ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ರಾಜ್ಯಗಳಿಗೆ ತಮ್ಮದೇ ಮಾದರಿಯಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಅಧಿಕಾರ ನೀಡಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಟೌನ್‌ಹಾಲ್ ಎದುರು ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಎಸ್‌ಫ್‌ಐ ನಾಯಕರನ್ನು ಪೊಲೀಸರು ಬಂಧಿಸಿರುವುದನ್ನು ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ತೀವ್ರವಾಗಿ ಖಂಡಿಸಿದೆ.
ಹುಮನಾಬಾದ್‌ನ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಮುಖಂಡರು, ʼಎಸ್‌ಎಫ್‌ಐ ಕೇಂದ್ರ ಸಮಿತಿಯ ಕರೆಯ ಮೇರೆಗೆ ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಲಾಗಿತ್ತು, ಅದರ ಅಂಗವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೆರಳಿದ್ದ ವಿದ್ಯಾರ್ಥಿ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಮುಖಂಡರು ಆರೋಪಿಸಿದ್ದಾರೆ.
ಡಿವೈಎಫ್‌ಐ ಜಿಲ್ಲಾ ಸಂಚಾಲಕ ಶಶಿಕಾಂತ್ ಡಾಂಗೆ ಮಾತನಾಡಿ, “ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಶಿಕ್ಷಣ ನೀತಿಗಳು ವಿದ್ಯಾರ್ಥಿ ವಿರೋಧಿಯಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) ಕಾರ್ಪೊರೇಟ್ ಪರವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿಗೆ ಧಕ್ಕೆಯುಂಟು ಮಾಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ರಾಜ್ಯಗಳಿಗೆ ಶಿಕ್ಷಣ ಮತ್ತು ಪ್ರವೇಶ ಪರೀಕ್ಷೆಗಳ ವಿಷಯದಲ್ಲಿ ಹೆಚ್ಚಿನ ಅಧಿಕಾರ ನೀಡಬೇಕು” ಎಂದು ಆಗ್ರಹಿಸಿದರು.
“ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳ ವಿರುದ್ಧ ಹೋರಾಟ ಮುಂದುವರಿಯಲಿದ್ದು, ವಿದ್ಯಾರ್ಥಿ ಸಮುದಾಯದ ಹಕ್ಕುಗಳ ರಕ್ಷಣೆಗೆ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಗಳು ಬದ್ಧವಾಗಿವೆ. ಬಂಧಿಸಲ್ಪಟ್ಟ SFI ನಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ವಿದ್ಯಾರ್ಥಿಗಳ ಪ್ರಜಾಪ್ರಭುತ್ವ ಹಕ್ಕುಗಳನ್ನು ಗೌರವಿಸಬೇಕು” ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ವಿರೋಧ : ಬಸವಪ್ರಭು ಸ್ವಾಮೀಜಿ
ಪ್ರತಿಭಟನೆಯಲ್ಲಿ ಪ್ರಮುಖರಾದ ಇಂದ್ರಜಿತ್ ಸಿಂಗೆ, ಸಾಬೀರ್ ಷಾ, ಆಕಾಶ್, ರೋಗನ್, ಪ್ರಭು ಮರ್ಪಲ್ಲಿ, ಶ್ರೀಕಾಂತ್, ಸತೀಶೀಲ್ ಹಾಗೂ ಶ್ರೀನಿವಾಸ್ ಸೇರಿದಂತೆ ಮತ್ತಿತರರಿದ್ದರು.





