ಶಿಕ್ಷಕರ ದಿನಾಚರಣೆ ಪ್ರಯುಕ್ತ ವಚನ ಚಾರಿಟೇಬಲ್ ಸೊಸೈಟಿ ವತಿಯಿಂದ ಔರಾದ್ ತಾಲೂಕಿನ ವಿವಿಧ ಶಾಲಾ ಆವರಣಗಳಲ್ಲಿ ಸಸಿ ನೆಡುವ ಹಾಗೂ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಔರಾದ್ ತಾಲೂಕಿನ ಬೋರಾಳ, ಯನಗುಂದಾ ಹಾಗೂ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯ ಸವಿನೆನಪಿಗಾಗಿ ಸಸಿ ನೆಡುವ ಹಾಗೂ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.
ಪರಿಸರ ಸಂರಕ್ಷಣೆಯ ಭಾಗವಾಗಿ 16 ಸಾವಿರ ಸಸಿಗಳನ್ನು ನೆಡುವ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ‘ವಚನ ವೃಕ್ಷೋತ್ಸವ’ ಕಾರ್ಯಕ್ರಮಕ್ಕೆ ವಚನ ಚಾರಿಟೇಬಲ್ ಸೊಸೈಟಿಯ ಜಿಲ್ಲಾಧ್ಯಕ್ಷ ಶಿವಶಂಕರ ಟೋಕರೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಶಿವಶಂಕರ ಟೋಕರೆ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಪರಿಸರ ರಕ್ಷಣೆ ಅತ್ಯಂತ ಅಗತ್ಯವಾಗಿದೆ. ಜಾಗತಿಕ ತಾಪಮಾನ ಹೆಚ್ಚುತ್ತಿರುವುದು, ಮಂಜುಗಡ್ಡೆಗಳು ಕರಗುತ್ತಿರುವುದು ಹಾಗೂ ಸಮುದ್ರ ಮಟ್ಟ ಏರುತ್ತಿರುವುದು ಪ್ರಕೃತಿ ವಿಕೋಪಗಳಿಗೆ ಪ್ರಮುಖ ಕಾರಣಗಳಾಗಿವೆ. ನಾವು ಇಂದೇ ಎಚ್ಚೆತ್ತುಕೊಂಡು ಗಿಡ-ಮರಗಳನ್ನು ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ” ಎಂದು ತಿಳಿಸಿದರು.
ನಾಗಮಾರಪಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕ ತುಕಾರಾಮ ಬೇಂದ್ರೆ ಮಾತನಾಡಿ, “ವಚನ ಚಾರಿಟೇಬಲ್ ಸೊಸೈಟಿ ಸಮಾಜದಲ್ಲಿ ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಶ್ಲಾಘನೀಯ. ಶಿಕ್ಷಕರ ದಿನಾಚರಣೆಯ ನಿಮಿತ್ತ ವಿವಿಧ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿರುವುದು ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.

ವಚನ ಚಾರಿಟೇಬಲ್ ಸೊಸೈಟಿಯ ತಾಲೂಕು ಅಧ್ಯಕ್ಷ ಡಿ.ಡಿ. ಬೊಳೆಗಾವೆ ಮಾತನಾಡಿ, “ಸಮಾಜಮುಖಿ ಮನಸ್ಕರನ್ನು ಒಳಗೊಂಡಿರುವ ನಮ್ಮ ತಾಲೂಕು ಶಾಖೆಯ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಪರಿಸರ ಸಂರಕ್ಷಣೆಯಂತಹ ಮಹತ್ವದ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ನಮ್ಮ ಹೆಮ್ಮೆಯಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ : ವಚನ ಕಲ್ಯಾಣ | ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ!
ಈ ಅಭಿಯಾನದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಹಿಪ್ಪಳಗಾವೆ, ಸೂರ್ಯಕಾಂತ ವಲ್ಲೆಪೂರೆ, ಅಂಬಾದಾಸ ನಳಗೆ, ಮಹಾದೇವ ಘೂಳೆ ಹಾಗೂ ಸತೀಷ ಮಜಗೆ, ಜಗನ್ನಾಥ ಶಿವಯೋಗಿ, ರೇಖಾ ನಿಂಗದಳ್ಳಿ, ನಾಗವೇಣಿ ಸಾಲಿ, ಧನರಾಜ ನಿಟ್ಟೂರೆ, ಸಿದ್ರಾಮಪ್ಪ ನಿಡೋದೆ, ಶಾಲಿವಾನ ದಾಮಾ ರಮೇಶ ಪಾಂಚಾಳ, ಶಿವರಾಜ ಶೆಟಕಾರ, ಅಮೃತರಾವ ಬಿರಾದಾರ, ಪ್ರಶಾಂತ ಮಜಗೆ, ಮಲ್ಲಿಕಾರ್ಜುನ ಟಂಕಸಾಲೆ, ಜಗನ್ನಾಥ ದೇಶಮುಖ, ಕೃಷ್ಣ ಪಾಟೀಲ್ ಹಾಗೂ ಧನರಾಜ ಪಿಟ್ರೆ ಹಾಗೂ ಸೊಸೈಟಿ ಪದಾಧಿಕಾರಿಗಳು ಭಾಗವಹಿಸಿದ್ದರು.





