ಭಾಲ್ಕಿ ನಗರದಲ್ಲಿ ಪತ್ರಕರ್ತರ ಸಂಘಕ್ಕೆ ನಿವೇಶನ ಒದಗಿಸಿ, ಪತ್ರಿಕಾ ಭವನ ನಿರ್ಮಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ಈಶ್ವರ ಖಂಡ್ರೆ ಅವರು ಮಾತನಾಡಿ, “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಯಾವುದೇ ಒತ್ತಡ, ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ನೈಜ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಓದುಗರ ವಿಶ್ವಾಸ ಗಳಿಸಬೇಕು. ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಮಾಧ್ಯಮ ಕ್ಷೇತ್ರದವರು ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮನ್ನು ತಾವು ನವೀಕರಿಸಿಕೊಳ್ಳುವುದು ಅಗತ್ಯವಾಗಿದೆ” ಎಂದು ಸಲಹೆ ನೀಡಿದರು.
“ಸರ್ಕಾರ ಜನಕಲ್ಯಾಣಕ್ಕಾಗಿ ಜಾರಿಗೊಳಿಸುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದನ್ನು ಪತ್ರಕರ್ತರು ಸಮಗ್ರವಾಗಿ ಪರಿಶೀಲಿಸಬೇಕು. ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ ಹಾಗೂ ದರೋಡೆಗಳಂತಹ ಅಪರಾಧಗಳು ನಡೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೂ ಮಾಧ್ಯಮಗಳು ಆದ್ಯತೆ ನೀಡಬೇಕು. ದೇಶದ ಪ್ರಗತಿ ಹಾಗೂ ಸಮಾಜದ ಹಿತದೃಷ್ಟಿಯಿಂದ ಸಕಾರಾತ್ಮಕ ಮತ್ತು ಜನಪರ ಸುದ್ದಿಗಳನ್ನು ಪ್ರಕಟಿಸುವುದು ಅಗತ್ಯ” ಎಂದು ತಿಳಿಸಿದರು.

ಭಾಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನಗಳ ಬೇಡಿಕೆಯಾಗಿರುವ ಪತ್ರಿಕಾ ಭವನ ನಿರ್ಮಾಣದ ಕುರಿತು ಪರಿಶೀಲಿಸಿ, ಬೇಡಿಕೆಯನ್ನು ಶೀಘ್ರ ಈಡೇರಿಸಲಾಗುವುದು ಎಂದು ಈಶ್ವರ ಖಂಡ್ರೆ ಅವರು ಭರವಸೆ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಅಶೋಕ ರಾಜೋಳೆ, ಅಧ್ಯಕ್ಷ ಜೈರಾಜ ಪಾತ್ರೆ, ಕಾರ್ಯದರ್ಶಿ ಸಂತೋಷ ಬಿ.ಜಿ. ಪಾಟೀಲ್, ಹಿರಿಯ ಸಂಪಾದಕ ಚಂದ್ರಕಾಂತ ಪಾಟೀಲ್, ಪತ್ರಕರ್ತರಾದ ಚಂದ್ರಶೇಖರ ಎಮ್ಮೆ, ಜೈರಾಜ ದಾಬಶೆಟ್ಟಿ, ರಾಜೇಶ ಮುಗಟೆ, ದಿಲೀಪ ಶೇರಿಕಾರ, ಭದ್ರೇಶ ಸ್ವಾಮಿ, ಪರಶುರಾಮ ಕರ್ಣಂ, ಸಾಬೇರ ಪಟೇಲ್, ಸಂತೋಷ ಹಡಪದ, ಡಾ. ಇಂದ್ರಜೀತ ಪಂಚಾಳ, ನರೇಂದ್ರ ಸೋಮಶೆಟ್ಟಿ, ಮಾಣಿಕ ಮರಕಲೆ, ವೀರೇಶಕುಮಾರ ಸ್ವಾಮಿ ಸೇರಿದಂತೆ ಪ್ರಮುಖರಾದ ಬಸವರಾಜ ವಂಕೆ, ದಿಲೀಪ ಸುಂಟೆ ಹಾಗೂ ಶೇಖರ ವಂಕೆ ಉಪಸ್ಥಿತರಿದ್ದರು.
ಇದನ್ನೂ ಓದಿ : ಔರಾದ್ | ಖೋಖೋ : ಕೌಡಗಾಂವ ಶಾಲೆಯ ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ





