ಮಹಾತ್ಮ ಜ್ಯೋತಿಬಾ ಫುಲೆ, ರಾಜರ್ಷಿ ಶಾಹು ಮಹಾರಾಜ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಮಾಜದಲ್ಲಿ ಬಿತ್ತುವ ಉದ್ದೇಶದಿಂದ ಬಸವಕಲ್ಯಾಣ ನಗರದ ಶಾಸ್ತ್ರಿ ಭವನ್ ಫಂಕ್ಷನ್ ಹಾಲ್ನಲ್ಲಿ ಫುಲೆ-ಶಾಹು-ಅಂಬೇಡ್ಕರ್ ವಿಚಾರ ಮಂಚ್ ಉದ್ಘಾಟನೆ ಹಾಗೂ ಸ್ಥಾಪನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ವಿಚಾರ ಮಂಚ್ನ ಸಂಸ್ಥಾಪಕ ನರಸಿಂಗ್ ರೆಡ್ಡಿ ಗದಲೆಗಾಂವ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಚ್ನ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ಅನಿಲ್ ಕಾಂಬ್ಳೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವಿಚಾರ ಮಂಚ್ನ ಸಂಸ್ಥಾಪಕ ನರಸಿಂಗ್ ರೆಡ್ಡಿ ಗದಲೆಗಾಂವ್ ಮಾತನಾಡಿ, “ಫುಲೆ, ಶಾಹು ಮಹಾರಾಜ್ ಹಾಗೂ ಅಂಬೇಡ್ಕರ್ ಅವರ ಹೆಸರು ಮತ್ತು ವಿಚಾರಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸಬಾರದು. ಈ ಮಹಾಪುರುಷರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ವಿಚಾರಧಾರೆಗಳಿಂದ ಪ್ರೇರಣೆ ಪಡೆದು, ಸಮಾಜದಲ್ಲಿ ಉತ್ತಮ ಸಂದೇಶವನ್ನು ಸಾರುವ ಮೂಲಕ ಸಮಾನತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಬೇಕು. ಇದೇ ವಿಚಾರ ಮಂಚ್ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ
ಸಮಾಜ ಸೇವೆ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಅಮೂಲ್ಯ ಕೊಡುಗೆ ನೀಡುತ್ತಿರುವ ಶಿಕ್ಷಕರು ಮತ್ತು ಸಮಾಜ ಸೇವಕರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವಕಲ್ಯಾಣ ಓಂ ಶಾಂತಿ ಸರಸ್ವತಿ ಭೇನಜಿ, ನಗರ ಪೊಲೀಸ್ ಠಾಣೆಯ ಎಎಸ್ಐ ಪಲ್ಲವಿ ಹೆಗಡೆ, ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ, ಜೀಜಾಮಾತಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸತೀಶ್ ಮೂಳೆ, ಶಿಕ್ಷಕಿಯರಾದ ಸುಪ್ರಿಯಾ ರೆಡ್ಡಿ ಮತ್ತು ಜಯಶ್ರೀ ಜಾಧವ್, ಮದರ್ ತೆರೆಸಾ ಶಾಲೆಯ ಪ್ರಾಂಶುಪಾಲೆ ಶೀಲಾ, ಅಂಗನವಾಡಿ ಮೇಲ್ವಿಚಾರಕಿ ಸೀಮಾ, ಆರ್ಎಲ್ಎಚ್ಪಿ ಅಧಿಕಾರಿ ಸ್ನೇಹಲತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್ | ಶೋಷಿತ ಸಮಾಜದ ಏಳಿಗೆಗೆ ಬದ್ಧ: ಈಶ್ವರ ಖಂಡ್ರೆ




