ಆತ್ಮಯೋಜನೆಯಡಿ ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ 2026-27ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಗ್ರ ಬೆಳೆ ಪದ್ಧತಿ, ನೀರು ನಿರ್ವಹಣೆ, ಸಾವಯವ ಕೃಷಿ, ವೈಜ್ಞಾನಿಕ ಕೃಷಿ ಯಂತ್ರೋಪಕರಣಗಳ ಬಳಕೆ ಸೇರಿದಂತೆ ತೋಟಗಾರಿಕೆ, ಹೈನುಗಾರಿಕೆ, ಕುರಿ–ಆಡು–ಮೊಲ–ಕೋಳಿ ಸಾಕಾಣಿಕೆ, ಮೀನುಗಾರಿಕೆ ಹಾಗೂ ರೇಷ್ಮೆ ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ರೈತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದರೊಂದಿಗೆ ಹಸಿರುಮನೆ, ಕಸಿ ಅಭಿವೃದ್ಧಿ, ಸಸ್ಯಕಾಶಿ ಸೇರಿದಂತೆ ಹೈಟೆಕ್ ಕೃಷಿ ತಂತ್ರಜ್ಞಾನ ಅಳವಡಿಕೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಅರಣ್ಯ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗ ಹಾಗೂ ಅನ್ವೇಷಣೆಗಳ ಮೂಲಕ ಇತರ ರೈತರಿಗೆ ಮಾದರಿಯಾಗಿರುವ ಕೃಷಿಕರನ್ನೂ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ತಾಲ್ಲೂಕಿಗೆ ಐವರು, ಜಿಲ್ಲೆಗೆ 10 ಮಂದಿ
ಪ್ರತಿ ತಾಲ್ಲೂಕಿನಿಂದ ತಲಾ ಐವರು ರೈತರನ್ನು ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ 10 ಮಂದಿ ರೈತರಿಗೆ ಪ್ರಶಸ್ತಿ ನೀಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದ ರೈತರು ಜಿಲ್ಲಾಮಟ್ಟದ ಪ್ರಶಸ್ತಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆಸಕ್ತ ರೈತರು ತಮ್ಮ ವ್ಯಾಪ್ತಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಕೃಷಿ ಕ್ಷೇತ್ರದಲ್ಲಿನ ತಮ್ಮ ಸಾಧನೆಗಳ ಸಂಪೂರ್ಣ ವಿವರವನ್ನು ನಮೂದಿಸಿ ಸೆ.10ರ ಸಂಜೆ 5 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು.
ತಡವಾಗಿ ಸಲ್ಲಿಸುವ ಅಥವಾ ಅಪೂರ್ಣವಾಗಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಒಬ್ಬ ರೈತರು ಒಂದೇ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರಶಸ್ತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ವಿಜಯಪುರ ಜಿಲ್ಲಾ ಆತ್ಮಯೋಜನಾ ನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





