ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ. ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ. ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ.
ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆ ಅನುಭಾವಿ ವಚನಕಾರ್ತಿ. ನೀಲಾಂಬಿಕೆಗೆ ನೀಲಮ್ಮ, ನೀಲಲೋಚನೆ, ನೀಲವ್ವ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು, ಅಲ್ಲದೆ ‘ನಿಜಭಕ್ತೆ ನೀಲಾಂಬಿಕೆ’ ಎಂದೇ ಹೆಸರಾಗಿದ್ದವರು. ಬಸವಣ್ಣನವರ ಜೀವನದಲ್ಲಿ ನೀಲಮ್ಮನ ಪಾತ್ರ ಕೇವಲ ಧರ್ಮಪತ್ನಿಯದ್ದಾಗಿರಲಿಲ್ಲ. ಬಸವಣ್ಣನವರ ವಿಚಾರಪತ್ನಿ, ಅನುಭಾವದ ಸಂಗಾತಿಯಾಗಿ ಹೆಜ್ಜೆ ಹಾಕಿದಳು.
ಶರಣೆ ನೀಲಾಂಬಿಕೆ ಸಿದ್ದರಸನ ಮಗಳು, ಬಿಜ್ಜಳನ ತಂಗಿ. ನೀಲಾಂಬಿಕೆಗೆ ಬಾಲಸಂಗಯ್ಯ ಎಂಬ ಹೆಸರಿನ ಓರ್ವ ಮಗನಿದ್ದನು, ಅವನು ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿರುವ ಬಗ್ಗೆ ಕಾವ್ಯಗಳಿಂದ ತಿಳಿದುಬರುತ್ತದೆ. ಬಸವಣ್ಣನವರ ಜೀವನಪಥದಲ್ಲಿ ನೀಲಾಂಬಿಕೆ ಪಾತ್ರ ಮಹತ್ತರವಾದದ್ದು. ಪತಿ ಬಸವಣ್ಣನವರಿಗೆ ‘ಬಸವಯ್ಯ’ ಎಂದೇ ಸಂಬೋಧಿಸುತ್ತಿದ್ದ ನೀಲಮ್ಮ ‘ಸಂಗಯ್ಯ’ ಎಂಬ ವಚನಾಂಕಿತದಲ್ಲಿ ವಚನ ಬರೆದಿರುವುದು ಕಾಣುತ್ತೇವೆ. ನೀಲಮ್ಮ ರಚಿಸಿರುವ 287 ವಚನಗಳು ಉಪಲಬ್ಧಲಾಗಿವೆ.
ಬಸವಣ್ಣನವರ ಸಮಕಾಲೀನ ಶಿವಶರಣೆಯರಲ್ಲಿ ನೀಲಾಂಬಿಕೆ ವಿಶಿಷ್ಟ ಸ್ಥಾನ ಪಡೆದವರು. ವಚನ ಆಂದೋಲನದಲ್ಲಿ ಸಕ್ರಿಯವಾಗಿ ಸಕಲ ಶಿವಶರಣರಿಗೆ ದಾಸೋಹ ಸೇವೆಗೈದವರು ನೀಲಮ್ಮ. ನೀಲಮ್ಮನ ವಚನಗಳಲ್ಲಿ ಬಸವಣ್ಣನವರ ಮೇಲಿನ ಭಕ್ತಿ, ಕಲ್ಯಾಣ ಚಳವಳಿಯ ಆಶಯ, ಸಾಮಾಜಿಕ ಸಮಾನತೆ ಮತ್ತು ಬದುಕಿನ ಅನುಭವ ಹಾಗೂ ಕಲ್ಯಾಣದ ಕೊನೆ ದಿನಗಳನ್ನು ಹೃದಯಸ್ಪರ್ಶಿಯಾಗಿ ವ್ಯಕ್ತವಾಗುತ್ತವೆ.
12ನೇ ಶತಮಾನ ಪರಿವರ್ತನೆಯ ಕಾಲ ಎಂದೇ ಹೇಳಬಹುದು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಬದಲಾವಣೆ ಕಂಡುಕೊಳ್ಳುವ ಜೊತೆಗೆ ಮಾನವ ಘನತೆಯನ್ನು ಎತ್ತಿ ಹಿಡಿದ ಶರಣರ ಕಾಲ ಎಂದಿಗೂ ಮರೆಯಲಾಗದ ಶತಮಾನ. ಪರಂಪರಾಗತವಾಗಿ ಬಂದಿರುವ ಅನಿಷ್ಟ ಪದ್ಧತಿಗಳನ್ನು ಧಿಕ್ಕರಿಸಿ ಜಾತಿ, ಮತ, ವರ್ಣ, ವರ್ಗ, ವೃತ್ತಿ ಭೇದಗಳಂಥ ಭಾಷೆಗಳನ್ನು ಕಿತ್ತೊಗೆದು ಸಾಮಾಜಿಕ ಐಕ್ಯತೆ ಸ್ಥಾಪಿಸಲು ಶರಣರು ಪ್ರಯತ್ನಿಸಿದರು. ಆ ಪರಿವರ್ತನೆ ಚಳುವಳಿಯಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾಗಿರುವುದು ವಿಶೇಷ.
ಅಂದಿನ ಕಾಲಘಟ್ಟದ ಸಮಾಜದಲ್ಲಿ ತನ್ನನ್ನು ಸುತ್ತಿಕೊಂಡಿದ್ದ ಸಂಕೋಲೆಗಳಿಂದ ಮುಕ್ತವಾಗಿ ಹೊರ ಬರುವ ಸಾಹಸಕ್ಕೆ ಸ್ತ್ರೀ ದಿಟ್ಟ ನಿಲುವು ತಾಳಿದಳು. ತನ್ನ ವೈಚಾರಿಕ ಶಕ್ತಿಯಿಂದ ಬೆಳೆಯಲು ಪ್ರಯತ್ನಿಸಿದಳು. ಏಕಕಾಲಕ್ಕೆ ಪುರುಷಾಧಿಪತ್ಯ ಮತ್ತು ವರ್ಣಾಶ್ರಮ ವ್ಯವಸ್ಥೆ ವಿರುದ್ಧ ಬಂಡಾಯದ ಧ್ವನಿಯಾದರು. ಶರಣ ಚಳುವಳಿಯಲ್ಲಿ 35ಕ್ಕೂ ಹೆಚ್ಚು ಮಹಿಳಾ ವಚನಕಾರರಿದ್ದರು. ಅವರಲ್ಲಿ ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಸತ್ಯಕ್ಕ, ಬೊಂತಾದೇವಿ, ಕಾಳವ್ವೆ, ಕೇತಲದೇವಿ, ಸಂಕವ್ವೆ, ರೆಮ್ಮವ್ವೆ, ಕೇತಲಾದೇವಿ, ಲಿಂಗಮ್ಮ, ಗೊಗವ್ವೆ ಹೀಗೆ ಮಹಿಳಾ ವಚನಕಾರರು ಸಮಾನತೆ ಸಮಾಜ ಸ್ಥಾಪನೆಗೆ ಮಿಡಿದವರು.
ಪುರುಷ ಅಧಿಪತ್ಯದ ಸಮಾಜದಲ್ಲಿ ಅನುಭವ ಮಂಟಪ ಕೇವಲ ಧಾರ್ಮಿಕ ಚರ್ಚೆಯ ವೇದಿಕೆಯಲ್ಲ, ಅದು ಸಾಮಾಜಿಕ ಪ್ರಜ್ಞೆಯ ಮಹಾಮನೆಯಾಗಿತ್ತು. ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ ಅರಿವಿನ ಸ್ಥಳವಾಗಿತ್ತು. ವರ್ಗ, ವರ್ಣ, ಲಿಂಗ, ಜಾತಿ ಬೇಧವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ಅನುಭಾವ ಗೋಷ್ಠಿ ಬದಲಾವಣೆಯ ಮಂಥನವಾಗಿತ್ತು, ಕಲ್ಯಾಣ ರಾಜ್ಯ ನಿರ್ಮಾಣದ ಆಶಯವೂ ಅದೇ ಆಗಿತ್ತು.
ಈ ಮೇಲಿನ ವಚನವು ಪೃಥ್ವಿಯ ಸಕಲ ಜೀವಾತ್ಮರ ಒಳಿತಿಗಾಗಿ, ಅಭ್ಯುದಯ ಕುರಿತು ಪ್ರತಿಪಾದಿಸುತ್ತದೆ. ಕಲ್ಯಾಣ ಎಂದರೆ ಭೌಗೋಳಿಕವಾಗಿ ಗುರುತಿಸಲ್ಪಡುವ ಒಂದು ನಿಗದಿತ ಸ್ಥಳವಲ್ಲ, ಅದು ಕೇವಲ ಹೆಸರೂ ಅಲ್ಲ. ಶರಣರು ನಡೆದಾಡಿದ ಕಾಯಕ ಭೂಮಿ ಬಸವಕಲ್ಯಾಣ ಮಾತ್ರವಲ್ಲ. ಕಲ್ಯಾಣ ಎಂದರೆ ಅದೊಂದು ಸುಂದರ ಸಮಾಜ, ಸಮತ್ವದ ಕನಸು, ಒಳಿತು, ಅಭ್ಯುದಯ ಎಂಬಿತ್ಯಾದ ನಾನರ್ಥಗಳು ಒಳಗೊಂಡಿರುವುದೇ ನಿಜ ಕಲ್ಯಾಣ, ಶರಣ ಕಲ್ಯಾಣ, ಬಸವಕಲ್ಯಾಣ, ಕಲ್ಯಾಣ ನೆಲ ಎನಿಸುತ್ತದೆ.
ಈ ನೆಲದ ಮೇಲೆ ಜೀವಿಸುವ ಸಕಲ ಜೀವಾತ್ಮರು ಸಂತೃಪ್ತಿ, ಸದ್ಗುಣಗಳನ್ನು ಒಳಗೊಂಡು ವಿಕಾಸದ ಪಥದಲ್ಲಿ ಸಾಗಬೇಕು. ಸಮಾಜ ಸತ್ಯ, ಅಹಿಂಸೆ ಹಾಗೂ ಸಾಮಾಜಿಕ ನ್ಯಾಯದ ತತ್ವದ ಮೇಲೆ ರೂಪುಗೊಳ್ಳಬೇಕು ಎನ್ನುವುದು ಶರಣರ ನಿಲುವು. ಸಾತ್ವಿಕ ಬದುಕು ನಡೆಸುವ ಮಾನವೀಯ ಮೌಲ್ಯಗಳನ್ನು ನೆಲೆಗೊಳ್ಳುವ ನೆಲವೇ ಕಲ್ಯಾಣ ಎಂದು ಕರೆಸಿಕೊಳ್ಳುತ್ತದೆ. ಇಂತಹ ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ಜ್ಞಾನದ ತೈಲವ ತುಂಬಿ ವಚನ ಬೆಳಕು ಬೆಳಗಿದ ಶರಣರ ವಿಶಿಷ್ಟ ಪರಿಕಲ್ಪನೆ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದೆ.
ʼದಯವೇ ಧರ್ಮದ ಮೂಲʼ ಎನ್ನುವ ವಚನಕಾರರ ಶ್ರೇಷ್ಠ ಸಮತ್ವ ಸಿದ್ಧಾಂತ ಮೂಲಕ ಸಮಾನತೆ ಸಮಾಜ ಕಟ್ಟಲು ಚಳವಳಿ ರೂಪಿಸಿದರು. ಹಾಗಾಗಿಯೇ ಶರಣ ಸಿದ್ಧಾಂತ ಉಸಿರಾಡುವ ನೆಲವನ್ನು ಕಲ್ಯಾಣ ನಾಡು ಕರ್ಮ ಭೂಮಿ, ಶರಣ ಭೂಮಿ ಎಂದು ಕರೆಸಿಕೊಳ್ಳಲು ಅರ್ಹ ಎನಿಸುಕೊಳ್ಳುತ್ತದೆ.
‘ಕಲ್ಯಾಣವಿಲ್ಲ ಕೈಲಾಸವಿಲ್ಲ ಬಸವಾ’ ಎಂದು ನೀಲಾಂಬಿಕೆ ಹೇಳುವ ಮಾತಿನಲ್ಲಿ ನೋವು, ಸಾಂತ್ವನ, ಹೆಮ್ಮೆ ಒಳಗೊಂಡಿದೆ . ನಂತರ ʼಕಲ್ಯಾಣವಿಲ್ಲದ ಕಾರಣ ಕೈಲಾಸ ಇಲ್ಲ ಎನಗೆʼ ಎಂದು ಮನದಾಳದ ನೋವು ತೋಡಿಕೊಳ್ಳುತ್ತಾರೆ. ಕಲ್ಯಾಣವೇ ಇಲ್ಲ ಎಂದರೆ ಕೈಲಾಸ ಎಲ್ಲಿದೆ? ಎಂದು ಪ್ರಶ್ನಿಸುತ್ತಾರೆ. ಕಲ್ಯಾಣ ಚಳವಳಿಯ ಅಂತ್ಯದ ದಿನಗಳು, ಶರಣ ಸಮುದಾಯದ ಮೇಲಾದ ಸಂಕಷ್ಟ, ಬಸವಣ್ಣನವರ ಅಗಲಿಕೆ, ಇವೆಲ್ಲವೂ ನೀಲಾಂಬಿಕೆ ಮನಸ್ಸಿನಲ್ಲಿ ಆಳವಾದ ನೋವನ್ನು ಮೂಡಿಸಿದ್ದವು. ‘ಕಲ್ಯಾಣವಿಲ್ಲ ಕೈಲಾಸವಿಲ್ಲ’ ಎಂಬ ಉದ್ಗಾರದಲ್ಲಿ ಆ ನೋವಿನ ಪ್ರತಿಧ್ವನಿ ಕೇಳುತ್ತದೆ.
ಜಾತಿ-ಮತದ ಗೋಡೆಗಳು ಅಳಿಯುವಲ್ಲಿ ಕಲ್ಯಾಣವಿದೆ. ಶೋಷಣೆ ಮತ್ತು ಅನ್ಯಾಯ ಇಲ್ಲದ ಸಮಾಜದಲ್ಲಿ ಕಲ್ಯಾಣವಿದೆ. ಕಲ್ಯಾಣ ಎನ್ನುವುದು ಒಂದು ಭೌಗೋಳಿಕ ಗಡಿಯೊಳಗೆ ಸೀಮಿತವಾಗುವ ಪದವಲ್ಲ. ಅದು ಒಂದು ಸಮಾಜದ ಕನಸು. ಶರಣರ ಆದರ್ಶ ತತ್ವ ಮೈಗೂಡಿಸಿಕೊಂಡು ಬದುಕಿದಾಗ ಎಲ್ಲರ ಕಲ್ಯಾಣವಾಗುತ್ತದೆ. ಅಂದರೆ ಎಲ್ಲರಿಗೂ ಒಳಿತಾಗುತ್ತದೆ, ಆ ಒಳಿತೇ ಕಲ್ಯಾಣ, ಸಂತ್ರಪ್ತ ಜೀವನ, ಶರಣರ ತಾಣವೇ ಕಲ್ಯಾಣ, ಅಂತಹ ಪವಿತ್ರ ಕ್ಷೇತ್ರವಾದ ಕಲ್ಯಾಣ ಸಮಾಜವೇ ಕೈಲಾಸವಾಗುತ್ತದೆ.
ಕೈಲಾಸ ಎಂಬುದು ಬೇರೆ ಮತ್ತೊಂದು ಜಾಗವಲ್ಲ, ಸತ್ಯ, ಶುದ್ಧ ಕಾಯಕ ಮಾಡುವುದು, ಸದ್ಗುಣ , ಸದ್ವಿಚಾರ ನುಡಿಯುವುದೇ ಸ್ವರ್ಗ, ಅದುವೇ ಕೈಲಾಸವಾಗುವುದು, ಅಂತಹ ಸಮಷ್ಠಿ ಅಭ್ಯುದಯವೇ ಕಲ್ಯಾಣ ಕೈಲಾಸ ಎಂಬುದು ನೀಲಮ್ಮ ತಾಯಿಯ ಮಹತ್ತರ ಚಿಂತನೆ.
ಆ ಕೈಲಾಸದಲ್ಲಿ ಕಲ್ಯಾಣವಿಲ್ಲದ ಕಾರಣ ಎಲ್ಲೆಡೆ ಕೇಡು ಉಂಟಾಗುತ್ತಿದೆ, ಎಲ್ಲೆಡೆ ಶೋಷಣೆ, ಜಾತಿಯತೆ , ಮೌಢ್ಯತೆಯ ಕಾರ್ಮೋಡ ಆವರಿಸಿದೆ. ಅಸಮಾನತೆ, ಅನ್ಯಾಯ, ಶೋಷಣೆಯಿಂದ ಮುಕ್ತಿಗೊಳಿಸುವಂತೆ ನೀಲಾಂಬಿಕೆ ಬಸವಣ್ಣನವರಲ್ಲಿ ಭಿನ್ನಹಿಸಿಕೊಳ್ಳುತ್ತಾರೆ . ಶರಣರ ಆದರ್ಶಗಳನ್ನು ಅಳವಡಿಸಿಕೊಳ್ಳದ ಸಮಾಜದಲ್ಲಿ ಕೈಲಾಸ ಸ್ಥಾಪಿತವಾಗಲು ಸಾಧ್ಯವಿಲ್ಲ , ಎಲ್ಲಿ ಕಲ್ಯಾಣ ಇಲ್ಲವೋ ಅಲ್ಲಿ ಕೈಲಾಸವೂ ನೆಲೆಗೊಳ್ಳಲು ಸಾಧ್ಯವಿಲ್ಲ, ಅಲ್ಲಿ ಬಸವನ ಮೂರ್ತಿಯಿಲ್ಲ ಎಂದು ಹೇಳುತ್ತಾಳೆ.
ಬಸವನ ಮೂರ್ತಿ ಇಲ್ಲ ಎಂದರೆ ಬಸವಣ್ಣನವರ ತತ್ವಾದರ್ಶಗಳು ಬಿತ್ತಲು ಸಾಧ್ಯವೇ? ಶರಣರ ಮೌಲ್ಯಗಳನ್ನು ಅನುಷ್ಠಾನಕ್ಕೆ ಬಾರದಿದ್ದರೆ ಅಲ್ಲಿ ಸಮಾನತೆ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳುವುದಿಲ್ಲ. ಅಂತಹ ನೆಲವನ್ನು ಕೈಲಾಸ ಎಂದು ಕರೆಯಲಾಗದು. ಅಜ್ಞಾನದ ಕೂಪದಲ್ಲಿರುವ ಮನುಷ್ಯರು ಪ್ರಜ್ಞಾವಂತರಾಗಿ ಸಮತ್ವ ಸಮಾಜದ ಕಟ್ಟುವ ಮನುಷ್ಯರಾಗಿ ಪರಿವರ್ತನೆ ಹೊಂದಬೇಕು. ಜಾತಿ, ಮತ, ಪಂಥ ಮೀರಿ ಭಾವೈಕ್ಯತೆ ನೆಲೆಯೂರಿ ಬಹುತ್ವದ ಬೀಜ ಎಲ್ಲೆಡೆ ಮೊಳಕೆಯೊಡೆಯಬೇಕು. ಶರಣತತ್ವ ಸಿದ್ಧಾಂತ ಅನುಕರಣೆಯಾದರೆ ಶರಣರು ಬಯಸಿದ ಕಲ್ಯಾಣ ರಾಜ್ಯ ಸ್ಥಾಪನೆಯಾಗುತ್ತದೆ, ಅದು ನಿಜ ಕಲ್ಯಾಣ ಎಂದು ಕರೆಸಿಕೊಳ್ಳಲು ಸೂಕ್ತವಾಗುತ್ತದೆ.
ಒಂದು ಸ್ಥಳಕ್ಕೆ ಕಲ್ಯಾಣ ಎಂದು ಕರೆದರೆ ಅದು ಕೈಲಾಸವಾಗಿ ಪರಿವರ್ತನೆಯಾಗಲು ಅಸಾಧ್ಯ. ಆ ಪ್ರದೇಶದಲ್ಲಿ ಬದುಕುವ ಜನರ ಜೀವನಮಟ್ಟ ಸುಧಾರಣೆಗೊಳ್ಳಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಬೌದ್ಧಿಕ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ ಕಾಣಬೇಕು. ಅದು ನಿಜವಾದ ‘ಜನಕಲ್ಯಾಣ’ ಆಗಬಹುದು. ಹಾಗೇ ಅನ್ಯಾಯ, ಜಾತಿವ್ಯವಸ್ಥೆ, ಮೋಸ, ಕೊಲೆ, ಮೌಢ್ಯಚಾರಣೆ ಮುಕ್ತ ಸಮಾಜವಾಗಬೇಕು ಎಂಬುದು ಶರಣರ ದೃಢ ನಿಲುವು.
ಬಸವಣ್ಣನವರ ವಿಚಾರಗಳು ಕೇವಲ ನೀಲಾಂಬಿಕೆ ಅವರಿಗೆ ಮಾತ್ರ ಸರ್ವಸ್ವವಾಗಿರಲಿಲ್ಲ. ಇಡೀ ಶರಣ ಬಳಗಕ್ಕೆ ಆದರ್ಶ ಮೌಲ್ಯಗಳಾಗಿ ಪ್ರೇರಣೆದಾಯಕವಾಗಿದ್ದವು. ನೀಲಾಂಬಿಕೆಯವರ ಬಹುತೇಕ ವಚನಗಳು ಬಸವಣ್ಣನವರ ಗುಣಗಾನ ಕುರಿತಾಗಿಯೇ ಕಾಣುತ್ತೇವೆ. ಎಲ್ಲಾ ವಚನಗಳಲ್ಲಿ ಸಾಮಾಜಿಕ ಮೌಲ್ಯ, ಸಮಾನತೆ ತತ್ವ, ಮಹಿಳಾಪರ ಚಿಂತನೆ ಒಳಗೊಂಡಿದೆ. ಕಾಯಕ ವರ್ಗಗಳ ಬದುಕಿನ ನೆಮ್ಮದಿಗಾಗಿ ಚಳವಳಿ ಕಟ್ಟಿದ ಶರಣರ ಚಿಂತನೆ ವಾಸ್ತವ ಸಮಾಜವನ್ನು ಎಚ್ಚರಿಸುತ್ತದೆ.
ವಚನಗಳ ಮೌಲ್ಯ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಕಲ್ಯಾಣ ರಾಜ್ಯ ಸ್ಥಾಪನೆಯಾಗುವುದರಲ್ಲಿ ಸಂಶಯವಿಲ್ಲ. ಕೇವಲ ಕರ್ನಾಟಕ ಅಷ್ಟೇ ಕಲ್ಯಾಣ ಮಾಡುವುದು ಶರಣರ ಗುರಿ ಆಗಿರಲಿಲ್ಲ. ಜಗತ್ತು ಕಲ್ಯಾಣ ರಾಜ್ಯವಾಗಿ ರೂಪಿಸುವ ಆಳವಾದ ಚಿಂತನೆ, ಘನವಾದ ಉದ್ದೇಶ, ಸಮಷ್ಠಿ ಪ್ರಜ್ಞೆ ಅವರದಾಗಿತ್ತು. ಪ್ರತಿಯೊಬ್ಬರು ವೃತ್ತಿ ಕಾಯಕದಲ್ಲೇ ನೆಮ್ಮದಿ ಕಂಡುಕೊಂಡು ತಾತ್ವಿಕ ನೆಲೆಗಟ್ಟಿನಲ್ಲಿ ಸಮಾಜ ಕಟ್ಟಲು ಶರಣರು ಹರಸಾಹಸಪಟ್ಟರು. ಕಲ್ಯಾಣವೆಂದರ ಒಳಿತಿನ ಪರಿಪೂರ್ಣ ಸಮಾಜ ಕಟ್ಟುವುದು ಎಂದರ್ಥ.
ರಾಜ್ಯಶಕ್ತಿಗಳ ಅಟ್ಟಹಾಸಕ್ಕೆ ಒಳಪಟ್ಟ ತಳವರ್ಗ ಸಮುದಾಯದ ಕಾಯಕ ಜೀವಿಗಳನ್ನು ಅನಿಷ್ಠ ಬಂಧನದಿಂದ ಮುಕ್ತಿ ಹೊಂದಿ ಸರ್ವಶ್ರೇಷ್ಠ, ಸರ್ವಸಮಾನತೆ ನೆಲೆಯಲ್ಲಿ ರೂಪಿಸುವ ಚಳವಳಿ ಶರಣರು ಕಟ್ಟಿದರು. ‘ಆಚಾರವೇ ಸ್ವರ್ಗ ಅನಾಚಾರವೇ ನರಕ’ ಎಂದು ಮನುಷ್ಯರ ಕಾಯಕ, ನಿಷ್ಠೆ, ಮಾನವೀಯ ಮೌಲ್ಯಗಳಲ್ಲಿ ಕೈಲಾಸ ಕಾಣುವಂತೆ ಪ್ರತಿಪಾದಿಸಿದರು. ಇಂತಹ ಅನನ್ಯ ಚಿಂತನೆಯನ್ನು ನೀಲಾಂಬಿಕೆ ತನ್ನ ವಚನದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಎನಗೆ ಲಿಂಗವು ನೀವೆ ಬಸವಯ್ಯಾ, ಎನಗೆ ಸಂಗವು ನೀವೆ ಬಸವಯ್ಯಾ, ಎನಗೆ ಪ್ರಾಣವು ನೀವೆ ಬಸವಯ್ಯಾ, ಎನಗೆ ಪ್ರಸಾದವು ನೀವೆ ಬಸವಯ್ಯಾ, ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ. ಎನಗೆ ಸಂಗಯ್ಯನು ನೀವೆ ಬಸವಯ್ಯಾ.
ನನಗೆ ಲಿಂಗ-ಪ್ರಾಣ-ಪ್ರಸಾದ ಬಸವಣ್ಣನೇ ಎಂದು ನೀಲಮ್ಮಳು ಪತಿಯ ಸ್ತುತಿ ಮಾಡುತ್ತಾರೆ. ಪತಿ ಬಸವಣ್ಣನವರ ವಿಚಾರಪತ್ನಿಯಾಗಿರುವ ಬಗ್ಗೆ ಹೇಳಿರುವುದು ಬಹುಶಃ ಜಾಗತಿಕ ಸಾಹಿತ್ಯದಲ್ಲಿ ಅಪರೂಪ ಅಭಿಪ್ರಾಯ ನೀಲಮ್ಮ ಅವರದು, ಅಂತಿಮವಾಗಿ ತನಗೂ ಬಸವಣ್ಣನವರೇ ಸರ್ವಸ್ವ ಎಂದು ಹೇಳಿಕೊಳ್ಳುತ್ತಾರೆ.
‘ಸಂಗಯ್ಯಾ ಸಂಗ, ಎನ್ನ ಬಸವಯ್ಯನ ಸಂಗ’ ಎಂದು ನುಡಿದ ನೀಲಮ್ಮ ಬಸವಣ್ಣನವರ ಧರ್ಮಪತ್ನಿಯಾಗಿ ‘ಶರಣಸತಿ ಲಿಂಗಪತಿ’ ತತ್ವ ಸಿದ್ಧಾಂತವೇ ಉಸಿರಾಗಿಸಿಕೊಂಡು ಸಾಮರಸ್ಯದ ದಾಂಪತ್ಯ ಬದುಕು ಸವೆಸಿದರು. ‘ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ, ಆನು ನಿಜ ಸುಖಿಯಲ್ಲ. ಆನು ಬಸವನ ಮೂರ್ತಿಯ ಕಂಡು ಬದುಕಿದೆನಯ್ಯ ಸಂಗಯ್ಯ’ ಎಂಬ ಮಹತ್ತರ ಚಿಂತನೆ ಸಮಕಾಲೀನ ಸಮಾಜಕ್ಕೆ ವಿಚಾರ ದೀವಿಗೆಯಾಗಿದೆ. ನೀಲಮ್ಮನ ದಿಟ್ಟ ನಿಲುವಿನ ನಡೆ-ನುಡಿ ಇಂದಿನ ಮಹಿಳಾ ಸಮಾಜಕ್ಕೆ ಸ್ಪೂರ್ತಿ, ಆದರ್ಶ.
ಇದನ್ನೂ ಓದಿ : ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು
ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ, ಆನು ನಿಜ ಸುಖಿಯಲ್ಲ. ಆನು ಬಸವನ ಮೂರ್ತಿಯ ಕಂಡು ಬದುಕಿದೆನಯ್ಯ ಸಂಗಯ್ಯ
‘ಆನು ಸುಖ ದುಃಖವ ಕಳೆದು ಅನುಭವಿಯಾದೆನಯ್ಯ ಸಂಗಯ್ಯ’ ಎಂದು ನೀಲಮ್ಮ ತಮ್ಮ ಜೀವನಾನುಭವ ಪ್ರತಿಪಾದಿಸುತ್ತಾಳೆ. ನೀಲಾಂಬಿಕೆಯು ಕಲ್ಯಾಣ ಚಳವಳಿ ನಂತರದಲ್ಲಿ ಕೂಡಲಸಂಗಮ ಸಮೀಪದ ರಕ್ಕಸ ತಂಗಡಗಿಯಲ್ಲಿ ಐಕ್ಯ ಆಗಿರುವ ಪ್ರತೀತಿ ಇದೆ. ನೀಲಾಂಬಿಕೆ ಐಕ್ಯ ಸ್ಥಳ ಈಗ ಅಭಿವೃದ್ಧಿಗೊಂಡು ದೇವಾಲಯವಾಗಿದೆ. ನೀಲಮ್ಮನ ಭಕ್ತಿ, ಸತ್ಯಶುದ್ಧ ಕಾಯಕ, ಮಾನವೀಯ ಮೌಲ್ಯ ಹಾಗೂ ಸ್ತ್ರೀ ಜಾಗೃತಿ ಸಂದೇಶ ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ.
ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ ಪುಣ್ಯವಿಲ್ಲದ ಪಾಪಿಯ ? ನಾನು ಇಹಪರಕ್ಕೆ ದೂರಳಯ್ಯಾ. ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ. ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ, ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ ಎನಗೆ ಹೆಣ್ಣುನಾಮವಿಲ್ಲವಯ್ಯಾ.
ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ? ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ? ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ? ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ?
ಈ ಮೇಲಿನ ವಚನಗಳಲ್ಲಿ ನೀಲಾಂಬಿಕೆಯು ಬಸವಣ್ಣನವರ ಭಕ್ತಿ ಭಂಡಾರ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಾರೆ, ಬಸವಣ್ಣನವರ ಪತ್ನಿಯಾಗಿರುವ ಬಗ್ಗೆ ಹೆಮ್ಮೆಪಡುತ್ತಾರೆ, ಕೊನೆಗೆ ಬಸವಣ್ಣನವರ ಅಗಲಿಕೆಯ ನೋವು ಅಭಿವ್ಯಕ್ತಗೊಳಿಸಿರುವುದು ಕಾಣುತ್ತೇವೆ.
(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



