ಬೀದರ್‌ | ಕೈಕೊಟ್ಟ ಮುಂಗಾರು :‌ ಜೂನ್‌ ಕಳೆದರೂ ಶೇ.50ರಷ್ಟು ದಾಟದ ಬಿತ್ತನೆ

Date:

ಬೀದರ್ ಜಿಲ್ಲಾದ್ಯಂತ ಈ ಬಾರಿ ಮುಂಗಾರು ಮಳೆ ಶೇ.40ರಷ್ಟು ಕೊರತೆಯಾಗಿದ್ದು, ಬಿತ್ತನೆ ಪ್ರಮಾಣ ಕುಸಿದಿದೆ. ಜೂನ್‌ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಶೇ.50ರಷ್ಟು ಬಿತ್ತನೆಯಾಗದಿರುವುದಕ್ಕೆ ಜನ-ಜಾನುವಾರು ತತ್ತರಿಸುವಂತಾಗಿದ್ದು, ಬರದ ಛಾಯೆ ಆವರಿಸಿದೆ.

“ಈ ವರ್ಷ ಮಿರುಗ ಮಳಿನೇ ಬಂದಿಲ್ಲಾರಿ. ನಾಕ್‌ ದಿನಾ ಆಯ್ತು ಥೋಡೆ ಬಿದ್ದುದು ಖರೇ ಎತ್ತಿನ ಕಾಲಿಗೆ ಕೆಸರು ಮೆತ್ತಲ ಹೋಗ್ಯಾದ್, ಏನ್‌ ಮಾಡ್ಬೇಕ್ ಬೀಜ, ಗೊಬ್ಬುರ ಎಲ್ಲಾ ಖರೀದಿ ಮಾಡಿ ಮನ್ಯಾಗ್‌ ಇಟ್ಟಿದ್ದೇವ್.‌ ಹೊಲ ಹೊಡೆದು ಹಸುನ ಮಾಡಿದೆವು, ಹಂಗೇ ಇಡಬಾರ್ದು ಅಂತ ಜರಾ ಹಸಿ ಇದ್ರೂ ಹಂಗೇ ಬಿತ್ಲಾತಿದ್ದೇವ್. ಮೌಸಮ್ ಪೂರಾ ಮುಂದ್ ಹೋಗ್ಯಾದ್‌, ಈಗ ಉದ್ದು, ಹೆಸರು ಛಂದ್‌ ಆಗದ್‌ ಕಮ್‌ ಭರೋಸಾ. ಹಂಗಾಗಿ ಸೋಯಾ, ತೊಗರಿ ಬಿತ್ತಿದೆವ್”‌ ಎಂದು ರೈತ ಗುಣವಂತ ಅವರು ಬೇಸರದಿಂದ ಹೇಳಿದರು.

- Advertisement -

ಔರಾದ್‌ ತಾಲೂಕಿನ ಬಾಬಳಿ ಗ್ರಾಮದ ರೈತ ಗುಣವಂತ ಬಿರಾದರ ಅವರು ಹೊಲದಲ್ಲಿ ಎತ್ತುಗಳ ಮೂಲಕ ಬಿತ್ತನೆ ಮಾಡುವುದನ್ನು ಕಂಡು ರಸ್ತೆ ಮೇಲೆ ಗಾಡಿ ನಿಲ್ಲಿಸಿ, ಅವರ ಬಳಿ ನಾನೇ ಹೋದೆ. ಮುಗಿದ ಕೈಯಿಂದ ನಮಸ್ಕಾರ ಮಾಡುವಾಗಲೇ ನನಗೆ ಗೊತ್ತಾಯ್ತು ಅವರ ಹೆಸರಿನಂತೆಯೇ ನಿಷ್ಕಲ್ಮಶ ಗುಣವಂತರು ಹೌದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ವಯಸ್ಸಿನಲ್ಲಿ ಅವರೇ ಹಿರಿಯರಾದರೂ ʼಬರೀ ಅಣ್ಣಾವ್ರೇ ಕೂಡ್ರಿʼ….ಅಂತ ಪ್ರೀತಿಯಿಂದ ಕರೆದು ಬಿತ್ತನೆ ಕಾರ್ಯಕ್ಕೆ ವಿರಾಮ ಕೊಟ್ಟು ಕೂರಿಗೆ ಬಿಟ್ಟು ನನ್ನ ಬಳಿ ಬಂದು ಕುಳಿತರು. ಬಿಡುವು ಪಡೆದ ಜೋಡೆತ್ತು ನಮ್ಮೊಂದಿಗೆ ವಿಶ್ರಾಂತಿಗೆ ಅಣಿಯಾದವು.

ಗುಣವಂತ ಅವರ ವಯಸ್ಸು ಈಗ 50ರ ಆಸುಪಾಸು. ಅವರಿಗೆ ಇಬ್ಬರು ಗಂಡು ಮಕ್ಕಳು- ಇಬ್ಬರಲ್ಲಿ ಒಬ್ಬರು ಹತ್ತನೇ ತರಗತಿ, ಇನ್ನೊಬ್ಬರು ಪಿಯುಸಿವರೆಗೆ ಓದಿ ಮುಂದೆ ಓದಿನ ಆಸಕ್ತಿ ಕಳೆದುಕೊಂಡು ಕೆಲಸದ ದಾರಿ ಹಿಡಿದರು. ಇಬ್ಬರಿಗೂ ಮದುವೆ ಆಗಿದ್ದು, ಅವರೀಗ ನಗರಗಳಿಗೆ ವಲಸೆ ಹೋಗಿ ಅಲ್ಲೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪೂರ್ವಜರ 2 ಎಕರೆ ಜಮೀನನ್ನು ಬೀಳು ಬಿಡಲು ಮನಸ್ಸಾಗದ ಗುಣವಂತ ದಂಪತಿ ತಮ್ಮ ಜಮೀನಿನ ಜತೆಗೆ ಗ್ರಾಮಸ್ಥರೊಬ್ಬರ 10 ಎಕರೆ ಹೊಲವನ್ನು ಲಾವಣಿ ಪಡೆದು ದಿನಪೂರ್ತಿ ಬೆವರು ಹರಿಸಿ ಬೆಳೆ ಬೆಳೆಯುತ್ತ ತಮ್ಮ ನೆಮ್ಮದಿಯ ಜೀವನ ಕಳೆಯುತ್ತಿದ್ದಾರೆ.

ಶಾಲೆಯ ಮುಖ ನೋಡದ ಗುಣವಂತ ಅವರು ಬಾಲ್ಯದಿಂದಲೂ ದನಕರುಗಳನ್ನು ಮೇಯಿಸಿಕೊಂಡು ಬಂದವರು, ಮುಂದೆ ತಾವೇ ಎತ್ತು ಖರೀದಿಸಿ ಸಂಪೂರ್ಣ ಒಕ್ಕಲಿಗರಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಕೃಷಿ ನಂಬಿಯೇ ಬದುಕುತ್ತಿರುವವರು. ಸೌಮ್ಯ ಸ್ವಭಾದವರಾದ ಗುಣವಂತ ಅವರು ಹಳ್ಳಿಯ ರಾಜಕೀಯ, ಜಗಳ, ತಂಟೆ-ತಗಾದೆಗಳಿಗೆ ಹೋಗದೆ ತಮ್ಮ ಹೊಲ, ಮನೆ, ಸಂಸಾರ ನೋಡಿಕೊಂಡು ಬದುಕುವ ಸಾಧು ಮನುಷ್ಯ. ಸಂಪೂರ್ಣ ಮಳೆಯಾಶ್ರಿತ ಕೃಷಿಯನ್ನೇ ನಂಬಿರುವ ಅವರು ಆಗಾಗ ಬಾಧಿಸುವ ಬರ-ನೆರೆಗಳಿಗೆ ಎದೆಯೊಡ್ಡಿ 1 ಲಕ್ಷ ಮೌಲ್ಯದ ಜೋಡಿತ್ತಿನೊಂದಿಗೆ ತಾವೂ ಸಮವಾಗಿ ಬೆವರು ಹರಿಸುವ ಕಾಯಕ ಜೀವಿ ದಂಪತಿ.

ʼಕಳೆದ ಒಂದು ತಿಂಗಳಿಂದ ಎಲ್ಲೆಡೆ ಮಳೆ ಇಲ್ಲ. ಖಾರಿಫ್ ಬಿತ್ತನೆಗೆ ತಡವಾಗಿದೆ. ಈಗ ಬಿತ್ತಿದರೆ ನಿರೀಕ್ಷಿತ ಬೆಳೆ ಬರುತ್ತಾ?‌ʼ ಎಂಬ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಉದ್ದು, ಹೆಸರು ಬಿತ್ತನೆಗೆ ತಡವಾದ ಕಾರಣ ಬೆಳೆ ಬೆಳವಣಿಗೆಗೆ ಕಮಜೋರ್‌ ಆಗುತ್ತೆ, ಫಲ ಕಮ್ಮಿ ಇರ್ತುದ್.‌ ಮುಂದೆ ಜ್ವಾಯ್…ಅಂತ ಮಳೆ ಹತ್ತಿದ್ರೆ….ರೋಗಭಾಧೆ, ಕಟಾವು ಸಮಸ್ಯೆ ಆಗುತುದ. ಅದಕ್ಕೆ ಹೆಚ್ಚಿಗಿ ಸೋಯಾ, ತೊಗರಿ ಬಿತ್ತಿದೆವ್” ಎಂದು ಸಮಾಧಾನದಿಂದ ಉತ್ತರಿಸಿದರು.‌

ರೈತ ಗುಣವಂತ ಅವರು ಕಳೆದ ವರ್ಷ‌ ಸ್ವಂತ ಹೊಲ, ಬಾಡಿಗೆಗೆ ಪಡೆದ ಜಮೀನು ಸೇರಿ 11 ಎಕರೆಯಲ್ಲಿ ಬೆಳೆದ ಸೋಯಾ, ತೊಗರಿ ಸೇರಿದಂತೆ ಇತರ ಬೆಳೆಗಳು ಅತಿವೃಷ್ಟಿಯಿಂದಾಗಿ ನೆಲೆಕಚ್ಚಿದವು. ಸ್ವಂತ ಹೊಲದ ಬೆಳೆ ಹಾನಿ ಪರಿಹಾರ ₹12 ಸಾವಿರ ಮಾತ್ರ ಬಂದಿದೆ. ಈವೊರ್ಷ ಉತ್ತಮ ಇಳುವರಿ ಫಲಕೊಡಬಹುದೆಂಬ ನಿರೀಕ್ಷೆಯಿದೆ. ಬಿತ್ತಣಿಕಿ ಮೊಸಂ ಹೋದ್ರೂ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದಿಂದ ಬೀಜ, ಗೊಬ್ಬರ ಭೂಮಿತಾಯಿ ಒಡಲಿಗೆ ಹಾಕಿʼನಮ್ಮ ಕರ್ತವ್ಯ ನಾವು ಮಾಡಿದ್ದೇವೆ, ಮುಂದೆ ದೇವರ ಇಚ್ಚೆ. ಏನಾದರೂ ಮಾಡಲಿʼ ಎಂದು ಪ್ರಾರ್ಥಿಸುತ್ತ ಆಕಾಶದತ್ತ ನೋಡುತ್ತಿದ್ದರು.

ಒಂದು ಎಕರೆಗೆ ವಾರ್ಷಿಕ ₹20 ಸಾವಿರದಂತೆ 8 ಎಕರೆ ಭೂಮಿ ಲಾವಣಿ ಪಡೆದ ಉಳುಮೆ ಮಾಡುವ ಗುಣವಂತ ಅವರಿಗೆ ಮುಂಗಾರು ಕೈಕೊಟ್ಟ ಪರಿಣಾಮ ಬಿತ್ತನೆಗೆ ಹಿನ್ನಡೆಯಾಗಿದೆ. ಮುಂದೆ ನಿರೀಕ್ಷೆಯಂತೆ ಮಳೆಯಾದರೆ ಸೋಯಾ, ತೊಗರಿ ಫಸಲು ಬರಬಹುದು. ಇಲ್ಲದಿದ್ದರೆ ಈವರೆಗೆ ಖರ್ಚು ಮಾಡಿದ ಹಣ ಸೇರಿ ಎಲ್ಲವೂ ಮಣ್ಣುಪಾಲು ಆಗುವುದು ಪಕ್ಕಾ ಎಂಬ ಆತಂಕ ವ್ಯಕ್ತಪಡಿಸಿದರು. ಇನ್ನು ಲಾವಣಿ ಪಡೆದ ಜಮೀನಿಗೆ ಸಿಗುವ ವಿಮೆ, ಬೆಳೆ ಹಾನಿ ಪರಿಹಾರ ಹಣ ಹೊಲದ ಮಾಲಿಕರ ಖಾತೆಗೆ ಜಮೆಯಾಗುತ್ತದೆ. ಕೃಷಿಯನ್ನೇ ನಂಬಿ ಸಾಲಸೂಲ ಮಾಡುವ ರೈತರಿಗೆ ಪ್ರಕೃತಿ ಮುನಿದರೆ ಆರ್ಥಿಕ ಹೊರೆ ದ್ವಿಗುಣ ಆಗುವುದು ಗ್ಯಾರಂಟಿ ಎಂಬುದು ಜನಜನಿತ.

ಈ ಹಿಂದೆ ನೇಗಿಲು, ಎಡೆಕುಂಟೆ, ಬಿತ್ತನೆ ಸೇರಿ ಇತರೆ ಕೃಷಿ ಚಟುವಟಿಕೆಗಳಿಗೆ ಗ್ರಾಮೀಣ ಭಾಗದಲ್ಲಿ ಎತ್ತುಗಳ ಸಾಕಣಿಕೆ ಹೇರಳವಾಗಿತ್ತು. ಆದರೀಗ ಎತ್ತುಗಳ ಸಾಕಣೆ ಮಾಡುವವರ ಸಂಖ್ಯೆ ವಿರಳವಾಗಿದ್ದು, ಎತ್ತುಗಳು ಸಿಗುವುದೇ ಅಪರೂಪ ಎಂಬಂತಾಗಿದೆ. ಇಡೀ ಗ್ರಾಮದಲ್ಲಿ ಬೇಸಾಯಕ್ಕೆ ಎತ್ತುಗಳ ಸಾಕಣಿಕೆ ಮಾಡುವವರು ಗುಣವಂತ ಅವರೊಬ್ಬರು ಮಾತ್ರ. ಉಳಿದವರು ಟ್ರ್ಯಾಕ್ಟರ್‌ ಮೂಲಕವೇ ಕೃಷಿ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಬಹುತೇಕ ಎಲ್ಲ ರೈತರು ಯಂತ್ರೋಪಕರಣಗಳ ಮೊರೆಹೋದರೂ ಗುಣವಂತ ಅವರು ಕಳೆದ ಒಂದು ದಶಕದಿಂದ ಎತ್ತುಗಳ ಸಾಕಣೆ ಜತೆಗೆ ಅವುಗಳಿಂದ ಬೇಸಾಯ ಮುಂದುವರೆಸಿದ್ದಾರೆ. ಗ್ರಾಮದ ಬಹಳಷ್ಟು ಜಮೀನುದಾರರು ಗುಣವಂತ ಅವರಂತಹ ಶ್ರಮಿಕರಿಗೆ ವರ್ಷಕ್ಕೆ ಇಂತಿಷ್ಟು ಅಂತಹ ಲಾವಣಿ ಕೊಟ್ಟು ಸಿಟಿ ಸೇರಿದ್ದಾರೆ.

ನಾನು ಹೇಳಲು ಹೊರಟಿರುವುದು ಕಾಯಕ ನಿಷ್ಠ ಗುಣವಂತ ಅವರ ಒಬ್ಬರ ಬದುಕಿನ ಕಥೆಯಲ್ಲ. ಬದುಕಿಗೆ ಕೃಷಿಯೇ ಆಧಾರವಾದ ಜಿಲ್ಲೆಯ ಬಹುತೇಕ ರೈತರ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ಹವಾಮಾನ ವೈಪ್ಯರೀತದಿಂದಾಗಿ ನೆರೆ-ಬರ ಬಾಧಿಸುವುದು ಸಾಮಾನ್ಯ ಎನ್ನುವಂತಾಗಿದೆ. ರೈತ ಕೃಷಿಯಲ್ಲಿ ನಿರೀಕ್ಷಿತ ಲಾಭ ಕಾಣದೆ ಅನ್ನದಾತರು ಚಿಂತಾಕ್ರಾಂತರಾಗುತ್ತಿದ್ದಾರೆ. ಸಾಲಬಾಧೆಯಿಂದ ಹೊರಬರಲಾಗದ ರೈತ ವರ್ಷದಿಂದ ವರ್ಷಕ್ಕೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಜಿಲ್ಲಾದ್ಯಂತ ಶೇ 40ರಷ್ಟು ಬಿತ್ತನೆ

ಜಿಲ್ಲೆಯಲ್ಲಿ ಒಟ್ಟು 5.44 ಲಕ್ಷ ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಈ ಪೈಕಿ ಈ ಬಾರಿ 4.12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಜೂನ್‌ ಅಂತ್ಯದ ವೇಳೆಗೆ ಬಹುತೇಕ ಬಿತ್ತನೆ ಪೂರ್ಣಗೊಳ್ಳುತ್ತಿತ್ತು. ಕೃಷಿ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜಿಲ್ಲಾದ್ಯಂತ ಜುಲೈ 3ರವರೆಗೆ ಒಟ್ಟು 1.66 ಲಕ್ಷ ಹೆಕ್ಟೇರ್‌ ಕ್ಷೇತ್ರ ಅಂದರೆ ಶೇ. 40.48ರಷ್ಟು ಬಿತ್ತನೆಯಾಗಿದೆ. ಮಳೆಯ ಕ್ಷೀಣದಿಂದಾಗಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.

ಮುಂಗಾರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸಿ ಬೀಜ, ಗೊಬ್ಬರ ಖರೀದಿಸಿ ಮನೆಯಲ್ಲಿ ಸಂಗ್ರಹಿಸಿಕೊಂಡ ರೈತರು ನಿತ್ಯ ಆಗಸದತ್ತ ನೋಡುವಂತಾಗಿದೆ. ದಿನವಿಡೀ ಮೋಡ ಮುಸುಕಿದ ವಾತಾವರಣ ಇರುತ್ತದೆಯೇ ಹೊರತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಈವರೆಗೆ ವಾಡಿಕೆಯ 122 ಮಿ.ಮೀ. ಮಳೆಯ ಬದಲು 73.5 ಮಳೆ ಸುರಿದಿದೆ. ಜಿಲ್ಲಾದ್ಯಂತ ಶೇ.40ರಷ್ಟು ಕೊರತೆ ಎದುರಾಗಿದೆ. ಈಚೆಗೆ ಸಾಧಾರಣ ಮಳೆ ಸುರಿದ ಹಿನ್ನೆಲೆ ಭೂಮಿಯ ಒಡಲಿಗೆ ಬೀಜ ಹಾಕಿದ ಅನ್ನದಾತರು ಆಕಾಶದತ್ತ ಮುಖ ಮಾಡಿ ಕಾದು ಕುಳಿತಿದ್ದಾರೆ.

ಔರಾದ್-ಕಮಲನಗರ ತಾಲೂಕಿನಲ್ಲಿ ಹೆಚ್ಚು ಮಳೆ

ಔರಾದ್‌ ಹಾಗೂ ಕಮಲನಗರ ತಾಲೂಕಿನಲ್ಲಿ ಜೂನ್‌ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದ ಕಾರಣ‌ ಎರಡು ತಾಲೂಕಿನಲ್ಲಿ ಜೂನ್ ಕೊನೆಯ ವಾರದಿಂದ ಬಿತ್ತನೆ ಕಾರ್ಯ ಆರಂಭವಾಗಿದ್ದು, ಇನ್ನೂ ಪ್ರಗತಿಯಲ್ಲಿದೆ. ಬೆಳೆಗಳು ಮೊಳಕೆಯೊಡೆದು 2-3 ಎಲೆಗಳ ಬೆಳವಣಿಗೆ ಕಂಡಿದ್ದು, ಸದ್ಯಕ್ಕೆ ತೇವಾಂಶ ಕೊರತೆಯಿಲ್ಲ.

ಎರಡು ತಾಲೂಕಿನಲ್ಲಿ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.‌ ಶೇ. 59.86 ಬಿತ್ತನೆಯಾಗಿರುವ ಈ ಅವಳಿ ತಾಲೂಕುಗಳಲ್ಲಿ ಜುಲೈ 3ರ ತನಕ ಒಟ್ಟು 64,590 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 46 ಸಾವಿರ ಹೆಕ್ಟೇರ್‌ ಸೋಯಾಬಿನ್‌, 16 ಸಾವಿರ ತೊಗರಿ ಸೇರಿ ಇತರೆ ಬೆಳೆ ಬಿತ್ತನೆಯಾಗಿದೆ. ಔರಾದ್‌ನಲ್ಲಿ ಶೇ.10, ಕಮಲನಗರದಲ್ಲಿ ಶೇ.19ರಷ್ಟು ಮಳೆ ವಾಡಿಕೆಗಿಂತ ಹೆಚ್ಚಿಗೆ ಸುರಿದಿದೆ.

WhatsApp Image 2026 07 04 at 2.19.07 PM 1

ಹುಮನಾಬಾದ್-ಚಿಟಗುಪ್ಪ ತಾಲೂಕಿನಲ್ಲಿ 27,140 ಹೆಕ್ಟೇರ್ (ಶೇ.45.78 ರಷ್ಟು ಪ್ರದೇಶ) ಬಿತ್ತನೆಯಾಗಿದೆ. ಬೀದರ್ ತಾಲೂಕಿನಲ್ಲಿ 22,189 ಹೆಕ್ಟೇರ್ ಪ್ರದೇಶದಲ್ಲಿ (ಶೇ.39.90) ಬಿತ್ತನೆ ಮಾಡಲಾಗಿದೆ. ಬಸವಕಲ್ಯಾಣ-ಹುಲಸೂರ ತಾಲೂಕಿನಲ್ಲಿ 22,387 ಹೆಕ್ಟೇರ್‌ನಲ್ಲಿ (ಶೇ.25.01) ಬಿತ್ತನೆಯಾದರೆ, ಭಾಲ್ಕಿ ತಾಲೂಕಿನಲ್ಲಿ 30,546 ಹೆಕ್ಟೇರ್ ಪ್ರದೇಶದಲ್ಲಿ(ಶೇ.30.58) ಬಿತ್ತನೆ ಕಾರ್ಯ ಮುಗಿದಿದೆ.

ಬಸವಕಲ್ಯಾಣ, ಹುಲಸೂರನಲ್ಲಿ ಕಡಿಮೆ ಮಳೆ

ಜಿಲ್ಲೆಯ 8 ತಾಲೂಕುಗಳ ಪೈಕಿ ಔರಾದ್‌ನಲ್ಲಿ ಹೆಚ್ಚಿನ ಬಿತ್ತನೆಯಾದರೆ, ಬಸವಕಲ್ಯಾಣ, ಹುಲಸೂರ ಹಾಗೂ ಭಾಲ್ಕಿ ತಾಲೂಕಿನಲ್ಲಿ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಸವಕಲ್ಯಾಣ, ಹುಮನಾಬಾದ್‌, ಬೀದರ್‌ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂಬುದು ಕೃಷಿ ಇಲಾಖೆಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಈ ಬಾರಿ ಜಿಲ್ಲೆಯಲ್ಲಿ 2.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬಿನ್‌ ಬಿತ್ತನೆ ಗುರಿ ಅಂದಾಜಿಸಲಾಗಿದೆ. ಇಲ್ಲಿಯವರೆಗೆ 1.09 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನ್ನೂ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಇದು ಅತಿ ಹೆಚ್ಚು ಬಿತ್ತನೆಯಾದ ಬೆಳೆಯಾಗಿದೆ. ಇನ್ನು 1.30 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ 47,185 ಬಿತ್ತನೆ ಪೂರ್ಣಗೊಂಡಿದೆ. ಹೆಸರು 23,663 ಗುರಿಯಿದ್ದು, 4,015 ಹೆಕ್ಟೇರ್‌ ಬಿತ್ತನೆಯಾಗಿದೆ. ಉದ್ದು 15,750 ಗುರಿ ಇತ್ತು 2,955 ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಮುಂಗಾರು ಬಿತ್ತನೆಗೆ ಹಿನ್ನಡೆಯಾದ ಕಾರಣ ರೈತರು ಹೆಸರು, ಉದ್ದು ಬಿತ್ತನೆಗೆ ಮುಂದಾಗುತ್ತಿಲ್ಲ ಎಂಬುದು ರೈತರ ಸಮೂಹ ಹೇಳುತ್ತಿದೆ.

ಬರಪೀಡಿತ ಜಿಲ್ಲೆ ಘೋಷಿಸಿ

ಬೀದರ್‌ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯಿಂದ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಜಲಾಶಯ, ನದಿ, ಕೆರೆ-ಬಾವಿಗಳಲ್ಲಿ ನೀರಿನ ಮಟ್ಟ ಕುಸಿತಗೊಂಡು ಬರಿದಾಗುತ್ತಿವೆ. ಜಿಲ್ಲೆಯ ಕೆಲ ಗ್ರಾಮಗಳ ಜನರು ಕುಡಿಯುವ ನೀರಿಗೆ ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಇಡೀ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ಬೀದರ್‌ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬ ಕೂಗು ಕೇಳಿಬರುತ್ತಿದ್ದು, ಈಗಾಗಲೇ ಕೆಲ ಸಂಘಟನೆಗಳು ಈಗಾಗಲೇ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ರವಾನಿಸಿದ್ದಾರೆ.

ಬೀಜೋಪಚಾರ ರೈತರಿಗೆ ವರದಾನ

ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯ, ಮಳೆಯ ಅಭಾವ ಮತ್ತು ಬಿತ್ತನೆ ಸಮಯದಲ್ಲಿ ಮಣ್ಣಿನಲ್ಲಿ ತೇವಾಂಶದ ಕೊರತೆ ಎದುರಾಗುತ್ತಿದ್ದು, ಇದು ಕೃಷಿ ವಲಯದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬೆಳೆಗಳು ಆರೋಗ್ಯವಾಗಿ ಬೆಳೆಯಲು ರೈತರು ಸೂಕ್ತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಬೀಜೋಪಚಾರ ಮತ್ತು ಬೀಜ ಕಠಿಣಗೊಳಿಸುವಿಕೆ ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದ ತಂತ್ರಜ್ಞಾನವಾಗಿದ್ದು, ಜಿಲ್ಲೆಯ ಪ್ರಮುಖ ಬೆಳೆಗಳಾದ ಹೆಸರು, ಉದ್ದು ಮತ್ತು ತೊಗರಿ ಬೆಳೆಯುವ ರೈತರಿಗೆ ಈ ಪದ್ಧತಿ ವರದಾನವಾಗಬಹುದು ಎಂದು ಬೀದರ್‌ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಮುಖ್ಯಸ್ಥ ಡಾ.ರಾಜಶೇಖರ ಬಸನಾಯಕ ರೈತರಲ್ಲಿ ಕೋರಿದ್ದಾರೆ.

ಸೋಯಾಬೀನ್‌ನ ಬರ ನಿರೋಧಕ ಮತ್ತು ಅಲ್ಪಾವಧಿ ತಳಿಯನ್ನು ಜುಲೈ 15 ರವರೆಗೆ ಹಾಗೂ ತೊಗರಿಯ ಬರ ನಿರೋಧಕ ಮತ್ತು ಅಲ್ಪಾವಧಿ ತಳಿಯನ್ನು ಜುಲೈ 30 ರವರೆಗೆ ಬಿತ್ತಬಹುದು. ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಮಾಡುವ ಸಂದರ್ಭ ಬಂದಾಗ ದೀರ್ಘಾವಧಿ ತಳಿಗಳಾದ ಬಿ.ಎಸ್.ಎಮ್.ಆರ್-736 ಮತ್ತು ಆಶಾ ತಳಿಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಂಪು ಮಣ್ಣಿನಲ್ಲಿ 50-60 ಮಿ.ಮೀ. ಹಾಗೂ ಕಪ್ಪು ಮಣ್ಣಿನಲ್ಲಿ 60-75 ಮಿ.ಮೀ. ಮಳೆಯಾದ ನಂತರವೇ ಬಿತ್ತನೆ ಮಾಡಬೇಕು. ಕಳೆ ನಿಯಂತ್ರಣ ಮತ್ತು ಮಣ್ಣಿನ ತೇವಾಂಶ ಕಾಪಾಡಲು ಅಂತರ ಬೇಸಾಯ ಮಾಡಬೇಕು. ಬೆಳೆ ಸಾಲುಗಳ ನಡುವೆ ಸಾವಯವ ಮಲ್ಚಿಂಗ್ ಮಾಡಬೇಕು ಹಾಗೂ ಇನ್-ಸಿಟು ತೇವಾಂಶ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೀದರ್‌ | ಅನಧಿಕೃತ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ : ನಮ್ಮ ಕರ್ನಾಟಕ ಸೇನೆ

ಇಂತಹ ಸಮಯದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ರೈತರಿಗೆ ಸಕಾಲದಲ್ಲಿ ಬೆಂಬಲ ನೀಡುವುದು, ವಿಮಾ ಯೋಜನೆಗಳನ್ನು ಸುಗಮಗೊಳಿಸುವುದು, ನೀರಾವರಿ ಸೌಲಭ್ಯಗಳನ್ನು ವಿಸ್ತರಿಸುವುದು ಮತ್ತು ಹವಾಮಾನ ಬದಲಾವಣೆಗೆ ಸೂಕ್ತವಾದ ಬೆಳೆಗಳನ್ನು ಪ್ರೋತ್ಸಾಹಿಸುವ ಜೊತೆಗೆ ಆರ್ಥಿಕ ಸಂಕಟಕ್ಕೆ ಸಿಲುಕುವ ರೈತರಿಗೆ ಆತ್ಮಸ್ಥೈರ್ಯ ಕೆಲಸವೂ ಆಗಬೇಕಾಗಿರುವುದು ಅತ್ಯಗತ್ಯ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

ರಾಯಚೂರು | ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತ: ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,...

ಹಾವೇರಿ | ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಜೊತೆಗೆ ರೈತರು ಬೆಳೆಯುವ...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...