ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸದಿದ್ದರೆ ಪಾಕಿಸ್ತಾನದಲ್ಲಿ ಹಾರಿಸಬೇಕೇ? ಭಾರತದ ತ್ರಿವರ್ಣ ಧ್ವಜದ ಬಗ್ಗೆ ಸಮಸ್ಯೆ ಇರುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಬಳಿ ನಡೆದ ‘ಲಹರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ಮೆರವಣಿಗೆಯ ಸಂದರ್ಭದಲ್ಲಿ ಕಾರ್ಯಕರ್ತ ಅಭಿಜೀತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮವನ್ನು ಸರ್ವಾಧಿಕಾರದ ನಡೆ ಎಂದು ಅವರು ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವೇ? ಅಭಿಜೀತ್ ಬಂಧನವು ಮೋದಿ ಅವರಿಗೆ ಅವರ ಬಗ್ಗೆ ಎಷ್ಟೊಂದು ಭಯವಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಎಎಪಿ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, ರಾಷ್ಟ್ರಧ್ವಜ ಹಾರಿಸುವುದು ಸ್ವತಂತ್ರ ದೇಶದಲ್ಲಿ ತಪ್ಪಾಗಲು ಸಾಧ್ಯವೇ ಇಲ್ಲ. ನಾವು ತಿರಂಗಾ ಯಾತ್ರೆಗೆ ಕರೆ ನೀಡಿದ್ದು, ನೂರಾರು ತ್ರಿವರ್ಣ ಧ್ವಜಗಳೊಂದಿಗೆ ಸಜ್ಜಾಗಿದ್ದೇವೆ. ಶುಕ್ರವಾರ ಬೆಳಿಗ್ಗೆ ನಮ್ಮ ಯುವ ಸಹೋದ್ಯೋಗಿಗಳು ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನದ ಎದುರು 270 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಇಂದು ಮಧ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರಧ್ವಜ ಹಾರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರಧ್ವಜ ಹಾರಿಸುವುದನ್ನು ಬಿಜೆಪಿ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದ ಅವರು, ಭಾರತದ ಜನರು ತಮ್ಮ ದೇಶದ ಧ್ವಜ ಹಾರಿಸಿದರೆ ಸಮಸ್ಯೆ ಏನು? ಹಾಗಾದರೆ ನಾವು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಮೆರಿಕದ ಧ್ವಜಗಳನ್ನು ಹಾರಿಸಬೇಕೆಂದು ಬಿಜೆಪಿ ಬಯಸುತ್ತಿದೆಯೇ? ಎಂದು ಟೀಕಿಸಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ನಡೆದ ವಿವಿಧ ಪ್ರತಿಭಟನೆಗಳ ಸಂದರ್ಭದಲ್ಲಿ ಸುಮಾರು 150 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಬಳಿ ಎಎಪಿ ನಾಯಕರು ಮತ್ತು ಕಾರ್ಯಕರ್ತರು ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಿದರೆ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್ಎ) ಹಾಗೂ ಎಡಪಕ್ಷಗಳ ಕಾರ್ಯಕರ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮಂಡಿ ಹೌಸ್ ಸಮೀಪ ಪ್ರತಿಭಟನೆ ನಡೆಸಿದರು.
ಅನುಮತಿಯಿಲ್ಲದೆ ಸಾರ್ವಜನಿಕ ಸಭೆ ನಡೆಸುವುದು, ನಿರ್ಬಂಧಿತ ಪ್ರದೇಶಗಳಲ್ಲಿ ಪ್ರತಿಭಟನೆ ಆಯೋಜಿಸುವುದು ಹಾಗೂ ನಿಷೇಧಾಜ್ಞೆ ಜಾರಿಯಲ್ಲಿರುವುದನ್ನು ಉಲ್ಲೇಖಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಭದ್ರತಾ ವ್ಯವಸ್ಥೆಗಾಗಿ ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 6,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಸಿಜೆಪಿ ಕಾರ್ಯಕರ್ತ ಅಭಿಜೀತ್ ದೀಪ್ಕೆ ಅವರನ್ನು ಎನ್ಸಿಪಿ-ಎಸ್ಸಿಪಿ ವಕ್ತಾರ ಅನೀಶ್ ಗವಾಂಡೆ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ನಾಟ್ ಪ್ಲೇಸ್ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163 ಜಾರಿಯಲ್ಲಿರುವುದರಿಂದ ಸೆಂಟ್ರಲ್ ಪಾರ್ಕ್ಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೀಪ್ಕೆ ಅವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಈ ಹಿಂದೆ ದೀಪ್ಕೆ, ಆಶುತೋಷ್ ಮತ್ತು ಸೌರವ್ ವಿರುದ್ಧ ಕೈಗೊಂಡಿದ್ದ ಮುನ್ನೆಚ್ಚರಿಕೆ ಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಂದು ನೋಟಿಸ್ ನೀಡಲಾಗಿದೆ. ಒಂದು ವರ್ಷದ ಅವಧಿಗೆ ಸಾರ್ವಜನಿಕ ಶಾಂತಿ ಕಾಪಾಡುವ ಭರವಸೆಯನ್ನು ಉಲ್ಲಂಘಿಸಿರುವ ಆರೋಪವನ್ನೂ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ
‘ಲಹರಾ ದೋ ತಿರಂಗಾ’ ಮೆರವಣಿಗೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಿ.ಕೆ. ಗುಪ್ತಾ ಮಾತನಾಡಿ, ಕನ್ನಾಟ್ ಪ್ಲೇಸ್ ಸುತ್ತಮುತ್ತ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಿವರವಾದ ಸಂಚಾರ ಸಲಹೆ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಚಾರ ಸುಗಮಗೊಳಿಸಲು ಸಿಬ್ಬಂದಿ ನಿಯೋಜಿಸಲಾಗಿದ್ದು, ಅಗತ್ಯವಿದ್ದಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. ಸಾರ್ವಜನಿಕರು ಸಂಚಾರ ಸಲಹೆಗಳನ್ನು ಪಾಲಿಸಿ, ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.






