“2008ರಲ್ಲಿ ಹಾವೇರಿಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ನಡೆದ ರೈತರ ಬೃಹತ್ ಪ್ರತಿಭಟನೆಯ ವೇಳೆ ಪೊಲೀಸರು ಗೋಲಿಬಾರ್ ದಾಳಿಯಲ್ಲಿ ಶಿದ್ಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಇಬ್ಬರು ರೈತರು ಹುತಾತ್ಮರಾದ ದಿನ ಜೂನ್ 10ರಂದು ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಲಾಗುವುದು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಹಾವೇರಿ ಪಟ್ಟಣದ ಪತ್ರಿಕಾ ಭವನದಲ್ಲಿ ರೈತ ಹುತಾತ್ಮಾ ಆಚರಣೆ ಮಾಡುವ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಜಿಲ್ಲೆ ಕೃಷಿ ಪ್ರದಾನವಾದದ್ದು. ಇವತ್ತಿನ ಪರಿಸ್ಥಿತಿಯಲ್ಲಿ ರೈತರಿಗೆ ಭದ್ರತೆಯಿಲ್ಲ. ರೈತರು ಹೊಲದಲ್ಲಿ ಬೀಜ ಬಿತ್ತಿದ್ದು, ಮಳೆ ಕಡಿಮೆ ಆಗುತ್ತಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ.” ಎಂದು ಹೇಳಿದರು.
ಕೇಂದ್ರ ಸರ್ಕಾರ ಮಕ್ಕೆಜೋಳ ಬೀಜಕ್ಕೆ ಎಲ್ಲ ಕಂಪನಿಗಳು ಒಂದೇ ದರ ನಿಗದಿಮಾಡಬೇಕು. ರಸಗೊಬ್ಬರದ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. 2025-26ನೇ ಸಾಲಿನ ಬೆಳೆವಿಮೆಯಲ್ಲಿ ಸಾಕಷ್ಟು ಅನ್ಯಾಯವಾಗಿದ್ದು, ಎಂಬತ್ತರಿಂದ ತೊಂಬತ್ತು ಕೋಟಿ ಹಣ ಬರಬೇಕು. ಕೂಡಲೇ ಮರು ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು. ವರದಾ ಬೇಡ್ತಿ ನದಿ ಜೋಡನೆಯ ಕುರಿತು ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡುವರು, ಸಂಸದ ಬಸವರಾಜ ಬೊಮ್ಮಾಯಿ ಅವರೇ ಮುಂದೆ ಬಂದು ಜೋಡನೆಗೆ ಕೇಂದ್ರ ಸರಕಾರದ ಜೊತೆಗೆ ಮಾತನಾಡುವೆ ಎಂದು ಹೇಳಿದ್ದರು. ಈಗ ಅವರು ಮಾತನಾಡುತ್ತಿಲ್ಲ. ರಾಜಕೀಯ ಮಾಡುವುದನ್ನು ಬಿಟ್ಟು, ವರದಿ ಬೇಡ್ತಿ ನದಿ ಜೋಡಣೆಗೆ ಶೀಘ್ರದಲ್ಲಿ ಜಾರಿಗೋಳಿಸಬೇಕು. ವಿದ್ಯುತ್ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇದರಿಂದ ರೈತರಿಗೆ ಅನ್ಯಾಯ ಆಗುತ್ತದೆ” ಎಂದು ಹೇಳಿದರು.
“ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಹುತಾತ್ಮ ದಿನಾಚರಣೆಯನ್ನು ನಗರದ ಸಿದ್ದಪ್ಪ ಸರ್ಕಲ್ ಹತ್ತಿರ ಆಚರಿಸಲಾಗುವುದ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕು” ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗಸಿರು ಸೇನೆ ಜಿಲ್ಲಾಧ್ಯಕ್ಷ ಆರ್. ವಿ. ಕೆಂಚಳ್ಳೇರ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದು ಮೂರು ವರ್ಷಗಳು ಗತಿಸಿವೆ. ಅಧಿಕಾರದ ಕಚ್ಚಾಟದಲ್ಲಿ ರೈತರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ರಸಗೊಬ್ಬರ ಮಾರಾಟದಲ್ಲಿ ಕೃಷಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಜಿಲ್ಲೆಯಲ್ಲಿ ನದಿಯಿಂದ ಕೆರೆ ತುಂಬಿಸುವ ಯೋಜನೆಗಳು ನೆನಗುದಿಗೆ ಬಿದ್ದಿವೆ. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಹುತಾತ್ಮ ದಿನದಂದು ಪ್ರತಿಭಟಿಸಲಾಗುವುದು” ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರು ಮಾಲತೇಶ ಆಲದಕಟ್ಟೆ, ಹೆಚ್.ಹೆಚ್. ಮುಲ್ಲಾ, ಮರಿಗೌಡ ಪಾಟೀಲ, ರಾಜು ತರ್ಲಗಟ್ಟ, ಸುರೇಶ ಚಲವಾದಿ, ಚನ್ನಪ್ಪ ಮರಡೂರು, ಶಿವಯೋಗಿ ಹೊಸಗೌಡ್ರ ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು




