ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಬಸವರಾಜ್ ಕನ್ನಾಳೆ ಅವರ ತನಿಖೆಯ ಭಾಗವಾಗಿ, ಭಾಲ್ಕಿ ಪಟ್ಟಣದ ಲೆಕ್ಚರ್ ಕಾಲೋನಿಯಲ್ಲಿರುವ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ಬುಧವಾರ ಮುಂಜಾನೆಯಿಂದಲೇ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದೆ.
ಪ್ರಕರಣದ ತನಿಖೆಯಲ್ಲಿ ಸಿಐಡಿ ಅಧಿಕಾರಿಗಳು ಬ್ಯಾಂಕ್ಗೆ ಆಗಮಿಸಿ, ಬ್ಯಾಂಕ್ನ ವಿವಿಧ ದಾಖಲೆಗಳು, ವಹಿವಾಟುಗಳು ಹಾಗೂ ಸಂಬಂಧಿತ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ಬಂದಿದೆ. ಮುಂಜಾನೆ ವೇಳೆಯಲ್ಲೇ ಸಿಐಡಿ ತಂಡ ಬ್ಯಾಂಕ್ಗೆ ಆಗಮಿಸಿದ್ದರಿಂದ ಸ್ಥಳದಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನಿಂದ ಯಾವುದೇ ಮಹತ್ವದ ದಾಖಲೆಗಳು ಅಥವಾ ಮಾಹಿತಿಗಳು ಸಿಐಡಿ ಅಧಿಕಾರಿಗಳಿಗೆ ಸಿಕ್ಕಿವೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸಿಐಡಿ ದಾಳಿ ಮುಂದುವರಿದಿದ್ದು, ಅಧಿಕಾರಿಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.





