ಬೀದರ್ ಜಿಲ್ಲೆಯ ರೈತರ ಜೀವನಾಡಿಯಾದ ಕಾರಂಜಾ ಬಲದಂಡೆ ಕಾಲುವೆ 100 ರಿಂದ 131ನೇ ಕಿ.ಮೀ.ವರೆಗಿನ ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆ, ಉಪ ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿ.ಮೀ 0 ರಿಂದ 100ರವರೆಗಿನ ಕಾಲುವೇ ಆಧುನೀಕರಣ ಕಾಮಗಾರಿಯಲ್ಲಿ ಬಿಟ್ಟುಹೋಗಿರುವ ವಿತರಣಾ ಕಾಲುವೆ, ಉಪ ಕಾಲುವೆಗಳನ್ನೂ ಆಧುನೀಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳ ಒಟ್ಟು ವೆಚ್ಚ 2023-24ರ ದರಪಟ್ಟಿಯನ್ವಯ ₹180 ಕೋಟಿ ಅನುಮೋದಿಸಲಾಗಿದೆ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಸಮೀಪ ಕಾರಂಜಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯ ಸಂಗ್ರಹಣಾ ಸಾಮರ್ಥ್ಯ 7.69 ಟಿಎಂಸಿ ಆಗಿದೆ. ಯೋಜನೆಯಡಿ ಹಂಚಿಕೆಯಾಗಿರುವ 9.27 ಟಿಎಂಸಿ ನೀರು ಬಳಸಿ, ಬೀದರ್ ಜಿಲ್ಲೆಯ 29,227 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಕಾಲುವೆ ಆಧುನೀಕರಣವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಾರಂಜಾ ಯೋಜನೆಯಡಿ 0.687 ಟಿ.ಎಂ.ಸಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಬಲದಂಡೆ ಕಾಲುವೆಯಡಿ 131 ಕಿ.ಮೀ ಕಾಲುವೆಯಿಂದ 19,217 ಹೆಕ್ಟೇರ್ ಎಡದಂಡೆ ಕಾಲುವೆಗಳ 31 ಕಿ.ಮೀನಿಂದ 2,521 ಹೆಕ್ಟೇರ್, ಏತ ನೀರಾವರಿ ಕಾಲುವೆ 24 ಕಿ.ಮೀಗಳಿಂದ 3,873 ಹೆಕ್ಟೇರ್, ಅತಿವಾಳ ಏತ ನೀರಾವರಿ ಕಾಲುವೆಯಡಿ 3,616 ಹೆಕ್ಟೇರ್ ನೀರಾವರಿ ಸೌಲಭ್ಯಕ್ಕೆ ಯೋಜನೆ ರೂಪಿಸಲಾಗಿದೆ ಎಂದೂ ಈಶ್ವರ ಖಂಡ್ರೆ ವಿವರಿಸಿದ್ದಾರೆ.
ಇದನ್ನೂ ಓದಿ : ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು
ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾಲುವೆ ಆಧುನೀಕರಣ ಕಾಮಗಾರಿ ಆರಂಭಿಸುವಂತೆ ತಾವು ನಿರಂತರವಾಗಿ ಪ್ರಯತ್ನ ಮಾಡಿದ್ದು, ಯೋಜನೆಗೆ ಅನುಮೋದನೆ ನೀಡಿದ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ವಿಶೇಷವಾಗಿ ಮುಖ್ಯಮಂತ್ರಿಗಳು ಮತ್ತು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ.





