ಕಲಾವಿದನಲ್ಲಿ ಉತ್ತಮ ಕಲೆಯಿದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಉತ್ತಮ ಅವಕಾಶಗಳು ಸಿಕ್ಕಾಗ ನಮ್ಮೊಳಗೆ ಅಡಗಿರುವ ಸಂಗೀತ-ನೃತ್ಯ ಪ್ರತಿಭೆಯನ್ನು ಹೊರಹಾಕಬೇಕು ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಜಿ.ಪೂರ್ಣಿಮಾ ಹೇಳಿದರು.
ಬೀದರ್ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘ ಸಂಸ್ಥೆಗಳ ಧನ ಸಹಾಯದೊಂದಿಗೆ ಶನಿವಾರ ಜರುಗಿದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ʼನಮ್ಮ ಜಿಲ್ಲೆಯಲ್ಲಿ ಪ್ರತಿಭಾವಂತ ಕಲಾವಿದರ ಸಂಖ್ಯೆ ಅಪಾರವಾಗಿದೆ. ವಿಭಿನ್ನ ಕಲೆಗಳಲ್ಲಿ ಪರಿಣತಿ ಹೊಂದಿರುವ ಅನೇಕ ಕಲಾವಿದರು ನಮ್ಮಲ್ಲಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕುʼ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ್ ಅತಿವಾಳೆ ಮಾತನಾಡಿ, ʼಗಡಿ ಜಿಲ್ಲೆಯ ಕಲಾವಿದರು ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ವಿಭಿನ್ನ ಪ್ರತಿಭೆ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆʼ ಎಂದರು.
ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ವಾಲ್ದೊಡ್ಡಿಯ ಅಧ್ಯಕ್ಷ ಶಂಭುಲಿಂಗ ವಾಲ್ದೊಡ್ಡಿಅವರು ಪ್ರಾಸ್ತಾವಿಕ ಮಾತನಾಡಿದರು ಸಂಗೀತಾ ರಾಜಕುಮಾರ ವಾಲ್ದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಗಾಯಕ ನಾಗೇಂದ್ರ ದಂಡೆ, ಹಿರಿಯ ಸಾಹಿತಿ ಇಂದುಮತಿ ಸುತಾರ, ಗಾಯಕಿ ರೇಖಾ ಅಪ್ಪರಾವ ಸೌದಿ, ಸತೀಶ ವಾಲ್ದೊಡ್ಡಿ, ದೇವಿದಾಸ ಜೋಶಿ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡುಮಾಡುವ 2026ನೇ ಸಾಲಿನ ಮಹಾತಾಯಿ ಪ್ರಶಸ್ತಿಯನ್ನು ಬೀದರ್‌ನ ಹಿರಿಯ ಸಾಹಿತಿ ಚೆನ್ನಮ್ಮ ವಲ್ಲೆಪೂರೆ ಅವರಿಗೆ ನೀಡಿ ಗೌರವಿಸಲಾಯಿತು.
ವಿವಿಧ ಕಲಾತಂಡಗಳಿಂದ ಮನೋಜ್ಞ ನೃತ್ಯ ಪ್ರದರ್ಶನಗಳು ಜರುಗಿದವು. ನಾಟ್ಯಶ್ರೀ ನೃತ್ಯಾಲಯ ತಂಡದ ನಿರ್ದೇಶಕಿ ಶ್ರೀಮತಿ ರಾಣಿ ಸತ್ಯಮೂರ್ತಿ ಅವರ ತಂಡದಿಂದ ಭರತನಾಟ್ಯ ನೃತ್ಯ, ಕುಮಾರಿ ಪ್ರಗತಿ ಕೊಳಾರ ತಂಡದಿಂದ ಕುಚ್ಚಿಪುಡಿ ನೃತ್ಯ, ಪೂರ್ಣಚಂದ್ರ ಮೈನಾಳೆ ನಾಟ್ಯಂಗನ ನೃತ್ಯ ಕಲಾ ಕೇಂದ್ರದ ತಂಡದಿಂದ ಶಾಸ್ತ್ರೀಯ ನೃತ್ಯ, ಸೂರ್ಯಕಾಂತ ಮೋರೆ ಅವರ ತಂಡದಿಂದ ಜಾನಪದ ನೃತ್ಯ, ಕುಮಾರಿ ಭಾಗ್ಯಶ್ರೀ ತಂಡದಿಂದ ವಚನ ನೃತ್ಯ ಹಾಗೂ ಕುಮಾರಿ ಪ್ರಿಯಾಂಕಾ ತಂಡದಿಂದ ಭರತನಾಟ್ಯ ಸೇರಿದಂತೆ ವಿವಿಧ ನೃತ್ಯ ರೂಪಗಳ ಪ್ರದರ್ಶನ ಮನಸೂರೆಗೊಳಿಸದವು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ತಂಡಗಳಾದ ರಮೇಶ್ ಕೊಳಾರ ಮತ್ತು ತಂಡ, ದಿಲೀಪಕುಮಾರ ಕಾಡವಾದ ಮತ್ತು ತಂಡ, ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡ, ಭಾನುಪ್ರಿಯಾ ಅರಳಿ ಮತ್ತು ತಂಡ, ಸರಸ್ವತಿ ಶೀಲವಂತ ಮತ್ತು ತಂಡ, ಸಂಜು ಸ್ವಾಮಿ ಉಜನಿ ಮತ್ತು ತಂಡ, ಬಬ್ರುವಾನ ಮತ್ತು ತಂಡ, ಸುನೀಲ ಕಡ್ಡೆ ಮತ್ತು ತಂಡ, ದೇವದಾಸ ಚಿಮಕೋಡ್ ಮತ್ತು ತಂಡ, ಮಹೇಶ್ವರಿ ಪಾಂಚಾಳ ಮತ್ತು ತಂಡ, ನಾಗನಾಥ ಕರವಂಡೆ ಮತ್ತು ತಂಡ, ಕುಮಾರಿ ರಶ್ಮಿ ಶರ್ಮಾ ಮತ್ತು ತಂಡ, ರಮಾಬಾಯಿ ಅಂಬೇಡ್ಕರ್ ಭಜನಾ ಮಂಡಳಿ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶಿಸಿದರು.
ಇದನ್ನೂ ಓದಿ : ಬೀದರ್ | ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ
ಕಲಾವಿದರ ಅದ್ಭುತ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು.
ಅದೇ ಸಂದರ್ಭದಲ್ಲಿ ಶೋಭಾ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ವಾಲ್ಗೊಡ್ಡಿಯ ಕಾರ್ಯದರ್ಶಿ ಸತೀಶ ವಾಲ್ದೊಡ್ಡಿ, ಕಲಾವಿದರು, ನಾಗರಿಕರು, ಅನೇಕರು ಉಪಸ್ಥಿತರಿದ್ದರು.





