ವೈಚಾರಿಕ ಮತ್ತು ವೈಚಾರಿಕ ಪರಂಪರೆಯ ನೆಲ ಕಲ್ಯಾಣ. ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ ಎಂದು ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ ಸಜ್ಜನ ಹೇಳಿದರು.
ಬಸವಕಲ್ಯಾಣ ನಗರದ ಬಿಕೆಡಿಬಿ ಸಭಾ ಭವನದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜು ಶನಿವಾರ ಹಮ್ಮಿಕೊಂಡಿದ್ದ ಅರಿವಿನ ಪಯಣ, ಸಾಹಿತ್ಯ ಮತ್ತು ವೈಜ್ಞಾನಿಕ ಚಿಂತನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ವಚನಗಳು ಹೊಸ ಆಲೋಚನೆಗಳು ಹುಟ್ಟಿಸಿದ ಸಾಹಿತ್ಯ. ಶಿಕ್ಷಣ ಅರಿವು ವಿಸ್ತರಿಸುವ ದಾರಿ. ಯಾವುದು ಸರಿ, ಯಾವುದು ತಪ್ಪು ಎಂಬ ಆಲೋಚನೆ ಕಟ್ಟಿಕೊಡುತ್ತದೆ. ಅಧ್ಯಯನ ವ್ಯಾಪ್ತಿ ಹೆಚ್ಚಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು” ಎಂದರು.
“ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಶ್ರೀಕಾಂತ ಮೋಹನರಾವ್ ಮಾತನಾಡಿ, “ಶಿಕ್ಷಣದಿಂದ ವಿಚಾರ ಮಾಡುವ ಮತ್ತು ವಿಮರ್ಶಿಸುವ ಗುಣ ಬೆಳೆಯುತ್ತದೆ. ಹನ್ನೆರಡನೇ ಶತಮಾನದ ಶರಣರು ವೈಚಾರಿಕ ಕ್ರಾಂತಿಯಿಂದ ಸಾಮಾಜಿಕ ಬದಲಾವಣೆ ತಂದರು. ಜಗತ್ತಿನಲ್ಲಿ ವಚನಕಾರರು ಕಾಯಕ, ದಾಸೋಹದಂತಹ ಬಹುದೊಡ್ಡ ಫಿಲಾಸಫಿ ಕಟ್ಟಿಕೊಟ್ಟಿದ್ದಾರೆ. ಯೂರೋಪಿಗಿಂತ ಮೊದಲೇ ಕಲ್ಯಾಣ ವೈಚಾರಿಕ ಚಿಂತನೆ ನಡೆದಿದೆ” ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿ, “ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಚಲನೆ ನಿರ್ಧರಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಇಂದಿನ ಕಾಲ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ” ಎಂದರು.

ಪ್ರಾಚಾರ್ಯ ಭೀಮಾಶಂಕರ ಬಿರಾದಾರ ಮಾತನಾಡಿ, “ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಅಗತ್ಯ. ಅದರ ಜೊತೆಗೆ ಮಾನವೀಯ ಮೌಲ್ಯಗಳು ಮುಖ್ಯ. ಕೃತಕ ಬುದ್ಧಿಮತ್ತೆ, ಗಣಕಯಂತ್ರ ಯೋಚಿಸುವ ಶಕ್ತಿ ಹೊಂದಿಲ್ಲ. ಮನುಷ್ಯ ಮಾತ್ರ ಆಲೋಚಿಸುವ, ವಿವೇಚಿಸುವ, ಅಳುವ, ನಗುವ , ಸಂವೇದನೆ ಹೊಂದಿದ್ದಾನೆ. ಯಂತ್ರಕ್ಕಿಂತ ಮನುಷ್ಯ ಬದುಕು ದೊಡ್ಡದು” ಎಂದರು.
ಇದನ್ನೂ ಓದಿ : ಬೀದರ್ | ಗುರುನಾಥ ಅಕ್ಕಣ್ಣನವರ ʼಕೊಂದವರುಳಿದರೇʼ ಕಾದಂಬರಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿ ಸುನಿಲಕುಮಾರ ರಾಯವಾಡೆ, ನಿರ್ದೇಶಕ ಬಸವರಾಜ ತೊಂಡಾರೆ, ಪುಷ್ಪಾವತಿ ಮಾಮಾ, ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ರುದ್ರಮಣಿ ಮಠಪತಿ, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯೆ ಮಾಯಾ ಮುರಾಳೆ, ಬಸವೇಶ್ವರ ಪಿಜಿ ಪ್ರಾಚಾರ್ಯೆ ಶಾಂತಲಾ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಬಸವರಾಜ ಖಂಡಾಳೆ ನಿರೂಪಿಸಿದರು. ಸಂಗೀತಾ ಮಹಾಗಾವೆ ಸ್ವಾಗತಿಸಿದರು. ಪವನ್ ಪಾಟೀಲ ವಂದಿಸಿದರು.





