ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿತ್ತು. ಆದರೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿನ ನೀರಿನ ಘಟಕಗಳು ನಿಷ್ಪ್ರಯೋಜಕವಾಗಿವೆ.
ಹುಮನಾಬಾದ್ ತಾಲೂಕಿನ ಮದರಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮಲ್ಕಾಪುರ ವಾಡಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದ ಸೂಕ್ತ ನಿರ್ವಹಣೆಯಿಲ್ಲದೆ ಕೆಟ್ಟು ನಿಂತಿದ್ದು, ದುರಸ್ತಿ ಇಲ್ಲದ ಕಾರಣ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.
ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಉದ್ಘಾಟನೆಗೊಂಡ ಕೆಲ ತಿಂಗಳು ಮಾತ್ರ ಬಳಕೆಗೆ ಬಂದಿವೆ. ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿದ ಶುದ್ಧ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿವೆ. ಕೆಲವು ಕಡೆ ಸೂಕ್ತ ನಿರ್ವಹಣೆಯಿಂದ ಸರಿಯಾಗಿ ನಡೆಯುತ್ತಿವೆ. ಹಲವು ಹಳ್ಳಿಗಳಲ್ಲಿ ನೀರಿನ ಘಟಕಗಳು ಪಾಳು ಬಿದ್ದು ಧೂಳು ತಿನ್ನುತ್ತಿವೆ, ಕೆಲವೆಡೆ ಘಟಕದಲ್ಲಿ ಅಳವಡಿಸಿದ ಯಂತ್ರಗಳು ಕೆಟ್ಟು ಹೋಗಿದ್ದು ದುರಸ್ತಿ ಭಾಗ್ಯ ಇಲ್ಲದೆ ವರ್ಷಗಳೇ ಕಳೆದರೂ ಯಾರೊಬ್ಬರೂ ಕಾಳಜಿವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಕಾಪುರ ವಾಡಿ ಗ್ರಾಮದ ಯುವಕ ಶರಣು ಈದಿನ.ಕಾಮ್ ಜೊತೆ ಮಾತನಾಡಿ, “ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿವೆ. ಇಲ್ಲಿ ನಿರ್ಮಿಸಲಾದ ನೀರಿನ ಘಟಕ ಒಂದೆರಡು ತಿಂಗಳು ಮಾತ್ರ ಬಳಕೆ ಮಾಡಲಾಗಿದೆ. ನಂತರ ಕೆಟ್ಟು ನಿಂತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರಿಗೆ, ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ನೀರಿನ ಘಟಕ ಇದ್ದರೂ ಹಾಳಾದ ಪರಿಣಾಮ ಗ್ರಾಮಸ್ಥರು ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ಈಗಲಾದರೂ ಪಂಚಾಯತ್ ಅಧಿಕಾರಿಗಳು ಸರಿಪಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿಯರ ಹಾಸ್ಟೆಲ್ ಸ್ನಾನಗೃಹದಲ್ಲಿ ಕ್ಯಾಮೆರಾ ಅಳವಡಿಸಿದ್ದ ಆರೋಪಿ ಬಂಧನ