ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಜಾಗದಲ್ಲಿ ತೆಗೆದಿರುವ ಗುಂಡಿಗೆ ಬಿದ್ದ ಬಾಲಕನ್ನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ನಡೆದಿದೆ.
ಔರಾದ್ ನಿವಾಸಿ ಜಿಶಾನ್ ಇಸ್ಮಾಯಿಲ್ (11) ಮೃತಪಟ್ಟ ಬಾಲಕ. ಬಾಲಕ 5ನೇ ತರಗತಿಯಲ್ಲಿ ಓದುತ್ತಿದ್ದ, ಶನಿವಾರ ಶಾಲೆಗೆ ರಜೆ ಹಿನ್ನಲೆ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಆಟವಾಡಲು ಹೋದ ವೇಳೆ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಔರಾದ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಬಾಲಕನ ಶವ ತಾಲೂಕು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ :
ಈ ದುರ್ಘಟನೆಗೆ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ನೂತನ ಕಾಲೇಜು ಕೊಠಡಿ ನಿರ್ಮಾಣ ಮಾಡುತ್ತಿರುವ ಸಂಬಂಧಿಸಿದ ಗುತ್ತಿಗೆದಾರ ಹಾಗೂ ಇಂಜಿನಿಯರ್ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿ ಮಾನವ ಬಂಧುತ್ವ ವೇದಿಕೆಯ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಸತಿ ಶಾಲೆ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ ಐದು ಸಾವಿರ ನಗ್ನ ಫೋಟೋ, ವಿಡಿಯೋ ಪತ್ತೆ!
ವೇದಿಕೆಯ ರತ್ನದೀಪ ಕಸ್ತೂರೆ ನೇತ್ರತ್ವದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿ, ʼವರ್ಷದ ಹಿಂದೆ ಕೂಡ ಐದು ವರ್ಷದ ಮಗುವೊಂದು ಇದೇ ರೀತಿ ಸಾವಿಗೀಡಾಗಿತ್ತು. ಅಂತಹ ಘಟನೆ ಮತ್ತೆ ನಡೆದಿದೆ. ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕುʼ ಎಂದು ಆಗ್ರಹಿಸಿದರು.