ಜಿಲ್ಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 26,464 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 28.37 ಕೋಟಿ ವಸೂಲಿ ಮಾಡಲಾಗಿದೆ. ಕಳೆದ ಬಾರಿಯ ಲೋಕ ಅದಾಲತಗಿಂತ ಈ ಸಲ 5 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪಾ ಕೆ.ಕನಕಟ್ಟೆ ಹೇಳಿದರು.
ಸೋಮವಾರ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ರಾಷ್ಟೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿಯ ನಿರ್ದೇಶನದಂತೆ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಡಿ.9 ರಂದು ಬೀದರ ಜಿಲ್ಲೆಯಲ್ಲಿ ಆಯೋಜಿಸಿದ ಲೋಕ್ ಅದಾಲತನಲ್ಲಿ 11648 ಪೆಡಿಂಗ್ ಪ್ರಕರಣಗಳನ್ನು ಇತ್ಯರ್ಥಗೊಳಿಸಿ 14.86 ಕೋಟಿ ರೂ. ಮೊತ್ತದ ಪರಿಹಾರ ಒದಗಿಸಿ ಇತ್ಯರ್ಥಪಡಿಸಲಾಗಿದೆ” ಎಂದು ಮಾಹಿತಿ ನೀಡಿದರು.
“14816 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿ 13.50 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. 163 ಬ್ಯಾಂಕ್ ವಸೂಲಾತಿ ಪ್ರಕರಣಗಳನ್ನು ಇತ್ಯರ್ಥಪಡಿಸಿ 1.23 ಕೋಟಿ ರೂ.ಗಳ ಬಾಕಿ ವಸೂಲಾತಿ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳ ನೀರಿನ ತೆರಿಗೆ ಮತ್ತು ಬಿಎಸ್ಎನ್ಎಲ್, ಜೆಸ್ಕಾಂ ಬಿಲ್ , ಟ್ರಾಫಿಕ್ ಚಲನ್ ವಸೂಲಾತಿಯ 14,653 ಪ್ರಕರಣಗಳನ್ನು ಬಗೆಹರಿಸಿ 12.27 ರೂ.ಗಳ ವಸೂಲಾತಿ ಮಾಡಲಾಗಿದೆ.ಈ ಎಲ್ಲಾ ಪ್ರಕಣಗಳು ಸೇರಿ ಒಟ್ಟು 26,464 ಪ್ರಕರಣಗಳನ್ನು ಈ ಬಾರಿಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗಿದ್ದು, ಜಿಲ್ಲೆಯಾದ್ಯಂತ 9 ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಕಾಮಗಾರಿ ಆರೋಪ; ಗುಣಮಟ್ಟ ರಸ್ತೆ ನಿರ್ಮಾಣಕ್ಕೆ ಆಗ್ರಹ
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂಧಿಗಳಾದ ಜಗದೀಶ್ವರ ದೊರೆ, ಆಕಾಶ ಸಜ್ಜನ್, ರಾಹುಲ್, ಜೀವನ, ಯೋಹನ, ಜಿಲ್ಲಾ ವಾರ್ತಾಅಧಿಕಾರಿ ಜಿ.ಸುರೇಶ ಸೇರಿದಂತೆ ಇತರರಿದ್ದರು.