ಯಲ್ಲಾಪುರ: ತಾಲೂಕಿನ ಸೋಮಾಪುರ ಗ್ರಾಮದ ಶ್ರೀ ದ್ಯಾಮವ್ವಾ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ: ಕಳೆದ ಮೇ 29ರ ಸಂಜೆ ಮತ್ತು ಜೂನ್ 2ರ ಬೆಳಿಗ್ಗೆ ನಡುವಿನ ಅವಧಿಯಲ್ಲಿ ಸೋಮಾಪುರದ ಶ್ರೀ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದರು. ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂ. ನಗದು ಸಹ ಕಳುವಾಗಿತ್ತು. ಈ ಬಗ್ಗೆ ದೇವಸ್ಥಾನದ ಪೂಜಾರಿ ಶ್ರೀಕಾಂತ ಅಪ್ಪಾರಾವ ಮಿರಾಶಿ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಜೂನ್ 5ರಂದು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಗಳು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ಕಿರವತ್ತಿಯ ಜಯಂತಿನಗರದ ಗೌಸ್‌ಅಲಿ ಬಾಬುಸಾಬ ಮಿಶ್ರಕೋಟಿ (25) ಮತ್ತು ಕಿರವತ್ತಿಯ ಇಸ್ಲಾಂಪುರ ಗಲ್ಲಿಯ ಅಬ್ದುಲ್ ಹಮೀದ ಸಲೀಮಸಾಬ ಸೋಮನಕೊಪ್ಪ (38) ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜೂನ್ 20ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; 12.30 ಲಕ್ಷ ಮತದಾರರ ವಿವರಗಳ ಮರುಪರಿಶೀಲನೆ
ಇವರಲ್ಲಿ ಒಬ್ಬರು ಚಾಲಕರಾಗಿದ್ದರೆ, ಮತ್ತೊಬ್ಬರು ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳು ಕದ್ದಿದ್ದ ಹಣದಲ್ಲಿ ಈಗಾಗಲೇ ಸ್ವಲ್ಪ ಮೊತ್ತವನ್ನು ಖರ್ಚು ಮಾಡಿದ್ದು, ಉಳಿದ 29,763 ರೂಪಾಯಿ ನಗದು ಮತ್ತು ಕಾಣಿಕೆ ಹುಂಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯವು ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ ಹಾಗೂ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಯಲ್ಲಾಪುರ ಪಿಐ ರಮೇಶ ಹಾನಾಪುರ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜ ಚವ್ಹಾಣ, ಪ್ರೊಬೇಷನರಿ ಪಿಎಸ್‌ಐ ಶರಣಬಸವ ಎಸ್.ಎ., ಎಎಸ್‌ಐ ದೀಪಕ ಸೋಮವಂಶಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





