ಭಾರತವು ಮಾನವಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಯಾದ ಯೋಗವು ಇಂದು ಗಡಿಗಳನ್ನು ಮೀರಿ ಜಾಗತಿಕ ಸಂಸ್ಕೃತಿಯಾಗಿ ಬೆಳೆದಿದ್ದು, ಸಮಗ್ರ ಆರೋಗ್ಯ ಹಾಗೂ ಯೋಗಕ್ಷೇಮದ ಸಾಧನವಾಗಿ ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ ಎಂದು ಸಂತಪೂರ ಸುಭಾಷ ಚಂದ್ರ ಬೋಸ್ ಪ್ರೌಢ ಶಾಲೆ ಮುಖ್ಯಶಿಕ್ಷಕ ಮನೋಹರ ಬಿರಾದಾರ ಹೇಳಿದರು.
ಔರಾದ್ ತಾಲೂಕಿನ ಸಂತಪೂರ ಗ್ರಾಮದ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಜೂನ್ 21ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಯೋಗದ ಮೂಲಕ ಭಾರತವು ವಿಶ್ವದಲ್ಲಿ ಗೌರವಯುತ ಸ್ಥಾನವನ್ನು ಪಡೆದಿದೆ. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಯಾವುದೇ ವಯೋಮಾನದವರಿಗೆ ಸೀಮಿತವೂ ಅಲ್ಲ. ಅದು ಮಾನವ ಚೈತನ್ಯದ ಅಭಿವ್ಯಕ್ತಿಯಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು” ಎಂದು ತಿಳಿಸಿದರು.

ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಘೋಷವಾಕ್ಯ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಆಗಿದ್ದು, ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ, ಭಾವನಾತ್ಮಕ ಸ್ಥಿರತೆ ಹಾಗೂ ಸಕ್ರಿಯ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಮಹತ್ವವನ್ನು ಈ ಘೋಷವಾಕ್ಯ ಎತ್ತಿ ತೋರಿಸುತ್ತದೆ. ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ” ಎಂದು ಹೇಳಿದರು.
ಯೋಗ ಗುರು ರಾಜಕುಮಾರ ನಾಯಕ್ ಮಾತನಾಡಿ, “ಜಾಗತಿಕ ಸವಾಲುಗಳ ನಡುವೆಯೂ ಶಾಂತಿ, ಸಾಮರಸ್ಯ ಹಾಗೂ ಆರೋಗ್ಯಕರ ಜೀವನಶೈಲಿಯತ್ತ ವಿಶ್ವ ಸಮುದಾಯವನ್ನು ಕೊಂಡೊಯ್ಯುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತಿದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡ ನಿರ್ವಹಣೆಗೆ ಯೋಗವೇ ಅತ್ಯುತ್ತಮ ಮದ್ದು. ಆರೋಗ್ಯಕರ ಮತ್ತು ಸಂತೋಷದ ಬದುಕಿಗಾಗಿ ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ನೀಡಿದರು.
ಇದನ್ನೂ ಓದಿ : ಆಲ್ಬೇನಿಯಾ: ದೇಶ ಮಾರಾಟದ ಗಂಭೀರ ಆರೋಪ, ಸರ್ಕಾರದ ವಿರುದ್ಧ ಸಿಡಿದೆದ್ದ ಪ್ರಜೆಗಳು
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ನಂದಾದೀಪ ಬೋರಳೆ, ಮುಖ್ಯ ಅತಿಥಿಗಳಾದ ವಿಠ್ಠಲ್ ಚಟ್ನಾಳಕರ್, ಸಂಗೀತಾ ಹೊಸಖಂಡೆ, ರಾಜಶೇಖರ ಕುಶನೂರೆ, ಶಶಿಕಲಾ ಜಾರ್ಜ್, ಈಶ್ವರ್ ಪವಾರ್ ಹಾಗೂ ಇತರರು ಉಪಸ್ಥಿತರಿದ್ದರು.





