪದಲ್ಲಿ ರಚನೆಯಾಗಬೇಕು. ದೀರ್ಘ ಕವನಗಳಿಗೂ ಹನಿಗವನಗಳಿಗೂ ತುಂಬ ವ್ಯತ್ಯಾಸವಿದ್ದು, ನಮ್ಮ ತಾಳ್ಮೆಯ ಪ್ರತಿರೂಪವಾದ ಹನಿಗವನಗಳು ಸಾಹಿತ್ಯದ ರಸದೌತಣ ನೀಡಲು ಸಾಧ್ಯವಿಲ್ಲʼ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಮಾತನಾಡಿ, ʼಪ್ರಸ್ತುತ ಜನಮಾನಸದಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗಿದ್ದು ಮೌಲ್ಯಗಳ ಅಧಃಪತನ ಶುರುವಾಗಿದೆ. ನಾವೆಲ್ಲರೂ ಕನ್ನಡವನ್ನು ಹೆಚ್ಚು ಬಳಸುವುದು ಅಗತ್ಯವಾಗಿದೆ. ಕನ್ನಡವೆಂದರೆ ಕೇವಲ ಭಾಷೆಯಲ್ಲ. ಅದು ಜನರಲ್ಲಿ ಮೌಲ್ಯಗಳು ತುಂಬುವ ಸಂಸ್ಕಾರ ಬಿತ್ತುವ ನಮ್ಮ ಸ್ವಾಭಿಮಾನದ ಕುರುಹುʼ ಎಂದರು.
ಸಮಾರಂಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದತ್ತಾತ್ರಿ ಗಿರಿ, ಮಹಾದೇವ ಭಾಲೇಕರ್, ಸಂಜೀವ ಬಿರಾದಾರ್, ಗುಣವಂತ ಬಿರಾದಾರ್, ಕೈಲಾಸಪತಿ ಕೇದಾರೆ ರಾಜ್ಯ ಮಟ್ಟದ ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಡಿಗ್ಗಿ, ಪೀರಪ್ಪ ಉಜನೀಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿವಾನಂದ ಸ್ವಾಮಿ, ಎಂಡಿ ನಯೀಮ್, ರಂಜೀತ ಸಿಂಧೆ, ರಮೇಶ ಪಾಂಚಾಳ, ಸವಿತಾ ಮೀಸೆ, ಶಿಲ್ಪಾ ರಾಜೋಳೆ, ನಾಗೇಂದ್ರ ಚಿಟಗಿರೆ, ಪ್ರಕಾಶ ಬರದಾಪೂರೆ, ವಿರೇಶ ಅಲಮಾಜೆ ಅವರು ಸ್ವರಚಿತ ಕವನ ವಾಚಿಸಿದರು.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳು ಸ್ಪರ್ಧೆಗೆ ಅಣಿಯಾಗಲಿ : ರಾಜಕುಮಾರ್ ಅಲ್ಲೂರೆ
ಸಾಹಿತಿ ಸೂರ್ಯಕಾಂತ ರ್ಯಾಕಲೆ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ ಹಾಗೂ ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖರಾದ ಅಮರ ಸ್ವಾಮಿ, ಜಗನ್ನಾಥ ಮೂಲಗೆ, ಸಂದೀಪ ಪಾಟೀಲ್, ಅಂಬಾದಾಸ ನಳಗೆ, ಗೋವಿಂದ ಪಾಟೀಲ್, ಮಹಾದೇವ ಘುಳೆ, ಗಜಾನನ ಮಳ್ಳಾ, ಅಶೋಕ ಅಲಮಾಜೆ ಸೇರಿದಂತೆ ಇನ್ನಿತರರಿದ್ದರು.