ಸುಮಾರು 400 ಪಶುವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕಾಗಿದೆ. ಪ್ರತಿ ಹುದ್ದೆಗೆ 40 ಲಕ್ಷ ರೂಪಾಯಿಯವರೆಗೆ ಹಣ ಸಂಗ್ರಹಿಸಿದ್ದ ದೊಡ್ಡ ಜಾಲವನ್ನು ಬಯಲಿಗೆಳೆಯಲಾಗಿದ್ದು, ಅಭ್ಯರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬೆನ್ನಲ್ಲೇ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮೂಲಕ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ (342 ಸಾಮಾನ್ಯ + 58 ಬ್ಯಾಕ್ಲಾಗ್) ಜನವರಿ 8-9, 2026ರಂದು ಲಿಖಿತ ಪರೀಕ್ಷೆ ನಡೆದಿತ್ತು. ಜುಲೈ 17ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ನಂತರ ಅಕ್ರಮ ಆರೋಪಗಳು ಹೊರಬಂದಿದ್ದವು.
ಬೆಂಗಳೂರು, ತುಮಕೂರು ಜಿಲ್ಲೆಯ ದೇವರಾಯನದುರ್ಗ ಮತ್ತು ಆಂಧ್ರಪ್ರದೇಶದ ರೆಸಾರ್ಟ್ಗಳಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ನಡೆಸಲಾಗಿತ್ತು ಎಂದು ಕೆಲವು ಅಭ್ಯರ್ಥಿಗಳು ಸಿಐಡಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಸಿಐಡಿ ಮೂಲಗಳ ಪ್ರಕಾರ, ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳಲ್ಲಿ ನಾಲ್ವರು ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟು 21 ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸಲು ಪ್ರಯತ್ನ ನಡೆದಿತ್ತು. ಪ್ರಶ್ನೆಪತ್ರಿಕೆ ಮಾರಾಟ ಮಾಡಿ ಹಣ ಸಂಗ್ರಹಿಸುವ ಜಾಲದಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್ಸಿ ಅಧಿಕಾರಿಗಳು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ (ಮಾಜಿ ಪರೀಕ್ಷಾ ನಿಯಂತ್ರಕ) ಮತ್ತು ಭಾಲ್ಕಿಯ ರಾಜಕಾರಣಿ ಬಸವರಾಜ್ ಕನ್ನಾಳೆ ಸೇರಿದಂತೆ ಹಲವರ ಹೆಸರುಗಳು ಬಂದಿವೆ. ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ತನಿಖೆಯಲ್ಲಿ ಹೊರಬಿದ್ದ ಮಾಹಿತಿ ಪ್ರಕಾರ, ಆರಂಭದಲ್ಲಿ ಹುದ್ದೆಗೆ 1 ಕೋಟಿ ರೂಪಾಯಿಯಿಂದ 80-90 ಲಕ್ಷ ರೂಪಾಯಿವರೆಗೆ ಡೀಲ್ ನಡೆದಿತ್ತು. ನಂತರ ಮೊತ್ತವನ್ನು 40 ಲಕ್ಷ ರೂಪಾಯಿಗೆ ಇಳಿಸಲಾಗಿತ್ತು. ಕೆಲವು ಅಭ್ಯರ್ಥಿಗಳಿಂದ 20 ಲಕ್ಷ ರೂಪಾಯಿ ಮುಂಗಡವಾಗಿ ಪಡೆದು, ಪ್ರಶ್ನೆಪತ್ರಿಕೆ ಲೀಕ್ ಮಾಡಿ ರೆಸಾರ್ಟ್ಗಳಲ್ಲಿ ಪರೀಕ್ಷೆ ಬರೆಯಿಸಲಾಗಿತ್ತು ಎಂದು ತಿಳಿದುಬಂದಿದೆ.
ಸಿಐಡಿ ತಂಡ ಕೆಪಿಎಸ್ಸಿ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಬಸವರಾಜ್ ಕನ್ನಾಳೆ ಅವರ ನಿವಾಸವನ್ನು ಸಹ ಶೋಧಿಸಿ ಸೀಲ್ ಮಾಡಲಾಗಿದೆ. ಜಾರಿ ನಿರ್ದೇಶನಾಲಯವೂ (ಇಡಿ) ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಹಗರಣದಿಂದ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿ ಉಳಿದಿದ್ದು, ಭದ್ರ ಭವಿಷ್ಯದ ಕನಸು ಹೊತ್ತ ಅರ್ಹ ಅಭ್ಯರ್ಥಿಗಳು ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ.





