ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಏ.20ರಿಂದ 22ರವರೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ವಚನ ಜಾತ್ರೆ, ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಹಾಗೂ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಶುಕ್ರವಾರ ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼಏ. 14ರಿಂದ 22ರವರೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.
ಏ.14ರಂದು ʼದೇಶ ಕಾಯುವ ಸೈನಿಕ, ದೇಶಕ್ಕೆ ನೀನೇ ನಾಯಕʼ ಎಂಬ ತತ್ವದಡಿ ಜನ ಸೈನಿಕರಿಗೆ ಸನ್ಮಾನ ಜರುಗಿದೆ. ಏ.15ರಂದು ‘ಧರಿಯ ಕೃಷಿ ಶುದ್ದವಾಗಿಲ್ಲದೆ ಸಸಿ ಶುದ್ದವಿಲ್ಲ’ ಎಂಬ ಸಂದೇಶದಡಿ 75 ಜನ ರೈತರಿಗೆ ಗೌರವಿಸಲಾಯಿತು. ಏ.16ರಂದು ‘ನಿನ್ನೊಡುವೆ ಎಂಬುದು ಜ್ಞಾನರತ್ನ’ ಎಂಬ ತತ್ವದಡಿ 75 ಜನ ಆದರ್ಶ ಶಿಕ್ಷಕರಿಗೆ ಸನ್ಮಾನ ಮಾಡಲಾಗಿದೆ. ಏ.17ರಂದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 75 ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿದೆ. ಏ.18ರಂದು 75 ಜನ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ, ಏ.19ರಂದು 75 ಜನ ಬಸವ ತತ್ವ ಪ್ರಸಾರಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆʼ ಎಂದರು.
ʼಏ.20ರಂದು ವಿಶ್ವಗುರು ಬಸವಣ್ಣನವರ ಬಸವ ಜಯಂತ್ಯೋತ್ಸವ ಪ್ರಯುಕ್ತ ಅಂದು ಮಧ್ಯಾಹ್ನ 12 ಗಂಟೆಗೆ ಅಕ್ಕನ ಬಳಗದಿಂದ ವಿಶೇಷ ಕಾರ್ಯಕ್ರಮ, ಸಾಯಂಕಾಲ 4 ಗಂಟೆಗೆ ಹಿರೇಮಠ ಸಂಸ್ಥಾನದಿಂದ ಚನ್ನಬಸವ ಆಶ್ರಮದವರೆಗೆ ಭವ್ಯ ಮೆರವಣಿಗೆ, ಬಳಿಕ 7ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಏ.21ರಂದು ಬೆಳಿಗ್ಗೆ 10ಗಂಟೆಗೆ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಹಾಗೂ ವಚನ ಜಾತ್ರೆ-2026 ಉದ್ಘಾಟನಾ ಸಮಾರಂಭ ಜರುಗಲಿದೆ. ಸಂಜೆ 6 ಗಂಟೆಗೆ ಹಿರಿಯ ಚಿಂತಕ ಗೊ.ರು.ಚನ್ನಬಸಪ್ಪ ಅವರಿಂದ ಗ್ರಂಥ ಲೋಕಾರ್ಪಣೆ ಜರುಗಲಿದೆ’ ಎಂದು ಮಾಹಿತಿ ನೀಡಿದರು.
ಏ.22ರಂದು ಬೆಳಿಗ್ಗೆ 9 ಗಂಟೆಗೆ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಜರುಗಲಿದ್ದು, ಗದಗ-ಡಂಬಳ ತೊಂಟದಾರ್ಯ ಮಠದ ತೊಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಹಾರಕೂಡ ಶ್ರೀಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸುವರು. ಭಾರತದ ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಸಮಾರಂಭ ಉದ್ಘಾಟಿಸುವರು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಗ್ರಂಥ ಲೋಕಾರ್ಪಣೆಗೊಳಿಸುವರು. ರಾಜ್ಯಪಾಲ ಥಾವರ್ ಚಂದ ಗೆಹಲೋಟ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ತಾವು ಅಧ್ಯಕ್ಷತೆ ವಹಿಸಲಿದ್ದು, ಸಂಸದ ಸಾಗರ ಖಂಡ್ರೆ ಸ್ವಾಗತಿಸುವರು. ಅಂದು ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಈ ಎಲ್ಲ ಕಾರ್ಯಕ್ರಮಗಳು ಚನ್ನಬಸವಾಶ್ರಮದಲ್ಲಿಯೇ ಜರುಗಲಿವೆʼ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದ ನೇತ್ರತ್ವ ವಹಿಸಲಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಅಪಾರವಾದದ್ದು, ಅವರ ಗರಡಿಯಲ್ಲಿ ಬೆಳೆದ ಡಾ.ಬಸವಲಿಂಗ ಪಟ್ಟದ್ದೇವರು ಗುರುವಿನ ಪಥದಲ್ಲಿ ಮುನ್ನಡೆಯುತ್ತ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಭೂತಪೂರ್ವ ಕಾರ್ಯ ಕೈಗೊಂಡು ಜನಮನ ಗಳಿಸಿದ್ದಾರೆ. ಇದೀಗ ಅವರ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಸಕಲ ಸಿದ್ದತೆಗಳು ಪೂರ್ಣಗೊಂಡಿವೆʼ ಎಂದು ಹೇಳಿದರು.
ಇದನ್ನೂ ಓದಿ : ಔರಾದ್ | ಸೇವಾಭಾವ, ಶಿಸ್ತು ಬೆಳೆಸುವ ಎನ್ಎಸ್ಎಸ್ ಶಿಬಿರ : ಪ್ರೇಮಾ ಹೂಗಾರ
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಪ್ರಮುಖರಾದ ಶಶಿಧರ ಕೋಸಂಬೆ, ಬಸವರಾಜ ಧನ್ನೂರ, ಜಯರಾಜ ಖಂಡ್ರೆ, ಚಂದ್ರಶೇಖರ ಹೆಬ್ಬಾಳೆ, ಮಲ್ಲಿಕಾರ್ಜುನ ಮಣಗೇರ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.





