ಸ್ವಹಿತ, ಸ್ವಜನ ಹಿತಾಸಕ್ತಿ ಬದಿಗಿಟ್ಟು ಸಮಷ್ಟಿ ಹಿತಕ್ಕಾಗಿ ಪತ್ರಿಕೋದ್ಯಮ ಬಳಸಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ ರಶ್ಮಿ ಎಸ್. ಅಭಿಪ್ರಾಯಪಟ್ಟರು.
ಔರಾದ್ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಿಕೋದ್ಯಮ – ಇತಿಹಾಸ ಮತ್ತು ವರ್ತಮಾನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, “ಸಮಕಾಲೀನ ವಿದ್ಯಮಾನಗಳ ಬಗ್ಗೆ ಆಳವಾದ ಅರಿವು ಬೆಳೆಸಿಕೊಳ್ಳಬೇಕು, ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜನರಿಗೆ ವಿಶ್ವಾಸಾರ್ಹ ಮಾಹಿತಿ ನೀಡುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದೆ” ಎಂದರು.
“ಸುದ್ಧಿ ಬರೆಯುವವರು ಸುದ್ಧಿಗಳನ್ನು ಓದುವುದು ಸಹ ಅರಿಯಬೇಕು. ಕರ್ತವ್ಯಕ್ಕೆ ಬಾಧ್ಯಸ್ಥರಾಗುವವರು, ಉತ್ತದಾಯಿತ್ವರಾಗುವವರೇ ಪತ್ರಕರ್ತರು. ಹೊಸ ತಂತ್ರಜ್ಞಾನ, ಕಾನೂನು, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ನಿರಂತರ ಅಧ್ಯಯನ ನಡೆಸಿದಾಗ ಮಾತ್ರ ಗುಣಮಟ್ಟದ ಪತ್ರಿಕೋದ್ಯಮ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕನ್ನಡ ಪತ್ರಿಕಾ ರಂಗದ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಅವರು, ಸುವಾರ್ತೆ ಮೂಲಕ ಆರಂಭವಾದ ಕನ್ನಡ ಪತ್ರಿಕೆಯ ಪಯಣ, ಮುಂದೆ ಹಲವು ರೀತಿಯಲ್ಲಿ ಅನಾವರಣಗೊಂಡಿದೆ. ನಮ್ಮ ಭಾಷೆ ಬಿಗಿಯಾಗಲು ಪತ್ರಿಕೆಗಳ ಅಧ್ಯಯನ ಅತ್ಯಗತ್ಯ. ವಿದ್ಯಾರ್ಥಿಗಳು ಸಂಪಾದಕೀಯ ಓದುವುದು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಪಾಟೀಲ ಮಾತನಾಡಿ, “ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳು ಅರ್ಹರಿಗೆ ಒದಗುವಂತೆ ಪತ್ರಿಕೆಗಳು ಕನ್ನಡಿಯಂತೆ ಕೆಲಸ ಮಾಡುತ್ತಿವೆ” ಎಂದರು.
ಸಿಪಿಐ ರಘವೀರಸಿಂಗ ಠಾಕೂರ್, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು.
ಇದೆ ಸಂದರ್ಭದಲ್ಲಿ ತಾಲ್ಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | ಕೈಕೊಟ್ಟ ಮುಂಗಾರು : ಜೂನ್ ಕಳೆದರೂ ಶೇ.50ರಷ್ಟು ದಾಟದ ಬಿತ್ತನೆ
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ದೇಶಮುಖ, ಶರಣಪ್ಪ ಚಿಟಮೆ, ಮನ್ಮಥ ಸ್ವಾಮಿ, ಗುರುನಾಥ ದೇಶಮುಖ, ಶಿವರಾಜ ಅಲ್ಮಾಜೆ, ವೀರೇಶ ಅಲ್ಮಾಜೆ, ಅಮರೇಶ ಚಿದ್ರೆ, ಮಲ್ಲಪ್ಪಗೌಡ, ಅಮರಸ್ವಾಮಿ ಸ್ಥಾವರಮಠ, ಆನಂದ ದ್ಯಾಡೆ, ಅನಿಲ ಮೇತ್ರೆ, ರಾಚಯ್ಯ ಸ್ವಾಮಿ, ಚನ್ನಪ್ಪ ಮುಕ್ತೆದಾರ, ರತಿಕಾಂತ, ಅಂಬಾದಾಸ ನಳಗೆ, ಶಿವಕುಮಾರ ಸಾದುರೆ, ಅಲಿಂಪಾಶಾ, ಸೂರ್ಯಕಾಂತ ಸೇರಿದಂತೆ ಪತ್ರಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.




