ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಕನಸು ಬಿದ್ದಿತ್ತೊ… ದುರುಗನಿಗೆ ಎಚ್ಚರಾಯ್ತು! ಕಣ್ಣು ತೆರಿತಿದ್ದಂಗೇ ಎದೆ ಡಬಡಬ ಬಡಕಂತಿತ್ತು! ಮೈಯೆಲ್ಲ ಬೆವತು ಹೋಯಿತು! ಅಂಗೇ ಮಕ್ಕಂಡು ಕಂಡ ಕನಸಿನ ಬೆನ್ನು ಹತ್ತಿದ… ನೆಪ್ಪಾಗತೊಡಗಿತು; ಶಾಂತಗೌಡ ಹತ್ಯಾರಿ ಹಿಡುದು, ‘ನಿಂತ್ಕಳಲೇ…’ ಅಂತ ಕಲೆಬಿದ್ದಿದ್ದ! ತನಗ ಓಡಾಕ ಕಾಲು ಏಳುತ್ತಿದ್ದಿಲ್ಲ! ಸತುವುಮಾಡಿ ಕಾಲು ಕಿತ್ತಿಡುತ್ತ ಓಡಿದ್ರೂ… ಶಾಂತಗೌಡನ ಹತ್ಯಾರಿ ಬೆನ್ನಿಗೆ ತಗಲಿದಂತಾಗಿ, ‘ಸತ್ನೆಪ್ಪೋ…’ ಅಂತ ನೆಲಕ್ಕ ಬಿದ್ದುಬುಟ್ಟ! ಹತ್ಯಾರಿ ಏಟು ಬಿದ್ದುದು ತನಗ. ಆದರೆ ಮಗ ಚೆನ್ನ ರಕ್ತದಾಗ ಬಿದ್ದಿದ್ದಂಗ ಕಂಡ! ಅದಕಂಡು ದುರುಗ ಹೌಹಾರಿ, ಕೆಂಡಮಂಡಲವಾಗಿ ಅಬ್ಬರಿಸಿ, ‘ಗೌಡಾ… ನಿನ್ಗುಣ ತೋರಿಸಿಬುಟ್ಟಿ…’ ಅಂತ ಹಾರಿ ಶಾಂತಗೌಡನನ್ನು ಹಿಡಕಂಡು ಮುರುದು ಬುಡುಬೇಕಂತ ದುರುಗ ನೋಡ್ತಾನ… ಶಾಂತಗೌಡ ಕಣ್ಣಿಗೆ ಕಾಣದಂಗ, ಕೈಯಿಗೆ ಸಿಗದಂಗ ನೆಲದಿಂದ ಮುಗಿಲೆತ್ತರಕ್ಕೆ ನಿಂತುಬುಟ್ಟಿದ್ದ! ಇದು ಕಣ್ಣುಮುಂದ ನಡದಂಗ ನೆಪ್ಪಾಗಿದ್ದೇ ತಡ ದುರುಗ ದಿಗ್ಗನೆದ್ದು ಕುಂತು ‘ಶಿವಶಿವಾ’ ಅಂದ. ಕೆಟ್ಟ ಕನಸ್ಸಂತ ಸಂಕಟವಾಗತೊಡಗಿತು…!
ಕಣ್ಣಿಗೆ ಏನೂ ಕಾಣಲಿಲ್ಲ; ಕಗ್ಗತ್ತಲು! ದೊಡ್ಡ ಗವ್ಯಾಗ ಕುಂತಂಗನಿಸ್ತು. ಬೆಳುಕು ಹರಿಯಲು ಬಂದಿದ್ದಾದು ಅಂತ ಎದ್ದು ಅಂದಾಜಿನ ಮ್ಯಾಗ ಬಾಗಿಲಿಗೆ ಬಂದು ತೆರುದು ಹೊರಗ ಬಂದು ನಿಂತರೂ ಏನು ಬದಲು ಅನಸಲಿಲ್ಲ. ಹೊರಗೂ ಕಗ್ಗತ್ತಲು. ವಾರದಿಂದ ಮಾಡ ಮುಚ್ಚಿಗಂಡಿತ್ತು. ಮೈಯಿಗೆ ಚಳಿ ಬಡದಂಗಾಗಿ ಬೆವುತದ್ದಕ್ಕೋ ಹಿತವಾಯ್ತು. ಗಳಿಗೆತ್ತು ನಿಂತು ನಾಯಿ ನರಿ ಕೂಗುವುದು ಕೇಳಿಸ್ಯಾವು ಅಂತ ಕಾದ. ಹುಳಉಪ್ಪಡಿಯ ಸಪ್ಪಳ ಸೈತ ಕೇಳಲಿಲ್ಲ. ಮುಂದತ್ತ ಹೋಗಿ ಕಾಲುಮಡಿಯಾಕ ಕುಂತ. ಚಳಿಯಾಗಿ ಮೈಯೆಲ್ಲ ತೋದಂಗನಿಸ್ತು. ಎದ್ದು ಮೈಕೈ ಸವರಿಕೊಂಡ… ನೀರು ನೀರು. ಮೈ ಬೆವುತದ್ದೋ… ಮಂಜು ಬಿಳಕತ್ಯಾದೋ ಅಂತ ಮುಗುಲು ನೋಡಿದ… ಮ್ಯಾಗೂ ಕತ್ತಲೇ. ಏನೂ ತಿಳಿಯದಂಗಾಗಿ ಮನೆ ಒಳಗೆ ಬಂದ. ಹುಡುಕಾಡಿ ಚಿಮಣಿ ಮುಡಿಸಿದ. ಮೈಯೆಲ್ಲ ನಮ್ಮಾಗಿತ್ತು. ಪಂಚೆಯಿಂದ ಒರೆಸಿಕೊಂಡು ‘ಮಳೆಯಂತೂ ಬರ್ಲಿಲ್ಲ. ಹೊಲಗುಳು ಈ ವರ್ಸ ಬೀಜ ಕಾಣ್ಲಿಲ್ಲ. ಎಳ್ಳಮಾಸಿ ಇರ್ಲಿ… ಚೆಟ್ಟಮಾಸಿ ಇನ್ನ ಬಂದಿಲ್ಲ. ಆಗ್ಗೆ ಮಂಜು ಬಿಳಾಕ ಸುರುವಾಯ್ತು! ಬೆಳೆಯಿಲ್ದ ಕಾಲ್ದಾಗ ಚಳಿಜಾಸ್ತಿ. ಏನು ಕಾಲಾನೋ ಏನೋ! ಯಾವ ಕಾಲ್ದಾಗ ಏನು ಆಗಬೇಕೋ ಅದು ನಮ್ಮ ಕಾಲ್ದಾಗ ಸರಿಯಾಗಿ ಆಗ್ತಿತ್ತು. ಈಗ… ಎಲ್ಲ ನಮ್ಮ ಎಣಿಕೆ ಸುಳ್ಳಾಗಕ ಹತ್ಯಾವ ಕಾಲ ಬದಲಾಕ್ಕೆಂತ ಹೋದ್ರ… ಮನುಷ್ಯ ಹೆಂಗ ತಡಕಬೇಕು?’ ಅಂತ ಅನಕಂಡು ಸುಮ್ಮನಾದ.
ತಿಂಗಳಾಯ್ತು ಮಗ ಚೆನ್ನನ ಸಲುವಾಗಿ ಚಿಂತಿ ಹಚ್ಚಿಕೊಂಡು ಕಮುರತೊಡಗಿದ್ದ. ಮಗ ತಂದೊಡ್ಡಿದ ಕುತ್ತು ಯಾರಿಗೆ ಉರುಲಾತಾದೋ ಅಂಬ ಚಿಂತೆಯಲ್ಲಿ ಮುಳುಗಿದ್ದರೂ ಬಗೆಹರಿವಂಗ ಕಾಣಲಿಲ್ಲ. ನಿದ್ದಿ ನೀರಡಿಕೆ ಕೂನ ಇಲ್ಲದಂಗ ಖಬರುತಪ್ಪಿದ್ದ. ನಿತ್ರಾಣಾಗಿ ಕಣ್ಣುಮುಚ್ಚಿದರೆ ಕನಸುಗಳು, ಕೆಟ್ಟ ಕನಸುಗಳು ಬೀಳುತ್ತಿದ್ದವು! ಮಗ ತಿಂಗಳಿಂದ ಊರಿಗೆ ಹೋದವುನು ಬಂದಿದ್ದಿಲ್ಲ. ಬರಲಾರದ್ದು ಬೇಸಂತ ಕುಂತಿದ್ದ. ಅವುನು ಊರಿಗೇ ಬರದು ಬ್ಯಾಡಂತ ದೇವುರಿಗೆ ಕೈಮುಗಿತಿದ್ದ. ‘ಬರ್ತಿನಪ್ಪ’- ಅಂತಂದು ಹೋದವುನು ಬಂದೇ ಬುಟ್ಟರೆ ಹೆಂಗ? ಅಂತ ಬುಗುಲು ಬಿದ್ದಿದ್ದ! ಮನಸ್ಸಿಗೆ ಬುಗುಲು ಹತ್ತಿತ್ತು! ಬಾಳೊತ್ತಾಗಿದ್ದಿಲ್ಲ… ಮತ್ತೆ ಕಣ್ಣು ಮುಚ್ಚಿದಂಗಾಯ್ತು… ಜೀವ ‘ಜಲ್’ ಅಂದಂಗಾಗಿ ನಡುಗತೊಡಗಿದ. ಅಷ್ಟರ ನಡುಕ ಕನಸ್ಸು; ಅಕ್ಕಮ್ಮ ಇದೇ ಮನ್ಯಾಗ ತನ್ನ ಉಂಬಾಕ ನೀಡಿದಂಗ! ಆಕಿ ಇದೇ ಮನ್ಯಾಕಿ ಆದಂಗಿತ್ತು! ನೆನೆನೆನೆಸಿಗಂಡು ‘ಯಪ್ಪ ಎಲ್ಲಾ ನಿನ್ನಾಟ, ಬಲ್ಲವರಾರು’ ಅಂತ ಅನಕಂಡು ಕೈಮುಕ್ಕಂಡ.
ಇದನ್ನು ಓದಿದ್ದೀರಾ?: ವಿವೇಕ ಶಾನಭಾಗ ಅವರ ಕತೆ | ಲಂಗರು
‘ಏನು ದುರುಗಣ್ಣ. ನಿನ್ನ ಮಗ ದೊಡ್ಡದ್ಕ ಕೈಯ್ಯಾಕ್ಯಾನ ಬುಡು!’ ಬಸಣ್ಣದೇವರು ಗುಡಿ ಪೂಜಾರಿ ಬೂದೆಣ್ಣ ಆವತ್ತು ಅದೆಂಥದೋ ಕೆಟ್ಟ ದನ್ಯಾಗ ಅಂದದ್ದೇ ತಡ, ‘ಯಪ್ಪಾ, ಅಂಗ ಒಗಟಿನ್ಯಾಗ ಮಾತಾಡಿ ಎದಿಗೆ ಹೊಡಿಬ್ಯಾಡ! ಅದೇನಂಬುದು ಈ ಮಾದ್ಗನಿಗೆ ಸೀದ ಹೇಳಿಬುಡು, ತಂದೆ’ ಅಂತಂದಿದ್ದ.
‘ನೋಡು ದುರುಗಾ, ನೀನಂದ್ರ ನಮ್ಗೆಲ್ಲ ನಂಬಿಕೆ ಮನುಷ್ಯ! ನೀನೇ ಹಿಂಗ ನಾಟ್ಕ ಆಡಾಕ ನಿಂತ್ರೆಂಗ?’
‘ಯಪ್ಪಾ, ಆ ನಂಬ್ಕಿನ್ನ ಕಳಕಳ್ಳದಂಗ ಬದುಕಿರಬೇಕಂತಾನ ಈ ನಿಮ್ಮ ಮಾದ್ಗ!’
‘ಅಂದ್ರ ನಿನ್ಗೇನೂ ಗೊತ್ತಿಲ್ಲೇನು? ನಿನ್ನ ಮಗಾ…’
‘ಇಲ್ಲೆಪ್ಪ! ಯಪ್ಪಾ, ನನ್ನ ಮಗ ಅಲ್ಲಪ್ಪ ಅವುನು! ಅವುನು ಊರಿನ ಮಗ- ಅಂತ ನೀನೇ ಅಂತಿದ್ದಿ…’
‘ಹೌದೌದು! ಜಾಸ್ತಿ ಓದ್ಕೆಂಡ್ರ ತಲೆ ಬರಾಬರಿ ಇರಂಗಿಲ್ಲಂತಾರಲ್ಲ ಅದು ಸುಳ್ಳಲ್ಲ. ಅಕ್ಕಮ್ಮನ್ನೇ ಮದ್ವಿ ಮಾಡ್ಕಂತೀನಿ ಅಂತ…’ ಬೂದೆಣ್ಣ ಅಂದುದ್ದೇ ತಡ ದುರುಗನಿಗೆ ಸಿಡುಲು ಬಡದಂಗಾಯ್ತು! ಖಬುರು ತಪ್ಪಿದಂಗಾಯ್ತು!
‘ನೋಡು ದುರುಗಾ, ಎಲ್ಲಿ ಉರಿವ ಕೊಳ್ಳಿ ಅಲ್ಲೇ ಉರುದ್ರ ಚಂದ! ಒಲ್ಯಾಗ ಉರಿವ ಕೊಳ್ಳಿ ಒಲೆ ಬುಟ್ಟು ಬ್ಯಾರೆ ಕಡೆ ಉರ್ಯಾಕ ಹತ್ತಿತಂದ್ರ ಏನಾದೀತು?’ ಅಂತಂದು ಬೂದೆಣ್ಣ ಹೋಗಿಬುಟ್ಟಿದ್ದ. ದುರುಗ ಅದೆಂಗ ಎದ್ದು ಬಂದಿದ್ದನೋ ತನ್ನ ಮನಿಗೆ. ಬಂದವನೇ ತನ್ನ ಮಗ ಚೆನ್ನನಿಗೆ ಒದ್ದು ಬುಡುಬೇಕಂತ ಬಂದಿದ್ದ! ಆದರೆ ಹತ್ತಾರು ಪುಸ್ತಕದ ನಡುಕ ಚೆನ್ನ ಚೆಂದಾಗಿ ಓದಿಕೆಂತ ಕುಂತುದ್ದು ನೋಡಿ, ಮನುಸು ಕರಗಿ ಸಿಟ್ಟಿಳಿದು ಜೀವ ಉಕ್ಕಿ ಬಂದಿತು. ಬಾಗಿಲಲ್ಲೇ ಕುಸುದು ಕುಂತು ಕಣ್ಣೀರು ತಂದಿದ್ದ…!
ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ
‘ಬಸ್ವಾ, ಮುಪ್ಪಿಗೆ ಎಂಥ ಗಂಡಾಂತರ ತಂದಿಟ್ಟಿ, ತಂದೆ, ಯಾರ್ನ ಹಿಡ್ಕಬೇಕು? ಯಾರ್ನ ಬುಡಬೇಕು? ಒಂದು ಕಳ್ಳು…! ಒಂದು ಅನ್ನ…’ ಅನಕಂಡ. ವ್ಯಥೆಯಾಗತೊಡಗಿತು. ಎದ್ದು ಮತ್ತೆ ಹೊರಗ ಬಂದ. ಸಲುಪು ಕತ್ತಲ ಕರಗಿದಂಗಿತ್ತು. ಚಳಿಗಾಳಿ ಮೈಗೆ ಬಡಿಯಿತು. ಸುತ್ತಲೂ ಕಣ್ಣಾಡಿಸಿದ. ಏನೂ ಕಾಣಲಿಲ್ಲ. ಶಾಂತಗೌಡನ ಕರೆಕಲ್ಲಿನ ದೊಡ್ಡಮನೆಯ ಬೆನ್ನೂ ಕಾಣಲಿಲ್ಲ. ಅತ್ತಗ ಇತ್ತಗ ಕಿವಿಗೊಟ್ಟು ನಿಂತ. ಎತ್ತಗಿಂದಲೂ ಸಪ್ಪಳ ಅಂಬೋದು ಕೇಳಿಬರಲಿಲ್ಲ. ಕೇರಿ ಎದ್ದಂಗಿಲ್ಲ ಅನಕಂಡ. ಕೇರಿ ಹಿಂದಿದ್ದ ಹಳ್ಳದ ಈಚಲ ಸಾಲಿನಿಂದ ಕಾಗಿಗಳು ಕೂಗುವುದು ಕೇಳಿತು. ಸಲುಪೊತ್ತಿಗೆ ಅದೆಲ್ಲಿಂದಲೋ ಕೋಗಿಲೆಗಳು ಎರಡು ದನಿ ಮಾಡತೊಡಗಿದವು. ಅದ ಕೇಳುತ್ತ ಕೇಳುತ್ತ ದುರುಗನ ಚಿತ್ತದ ತುಂಬ ಚಿಂವು ಚಿಂವು ಅಂತ… ಕವಕವ ಕಬ್ಬಾಟ ಮಾಡುವ ಸಾವಿರಾರು ಹಕ್ಕಿ-ಪಕ್ಷಿಗಳ ದನಿ ದುರುಗನ ಕಿವಿ ತುಂಬಿತು. ದುರುಗ ಕುಂತುಬುಟ್ಟ! ಅವು ಅಂಗ ಕೂಗಿದರೇನೇ ದುರುಗ-ಚಂದವ್ವಗ ನೆಮ್ಮದಿ ಅನಸ್ತಿಸ್ತು. ಹೊತ್ತು ಮುಣುಗಿ ತಾಸತ್ತು ಕೂಗಿ ಗಪ್ಪಾಗಿ ಬುಟ್ಟರೆ ಮತ್ತೆ ಅವು ಸುರುವು ಮಾಡುವುದು ಸೂರಿಯ ಮೂಡುವ ಮುನ್ನವೇ… ಇಂಥ ಹೊತ್ತಿನ್ಯಾಗ. ಈಗ ಕಾಗೆ-ಗುಬ್ಬಿ-ಗೊರವಂಕ-ಬೆಳವ-ಗುಬಲಕ್ಕಿ ಎಂಥೆಂಥವೋ ಹಕ್ಕಿ-ಪಕ್ಷಿಗಳು ಇವುಗಳೆಲ್ಲ ದುರುಗನನ್ನು ತೊರೆದು ಹೋಗಿ ಬುಟ್ಟಿದ್ದವು. ಜಗದಗಲ ಮುಗಿಲಗಲ ಬೆಳದು ಪಾತಾಳಕ್ಕೆ ಇಳುದು ನಿಂತಿದ್ದ ಒಂದು ಬೇವಿನ ಮರ, ಒಂದು ಜಾಲೆ ಮರ ದುರುಗನಕ್ಕಿಂತ ಮೊದಲೇ ಹುಟ್ಟಿ ಬೆಳಕಂತ ಬಂದಿದ್ದವು. ಅವನಪ್ಪನೋ ಅವನವ್ವನೋ ಇಲ್ಲ ಬಸಣ್ಣದೇವರು ಬೆಳೆಸಿರಬೇಕು. ದುರುಗನ ಹೇಣ್ತಿ ಚಂದವ್ವ ಇರತನಕ ಆಕಿಗೆ ಮನೆಯಂಬೊದು ಇರಲಿಲ್ಲ. ಆ ಮರಗಳ ಒಡಲೊಳಗೇ ನಡಿತ್ತಿತ್ತು. ಚೆನ್ನ ಬೆಳದ್ದೇ ಆ ಮರಗಳ ಉಡಿಯಲ್ಲಿ. ಚಂದವ್ವ ಅದೆಷ್ಟು ಚಂದ ಹಾಡುತ್ತಿದ್ದಳೆಂದರೆ, ಹೊತ್ತು ಮುಣುಗಿದ ಮ್ಯಾಲೆ ಕೇರಿಯ ಆಸತ್ತ ಬ್ಯಾಸತ್ತ ಜೀವಗಳು ಚಂದವ್ವನ ಮರಗಳಿಗೆ ಬಂದು ಕುಂತು ಹಾಡುಕೇಳಿ ನಿರುಮ್ಮಳ ಉಸುರುಬುಟ್ಟು ನೆಮ್ಮದಿಯ ಉಸುರು ತುಂಬಿಕೊಳ್ಳುತ್ತಿದ್ದವು. ಕೇರಿಯ ಹಿರಿಯ ಬಸ್ಸಪ್ಪ ‘ಚಂದವ್ವ, ನಿನ್ನ ಪದಗಳು ನಮ್ಮ ಎದ್ಯಾಗಿನ ಚಿಂತೆನ್ನ ತಣ್ಣಗ ಮಾಡತಾವ! ಬದುಕಬೇಕು ಅಂಬ ಹುರುಪು ಮೂಡುಸ್ತಾವ!’ ಅಂತಿದ್ದ. ಶಾಂತಗೌಡನೇ ‘ನನ್ನ ಹೇಣ್ತಿಯಾಗಿ ಚಂದವ್ವ ಯಾಕ ಹುಟ್ಟಬಾರದಿತ್ತು?’ ಅಂತ ನೂರಾರು ಸಲ ಅನಕಂಡಿದ್ದ. ಆ ಮ್ಯಾಲೆ ತಾಳಿ ಕಟ್ಟಿಸಿಕೊಳ್ಳಲಿಲ್ಲ. ಕರೆಕಲ್ಲಿನ ದೊಡ್ಡಮನ್ಯಾಗಿದ್ದು ಗೌಡಸಾನಿ ಅಂತ ಅನಿಸಿಕೊಳ್ಳಲಿಲ್ಲ ಅಂಬೋದು ಬುಟ್ಟರೆ ಉಳಿದೆಲ್ಲ ವಿಷಯದಾಗ ಚಂದವ್ವ ಶಾಂತಗೌಡನ ಹೇಣ್ತಿಯೇ ಆಗಿಬುಟ್ಟಳು! ಹೋದ ಬಸ್ಸಣ್ಣದೇವುರು ಜಾತ್ರಿಗೆ ಆ ಎರಡು ಮರಗಳನ್ನು ಕಡುದು ನಾಕು ವರ್ಷ ಆಗಿದ್ದಾವು. ಆದರೆ ದುರುಗನಿಗೆ ನಿನ್ನೆ ಮೊನ್ನೆ ಅದೆಲ್ಲ ನಡದಂಗಿತ್ತು…! ಆವತ್ತು ಶಾಂತಗೌಡ ಬಂದು ನಿಂತ. ಕಟಿಗಿ ಅಡ್ಡೆ ರಸೂಲ್ ಸಾಬುನ್ನ ಕರ್ಕಂಬಂದಿದ್ದ. ಮರಗಳ ಮುಂದ ನಿಂತುಗಂಡು ಬಡ್ಡೆಯಿಂದ ಕೊಂಬೆ ಕೊಂಬೆಗೆ ಕಣ್ಣೋಡಿಸಿದ ಸಾಬು. ‘ಪಟೇಲ್, ಈ ಎರಡು ಮರಗಳನ್ನು ಕಡುದು ಬುಟ್ರ… ಬಂದಬಸ್ತು ಎರಡು ಎತ್ತಿನ ಬಂಡಿ ಆತಾವ! ನಿಮಗೊಂದು, ನಿಮ್ಮಕ್ಕ ಗೌಡ್ಲಾನಿಗೊಂದು! ಪಟೇಲ್, ನಿಮ್ಮ ತಲೆ ಅಲ್ಲ. ನಿಮ್ಮ ಮೊಮ್ಮಕ್ಕಳ ತಲೆ ಈ ಬಂಡ್ಯಾಗ ಕಳಿಬೇಕು ಅಂಗ ಬಿಗುದುಕೊಡ್ತೀನಿ. ಪಟೇಲ್, ಕೂರುಗಿ, ಕುಂಟೆ, ಮೇಳಿ ಎಲ್ಲ ವತನಕ್ಕೆ ಬೇಕಾಗುವ ಸಾಮಾನು ಮಾಡಿಕೊಡ್ತೀನಿ. ಈ ಸಾಮಾನಂದ್ರ ಹೆಸರಿಗೆ ಅಲ್ಲ. ಅವುಗಳನ್ನು ನೋಡಿದವುರು. ಶಾಂತಗೌಡನ ಬದುಕು ಅಂದ್ರ ಇವು ಅನಬೇಕು’, ಅಂದ ಆ ಸಾಬುನ ಮಾತು ಕೇಳಿದ ದುರುಗನ ಜೀವ ಅಳ್ಳಾಡಿತು! ಶಾಂತಗೌಡನ ಜೀವ ಅರಳಿತು! ‘ದುರುಗಾ’ ಅಂತ ಕರದ ಶಾಂತಗೌಡ. ಶಾಂತಗೌಡ ‘ದುರುಗಾ’ ಅಂತ ಕರೆವುದೇ ಬಲುಚೆಂದ. ಅದನ್ನ ಕೇಳಿಸಿಕೊಳ್ಳುವುದೇ ಪುಣ್ಯ ಅಂತ ನಂಬಿಕೊಂಡಿದ್ದ ದುರುಗ. ‘ಮನೆ ಮಗನ್ನ ಕರದಂಗ ಕರಿತಾನ ನಮಗೌಡ’ ಅಂತ ಕೇರಿಮಂದಿ ಅನಕಂತಿದ್ದರು. ‘ಸಾಬು ಹೇಳದು ಕೇಳಿತೇನು?’ ಅಂದ ಶಾಂತಗೌಡ.
ಇದನ್ನು ಓದಿದ್ದೀರಾ?: ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ
‘ಹೂಂನಪ್ಪ ಗೌಡ’ ಅಂದ ದುರುಗ. ದುರುಗನ ದನ್ಯಾಗ ಏನೋ ಕಸುರು ಕಾಣಿಸ್ತು. ಅದಕಂಡ ಶಾಂತಗೌಡ ಯಾಕ ದುರುಗನಿಗೆ ಮನಸ್ಸಿಲ್ಲಂತ ತಿಳಕಂಡ. ದುರುಗನಿಗೆ ಚಂದವ್ವ ನೆಪ್ಪಾದಳು. ಆ ಹೊತ್ತಿಗೆಲ್ಲ ಆಕಿ ಮಾಡದಾಗಿನ ಚಂದಪ್ಪನ ಜತೆಗೆ ಒಂದು ಚುಕ್ಕೆಯಾಗಿ ಕೂತು ನೋಡುತ್ತಿದ್ದಳು.
‘ನಿನ್ಗ ಮನ್ಸಿಲ್ಲಂದ್ರ ಬ್ಯಾಡಬುಡು’ ಶಾಂತಗೌಡನ ದನಿ ಬಿರುಸಾಗಿತ್ತು.
‘ಅಂಗಲ್ಲಪ್ಪ, ಈ ಮರಗಳು ಅಂದ್ರ ನನ್ನ ಜೀವ ಇದ್ದಂಗ! ಯಪ್ಪ, ಜೀವ ಅಂದ್ರ… ಚಂದವ್ವ ಇದ್ದಂಗ. ಚಂದವ್ವಗ ಇವಂದ್ರ ಬಾಳ ಜೀವ… ಅದ್ಕ…’ ಅಂದು ಮರನ್ನ ನೋಡಿದ. ‘ಯಪ್ಪೋ ಚೆನ್ನ ಬಂದ್ರ ಹಗಲೆಲ್ಲ ಈ ಮರಗಳ ಬುಡುಕ ಕುಂತೇ ನೂರಾರು ಪುಸ್ತಕ ಓತ್ತಾನೆ’ ಅಂತ ಅನದ್ರಾಗ ದುಕ್ಕ ಒತ್ತಿ ಬಂತು… ದುರುಗನ್ನ ಈಗ ತಡುವದು ಬ್ಯಾಡನಿಸಿ ಶಾಂತಗೌಡ ಹೋದ.
ಮೂರುನಾಕದಿನ ಬುಟ್ಟು ‘ದುರುಗಾ’ ಅಂದ ಶಾಂತಗೌಡ. ಆ ಪುಣ್ಯದ ಕರೆ ಕೇಳಿಸಿಕೊಂಡು, ‘ಯಪ್ಪೋ’ ಅಂದ. ‘ಗಾ…ನಿನ್ಗ ಇದೇ ನಮ್ಮ ಜಾಗದಾಗ ಮನೆ ಕಟ್ಟಿಸಿಕೊಡ್ತೀನಿ. ನಮ್ಮ ಜಾಗದಾಗನೇ ಆಯ್ತಾ?’ ಅಂದ. ದುರುಗ ಇರುವುದು, ಅವುನ ಮರಗಳಿರುವುದು ಶಾಂತಗೌಡನ ಜಾಗದಾಗ ಅಂತ ನೆನಪಿಸಿದಂಗಿತ್ತು. ‘ದೇವರು ಇಚ್ಛಾ’ ಅಂದುಬುಟ್ಟ ದುರುಗ. ಎರುಡು ಮೂರು ಹಗಲು ಹತ್ತಾರು ಮಂದಿ ಆ ಎರಡು ಮರಗಳನ್ನು ಮುರುದು ಕೂಡಿಟ್ಟರು. ಕಣ್ಣಿಲೇ ನೋಡದು ಆಗ್ಲಿಲ್ಲ. ಆದರೆ ಮುಂದ ನಿಂತ್ಕಂಡು ದಗದ ನೋಡುದು ದುರುಗನ ಪಾಲಿಗಿತ್ತು. ಆ ಎರಡು ಮರಗಳ ತುಂಬ ಸಂಸಾರ ಹೂಡಿದ್ದ ಸಾವಿರಾರು ಹಕ್ಕಿ-ಪಕ್ಷಿಗಳು ತಮ್ಮ ಗೂಡುಗಳನ್ನು ಮರಿಜೀವಗಳನ್ನು ಸೈತ ಕಳಕಂಡು ಎರಡು ಮೂರು ದಿನ ಕೆಟ್ಟ ದನಿಲೆ ಚಿಂವ್ ಚಿಂವ್, ಕಾ ಕಾ, ಟ್ರಿಂವ್ ಟ್ರಿಂವ್ ಅಂತ ಕಬ್ಬಾಟಿಟ್ಟು ಒದರಿ ಅಲ್ಲೇ ಸುತ್ತಿಸುತ್ತಿ ಹೌಹಾರಿ ಸೋತು ಮತ್ತೆ ಎತ್ತಗೋ ದೇವುರು ತೋರಿಸಿದ ಜಾಗಕ್ಕೆ ಹೋಗಿ ಬುಟ್ಟುವು. ಅದೇ ಜಾಗದಾಗ ಹಾಳು ಮಣ್ಣಿನಿಂದ ಎಳ್ಳೆಮಾಡಿಸಿ ಎರಡು ಕೋಣೆಯ ಒಂದು ಹೆಂಡೆಮನೆಯನ್ನ ಶಾಂತಗೌಡ ದುರುಗನಿಗೆ ಕಟ್ಟಿಸಿಕೊಟ್ಟ. ಅದಕ್ಕಿಂತ ಮುಂಚೆ, ‘ದುರುಗಾ, ನಿನಗ್ಯಾಕ ಮನೆ? ನಿನ್ನ ಮನೆ ಇದು’ ಅಂತ ಶಾಂತಗೌಡ ತನ್ನ ಕರೆಕಲ್ಲಿನ ದೊಡ್ಡ ಮನ್ಯಾಗ ಕುಂತು ಅಂದ. ದುರುಗನ ಪಾಲಿಗೆ ಅದು ಸಲುಪು ನಿಜ. ಆದರೆ ಮಗ ಚೆನ್ನನ ಪಾಲಿಗೆ ಅಲ್ಲ- ಅಂತ ನೆನಸಿಗಂಡು, ‘ಯಪ್ಪ, ನನ್ನ ಒಂದು ಮನೆಯಂತ ಇರ್ಲಿ. ಜಡ್ಡು ಜಾಪತ್ತು ಬಂದ್ರ….’ ಅಂದ ದುರುಗನ ಮನಸ್ಸಿನಂತೆ ಆ ಮನೆ ಆಗಿತ್ತು. ದುರುಗನಿಗೆ ಆ ಮನೆಯಂದ್ರ ಸುಡಗಾಡದಾಗ ಒಂದು ಹೆಣದ ಗದ್ದಿಗಿ ಕುಂತಂಗ ಕಂಡಿತು. ಆ ಮನೆ ಹೊಕ್ಕರೆ ಹೆಣದ ಕುಣಿ ಹೊಕ್ಕಂತಾಗುತ್ತಿತ್ತು. ಆವತ್ತಿನಿಂದ ದುರುಗ ಚೈತನ್ಯ ಕಳಕೊಂಡ. ಮಗ ಚೆನ್ನನಿಗೆ ಇದು ಗೊತ್ತಾಗಿ ಬಂದ. ಕೆಂಡಮಂಡಲಾಗಿ ನಿಂತ. ಏನೂ ಮಾಡುವಂಗಿದ್ದಿಲ್ಲ. ದುರುಗ ಮಗನ್ನ ಹಿಡಕಂಡು, ‘ಮಗಾ…ಚೆನ್ನಮಲ್ಲಯ್ಯ’ ಅಂತ ಅತ್ತುಬುಟ್ಟ. ‘ಹ್ವಾದ ಗಿಡಗಳು ಬರ್ತಾವೇನು?’ ಅಂದ. ಅದರಾಗ ಚೆನ್ನನ ಪರೀಕ್ಷೆಗಳು ಬಂದಿದ್ದುವು. ಉರಿವ ಚಿಂತೆನ್ನ ತುಂಗಮ್ಮನಲ್ಲಿ ಹಾಕಿ ಚೆನ್ನ ಹೋಗಿಬುಟ್ಟ. ಆಮ್ಯಾಲೆ ಶಾಂತಗೌಡ ದುರುಗನಿಗೆ ಪರಿಪರಿಯಾಗಿ ಸಮಾಧಾನ ಮಾಡಲು ನೋಡಿದ. ಏನು ಮಾಡಿದರೂ ದುರುಗ ಮೊದಲಿನಂಗ ಜೀವ ತುಂಬಿದ ಮನುಷ್ಯ ಆಗಲೇ ಇಲ್ಲ. ಚಂದವ್ವ ಬದುಕಿದ್ದಿದ್ದರೆ ಈ ಮರಗಳು ಮಾಯಾಗುತ್ತಿದ್ದಿಲ್ಲ ಅಂತ ದುರುಗ ನೆನೆನೆನೆದು ಅಳುತ್ತಿದ್ದ. ಹೆಂಗೋ ಜೀವ ಹಿಡಕಂಡು ಮಗನ್ನ ನೋಡುತ್ತ ನೆಮ್ಮದಿ ಪಡಕಂತಿದ್ದ. ರಸೂಲಸಾಬು ಮರಗಳ ಸಾವಿರಾರು ತುಂಡುಗಳನ್ನ ಲಾರಿಯಲ್ಲಿ ಸಾಗಿಸಿಕೊಂಡು ಹೋಗಿ, ಆರು ತಿಂಗಳಮ್ಯಾಲೆ ಎರಡು ಬಂಡಿಗಳನ್ನು, ಜತಿಗೆ ಕೂರಿಗೆ, ಕುಂಟೆ, ಮಡಿಕೆ, ಸಣ್ಣಪುಟ್ಟ ಗಳೇವುದ ಸಾಮಾನುಗಳನ್ನು ಬಿಗುದುಕೊಂಡು ಲಾರಿಯಲ್ಲಿ ಹೇರಿಕೊಂಡು ತಂದು ಶಾಂತಗೌಡನ ಮನೆ ಮುಂದ ಕುಂದ್ರಿಸಿದ. ಊರುಕೇರಿ ಮೊದಲು ಮಾಡಿ, ಪಶುಪಕ್ಷಿ ಕಡೆಯಾಗಿ ನಿಂತು ನೋಡಿ ಬೆರಗಾಗಿ ಕಣ್ಣುತುಂಬ ತುಂಬಿಕೊಂಡವು. ಶಾಂತಗೌಡ ಒಂದು ಬಂಡಿಯನ್ನ ತನ್ನ ಅಕ್ಕ ರುದ್ರಮ್ಮನಿಗೆ ಕಳಿಸಿದ. ಬಸನ ಜಯಂತಿಗೆ ದುರುಗನೇ ಬಂಡಿನ್ನ ತೊಳೆದು ಇಬಿತ್ತಿ ಹಚ್ಚಿ, ಕುಂಕುಮದ ಬೊಟ್ಟಿಟ್ಟು, ಊದಿನಕಡ್ಡಿ ಬೆಳಗಿ, ಕಾಯಿ ಒಡುದು, ನೈವೇದ್ಯ ಹಿಡುದು ಸಣಮಾಡಲು ಬಗ್ಗಿ, ಸಣಮಾಡಿ ಅಂಗೇ ಬಂಡಿಗೆ ಹಣೆಹಚ್ಚಿ ದುಕ್ಕಿಸಿದ್ದುದು ನರಮನುಷ್ಯರಿಗೆ ಗೊತ್ತಾಗಲಿಲ್ಲ! ದುರುಗನ ಜೀವ ಒಂದು ದಿನವೂ ಆ ಬಂಡ್ಯಾಗ ಕುಂತುಕೊಳ್ಳಲಿಲ್ಲ. ಊರು-ಕೇರಿ ಮಂದಿಗೆ ಆ ಬಂಡ್ಯಾಗ ಕುಂತು ನೋಡುವುದೆಂದರೆ ದೇವೇಂದ್ರನ ರಥದಾಗ ಕುಂತಂಗ ಅಂತ ತಿಳಕಂಡು ಉಬ್ಬಿಹೋಗುತ್ತಿದ್ದರು…
ಇದನ್ನು ಓದಿದ್ದಿರಾ?: ಜಯಶ್ರೀ ದಿವಾಕರ್ ಅವರ ಕತೆ | ನೆಲೆ ಕಾಣದ ನೆರಳು
ದುರುಗನ ಚಿತ್ತ ಎತ್ತಗೋ ಹರಕೊಂಡು ಹೋಗಿತ್ತು. ಅವನ ದೇಹ ಮಾತ್ರ ಕತ್ತಲಲ್ಲಿ ಹೆಂಡೆ ಮನೆಮುಂದ ಕುಂತಿತ್ತು. ಮೈಗೆ ಬಾಳ ಚಳಿ ಬಡದಾಗ ಎಚ್ಚತ್ತು ಕಣ್ಣಾಡಿಸಿದ. ಮೈ ತೊಯ್ದಂಗಾಗಿ ನಮ್ಮಾಗಿತ್ತು. ಬೆಳಕು ಹರಿಯಲು ಬಂದಂಗಿತ್ತು. ಆದರೆ ಎತ್ತಗನ್ನ ನೋಡು ಅರೆಬೆಳ್ಳಗ ಕಾಣಲು ಸುರುವಾಯ್ತು. ಗಾಬರಿಯಾಗಿ ತನ್ನ ಮನೆ ಸುತ್ತ ತಿರುಗಿದ. ಜೀವ ತಡಿಲಾರದೆ, ಎರಡು ವರ್ಷದಿಂದ ತನ್ನ ಮನೆ ಸುತ್ತ ನೆಟ್ಟಿದ ನಾಕೈದು ಗಿಡಗಳು ಜೀವ ಹಿಡಕಂಡು ನಿಂತಿದ್ದವು. ಅವುಗಳನ್ನು ಮುಟ್ಟಿ ಮುಟ್ಟಿ ನೋಡಿದ. ತಣ್ಣಗಿದ್ದವು ನೀರು ನೀರು. ‘ದುಮದರಿ ಎದ್ದಾದ ಏನ?’ ಅನಕಂಡ. ಹನ್ನೆರಡು ಮಾರು ದೂರಿದ್ದ ಶಾಂತಗೌಡನ ಕರೆಕಲ್ಲಿನ ದೊಡ್ಡಮನೆಯ ಬೆನ್ನುಗ್ವಾಡೆ ಕಾಣಲಿಲ್ಲ, ಹಿಂದಿದ್ದ ಕೇರಿ ಗುಡಿಸಲುಗಳು ಕಾಣಲಿಲ್ಲ. ತಾಯಮ್ಮನ ಓಣ್ಯಗಿದ್ದ ದೊಡ್ಡ ಬೇವಿನ ಮರ ಯಾವ ದಿಕ್ಕಿಗಿದೆ ಅಂತ ಅನುಮಾನ ಬಂತು. ದನಕರ, ನಾಯಿ, ಕಾಗಿ, ಗುಬ್ಬಿ ದನಿಮಾಡುವುದು ಕೇಳಿಸುತ್ತಿದ್ದವು. ಕೇರಿಯಿಂದ ದನಿಗಳೂ ಕೇಳಿಸಿದವು. ಊರವರು ಮನೆಮಾಳಿಗೆ ಮ್ಯಾಗ ನಿಂತು ಮಾತಾಡಿದಂಗ ದನಿ ಬರುತ್ತಿದ್ದವು. ಮನೆ ಬಾಗಿಲು ಮುಚ್ಚಿಕೊಂಡು ಕೇರಿಕಡೆ ಬಂದ. ಸಮೀಪ ಸಮೀಪ ಬಂದಂಗೆಲ್ಲ ಬಸ್ಸಪ್ಪನ ಗುಡಿಸಲು ಕಂಡಿತು. ನಾಯಿಗಳು, ಕೋಳಿಗಳು ಹೆಂಗೆಂಗೋ ನೋಡಿಕಂತ ನಿಂತಲ್ಲೇ ನಿಂತಿದ್ದವು. ದನಕರುಗಳು ಎತ್ತೆತ್ತಗೋ ಮುಖಮಾಡಿ ಬಾಲ ಬೀಸುತ್ತಿದ್ದವು. ದಟ್ಟವಾಗಿ ಹೊಗೆ ತುಂಬಿದಂಗ ‘ದುಮದರಿ’ ತುಂಬಿತ್ತು.
‘ಬಾ ದುರ್ಗಣ್ಣ, ಬಾ ಬಾ! ದುಮದರಿ ಎದ್ದಾದ’ ಅಂದು ಕರೆದ, ಬಸಪ್ಪ.
‘ಹೌದು! ಹೆಂಗಾದ ನೋಡು, ಮುಂದಿದ್ರ ನಿನ್ನ ಮನೆ ಕಾಣವಲ್ದು!’ ಅನಕಂತ ಬಂದು ಕುಂತ, ಬಸ್ಸಪ್ಪ ಅರೆ ಹೊತ್ತಿಗೇ ಚಿಮಣಿ ಬೆಳಕಿನ್ಯಾಗ ಬಾಣ್ಣಿ ಹುಡ್ಯಾಕ ಹತ್ತಿದ್ದ.
‘ಅರೆಹೊತ್ತಿಗೆ ಕುಂತಿದ್ದಿ…’
‘ಹಾಯ್… ಇದು ಬೇಸಾದ್ನೋಡು! ನೀನೇ ಹೇಳಿ ಹೋಗಿದ್ದಿ.’
ದುರುಗನಿಗೆ ನೆಪ್ಪಿರಲಿಲ್ಲ. ಈಗ ವಾರದಿಂದ ಶಾಂತಗೌಡ ಹೇಳಿಕಳಿಸಿದ್ದ. ಅಲ್ಲಲ್ಲಿ ಸುತ್ತಮುತ್ತ ಮಳೆ ಬರುತ್ತಿತ್ತು. ನಮ್ಮ ಸೀಮೆಗೆ ಮಳೆ ಬಂದ್ರೆ ಬೀಜ ಬಿತ್ತಿದರಾಯ್ತು ಅಂತಂದಿದ್ದ. ಈ ವರ್ಷ ಮಾರ್ನಾಮಿ ಬಂದು ಹೋದರೂ ಮಳೆಯಿದ್ದಿಲ್ಲ. ಅದ್ಕ ಹೊಲಗುಳು ಬೀಜ ಕಂಡಿದ್ದಿಲ್ಲ. ದೇವುರು ಮಾಡದ್ಕ ಏನಾದ ಅಂತ ಊರುಕೇರಿ ಮಂದಿ ಬಾಡಿಹೋಗಿದ್ದರು. ‘ಅದೇನೋ ತುಪಾನು ಬಂದದಂತ ಮಳೆ ಬರಾಕ ಹತ್ಯಾದಲ್ಲ. ಅದರಿಂದನೇ ಮಾಡ ಮುಚ್ಚಿಗಂಡಾದ. ತೂಪ್ರಿ ತೂಪ್ರಿಯಂತೂ ಬಿಳಾಕ ಹತ್ಯಾದ. ಮಳೆ ಬಂದ್ರೂ ಬಂತ! ದುರಗಾ, ಹೊಲಗಳನ್ನು ಹೊಲಗಳನ್ನು ಯಾಕ ಕಾಲಿ ಬುಡಬೇಕು? ಬೀಜ ಕಾಣಿಸಿದ್ರಾಯ್ತು. ನಮ್ಮ ಹಿರೇರು ಮೂಲೆಕಾರ್ತ್ಯಾಗ ಬಿತ್ತಿ ಕೂರಿಗೆಗೆ ಮೂರು ಖಂಡುಗ ಜ್ವಾಳ ಬೆಳಕಂಡಾರಂತ! ನಮ್ಮ ಕಾಲದಾಗ ನಾವೂ ಯಾಕ ಅಂಥ ಕಾಲನ್ನ ನೋಡಿ ಅನುಭವುಸುಬಾರ್ದು ಹೇಳು? ಅಂಗ ನೋಡಿದ್ರ ಇದು ಕೆಡುಗು ಮಳೆ!’ ಶಾಂತಗೌಡ ಹುರಪಿಲೆ ಹೇಳಿದ್ದ. ಬೀಜ ಬಿತ್ತಲು ಸಜ್ಜಮಾಡಿ ಇಟಗಂಡಿದ್ದ ಕೂರಿಗಿ ಸಾಮಾನದಾಗ ಎಲ್ಲ ಸರಿಯಿದ್ದುವು. ಬಾಣ್ಣಿನ್ನ ಇಲಿಚಮ್ಮು ಕೆಡುದು ಬುಟ್ಟಿತ್ತು. ಅದಕಂಡು ಶಾಂತಗೌಡ ಬಸ್ಸಪ್ಪಗ ಬಾಣ್ಣಿ ಮಾಡಿಕೊಡು ಅಂತ ಹೇಳಿದ್ದ.
ಇದನ್ನು ಓದಿದ್ದೀರಾ?: ನೇಮಿಚಂದ್ರ ಅವರ ಕತೆ | ಹೊಸ ಹುಟ್ಟು
‘ಅಲ್ಲ ದುರ್ಗಣ್ಣ, ಈ ನಿಮಗೌಡುಗ ಏಟು ಆಸೆಯಿದ್ದಿತು. ಒಂದೇ ಹೆಣ್ಣು ಐತೆ. ಅದು ಕೊಟ್ಟಮನಿಗೆ ಹೋಗದು! ಗಂಡಿಲ್ಲ! ಆಸೆ ನೋಡಿದ್ರ ಬೆಟ್ಟದಂಗ…! ಅಲ್ಲ, ಒಂದು ವ್ಯಾಳ್ಳೆ ನಾಕೈದು ಗಂಡು ಹುಟ್ಟಿದ್ರ ಹೆಂಗ ಮಾಡ್ತಿದ್ದನೋ!’ ಅಂದ ಬಸ್ಸಪ್ಪ. ದುರುಗ ಮಾತಾಡಲಿಲ್ಲ ಸಲುಪೊತ್ತು ತಡುದು ಬಗಲಾಕ ಸರುದು ಬಸಪ್ಪ, ‘ನಿನ ಮಗ ಬಾದ್ದೂರ! ಓದಿಕೊಂಡದ್ದು ಸಾರ್ಥಕವಾಯ್ತು ನೋಡು. ಅಲ್ಲ, ನಡಿಲಿ ಬಿಡಲಿ ಆ ಮಾತು ಬ್ಯಾರೆ. ಅಕ್ಕಮ್ಮ… ಅದೇ ಸಣ್ಣಗೌಡಸಾನಿ ನಮ್ಮ ಚೆನ್ನನ್ನ ಮಾಡ್ಕೆಂತೀನಿ ಅಂದಾಳಂತಲ್ಲ ಅದೇ ಸಾಕು! ಅಲ್ಲ, ಅದು ಸಣ್ಣ ಮಾತೇನು? ನಮ್ಮ ಬಸ್ವಣದೇವುರು ಮಾಡ ಆಟಕ್ಕ… ನಮ್ಮ ಕೈಯಾಗೇನಾದ?’
ದುರುಗನಿಗೆ ಸಿಟ್ಟು ಬಂತು. ‘ಬಸ್ಸಪ್ಪ, ಅದೆಂಗ ಸಾಧ್ಯಾದಂತ…’ ನಡುವೆ ಬಾಯಿ ಹಾಕಿ. ‘ಯಾವ ಕಾಲಕ್ಕೆ ಏನು ನಡೀಬೇಕು ಅದು ನಡಿತಾದ! ಅಲ್ಲ, ನೀನು ಜೀವ ಗಟ್ಟಿಗಿ ಹಿಡಕಂಡಿರು!’ ಅಂದ. ಅಷ್ಟರಾಗ ಬಸ್ಸಪ್ಪನ ಹೇಣ್ತಿ ಹೊರಗ ಬಂದು ಚಾವು ಕೊಟ್ಟಳು. ದುರುಗ ಎದ್ದು ಬಾಯಿತೊಳಕೊಂಡು ಚಾವು ಕುಡಿಯತೊಡಗಿದ. ದುಮದರಿ ಕರಗಿದ್ದಿಲ್ಲ. ಸುತ್ತಮುತ್ತ ಕೇರಿ ತುಂಬ ದುಮದರಿ ಬಗ್ಗೆ ಬೆರಗಾಗಿ, ನನ್ಗ ನೀನು ಕಾಣದಿಲ್ಲ, ನಿನ್ಗ ನಾನು ಕಾಣದಿಲ್ಲ ಅಂತ ಕೇರಿ ಮಂದಿ ಚಿಕ್ಕೋರು ಮಾತಾಡುತ್ತಿದ್ದರು. ಆಕೆ ಗುಡಿಸಲು ಈಕೆಗೆ ಕಾಣವಲ್ದು. ಈಕೆ ಗುಡಿಸಲು ಆಕೆಗೆ ಕಾಣವಲ್ದು ಅಂತ ಮಾತಾಡಿಕೊಂಡೇ ಬೆಳಗಿನ ಬದುಕಿಗೆ ನಿಂತು ಬುಟ್ಟಿದ್ದರು. ಚಿಕ್ಕೋರು ಮಾತ್ರ ದುಮದರಿ ಒಳಗನೇ ಕಣ್ಣು ಮುಚ್ಚಾಟ ನಡಿಸಿದ್ದವು. ‘ಚೆನ್ನ ಬಂದಿದ್ನಲ್ಲ… ಹೋದ್ನಾ?’ ಬಸ್ಸಪ್ಪನ ಹೇಣ್ತಿ ಕೇಳಿದಳು.
‘ಹೋದ’ ಅಂದ ದುರುಗ.
‘ಪಾಡಾಯ್ತು ಬುಡು! ಮತ್ತೆ ಬರಾದು ಬ್ಯಾಡ! ಓದಿಕೊಂಡಾನ, ಕೆಲಸ ಸಿಕ್ಕಾದ. ರಾಜ ಇದ್ದಂಗ ಇರದು ಬುಟ್ಟು… ಹೌದಲ್ಲೇನಣ್ಣ? ನಮಗ್ಯಾಕಬೇಕು? ಲೋಕದಾಗ ನಡಿವಲುದ್ದು ಮಾಡಾಕ ಹೋಗಿ ನಿನ್ನ ಜೀವುಕ್ಕ ನಿರುಮ್ಮುಳ ಇಲ್ದಂಗ…’
‘ಸುಮ್ಮಿರು ಸುಮ್ಮಿರು’ ಅಂತ ಬಸ್ಸಪ್ಪ ಹೇಣ್ತಿಗೆ ಗದಿರಿಸಿದ.
ದುರುಗ ಎದ್ದು ನಡೆದ. ಕುಂತರೆ ಸಮಾದಾನಿಲ್ಲ, ನಿಂತರಿಲ್ಲ. ಶಾಂತಗೌಡುಗ ಈ ಸುದ್ದಿ ಕಿವಿಗೆ ಬಿದ್ದಿತೋ ಏನೋ, ಆವತ್ತು ದುರುಗನಿಗೆ, ‘ದುರುಗಾ, ನಿನ್ನ ಮಗ ಚೆನ್ನಾ… ಅವುನು ನನ್ಗೂ ಮಗ’ ಅಂದ.
‘ಊರಿನ ಮಗ ಅನ್ನು, ಶಾಂತಪ್ಪ’ ಅಂತ ಬಗಲಾಗಿದ್ದ ಸೂಗಪ್ಪ ಮಾಸ್ತಾರ ಸೇರಿಸಿದ್ದ.
‘ನಾನು ಅವುನಿಗೆ ಬೇಕಾದಟು ಸಹಾಯ ಮಾಡೀನಿ’ ಶಾಂತಗೌಡನ ಮಾತಿಗೆ,
‘ಯಪ್ಪ, ಈಗ ಇಲ್ಲಂತ ಯಾರಂದಾರ,’ ಅಂದ ದುರುಗ.
ಇದನ್ನು ಓದಿದ್ದೀರಾ?: ಜಯಂತ ಕಾಯ್ಕಿಣಿ ಅವರ ಕತೆ | ಅಮೃತಬಳ್ಳಿ ಕಷಾಯ
‘ನೀನಿದ್ದಂಗ ನಿನಮಗ ಇಲ್ಲ. ದುರುಗಾ… ಅವುನು ಉಂಡ ಗಂಗಾಳದಾಗ ಉಚ್ಚೆವಯ್ಯಾಕ ನಿಂತಾನ! ನಮ್ಮ ಮನೆತನಕ ಮಸಿ ಬಳ್ಯಾಕ ನಿಂತಾನ! ದುರುಗ… ನೀನು ಅವುನಿಗೆ ಹೇಳು. ನಿನ್ನ ಮಾರೆ ನೋಡಿ ಸುಮ್ನಿನಿ! ಇಲ್ಲಂದ್ರ…’ ಅಂತ ಉರಿದೆದ್ದು ಮಾತಾಡಿದ. ದುರುಗ ಅದಕಂಡು ನೀರೊಡೆದು ಬುಟ್ಟ! ತನ್ನ ಹೆಂಡೆ ಮನಿಗೆ ಬಂದ. ಮಗನ್ನ ಮಾತಾಡುಸುವ ಧೈರ್ಯ ಬರವಲ್ತು. ಬಂಡ ಧೈರ್ಯಮಾಡಿ ‘ಜನ ಏನ ಅಂಬಾಕ ಹತ್ಯಾರಲ್ಲ ಚೆನ್ನ… ಕರೆವೇನು’ ಅಂತ ಕೇಳಿದ. ಇಷ್ಟು ಕೇಳಬೇಕಂತ ಆ ಸುದ್ದಿ ಊರು-ಕೇರಿ ತುಂಬಿದಾಗಿನಿಂದ ಪ್ರಯತ್ನ ಮಾಡಿ ಬಾಯಿತನಕ ಬಂದ ಮಾತು ಎದ್ಯಾಗೇ ಕುಂತು ಕುದಿತ್ತಿತ್ತು.
‘ಯಪ್ಪ, ನೀನೇ ಅಂತಿದ್ಯೆಲ್ಲ… ಹಣೆ ಬರದಾಗ ಬರುದ್ದದ್ದು ತಪ್ಪಸಾಕ ಬ್ರಹ್ಮ ಬಂದ್ರೂ ಸಾದ್ದಿಲ್ಲ ಅಂತ…’ ಅಂದ ಮಗ.
‘ಅಂದ್ರೆ?’ ದುರುಗನಿಗೆ ಸಿಟ್ಟು ಬಂತು.
‘ಏನಾಗಬೇಕು ಅದಾತಾದ…’ ಚೆನ್ನ ಅಂದದ್ದೇ ತಡ, ‘ಇದೇನು ಬಸ್ಸಣ್ಣಪ್ಪನ ಕಾಲ ಏನಲೇ? ಚಪ್ಲಿ ಹೊಲಿವ ಕೈಯಿಗೆ ಲಿಂಗ ಬರದ್ಕಾ!’ ಅಂತ ಚೀರಿದ್ದ. ಚೆನ್ನ ಸುಮ್ಮನಾದ. ಮರುದಿನ ಚೆನ್ನ ಊರಿಗೆ ಹೋಗಲು ನಿಂತಾಗ, ‘ಯಪ್ಪ, ನೀನೂ ಬಂದು ಬಿಡು’ ಅಂದ. ಹಿಂಗ ಕರದುದ್ದು ನೂರಾ ಒಂದನೆ ಸಲ ಇರಬೇಕು. ದುರುಗ ಮಗನನ್ನೆ ಗಟ್ಟಿಯಾಗಿ ಅಪ್ಪಿಗೊಂಡು, ‘ಚೆನ್ನ… ಚೆನ್ನಮಲ್ಲಯ್ಯಾ, ನಿಮ್ಮಮ್ಮ ಚಂದವ್ವ ಕೇಳಲಿಲ್ಲಲೋ ಈ ನಿನ್ನ ಮಾತನ್ನ! ಕೋಡಿ ಜಲುಮ ಜಲ್ದಿ ಮಣ್ಣಾಗ ಬಿತ್ತು! ಯಪ್ಪ, ಮಗನೇ ನನ್ಗ ಈ ಊರು, ಆ ತುಂಗಮ್ಮನ ನೀರು, ಊರು ಕೇರಿ, ಈ ಮಂದಿನ್ನ ಬುಟ್ಟಿ ಬರಬೇಕಾಗವಲ್ದೊ’ ಅಂತ ಕಣ್ಣೀರು ತಂದು, ‘ಚೆನ್ನಮಲ್ಲಯ್ಯ, ಗೌಡ್ರು ಸಾವಾಸಾಬುಟ್ಟು ನೀನು ತಣ್ಗಿರು. ನೋಡು ಮಗ, ಮತ್ತೆ ಈ ಊರಿಗೆ ಬರಬ್ಯಾಡ. ಏನಾದಿಲ್ಲಿ? ನನ್ಗ ಇಲ್ಲಿ ಬುಡದ ನಂಟಾದ. ನಾನು ಇಲ್ಲಿ ಬೇಸಿರಬೇಕಂದ್ರ… ನೀನು ಬರಬ್ಯಾಡ’ ದುಕ್ಕಿಸಿ ಅಂದ. ‘ಬರ್ತೀನಿ, ಬರ್ತೀನಪ್ಪ!’ ಅಂತ ಬಿರುಸುಲೆ ಅಂದು ಸಣಮಾಡಿ ಹೋಗಿಬುಟ್ಟಿದ್ದ. ಹೋಗದು ನೋಡಿಕಂತ ನಿಂತುಬುಟ್ಟ, ದುರುಗ…! ದುರುಗನಿಗೆ ಚೆನ್ನ ಹುಟ್ಟಿದ ಮ್ಯಾಲೆ ಮುಂದ ಮಕ್ಕಳಾಗಲಿಲ್ಲ. ಚೆಂದವ್ವಗ ಚೆನ್ನನ್ನ ಬೆಳಸಿದ್ದೇ ಸಾಕೆಂದುಕೊಂಡಳು. ಚೆನ್ನನ್ನ ನೋಡಿ ಸೂಗಪ್ಪ ಮಾಸ್ತಾರ ತನ್ನ ಗುಡಿಶಾಲ್ಯಾಕ ಕರಕಂಡು ಓನಾಮ ಸುರು ಮಾಡಿದ್ದೇ ಒಂದು ಪವಾಡ ಅನಬೇಕು. ಆ ಊರಿನ ಇತಿಹಾಸದಾಗ ಮಾದರವುನ ಮಗ ಒಬ್ಬನೂ ಓನಾಮಕ್ಕೆ ಕಣ್ಣು ಬಾಯಿ ತೆರೆದು ನಿಂತಿದ್ದು ಇರಲಿಲ್ಲ. ಶಾಂತಗೌಡನ ಕಾಸಾ ಮನುಷ್ಯ ದುರುಗ ಅಂಬೋ ಕಾರಣಕ್ಕೋ, ದುರುಗನ ಮ್ಯಾಲಿನ ಕಕ್ಕುಲಾತಿಗೋ ಸೂಗಪ್ಪ ಮಾಸ್ತಾರ ಚೆನ್ನನಿಗೆ ಅಕ್ಷರ ತಿದ್ದಿಸಿದ. ಉಳಿದ ಚಿಕ್ಕೋರಿಗಿಂತ ಜಲ್ದಿ ಅಕ್ಷರ ಬರೆದು ತೋರಿಸುತ್ತಿದ್ದುದ್ದೇ ಒಂದು ಖುಷಿ ಸಂಗತಿಯಾಗಿ, ‘ಮಾದರ ಹೊಟ್ಯಾಗ ತಪ್ಪಿ ಹುಟ್ಟ್ಯಾನ ಮಗ!’ ಅಂತ ತಲಿಗೆ ಕೋಲು ತಗಂಡು ಟಪ್ ಅಂತ ಜಡಿತಿದ್ದ. ‘ದುರುಗ ಇವುನಿಗೆ ವಿದ್ಯಾ ಹತ್ತತಾದ. ಸರಕಾರಿ ಶಾಲಿಗೆ ಹಾಕಿ ಬುಡು’ ಅಂದ ಸೂಗಪ್ಪ ಮಾಸ್ತಾರ. ದುರುಗನಿಗೆ ಮೈತುಂಬಿ ಬಂತು! ಶಾಂತಗೌಡನ ಕಡೆ ನೋಡಿದ. ಅದು ಸುಭಗಳಿಗೆ ಇರಬೇಕು. ‘ಹುಂ… ಕಳುಸು. ನಾಕಕ್ಷರ ಕಲಿಲಿ’ ಅಂದ. ಈ ಊರಾಗ ಸರಕಾರಿ ಶಾಲೆ ಇರಲಿಲ್ಲ. ಹರದಾರಿ ಮ್ಯಾಗಿನ ಆ ಕಡೆ ಊರಾಗಿತ್ತು. ಸೂಗಪ್ಪ ಮಾಸ್ತರನೇ ಕುದ್ ಹೋಗಿ ಹೆಸರು ದಾಕಲು ಮಾಡಿ ಬಂದ. ಒಂದೊರ್ಷ ದುರುಗನೇ ಹೊತಗಂಡು ಹೋಗಿ ಬುಟ್ಟು ಬಂದ್ರ, ಸಂಜಿಮುಂದ ಕೈಕಾಲಿದ್ದರೆ ದುರುಗನೇ ಹೋಗಿ ಹೊತಗಂಡು ಬರ್ತಿದ್ದ. ಇಲ್ಲಂದ್ರ ಚಂದವ್ವ ಹೋಗುತ್ತಿದ್ದಳು. ಚಂದವ್ವ ಸಂಜಿಯಿಂದ ಚೆನ್ನನ್ನ ಹೆಗಲಮ್ಯಾಲ ಕೂಡಿಸಿಕೊಂಡು ಚಂದಾಗಿ ಪದ ಹಾಡುತ್ತ ದಾರಿಗುಂಟ ಸಾಗಿದರೆ, ಚೆನ್ನ ಹೆಗಲಮ್ಯಾಲಿಂದ ಚಪ್ಪಾಳೆ ಹೊಡಕಂತ ತಾನೂ ಮೊದಲು ಗುನುಗುತ್ತ, ಪಕ್ಕನೇ, ‘ಯಮ್ಮಾ ಯಮ್ಮಾ ಗಾ…ಗಾ…ಅಲ್ಲಿ’ ಅಂತ ತಾಯಿನ್ನ ಕರುದು ಮುಳುಗುವ ಕೆಂಪನೆ ದುಂಡಗಿನ ಸೂರಿಯನ್ನ ತೋರಿಸಿ ನಿಲ್ಲಿಸಿ ಬುಡುತ್ತಿದ್ದ! ಚಂದವ್ವ ಅದಕಂಡು, ತಾನು ಚೆನ್ನನನ್ನು ಹಡದಾಗ ಹೊರಸಿನ ಬುಡುಕ ಕಾಯಿಸಿಕೊಳ್ಳಲು ಕಪ್ಪರದಾಗ ಇಡುತ್ತಿದ್ದ ಕುಳ್ಳಿನ ಕೆಂಡ ಕಂಡಂಗ ಸೂರಿಯ ಕಂಡ. “ಯಮ್ಮೋ… ಅದು ಎಲ್ಲಿಗೆ ಹೋಗತಾದ?’ ಅಂತ ಚೆನ್ನ ಕೇಳಿದರೆ, ‘ತಾಯಿ ಮನಿಗೆ ಹೋಗ್ತಾನ’ ಅಂತ ಹೇಳುತ್ತಿದ್ದಳು. ಅದು ಬಿಟ್ಟು ಮೂರನೆ ವರ್ಷದಿಂದ ಚೆನ್ನನೇ ಹೋಗಿ ಬರತೊಡಗಿದ. ರಾತ್ರಿ ತಾಸತ್ತು ಚೆನ್ನಗ ಸೂಗಪ್ಪ ಮಾಸ್ತರ ಲೆಕ್ಕ ಹೇಳ್ತಿದ್ದ. ವಚನ ಓದಿ ಹೇಳಿದ್ದ. ಬರುಬರುತ್ತಾ ಜೈಮಿನಿ ಭಾರತ, ಬಸವಪುರಾಣ, ಗಿರಿಜಾಕಲ್ಯಾಣ ಮುಂತಾದ ಕಾವ್ಯಗಳನ್ನು ಓದಿ ಹೇಳಿದ್ದ. ಚೆನ್ನ ಕೇಳಿ, ಓದಿ ಮನನ ಮಾಡಿಕೊಂಡಿದ್ದ. ದುರುಗ ಸುಮ್ಮುನೆ ಕುಂತು ಕೇಳಿ, ಮುಗುದಮ್ಯಾಲೆ ಚೆನ್ನನ್ನ ಗುಡಿಸಿಲಿಗೆ ಕರೆಕಂಡು ಬರ್ತಿದ್ದ. ಹಿಂಗೇ ಚೆನ್ನ ಓದಿದ. ಮೆಟ್ರಿಕ್ ಮುಗಿಸಿದ. ಶಾಂತಗೌಡ ಸಹಾಯ ಮಾಡಿದ. ಆಮ್ಯಾಲೆ ಕಾಲೇಜಿಗೆ ಹೋಗಿ ನಿಂತ. ಚೆನ್ನ ಊರಿಗೆ ಬಂದ್ರ ಶಾಂತಗೌಡುನ್ನ ಕಾಣ್ತಿದ್ದ. ಆ ಕರೆಕಲ್ಲಿನ ದೊಡ್ಡಮನ್ಯಾಗ ಎತ್ತಿನಂಕಣದಾಗ ಕುಂತು ನಾಕು ಮಾತಾಡಿ ಬರ್ರಿದ್ದ. ಅದು ಬರ್ತಾ ಬರ್ತಾ ಚೆನ್ನಗ ಸರಿಬರ್ಲಿಲ್ಲ. ದುರುಗನ ಮಾತಿಗೆ ಕಟ್ಟುಬಿದ್ದು ಹೋಗಿದ್ದ ಅಷ್ಟೇ. ಚೆನ್ನನಿಗೆ ಚಂದವ್ವ-ಶಾಂತಗೌಡನ ಸಂಬಂಧ ಗೊತ್ತಿದ್ದರೂ, ಅದು ಬರುಬರುತ್ತ ಮರ್ಮಕ್ಕೆ ತಟ್ಟಲು ಶುರುಮಾಡಿತ್ತು. ಆದರೆ ಆ ಹೊತ್ತಿಗೆ ತಾಯಿ ಹೊಟ್ಟೆಬ್ಯಾನೆ ಅಂತ ವಾರ ಒಪ್ಪತ್ತು ಹಿಡಕ್ಕಂಡು ನರಳಿ ನರಳಿ ಕೊನೆಗೊಂದು ದಿನ ಸತ್ತಳು. ಸತ್ತಾಗ ಚೆನ್ನ ಗಂಭೀರವಾಗೇ ಇದ್ದು ಮಣ್ಣುಕೊಟ್ಟು ಹೋಗಿದ್ದ. ಸೂಗಪ್ಪ ಮಾಸ್ತಾರ ಅಭಿಮಾನದಿಂದ, ‘ದುರುಗಾ, ನಿನ್ನ ಮಗ ಬೆಳೆದು ಬುಟ್ಟಾನ, ನೋಡು. ನಿನ್ನ ಮಗ ತಾಯಿ ಸತ್ತಾಗ, ಅದೆಂಗ ಗಂಭೀರವಾಗಿ ಇದ್ದು ಮಣ್ಣಿಗೆ ನಿಂತಿದ್ದ. ಅದೇ ನೀನು… ಚಿಕ್ಕೋರು ಅತ್ತಂಗ ಅಳುತ್ತಿದ್ದೆ. ಬದುಕಿನ ಮರ್ಮ ಏನಂಬದು ಅವುನಿಗೆ ಗೊತ್ತು. ಯಾರು ಶಾಶ್ವತ ಹೇಳು? ಇದೆಲ್ಲ ತಿಳಕಂಡವುರು ಈ ಸಾವಿಗೆ ಅಳ್ಳಾಡದಿಲ್ಲ. ನಿನಮಗ ಬುದ್ಧಿವಂತ’ ಅಂತ ಹೇಳಿದ್ದ. ಅದಾಗಿ ವರ್ಷ ತಿರುವುದರಾಗ ರಾಯಚೂರಾಗ ಅಕ್ಕಮ್ಮ ಓದುವ ದೊಡ್ಡಶಾಲ್ಯಾಗ ದೊಡ್ಡ ಮಾಸ್ತಾರಾಗ್ಯಾನಂತ ಸುದ್ದಿ ಬಂತು. ಊರು ಕೇರಿ ಮೊದಲು ಮಾಡಿ ಬೆರಗಾಯಿತು. ಚೆನ್ನ ಆಗಾಗ ತಂದೆ ಸಲುವಾಗಿ ಊರಿಗೆ ಬರ್ತಿದ್ದ. ಒಮ್ಮೆ ದುರುಗನ್ನ ಕರಕಂಡು ಹೋದ. ಅಲ್ಲಿ ತಿಂಬದ್ಕ, ಉಂಬದ್ಕ, ತೊಡದ್ಕ, ಇರದ್ಕ ಯಾವುದಕ್ಕೂ ಕಮ್ಮಿ ಇರಲಿಲ್ಲ. ಆದರೂ ದುರುಗನಿಗೆ ಅಲ್ಲಿ ಬಗೆಹರಿಲಿಲ್ಲ. ಇತ್ತಗ ದುರುಗ ಇಲ್ಲದಕ್ಕೆ ಶಾಂತಗೌಡುಗ ಹುಚ್ಚು ಹಿಡಿದಂಗಾಗಿತ್ತು. ಗಳಿಗೆಗೊಮ್ಮೆ ‘ದುರುಗಾ’ ಅಂದರೆ, ‘ಯಪ್ಪೋ’ ಅಂತ ಅವರಿಬ್ಬರ ನಡುವೆ ಮಾತು ನಡೆದರೇನೇ ತಿಂದ ಕೂಳು ಅರಗುವುದೂಂತ ತಿಳಕಂಡಿದ್ದರು. ‘ಚೆನ್ನಮಲ್ಲಯ್ಯಾ, ನಾ ಊರಿಗೆ ಹೋಗ್ತಿನಿ. ನೀನು ತಣ್ಣಗಿರು. ನನ್ನ ಆ ಊರು. ಆ ತುಂಗಮ್ಮನ ನೀರು, ಶಾಂತಗೌಡುನ್ನ, ಸೂಗಪ್ಪ ಮಾಸ್ತರನ್ನ ಬುಟ್ಟಿರಾಕ ನನ್ಗ ಒಲ್ಲೆ ಅನಸ್ತದ’ ಅಂತ ಅಂದು ಓಡಿ ಬಂದು ಬುಟ್ಟಿದ್ದ. ಊರಿಗೆ ಬಂದು ನಿಂತಗಂಡಾಗಲೇ ದುರುಗನಿಗೆ ಸಲಿಸಾಗಿ ಉಸುರಾಡಿತ್ತು…
ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ
ದುರುಗ ಬಸ್ಸಪ್ಪನ ಮನೆಯಿಂದ ಎದ್ದು ನಡೆದು ಏನೇನೋ ನೆನಿಸಿಗಂತ ಹೊಂಟಿದ್ದ. ಶಾಂತಗೌಡನ ನಾಯಿ ಕುಂಟಿಗಂತ ಬಂದು ಕುಂಯ್ ಕುಂಯ್ ಅಂತ ದುರುಗನ ಕಾಲಿಗೆ ಬಂದು ತಿಕ್ಕಿ ಕುಂತಿತು. ಅದರ ಕಾಲಿಗೆ ಹೊಡೆತ ಬಿದ್ದಿತ್ತು. ನೋಡಿ ‘ಏನಾಯ್ತು? ಯಾರು ಹೊಡದ್ರು….’ ಅಂತ ನೋಡಿದ. ದುಮದರಿ ಒಳಗ ಯಾರೂ ಕಾಣ್ಣಿಲ್ಲ.
2
‘ನೋಡು ಶಾಂತಪ್ಪ ಮ್ಯಾಲಿಂದ ಮ್ಯಾಲೆ ದುರುಗನಿಗೆ ಚುಚ್ಚುಮಾತು ಆಡದ್ರಿಂದ, ಬಯ್ಯದ್ರಿಂದ ಏನು ಮಾಡ್ಡಂಗಾಯ್ತು ಹೇಳು? ಪಾಪ… ಅವುನು, ‘ನನ್ನ ಕೈಯಾಗೇನಾದ ಯಪ್ಪೋ! ನನ್ನ ಮಗ ಚೆನ್ನಗ ಬೈದು ಹೇಳೀನಿ, ತಿಳಿಸಿ ಹೇಳೀನೀ ಕಾಲು ಹಿಡಕಂಡು ಹೇಳೀನಿ’ ಅಂದು ಹೇಳಿದ್ನಲ್ಲ. ಹೋಗ್ಲಿ, ನೀನು ದುರುಗನಿಗೆ ಅಷ್ಟೆಲ್ಲಾ ಮಾಡಿ ಏನು ಪಡಕಂಡಿ? ಛೇ ನಿನ್ಗ ಬುದ್ದಿ ಐತೇನು? ದುರುಗ ನಿನ್ಗ ಹೇಣ್ತಿನ್ನ ಕೊಟ್ಟು ನುಂಗಿಕೊಂಡಿದ್ದ! ಅವುನು ಬೆಳೆಸಿದ ಗಿಡಗಳನ್ನ ಕಡುದು ನೀನು ಮನೆ ತುಂಬ ಬಂಡಿ, ಗಳೇವುದ ಸಾಮಾನು ತುಂಬಿಕೊಂಡಿ. ಆಗ ಅವುನು ಅನುಭವಿಸಿದ ನೋವು ಸಣ್ಣದಲ್ಲ! ನಿನ್ಗ ಏನನ್ನ ಅದು ತಗುಲಿತೇನು? ಸಾವಿರಾರು ಸಲ ತುಂಗಮ್ಮನ್ನ ಹೆಗಲಮ್ಯಾಲ ಹೊತಗಂಡು ನಡದಾನ. ಛೇ… ಅವುನು ನಿನ್ಗ ಮಾಡಿದ್ದು ಬಾಳಾದ! ಅಂಥವುನು ಒಬ್ಬ ದುಡಿವಾ ಮನುಷ್ಯ ನಿನ್ಗ ಸಿಕ್ಕನಂತ ಈ ಮನೆಯ ವತನ ಕಮ್ಮಗ ನಡದಾದ! ನೀನು ಏನು ಮಾಡಬೇಕಂದಿದ್ದಿ ಅದು ಚೆನ್ನಗ ಮಾಡು! ದುರುಗನ ತಂಟ್ಯಾಕ ಹೋಗಬ್ಯಾಡ ಮಾರಾಯ ಕೈ ಮುಗಿತೀನಿ!’ ಸೂಗಪ್ಪ ಮಾಸ್ತಾರ ಕೊನಿಗೆ ಉಸುರುಗಟ್ಟಂಗ ಸಿಟ್ಟಿನಿಂದ ಹೇಳಿ ಮಕ್ಕಂಡು ಬಿಟ್ಟಿದ್ದ. ಶಾಂತಗೌಡುಗ ಒಂದೇ ಸವುನೇ ಅವೇ ಅವೇ ಮಾತುಗಳು ಕಿವಿಗೆ, ಎದೆಗೆ ಬಡಿತಿದ್ದವು! ‘ಹೌದೌದು! ದುರುಗಾ ದೇವುರಂಥ ಮನುಷ್ಯ. ಅವುನಿಗೆ ಅಂಬದು ತಪ್ಪು’ ಅಂತ ಹತ್ತಾರು ಸಲ ಅನಕಂಡಿದ್ದರೂ ಶಾಂತಗೌಡುಗ ಸಮಾಧಾನವಿರಲಿಲ್ಲ. ಶಾಂತಗೌಡ ತನ್ನ ಕರೆಕಲ್ಲಿನ ದೊಡ್ಡಮನ್ಯಾಗ ಕುಂತು ಉರಿವ ಮನಸ್ಸಿನಿಂದ ಏನೇನೋ ಯೋಚಿಸುತ್ತ ಕುಂತಿದ್ದ. ರಾತ್ರಿ ಅದೆಷ್ಟತ್ತಾಗಿತ್ತೋ, ಶಾಂತಗೌಡ ಕುಂತ್ಗಂಡ ಮ್ಯಾಲೆ ಹನುಮಂತ, ಭೀಮಯ್ಯಗ ಮಕ್ಕಂಬಕ ಹೆಂಗ ಬಂದೀತು ಅಂತ ಅವುರು ತೂಕಡಿಸಿಗಂತ ಗ್ವಾದಿಲಿ ಒಳಗ ಕುಂತಿದ್ದವು. ಸೂಗಪ್ಪ ಮಾಸ್ತಾರಗ ನಿದ್ದಿ ತಗಂಡಿತ್ತು. ಶಾಂತಗೌಡನ ಜತೆಗೆ ಮಾತಾಡಿ ವಾದಮಾಡಿ, ಬುದ್ಧಿವಾದ ಹೇಳಿಯೇ ದಣುದು ಮಕ್ಕಂಡಿದ್ದನು. ಶಾಂತಗೌಡ ಕಾಲುಮಡಿಯಲು ಎದ್ದು ‘ದುರುಗಾ’ ಅಂದ. ಹನುಮಂತ, ಭೀಮಯ್ಯ ದಿಗ್ಗನೆದ್ದು ಕಂದೀಲು ಹಿಡಕಂಡು ಹೊರಗ ನಡೆದರು. ಇದು ಈ ರಾತ್ರಿ ಮೂರನೆ ಸಲವೋ ನಾಕನೆಯದೋ, ಕಾಲು ಮಡಿಯಲು ಎದ್ದಂಗೆಲ್ಲ, ‘ದುರುಗಾ’ ಅಂತ ಕರಿತಿದ್ದ. ‘ದುರುಗಣ್ಣ ಇವತ್ತು ತನ್ನ ಮನಿಗೆ ಮಕ್ಕಂಬಾಕ ಹೋಗ್ಯಾನಪ್ಪೋ, ಗೌಡ’ ಅಂತ ಇಬ್ಬರು ಹೇಳಿದರೂ ಪ್ರತಿಸಲ ‘ದುರುಗಾ’ ಅಂತನೇ ಕರಿತಿದ್ದ ಶಾಂತಗೌಡ, ಕಾಲುಮಡುದು ಒಳಗ ಬರುವಾಗ ಎತ್ತಿನಂಕಣ ದಾಟುವಾಗ ಹೆಂಡೆ ತುಳುದುಬುಟ್ಟ! ಅರಮಂಡಲಕ್ಕೆ ಬೆಂಕಿ ಹತ್ತಿ, ‘ಥುಥ್…ಲೇ ಎತ್ತಿನ್ನ ದಾರ್ಯಾಗ ಮಲಗಸಬ್ಯಾಡ್ರಿ ಅಂತ ಹೇಳಿದ್ರ ಕೇಳ್ತಿರೇನು?’ ಅಂತಂದು ಗಳೇವುದ ಸಾಮಾನಾಕುವ ಗುಣ್ಣಿಗೆ ಹೋಗಿ ಬಾರಕಲ್ಲು ಎಳಕಂಡು ಹೆಂಡೆ ಹಾಕಿದ ಎತ್ತಿಗೆ ಚಟ್ ಚಟ್ ಬಾರಿಸಿದ. ಉಳಿದ ಹನ್ನೊಂದು ಎತ್ತುಗಳು, ಆಕಳು, ಎಮ್ಮೆಗಳು, ಅವುಗಳ ಕರುಗಳು ಇದಕಂಡು ದಪದಪ ಎದ್ದು ಅತ್ತಗ ಇತ್ತಗ ಸರುದು ಬಾಲ ಬೀಸತೊಡಗಿದವು. ಹನುಮಂತ ಭೀಮಯ್ಯ ಅದಕಂಡು, ಅದೆಲ್ಲ ಮಾಮೂಲು ಅಂತ ಗೊತ್ತಿದ್ದರೂ ಭಯಗಂಡು, ‘ಬುಡಪ್ಪಗೌಡ’ ಅಂತ ಭೀಮಯ್ಯ ಕಂದೀಲಿ ಹಿಡಕಂಡು ಅಂದ. ಹನುಮಂತ ನೀರು ತಂದು ಕಾಲು ತೊಳದ. ಆಮ್ಯಾಲೆ ಪಡಸಾಲ್ಕಾಗ ಬಂದು ಕುಂತು, ‘ಎತ್ತುಗಳಿಗೆ ಮೇವು ಹಾಕ್ರಲೇ’ ಅಂದ. ಮೇವಾಕಿ ಅರ್ಧತಾಸು ಆಗಿರಲಿಲ್ಲ. ಮತ್ತೆ ಅಟ್ಟ ಏರಿ ಹಾಕಿದರು. ಕರ್ ಕರ್ ಕರ್ ಅಂತ ಮೆಯ್ಯಲು ತೊಡಗಿದವು. ಆ ಸಪ್ಪಳ ಮನೆ ತುಂಬಿಕೊಂಡಿತು. ಶಾಂತಗೌಡಗ ಸಮಾಧಾನ ಆಗಲಿಲ್ಲ. ಪಡಸಾಲೆಯಲ್ಲಿ ಅತ್ತಗ ಇತ್ತಗ ಅಡ್ಡಾಡತೊಡಗಿದ. ಕಾಲೆಳಕಂಡು ತಿರುಗಾಡುತ್ತ ಸೂಗಪ್ಪ ಮಾಸ್ತರಗ ಏನೋ ಹೇಳಲು ನೋಡಿದ. ಆತ ಮಕ್ಕಂಡಿದ್ದ. ತಾತಗ ವಯಸ್ಸಾಯ್ತು ಅಂತ ಅನಕಂಡ. ಮನೆ ಗುರು ಶಾಂತಗೌಡ ಏನು ಮಾಡಿದ್ರೂ ಈ ಗುರುವನ್ನ ಕೇಳ್ತಿದ್ದ. ಎತ್ತು ತಂದರೆ, ಬೀಜ ಬಿತ್ತಿದರೆ, ಯಾವುದೇ ಕಾರಣಕತೆ ನಡದರೆ ಶಾಂತಗೌಡ ಸೂಗಪ್ಪ ಮಾಸ್ತರನನ್ನ ಕೇಳಿಯೇ ಮಾಡುತ್ತಿದ್ದ. ಶಾಂತಗೌಡನ ಬಲಕ್ಕ ಸೂಗಪ್ಪ ಮಾಸ್ತಾರ ಇದ್ದರೆ, ಎಡಕ್ಕ ದುರುಗ ಇರ್ತಿದ್ದ. ಶಾಂತಗೌಡ ನಡುಕ ಹೋಗ್ತಿದ್ದ. ವಾರದಿಂದ ‘ಬಗಲಾಗಿರು ತಾತ’ ಅಂತ ರಾತ್ರಿಯೂ ಇಲ್ಲೇ ಮಕ್ಕಳಲು ಹೇಳಿದ್ದ. ತಾತ ತಪ್ಪು ಮಾಡಿದ. ಆ ಹೊತ್ತಿನಲ್ಲಿ ನನ್ಗೂ ತಿಳಿಲಿಲ್ಲ. ಚೆನ್ನನನ್ನ ಶಾಲಿಗೆ ಹಾಕಿಸಿದ್ದೇ ತಪ್ಪಾಯ್ತು. ನಾನು ಆ ಹೊತ್ತಿನಲ್ಲಿ ಬ್ಯಾಡ ಅಂದಿದ್ರ… ಇವತ್ತು ಇಂಥ ಗಂಡಾಂತರ ತರುತ್ತಿದ್ದಿಲ್ಲ. ಮತ್ತೆ ಇವತ್ತು ದುರುಗನಂಗ ನನ್ನ ಮನ್ಯಾಗ ದುಡುಕೊಂಡು ನಾನಾಕಿದ ಕೂಳು ತಿನ್ಕಂಡು ಬಿದ್ದಿರ್ತಿದ್ದ ನಾಯಿ ಬಿದ್ದಂಗ! ಹುಡುಗ ಬುದ್ದಿವಂತ ಆಗ್ತಾನ. ಓದ್ಲಿ ಬುಡು. ಚೆನ್ನ ಓದಿದ್ರ ನಾಳೆ ನಿನ್ನ ಉಪಯೋಗಕ್ಕೂ ಬರ್ತಾನ- ಅಂದ ಸೂಗಪ್ಪ ತಾತಾ! ಈಗ…? ಬಂದ್ನೋಡು ಕುತ್ತಿಗ್ಗೆ! ಬೂದೆಣ್ಣ ಅಂದುದ್ದೇ ಕರೆವು ಈ ಕುಲನ್ನ ಎಲ್ಲಿಡಬೇಕು ಅಲ್ಲೇ ಇಡಬೇಕು ಶಾಂತಪ್ಪ- ಅಂದ. ಆದರೆ ದುರುಗನ, ಚಂದವ್ವನ ಮಾರೆ ನೋಡಿ ಚೆನ್ನಗ ಓದಾಕ ಬೇಕಾದಟು ರೊಕ್ಕಕೊಟ್ಟ! ಅರೇ ಮೊನ್ನೆ ಎನಂದನಂತ… ‘ನಮ್ಮಪ್ಪ ದುಡುದಾನ. ನಮ್ಮವ್ವ ದುಡುದಾಳ, ಮಾರಿಕೊಂಡಾರ ಅವರಿಬ್ಬರು ಶಾಂತಗೌಡುಗ. ಮಾರಿಕೊಂಡದ್ದು ನೋಡಿದರೆ ಅದರ ರೊಕ್ಕ ಶಾಂತಗೌಡನ ಆಸ್ತಿನೆಲ್ಲ ಮಾರಿದರೆ ಸಾಲದು ನಮ್ಗ ತೀರ್ಸಾಕ! ವ್ಹಾರೇ ಮಗ್ನ… ಚೆನ್ನ’ ಅಂತ ಗಟ್ಟಿಯಾಗಿ ಅಂದು ಚಡಪಡಿಸುತ್ತ ಉರಿಯತೊಡಗಿದ!
ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್ ಕುಂಞಿ ಅವರ ಕತೆ | ಒಂದು ತುಂಡು ಗೋಡೆ
ಹೇಣ್ತಿ ಹಂಪಮ್ಮ ನೆಪ್ಪಾದಳು; ಚಂದವ್ವ ಕಣ್ಣುಮುಂದ ಬಂದಳು; ಅಕ್ಕ ರುದ್ರಮ್ಮ, ಮಗಳು ಕಣ್ಣು ಮುಂದೆ ನಿಂತರು. ಆದರೆ ಮನ್ಯಾಗ ಯಾರೂ ಇಲ್ಲ- ಅಂಬದು ಅರುವಾದಾಗ, ‘ನಾನೆಂಗ ಇಷ್ಟು ದಿನ ಒಂಟಿ ಬದುಕಿದೆ ಈ ಮನ್ಯಾಗ’ ಅಂದುಕೊಂಡ. ಶಾಂತಗೌಡುಗ ಈ ಪ್ರಶ್ನೆ ಎಂದೂ ಎದ್ದಿರಲಿಲ್ಲ. ‘ದುರುಗ ಇದ್ದಾನ, ಸೂಗಪ್ಪ ಮಾಸ್ತಾರ ಐದಾನ. ಚಂದವ್ವ ಇದ್ದಳು…’ ಅನಿಸಿದರೂ ತನಗ್ಯಾರೂ ಇಲ್ಲಲ್ಲ ಅಂಬುವದು ಮನಸ್ಸಿನಲ್ಲಿ ನಿಂತಾಗ ಶಾಂತಗೌಡನ ಶಕ್ತಿ ಇಳದಂಗಾಯ್ತು. ತೆಳ್ಳಗ, ಬೆಳ್ಳಗ, ಇದ್ದ ಹಂಪಮ್ಮ ನೆಪ್ಪಾದಳು. ಎಂದೂ ಹಣೆಮ್ಯಾಗಿನ ಇಬತ್ತಿ ಮಾಸುತ್ತಿರಲಿಲ್ಲ. ಆಕೆಗೆ ಸೂಗಪ್ಪ ಮಾಸ್ತಾರನೆ ದೇವರಾಗಿದ್ದ. ಪುರಾಣ, ಪುಣ್ಯಕಥೆ ಹೇಳುತ್ತಲೇ ಇರುತ್ತಿದ್ದ. ಈಕೆ ಕೇಳುತ್ತಲೇ ಇರುತ್ತಿದ್ದಳು. ಏಸುದಿನ ಕೇಳಿದರೂ ಆಕೆಗೆ ಬೇಸರಂಬದು ಸುಳಿದಿಲ್ಲ. ಶಾಂತಗೌಡನ ಯಾವ ವ್ಯವಹಾರದಾಗ ಆಕೆ ಕೈ ಹಾಕುತ್ತಿರಲಿಲ್ಲ. ಮದುವೆಯಾಗಿ ಆರು ವರ್ಷದ ಮ್ಯಾಲೆ ಒಂದು ಹೆಣ್ಣು ಹುಟ್ಟಿದ್ದೇ ಕಡೆಯಾಯ್ತು. ಶಾಂತಗೌಡ ಗಂಡು ಮಗನಿಗಾಗಿ ಆಶೆಪಟ್ಟು ಮತ್ತೊಂದು ಮದಿವೆಯಾಗದೇ ಇದ್ದದ್ದು ಪವಾಡ ಅನಬೇಕು. ಅಕ್ಕ ರುದ್ರಮ್ಮ ಇದಕಂಡು ಒಂದೆರಡು ಸಲ ಅಂದು ನೋಡಿದಳು. ಶಾಂತಗೌಡ ಮನುಸ ಮಾಡಿದ ಖರೆ, ಆ ಬಗ್ಗೆ ಯಾವುದಕ್ಕೂ ಮುಂದಾಗಲಿಲ್ಲ. ರುದ್ರಮ್ಮನೂ ಒತ್ತಾಯ ಮಾಡಲಿಲ್ಲ. ಹಂಪಮ್ಮನ ಮ್ಯಾಲೆ ಗೌರವಯಿದ್ದ ಆಕೆ ತಡಕಂಡಳು. ಬರುಬರುತ್ತ ರುದ್ರಮ್ಮ ತನ್ನ ಮಗನಿಗೆ ತಮ್ಮನ ಮಗಳನ್ನೇ ಮದುವೆ ಮಾಡದರಾಯಿತೆಂದು, ಶಾಂತಗೌಡನ ಆಸ್ತಿಗೆ ತಮ್ಮ ಮಗನೆ ವಾರಸ್ತಾನ ಆಗ್ತಾನ ಅಂಬ ಆಶೆಯ ಎಳೇ ಸುತ್ತಿಕೊಂಡು ಸುಮ್ಮನಾದಳು. ಮೇಲಾಗಿ ಶಾಂತಗೌಡುಗ ಚಂದವ್ವನ ಸಾವಾಸ ಮಾಡಿದ್ದೇ ತಡ ಹಂಪಮ್ಮ ಕದಡಿ ಹೋದಳು. ಚಂದವ್ವನ ಮ್ಯಾಲೆ, ದುರುಗನ ಮ್ಯಾಲೆ ಹಂಪಮ್ಮ ಬೆಂಕಿ ಕಾರತೊಡಗಿದಳು. ತಿಂಗಳೊಪ್ಪತ್ತು ಒಳಒಳಗೆ ಕುದ್ದಳು. ಇದಕಂಡು ಒಂದಿನ ಸೂಗಪ್ಪಾ ಮಾಸ್ತಾರ, ‘ಹಂಪಮ್ಮ, ಶಾಂತಪ್ಪ ಒಳ್ಳೆ ಮನುಷ್ಯವ್ವ. ಏನೋ ಕೆಟ್ಟಗಳಿಗೆ… ಆತನ ಹಣೆಬರದಾಗ ಅದು ಬರದಾದ ಅನಬೇಕು. ಅದಕ ಚಂದವ್ವನ ಸಾವಾಸ ಮಾಡ್ಯಾನ. ಆಳೋ ಗಂಡಿಗೆ ನೂರು ಹೆಣ್ಣುಗಳಂತ. ನೀನು ತಣ್ಣಗ ಈ ಮನ್ಯಾಗ ಮನೆ ಮುತೈದೆಯಾಗಿರು. ತಾಯಿ, ಹಂಗ ನೋಡಿದ್ರ ಚಂದವ್ವ ಎಷ್ಟಿದ್ದರೂ ಮನೆ ಹೊರಗೆ ಇರಬೇಕು. ಶಾಂತಪ್ಪ ಗಂಡಿಲ್ಲಂತ ಮತ್ತೊಂದು ಹೆಣ್ಣು ತಂದಿದ್ರ…? ಮನ್ಯಾಗ ಕಣ್ಣೆದುರಿಗೆ ನೋಡಬೇಕಿತ್ತಲ್ಲ. ಬಂದ ಹೆಂಗಸು ಹೆಂಗಿರತ್ತಿತ್ತೋ ಏನೋ! ಮಗಳ ತಾಯಾಗಿದ್ದಿ. ಬೇಕಾದಷ್ಟು ಸಂಪತ್ತಾದ, ನಿನಗೇನು ಅಂತ ವಯಸ್ಸಾಗಾವ, ಬಸ್ವ ಕಣ್ಣು ತೆರದ್ರ… ಒಂದು ಗಂಡು ಹುಟ್ಟಿದ್ರ ಎಲ್ಲ ಸರಿ ಹೋದೀತು’ ಅಂತ ತಿಳಿಸಿ ಹೇಳಿ ಸಮಾಧಾನ ಮಾಡಿದ. ಹಂಪಮ್ಮ ಅದೆಂಗೋ ನಿಶ್ಚಿಂತಳಾದಳು. ಶಾಂತಗೌಡುಗ ಅದೇ ಬೇಕಾಗಿತ್ತು. ಚಂದವ್ವನಲ್ಲಿಗೆ ಹೋಗಿ ಬರಾಕ ಇದ್ದ ಒಂದು ಅಳುಕೂ ಕಮ್ಮಿಯಾದಂಗಾಯ್ತು.
ಚಂದವ್ವನ್ನ ಶಾಂತಗೌಡ ದುರುಗನ್ನ ಮದಿವಿಯಾಗಿ ಬಂದಾಗಿನಿಂದ ನೋಡುತ್ತಲೇ ಬಂದಿದ್ದ. ಆದರೆ ಆತಗ ಏನೂ ಅನಿಸಿರಲಿಲ್ಲ. ಆಕಿ ದುರುಗನ ಹೇಣ್ತಿ. ತನ್ನ ಮನ್ಯಾಗ ವಾಣ್ಣಾಗಿ ದಗದ ಮಾಡ್ಕೊಂಡು ಇದ್ದಾಳೆ. ಗಂಡಗ ಒಳ್ಳೆ ಹೇಣ್ತಿ ಅಂಬೋದು ಬಿಟ್ಟರೆ ಬೇರೇನೂ ತಿಳಿದಿದ್ದಿಲ್ಲ. ಚಂದವ್ವಗ ಚೆನ್ನ ಹುಟ್ಟಿದ್ದ. ಮುರ್ನಾಕು ವರ್ಷದವುನಿರಬೇಕು. ಅದೇ ಹಿಂಗಾರಿ ಬಿತ್ತುವ ಸಂಭ್ರಮ ನಡದಿತ್ತು. ಊರಿಂದಲ ಹೊಲದಲ್ಲಿ ದುರುಗನೇ ಬಿಳಿಜ್ವಾಳದ ಕೂರಿಗೆ ಹಿಡಿದಿದ್ದ. ಬೆಳದಿಂಗಳಿದ್ದರಿಂದ ರಾತ್ರಿಯೂ ಕೂರಿಗೆ ಸಾಗಿತ್ತು. ಬೆಳದಿಂಗಳಾಗ ಕೂರಿಗೆ ಸಾಲು ತಪ್ಪದಂಗ ಬಿತ್ತುವುದು ದುರುಗನಿಗೆ ಮಾತ್ರ ಸಾಧ್ಯಯಿತ್ತು? ಶಾಂತಗೌಡ ಅದನೋಡಿಕೊಂಡು ನಿದ್ದಿ ಬಂದಂಗಾಗಿ ಮನೆಕಡೆ ನಡೆದ. ಹಂಪಮ್ಮ ಬಾಳ ದಿನಕ ಅದೇ ಹೆಣ್ಣು ಹಡದು ತೌರಮನ್ಯಾಗಿದ್ದಳು. ಮನೆಕಡೆ ಬರುವಾಗ ದುರುಗನ ಗುಡಿಸಿಲಿ ಮುಂದನೇ ಹಾದು ಬರುವಾಗ ಚಂದವ್ವ ಆವತ್ತು ಇನ್ನೂ ಹಾಡುತ್ತಿದ್ದಳು. ಶಾಂತಗೌಡ ಯಾಕೋ ನಿಂತಗಂಡುಬುಟ್ಟ. ದೊಡ್ಡ ಮರಗಳ ಕೆಳಗ ಸಣ್ಣ ಗುಡಿಸಲು. ಗುಡಿಸಿಲು ಮುಂದ ಜೋಗಳ. ಅದರಾಗ ಚೆನ್ನ. ಚಂದವ್ವ ತೂಗಿಕೆಂತ ಹಾಡುತ್ತಿದ್ದಳು. ಅಲ್ಲಿಗೆ ದುರುಗ ಬಿತ್ತುತ್ತ ಎತ್ತುಗಳಿಗೆ ಗದರಿಸುವುದು ಕೇಳುತ್ತಿತ್ತು. ಚಂದವ್ವ ಸಲುಪು ಹೊತ್ತಿನ ಮ್ಯಾಗ ಎದ್ದು ಮುಂದತ್ತ ಬಂದು ಕಾಲುಮಡುದು ಆಮ್ಯಾಲೆ ಎದ್ದು ಬರುವಾಗ ಅತ್ತತ್ತ ದಾರಿಗೆ ಶಾಂತಗೌಡ ನಿಂತಗಂಡಿದ್ದು ನೋಡಿ, ‘ಯಪ್ಪಾ ಗೌಡಾ…’ ಅಂದಳು. ಶಾಂತಗೌಡುಗ ಇರುಸು ಮುರುಸಾದರೂ ‘ಹಾಂ ಹಾಂ… ನಾನೇ. ಕೂರಿಗೆ ನೋಡಾಕ ಹೋಗಿದ್ದೆ… ಮನಿಗೆ ಹೋಗುಮಂತ ಬಂದೆ… ನೀನು… ನೀನು ಹಾಡದು…’ ಅಂದ. ಚಂದವ್ವಗ ತಾನು ಹಾಡದು ಗೌಡುಗ ಪಸಂದು ಬರುವುದು ಗೊತ್ತಿತ್ತು. ಸುಮ್ಮನಾಗಿ ನಿಂತಳು. ಆದರೆ ಶಾಂತಗೌಡನ ದನಿ ಬದಲಾಗಿತ್ತು. ಆಕಿ ಕಾಲುಮಡೆದು ನೋಡಿದಾಗಲೇ ಆತನ ಚಿತ್ರ ಕದಲಿಬುಟ್ಟಿತ್ತು. ಬಗಲಾಕ ಬಂದು, ‘ಚಂದವ್ವ, ನೀರು ಕೊಡು’ ಅಂದ. ಹೊರಗಡೆ ಹೋಗಾಕ ಕೇಳಿರಬೇಕಂತ ಹೋಗಿ ನೀರು ತಂದಳು. ಶಾಂತಗೌಡ ಎಡಗೈಯಿಂದ ಆಕಿ ತಂದ ತಂಬಿಗೆ ಇಸಕೊಂಡು, ಬಲಗೈಯಿಂದ ಆಕೆ ತೋಳು ಹಿಡಕಂಡ. ಚಂದವ್ವಗ ಎದೆ ದಸ್ ಅಂತು. ‘ಯಪ್ಪಾ… ಗೌಡಾ…’ ಅಂತ ಹಿಂದಕ ಸರದಳು. ಆತ ತಂಬಿಗೆ ಬುಟಾಕಿ ಆಕಿನ್ನ ಎಳಕಂಡು, ‘ಚಂದವ್ವ…. ಚಂದವ್ವ… ನೀನು ಬೇಕು ನನ್ಗ… ಈಗ’ ಅಂತ ಹಿಡಕಂಡುಬುಟ್ಟ. ಚಂದವ್ವಗ ಏನೂಮಾಡಾಕ ಆಗ್ಲಿಲ್ಲ…!
ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ
ಆ ಮ್ಯಾಲೆ ಶಾಂತಗೌಡುಗ ಹಂಪಮ್ಮನಿಗಿಂತ ಮೈಕೈ ತುಂಬಿಕೊಂಡಿದ್ದ ಚಂದವ್ವ ಹಿತವಾದಳು. ಒಂದು ವಾರ ತಡಕೊಳ್ಳದು ಆಗ್ಲಿಲ್ಲ. ಚಂದವ್ವ ತಪ್ಪು ಮಾಡಿದೆ ಅನಿಸಿ ಕೊರಕತೊಡಗಿದಳು. ಆಕಿ ಕಸುರಿಲ್ಲದವುಳು. ಮುಚ್ಚಿಟಗಳದು ಬ್ಯಾಡನಿಸಿ ದುರುಗನಿಗೆ ಹೇಳಿಬುಟ್ಟಳು! ದುರುಗ ಅದಕೇಳಿ ಹರಿಯುತ್ತಿದ್ದ ತುಂಗಮ್ಮನ ಮಡಿಲಿಗೆ ಬಿದ್ದು ಈಸಿದ…ಈಸಿದ. ಬಾಳೊತ್ತು ಈಸಿ ದಣುದು ಗುಡಿಸಿಲಿಗೆ ಬಂದ. ಚಂದವ್ವ ಇರಲಿಲ್ಲ. ಚೆನ್ನನನ್ನ ಕರಕೊಂಡು ತನ್ನ ತವುರು ಮನಿಗೆ ಹೋಗಿದ್ದಳು. ವಾರೊಪ್ಪತ್ತು ಕಳಿತು. ಚಂದವ್ವ ಬರಲಿಲ್ಲ. ದುರುಗನೂ ಹೋಗಲಿಲ್ಲ. ದುರುಗನಿಗೆ ಮಗ ಚೆನ್ನನ ಮ್ಯಾಲೆ ಜೀವ ಉಕ್ಕಿ ಚಡಪಡಿಸಿದ. ಶಾಂತಗೌಡಗ ದುರುಗ ಇಲ್ಲಂದ್ರ ಜೀವ ಕಳಕಂಡವುರಂಗ ಆಗಿ ದುರಗನ ಗುಡಿಸಿಲಿಗೆ ಬಂದ. ದುರುಗ ಶಾಂತಗೌಡುನ ಕಾಲಿಗೆ ಬಿದ್ದು ಅತ್ತುಬುಟ್ಟ! ಆಮ್ಯಾಲೆ ಚಂದವ್ವನ್ನ ದುರುಗ ತಾನೆ ಹೋಗಿ ಕರಕಂಡು ಬಂದ. ಆದರೆ ಶಾಂತಗೌಡ-ಚಂದವ್ವನ ಸಂಬಂಧ ಅವಳು ಸಾಯತನಕ ನಡದಿತ್ತು! ದುರುಗ ನುಂಗಿಕೊಂಡಿದ್ದ…
ಶಾಂತಗೌಡ ಅದು ಇದು ಏನೇನೋ ನೆಪ್ಪು ಮಾಡಿಕೊಂಡು ಅದರಾಗ ಮುಳುಗಿದ್ದ. ಕಾಲೆಳಕಂತ ಪಡಶಾಲೆಯಲ್ಲಿ ಅತ್ತಗಿನಿಂದ ಇತ್ತಗ, ಇತ್ತಗಿನಿಂದ ಅತ್ತಗ ಅಡ್ಡಾಡುತ್ತ ಚಂದವ್ವನ ಬಗ್ಗೆ ನೆನಸಿಗಂಡ. ದುರುಗನ ಮ್ಯಾಗ ಕಕ್ಕುಲಾತಿ ಮೂಡಿದಂಗಾಗಿ, ‘ದುರುಗಾ’ ಅಂದ ಏನೋ ಮಾತಾಡಲು. ಆ ಪುಣ್ಯದ ಕರೆ ಕೇಳಿಸಿಕೊಳ್ಳಾಕ ದುರುಗ ಇರಲಿಲ್ಲ. ದಿಗ್ಗನೆದ್ದ ಹನುಮಂತ ‘ಗೌಡಾ ಕರದೇನಪ್ಪ’ ಅಂದ. ಅಷ್ಟರಾಗ ಭೀಮಯ್ಯ, ‘ದುರುಗಣ್ಣ ತನ್ನ ಮನಿಗೆ ಹೋಗ್ಯಾನಪ್ಪೋ, ನಿನ್ನೆ ರಾತ್ರಿ’ ಅಂದ.
‘ಯಾಕೋದ? ಯಾಕೋದ…?’ ಅಂತ ಶಾಂತಗೌಡ ತನಗೆ ತಾನೆ ಅಂದುಕೊಂಡಂಗ ಅಂದ. ಅಡ್ಡಾಡದು ನಿಲ್ಲಿಸಿ ಕುಂತ್ಕಂಡು ‘ಬೆಳಕು ಹಾರ್ಯಕ ಬಂತೇನು ನೋಡು’ ಅಂದ. ಹನುಮಂತ ಹೊರಗೆ ಹೋಗಿ ಒಳಗ ಬಂದು, ‘ಏನೂ ತಿಳಿವಲ್ಲಪ್ಪ, ಗೌಡ. ಮಾಡಾಗ್ಯಾದ. ಕರಗ ಕಾಣತಾದ. ಚಳಿ ಸುರುವಾಗ್ಯಾದ’ ಅಂದ. ‘ಹೊತ್ತು ಗೊತ್ತು ತಿಳಿವಲ್ದು ಇವುನಿಗೆ’ ಅಂದು ತಾನೇ ಹೊರಗೆ ಹೋಗಲು ಎದ್ದ. ಸಂಬಳದಾಳು ಇಬ್ಬರೂ ಕಂದೀಲು ಹಿಡಕಂಡು ಹೊರಗೆ ಬಂದರು ಹಿಂದಿಂದ, ಶಾಂತಗೌಡ ಹೊರಗ ನಿಂತು, ‘ಸುತ್ತ ಮುತ್ತ ಮಳೆ ಆಗಾಕ ಹತ್ಯಾದಂತ ತುಪಾನು ಬಂದು. ನಮ್ಮ ಅಡಿವ್ಯಾಗ ಮಳೆ ಬಿದ್ರ, ನಾವು ಕೂರಿಗಿ ಸಾಗಸಬೇಕು ತಿಳಿತಿಲ್ಲ,’ ಅಂದ ಸಿಟ್ಟಿನಿಂದ. ‘ಹೂಂ’ ಅಂದರು. ಸುತ್ತನೋಡಿ ಏನೂ ಸಮಸದೆ ಒಳಗೆ ಬಂದ. ‘ಲೇ ಭೀಮಾ, ಹನುಮಾ, ಚೆನ್ನ ಈ ಸಲ ಊರಿಗೆ ಬಂದ್ರ ನನ್ಗ ತಿಳುಸ್ಬೇಕು’ ಅಂದ. ‘ಹೂಂ’ ಅಂದರು. ‘ತಿಳುಸ್ಬೇಕು ಅಂದ್ರ ತಿಳುಸ್ಬೇಕು! ಏನ್ರಲೇ… ಮಬ್ಬುಗಳೇ…’ ಅಂದ ಸಿಟ್ಟಿನಿಂದ. ‘ಆಯ್ತಪ್ಪೋ….!’ ಅಂದರು.
ಸಲಪೊತ್ತಿನ ಮ್ಯಾಲೆ ಶಾಂತಗೌಡ ಎದ್ದು ಮತ್ತೆ ಕಾಲೆಳಕಂತ ಪಡಶಾಲೆಯಲ್ಲಿ ತಿರುಗಾಡ ತೊಡಗಿದ. ‘ಚೆನ್ನ ನನ್ನ ಕುಂಡೆ ಬುಡ್ಕ ನೀರು ತಂದನಲ್ಲ… ಮಗ’ ಅಂತ ಹಲ್ಲು ಕಡದ. ‘ಲೇ ಬೆಳಕು ಹರ್ಯಾಕ ಬಂದಿದ್ದಾದು. ಸೂಗಮ್ಮನ್ನ ಕರ್ಕಂಬಾ ಹೋಗು. ಭೀಮ, ನೀ ಹೋಗು’ ಅಂದ. ಅವನು ಓಡಿ ಹೋದ. ‘ನಾಯಿನ್ನ ಬುಡು’ ಅಂದ. ಹನುಮಂತ ಹಿಂದಿನ ಎತ್ತಿನಂಕಣದಲ್ಲಿ ಕಟ್ಟಿಹಾಕಿದ್ದ ನಾಯಿನ್ನ ಬಿಚ್ಚಿದ. ಅದು ಓಡಿ ಹೊರಗೆ ಹೋಯಿತು. ಮತ್ತೆ ಒಳಗ ಬಂತು. ಪಡಸಾಲಿ ಏರಬೇಕಂತ ನೋಡಿತು. ಶಾಂತಗೌಡನ್ನ ಕಂಡು ಬಾಲ ಅಳ್ಳಾಡಿಸಿ ‘ಕುಂಯ್ ಕುಂಯ್’ ಅಂತು. ‘ಬರ್ತಾಳಂತಪ್ಪ ಗೌಡ’ ಅಂದು ಆ ಮ್ಯಾಲೆ ‘ಜಿನಿ ಜಿನಿ ಮಳೆ ಬರ್ತಿದ್ದಂಗಾದಪ್ಪ ಗೌಡ’ ಅಂದ.
ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು
‘ಏನು ಬಂದ್ರೂ ಬಿತ್ತುವ ಮಳೆ ಬರವಲ್ದಲ್ಲ…’ ಅಂದ ಶಾಂತಗೌಡ, ಅಸಮಾಧಾನದಿಂದ.
‘ದುರುಗ ಯಾಕ ಇಲ್ಲೆ ಮಕ್ಕಳ್ಳಿಲ್ಲ?’ ಅಂದ. ಅವರಿಬ್ಬರೂ ಮಾತಾಡಲಿಲ್ಲ. ಆತ ಹೇಳ್ತಾನಂತ ಈತ. ಈತ ಹೇಳ್ತಾನಂತ ಆತ. ಹಿಂಗಾಗಿ ಸುಮ್ನಿದ್ದರು. ‘ಬೊಗಳಕ ಏನಾಗ್ಯಾದ್ರಲೇ…’ ಅಂದ ಸಿಟ್ಟಿನಿಂದ. ಸೂಗಪ್ಪ ಮಾಸ್ತಾರ ದಿಗ್ಗನೆದ್ದು ‘ಹಾಂ… ಏನಾಯ್ತು’ ಅಂದ. ‘ತಾತ, ಏನಿಲ್ಲ ನೀ ಮಕ್ಕ’ ಅಂದ ಶಾಂತಗೌಡ. ಆದರೆ ಸೂಗಪ್ಪ ಮಾಸ್ತಾರ ಮೆಲ್ಲಕ ಎದ್ದು ಕುಂತ, ಶಾಂತಗೌಡನ ದನಿ ಕೇಳಿ ನಾಯಿ ಹಿಂದಕ ಸರುದು ಗಾಭರಿಯಾಗಿ ನಿಂತಿತು. ಶಾಂತಗೌಡ ಅದೆಲ್ಲ ಮರತು ಕುಂತುಗೊಂಡ. ನಾಯಿ ಮತ್ತೆ ಶಾಂತಗೌಡನ ಬಗಲಾಕ ಬಂತು. ಅದರ ತಲಿಮ್ಯಾಗ ಕೈಯಾಡಿಸಿದ. ಅದು ಲಟ ಲಟ ಬಾಲ ಬೀಸಿ ಬೀಸಿ ಕುಣಿಯ ತೊಡಗಿತು. ಸೂಗಮ್ಮ ಬಂದಳು. ಆಕಿ ಬಂದಾಕಿ ಸೀದ ಅಡಿಗೆ ಮನೆಗೆ ಹೋದಳು. ಹಂಪಮ್ಮ ಸತ್ತಮ್ಯಾಲೆ ಶಾಂತಗೌಡುಗ, ಹೋದವುರಿಗೆ ಬಂದವುರಿಗೆ ಅಡಿಗೆ ಮಾಡಿ ನೀಡುವುದು ಮಾಡುತ್ತಿದ್ದಳು. ಅಡಿಗೆ ಆಳಾಗಿ ದುಡಿತಿದ್ದಳು.
‘ರುದ್ರಮ್ಮ ಬಾಂತ ಹೇಳಿ ಕಳಿಸಿದ್ದಳು. ಹೋಗಿ ಬಾ’ ಅಂತ ಸೂಗಪ್ಪ ಮಾಸ್ತಾರ ನೆನಪಿಸಿದ. ಶಾಂತಗೌಡಗ ನೆನಪಿತ್ತು. ಬೆಳಕು ಹರಿಯಲಿ ಅಂತ ದಾರಿ ಕಾಯಾಕ ಹತ್ತಿದ್ದ. ನಾಯಿ ಸುಮ್ಮನಿರಲಿಲ್ಲ. ಶಾಂತಗೌಡನ ತೊಡೆ ಮೂಸಿ ನೋಡಿತು. ‘ಚಿತಾ….’ ಅಂದು ಎದ್ದುದ್ದೇ ಹುಡುಕ್ಯಾಡಿ ಒಂದು ಬಡಿಗೆ ತಗಂಡು ಹೊಡೆದು ಬುಟ್ಟ! ನಾಯಿ ಕಾಲಿಗೆ ಏಟು ಬಿತ್ತೋ ‘ಕೊಂಯಂಯ್ಯೋ ಕೊಂಯಂಯ್ಯೋ’ ಅಂತ ಒದರುತ್ತ ಹೊರಗೆ ಓಡಿಹೋಯಿತು. ಅಂಕಣದಲ್ಲಿದ್ದ ದನಕರುಗಳು ಬೆಚ್ಚಿ ಬಿದ್ದು ದಪದಪ ಎದ್ದು ಗಡಿಬಡಿಸಿದವು. ಭೀಮಯ್ಯ, ಹನುಮಂತ ಕಲ್ಲಿನಂಗ ನಿಂತುಕೊಂಡರು. ಸೂಗಮ್ಮ, ಸೂಗಪ್ಪ ಮಾಸ್ತಾರ ಶಾಂತಗೌಡನ್ನ ನೋಡುತ್ತ ನಿಂತುಕೊಂಡರು. ‘ದುರುಗುನ್ನ ಕರೆದು ಬರ್ರೆಲೇ’ ಅಂತ ಒದರಿದ.
3
ದುರುಗ ಶಾಂತಗೌಡನ ಕರೆಕಲ್ಲಿನ ದೊಡ್ಡಮನೆ ಒಳಗ ಇಡಲಾರದೆ ಕಾಲಿಟ್ಟ. ಪಡಸಾಲೆಯಲ್ಲಿ ಶಾಂತಗೌಡ ಕುಂತಿದ್ದ. ಅದೇ ಆಗ ಲಿಂಗಪೂಜೆ ಮುಗಿಸಿ ಕುಂತಂತಿತ್ತು ಸೂಗಪ್ಪ ಮಾಸ್ತಾರನದು. ದುರುಗನ ಜಲುಮದಾಗ ಒಮ್ಮೆನ್ನ ಈ ರೀತಿ ಕೂನ ಇಲ್ಲದವುರಂಗ ಮನೆ ಒಳಗೆ ಕಾಲಿಟ್ಟಿದ್ದಾಗಲಿ, ಶಾಂತಗೌಡ, ಸೂಗಪ್ಪ ಮಾಸ್ತಾರ ನೋಡಿಯೂ ನೋಡದಂಗ ಕುಂತುದು ಇರಲಿಲ್ಲ. ಒಳಗ ಸೂಗಮ್ಮ ರೊಟ್ಟಿ ಬಡಿವುದು ಕೇಳುತ್ತಿತ್ತು. ದುರುಗ ಮೆಲ್ಲಕ ಎತ್ತಿನ ಗ್ವಾದಲಿ ಮ್ಯಾಗ ಕಂಬಕ್ಕ ಆನಿಕೆಯಾಗಿ ಕುಂತುಗಂಡ, ಯಾಕೋ ಸೂಗಮ್ಮ ರೊಟ್ಟಿ ಬಡಿವುದು ಬುಟ್ಟು ಹೊರಗ ಬಂದು ದುರುಗುನ್ನ ನೋಡಿದಳು. ದುರುಗ ಮೆತ್ತಗಾಗಿದ್ದ. ಹಿಂಗ ಇದ್ದುದ್ದು ಆಕೆ ಎಂದು ಯಾವ ಗಳಿಗ್ಯಾಗ ಕಂಡಿದ್ದಿಲ್ಲ ಕೇಳಿದ್ದಿಲ್ಲ. ಇಂಥ ದೊಡ್ಡಮನ್ಯಾಗ ದುರುಗ ಒಬ್ಬವುನಿದ್ರೆ ಹತ್ತು ಮಂದಿಯಿದ್ದಂಗ. ಸುಮ್ಮನೆ ಕೂಡುವ ಜೀವಲ್ಲ, ಏನೇನೋ ದಗದ ಮಾಡುತ್ತ, ಯಾರ್ಯಾರಿಗೋ, ಯಾವುದಕ್ಕೋ ಕಾಳಜಿಯಿಂದ ಬೈಯುತ್ತ ಅಂಕಣದ ತುಂಬ ಓಡಾಡುತ್ತ ಎತ್ತುಗಳ ಜತಿಗೋ, ಎಮ್ಮೆಗಳ ಜತಿಗೋ ಮಾಡುತ್ತಲೇ ಇರುತ್ತಿದ್ದ. ತಾನಾಯ್ತು ತನ್ನ ದಗದಾಯ್ತು. ದುರುಗ ಮನುಷ್ಯರ ಜತೆಗೆ ಬಾಳಕಮ್ಮಿ ಮಾತಾಡ್ತಿದ್ದ. ಇವತ್ತು ಮಾತು ಕಳಕಂಡು ಗ್ವಾದಿಲಿಮ್ಮಾಗ ಕುಂತುದ್ದು ನೋಡಿ ಸೂಗಮ್ಮಗ ದುಕ್ಕ ಒತ್ತಿ ಬಂತು, ಹಂಪಮ್ಮ ಸತ್ತಮ್ಯಾಲಿಂದ ಅಡಿಗೆಮಾಡಾಕ ಈ ಮನಿಗೆ ಕಾಲಿಟ್ಟಿಂದಿನಿಂದ ನಿನ್ನೆ ರಾತ್ರಿವರೆಗೆ ದುರುಗನಿಗೆ ಉಣ್ಣಲಿಕ್ಕಿದ್ದಳು. ದುರುಗನಂಥ ನಂಬಿಗಸ್ಥ ಆಳುಮನುಷ್ಯನನ್ನು ಈ ಮನೆ ಪಡಕಂಡಿದ್ದೇ ಇದು ಒಂದು ಮನೆ ಅಂತ ಇನ್ನೂ ಜೀವ ಹಿಡಕಂಡಿದೆ ಅಂಬೋದು ಸೂಗಮಗ ಗೊತ್ತು. ಸೂಗಮ್ಮಗ ದುರುಗನ ಮ್ಯಾಲೆ ಎಲ್ಲಿಲ್ಲದ ಕಕ್ಕುಲಾತಿ. “ದುರುಗಪ್ಪ…” ಅಂತ ಮೆಲ್ಲಕ ಕರದಳು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
‘ಯವ್ವ…’ ಅಂದು ಎದ್ದು ನಿಂತ. ಅವುನು ‘ಯವ್ವ’ ಅಂದ್ರ ಸಣ್ಣ ಕೂಸು ಅಂದಂಗ ಅಂತಿದ್ದ.
‘ಬಿಸೆರಟ್ಟಿ ತಿನ್ನುಬಾ’ ಅಂದಳು.
‘ಯಾಕ ಬುಡವ್ವ! ಅರೆಹೊತ್ತಿಗೆ ತಿಂದು ಮಾಡದೇನಾದ! ದಗದಿಲ್ಲ ಬಗಸಿಲ್ಲ’ ಅಂದ.
‘ರುದ್ರಮ್ಮ ಗೌಡ್ಸಾನಿ ಬಾ ಅಂತ ಗೌಡನ್ನ ಕರೆಕಳಿಸ್ಯಾಳ, ನೀನು ಹೋಗಬೇಕಲ್ಲ…’ ಅಂದಳು ಮೆಲ್ಲಕ. ಸೂಗಮ್ಮ ನೀಡಿದ್ದು ಬೇಕೋ ಬೇಡೋ ಉಂಡು ಎದ್ದ. ದುರುಗನ್ನ ನೋಡುತ್ತಿದ್ದ ಶಾಂತಗೌಡಗ ಜೀವ ‘ಚುರ್’ ಅಂತು. ದುರುಗಂದು ತಪ್ಪಿಲ್ಲ! ಪಾಪ…. ಅವುನು ತನ್ನ ಜೀವ ಕೊಟ್ಟವುನು, ಅಂತ ಅನಕಂಡು ‘ದುರುಗಾ’ ಅಂದ. ಮಾರೆ ಎತ್ತಿನೋಡಿದ ದುರುಗ, ‘ಯಪ್ಪ’ ಅಂದ. ಶಾಂತಗೌಡುಗ ಅದು ದುರುಗನ ದನಿಯಾಗಿ ಕೇಳಲಿಲ್ಲ.
‘ಅಕ್ಕ ಬಾಂತ ಹೇಳಿ ಕಳಿಸ್ಕಾಳ. ಹೋಗಿ ಬರಮೇನು?’
‘ನೀನೆಂಗತಿದ್ದಿ ಅಂಗಪ್ಪ’ ಅಂದ. ದುರುಗ ಎಂದೂ ಹಿಂಗ ಅಂದಿರಲಿಲ್ಲ. ಶಾಂತಗೌಡುಗ ಸಿಟ್ಟು ಬಂತು.
‘ಯಾಕ ಬ್ಯಾಡೇನು?’
‘ಹೋಗಿ ಬರಮಂದ್ರ ಹೋಗಿ ಬರಮಪ್ಪಗೌಡ’ ಅಂದ.
‘ನಡಿ ಅಂಗಂದ್ರ’ ಅಂತ ಶಾಂತಗೌಡ ಎದ್ದು ಹೆಗಲಮ್ಯಾಲಿನ ಸೆಲ್ಲೆ ತಗಳ್ಯಾಕ ಕೊಠಡಿಗೆ ಹೋದ, ಸೂಗಪ್ಪ ಮಾಸ್ತಾರ ಎದ್ದು ಬಡಬಡ ಪಡಸಾಲಿ ಇಳಿದು ದುರುಗನ ತಕ ಬಂದು, ‘ದುರುಗಾ, ನೋಡು… ನೀನು ಇನ್ನ ಮ್ಯಾಲೆ ಈ ಊರಾಗ ಇರದುಬ್ಯಾಡ. ನಿನ್ನ ಮಗನ ಜತಿಗೆ ಹೋಗಿ ಇದ್ದುಬುಡು. ಈ ಕಕ್ಕಲಾತಿಯಿಲ್ಲದ ಕೋಡಿ ಗೌಡುನ ಜತಿಗೆ ಏಸುದಿನ ಬದುಕತ್ತಿದ್ದಿ! ನಿನ್ನ ಮಗ ಹಿಂದಕ ಸರಕಂಡು ತಣ್ಣಗ ಇರಂತ ಹೇಳು. ನೀನು ಅಲ್ಲೇ ಇರು. ಬಂದದ್ದು ಬಂದಂಗ ನುಂಗಿಕೊಂಡು ಹೋದ್ರ ಬಂಧನ ಇಲ್ಲಂತ. ಏನ…’ ಎಂದು ಹೇಳ ಹೊತ್ತಿಗೆ ಶಾಂತಗೌಡ ಕಾಲೆಳಕಂತ ಬಂದ. ‘ರುದ್ರಮ್ಮಗ ಇದ್ಯಾವುದು ಹೇಳಬ್ಯಾಡ, ಶಾಂತಪ್ಪ. ಒಂದು ವಾಳ್ಳೆ ಆಕಿ ಕಿವಿಗೆ ಬಿದ್ದಿದ್ರ… ಅಂಥದ್ದೇನೂ ನಡೆಂಗಿಲ್ಲ ಅಂದು ಸರಿ ಮಾಡಿಬುಡು. ಈ ಸಲ ಚೆನ್ನ ಬಂದ್ರ ನಾನೂ ತಿಳಿಸಿ ಹೇಳ್ತಿನಿ’ ಅಂದ ಸೂಗಪ್ಪ ಮಾಸ್ತಾರ. ಶಾಂತಗೌಡ, ‘ಹ್ಞುಂ’ ಅಂದು ನಡದ. ದುರುಗ ಹಿಂದ ಸಾಗಿದ. ಹೊರಗ ಅಂಗಳದಲ್ಲಿ ನಾಯಿ ಕಾಲು ಮುರುಕಂಡು ಬಿದ್ದಿತ್ತು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಶಾಂತಗೌಡ ಮುಂದುಮುಂದ, ದುರುಗ ಹಿಂದಿಂದ ಸಾಗಿದರು. ದುಮದರಿ ಹಂಗೇಯಿತ್ತು. ಊರು ದಾಟಿದರು; ಕೇರಿ ದಾಟಿದರು. ಮೊನ್ನೆ ಮೊನ್ನೆ ತನಕ ಅವುರು ಹಂಗ ಹೋಗುವುದನ್ನು ನೋಡುವುದೇ ಒಂದು ಸಂಭ್ರಮ ಅಂತ ಊರು-ಕೇರಿ ತಿಳಕಂಡಿತ್ತು. ಆದರೆ ಇವತ್ತು ಹೆಂಗೆಂಗೋ ನೋಡಾಕತ್ಯಾರಂತ ಶಾಂತಗೌಡುಗ ಅನಿಸ್ತು. ಬಿಳಿ ಅಂಗಿ, ಬಿಳಿಪಂಚೆ ತೊಟಗಂಡು ಹೆಗಲಮ್ಯಾಲೆ ಸೆಲ್ಲೆ ಹಾಕ್ಕೊಂಡು, ತೆಳ್ಳಗ, ಬೆಳ್ಳಗಯಿದ್ದ ಶಾಂತಗೌಡ ಮುಂದುಮುಂದ ಕಾಲೆಳಕಂತಾ ನಡೆದರೂ ರವದೆ ಹೋದಂಗ ನಡಿತಿದ್ದ. ಹಿಂದಿಂದ ದುರುಗ ದುರುದುರು ಓಡುತ್ತಿದ್ದ. ಅವುರು ಹೊಂಟುದ್ದು ಸುತ್ತಲ ಹೊಲಗಳವರಿಗೆ ಗೊತ್ತಾಗುತ್ತಿತ್ತು. ಶಾಂತಗೌಡ ಗಟ್ಟಿಯಾಗಿ ಏನೇನೋ ಸುದ್ದಿ ಹೇಳಿಕೆಂತ ನಡಿತಿದ್ದರೆ ದುರುಗ ಹೇಳಿದ್ದಕ್ಕೆಲ್ಲ ‘ಹೌದಪ್ಪಯಪ್ಪ,’ ‘ನಿನ್ನ ಮಾತು ಕರೇವಾದ’. ‘ನಿನ ಮಾತು ತೆಗದಾಕಂಗಿಲ್ಲ ಗೌಡ’ ಅಂತ ಅನಕಂತ ಓಡುತ್ತಿದ್ದರೆ ಸುತ್ತಲ ಹೊಲಗಳಾಗ ಇದ್ದಮಂದಿಗೆ ಕೇಳುತ್ತಿತ್ತು. ಆದರೆ ಇವತ್ತು ಊರು-ಕೇರಿ ದಾಟಿದರೂ ಮಾತಿಲ್ಲ. ಎರಡು ಹೊಲ ದಾಟಿದರೂ ಕತೆಯಿಲ್ಲ. ಅದರಾಗ ದುಮದರಿ ಕರಗದೆ ಹತ್ತದಿನೈದು ಮಾರ ದೂರದ ದಾರಿಮಾತ್ರ ಕಾಣುತ್ತಿತ್ತು. ತುಂಗಮ್ಮನ ದಂಡೆಗೆ ಬಂದು ನಿಂತಗಂಡರೂ ಇಬ್ಬರ ನಡುಕ ಹಾಂ ಇಲ್ಲ. ಹೂಂ ಇಲ್ಲ! ತುಂಗಮ್ಮ ಬಳುಬುಳು ಅಂತ ಹರಿತಿದ್ದಳು. ‘ನೀರು ಬಂದಾವೋ ಏನೋ’ ಅನಕಂಡ ಶಾಂತಗೌಡ, ಇವತ್ತು ಸೂರಿಯನ ದರ್ಶನವೇ ಇಲ್ಲ. ಇವತ್ತಲ್ಲ ವಾರದಿಂದ ಇದ್ದಿಲ್ಲ. ಜಿನಿಜಿನಿ ಮಳೆ ಇವತ್ತು ಇದ್ದಿಲ್ಲ. ಮಾಡ ಕವುದು ಕತ್ತಲಿದ್ದಂಗಿತ್ತು. ಶಾಂತಗೌಡ ನಿಂತು ನೋಡಿದ. ಆ ದಂಡೆಮ್ಯಾಗಿನ ಅಕ್ಕ ರುದ್ರಮ್ಮನ ಊರು ಇವತ್ತು ಕಾಣಲಿಲ್ಲ. ತುಂಗಮ್ಮನ ಬುಳಬುಳ ಸಪ್ಪಳ ಕೇಳತ್ತಿತ್ತೇ ಹೊರತು ಕಲ್ಲು ಬಂಡೆ ಗಿಡಗಂಟಿ ನೀರು ಯಾವುದು ಕಾಣುತ್ತಿದ್ದಿಲ್ಲ. ಸುಮ್ಮನೆ ನಿಂತಗಂಡ. ಹಿಂದಿದ್ದ ದುರುಗ ಮೆಲ್ಲಕ ಬಂದ.
ತುಂಗಮ್ಮ ಇಲ್ಲಿ ವಿಚಿತ್ರ ರೂಪ ಪಡಕಂಡಿದ್ದಳು. ಒಂದೂವರೆ ಮೈಲು ಅಗಲ ಚಾಚಿ ಮಲಗಿದ್ದಳು; ಅದರಾಗ ಬರಿ ಮೈತುಂಬ ಗುಂಡು ಬಂಡೆ ಕಲ್ಲು ಕೊರಕಲು ತುಂಬಿಕೊಂಡ, ತುಂಗಮ್ಮನ ಅವತಾರ ಈ ಪರಿ ಇರದ್ರಿಂದ ಸೇತುವೆ ಅನ್ನೊದು ಆಗಿರಲಿಲ್ಲ. ಕರೆಂಟು ಬಂದಿರಲಿಲ್ಲ. ಈ ತುಂಗಮ್ಮನಿಗೆ ಏಳು ಹರದಾರಿ ಕೆಳಗೆ ಸೇತುವೆಯಿತ್ತು. ಹಿಂಗಾಗಿ ಇಲ್ಲಿ ಕೊಡದು ತಗಳ್ಳದು ಅಂಬೋ ಕಳ್ಳುಬಳ್ಳಿ ಸಂಬಂಧ ಬೆಳೆದಿದ್ದಿಲ್ಲ. ಆ ಕಡೆ ಊರಿನವುರಿಗೆ ರಾಯಚೂರು ವ್ಯವಹಾರದ ಊರಾದರೆ, ತುಂಗಮ್ಮನ ಈ ಕಡೆ ಊರಿನವುರಿಗೆ ಕಲಬುರ್ಗಿ ವ್ಯವಹಾರದ ಊರು. ಶಾಂತಗೌಡನ ಅಕ್ಕ ರುದ್ರಮನ್ನ ಅದೆಂಗೋ ಆ ಕಡೆ ಊರಿಗೆ ಕೊಟ್ಟಿದರು. ಆಕೆ ಮದಿವೆಯಾದ ವರ್ಷ ಬರಬಿದ್ದಿತ್ತು, ಮಳೆ ಅಂಬೋದೇ ಇರಲಿಲ್ಲ, ತುಂಗಮ್ಮ ಬರಿ ಮೈಯಿಲೆ ಮಲಗಿದ್ದಳು. ಊರುಕೇರಿ ಮಂದಿ ಹೋಗಿ ಮದಿವಿ ಮುಗಿಸಿ ಬಂದವುರು ಮತ್ತೆ ಆ ಕಡೆ ಕಾಲಿಟ್ಟಿರಲಿಲ್ಲ. ರುದ್ರಮ ಒಮ್ಮೆ ಆ ಕಡೆ ಹೋದಾಕಿ ಇವತ್ತಿಗೂ ತವುರು ಮನೆ ನೋಡಿದ್ದಿಲ್ಲ. ಈಸುತ್ತಿಗೆ ದುರುಗ ಒಬ್ಬ ತುಂಗಮ್ಮನ ಮಗನಾಗಿ ಆ ಕಡೆ ಹೋಗ್ತಿದ್ದ ಬರ್ತಿದ್ದ ಅದೂ ಶಾಂತಗೋಡನ್ನ ಹೆಗಲಮ್ಯಾಲೆ ಹೊತಗಂಡು, ಈಗೀಗ ಆ ಊರಾಗೊಬ್ಬ ರುದ್ರಮ್ಮನ ಜೀತುದಾಳು ಮಾನಿಷಯ್ಯ ಶಾಂತಗೌಡುಗ ಸುದ್ದಿ ಮುಟ್ಟಿಸಾಕ ಕಲಿತಿದ್ದ. ಅದು ದುರುಗ ದಾರಿ ತೋರಿಸಿ ಕಲಿಸಿದ್ದ. ಇವರಿಬ್ಬರು ಅದೇನು ದಾಟಿದರೂ ಬ್ಯಾಸಿಗ್ಯಾಗ ಮಾತ್ರ ಹೋಗುತ್ತಿದ್ದರು. ಬರುತ್ತಿದ್ದರು. ಆ ಕಲ್ಲು, ಬಂಡೆ, ಗಿಡಗಂಟಿ, ಕೊರಕಲಾಗ ಅಪ್ಪಿತಪ್ಪಿ ದನಕರುಗುಳೂ ಹೋಗುತ್ತಿರಲಿಲ್ಲ. ‘ನಾನು ದುರುಗನಂಗ ಇದ್ದಿದ್ರ ಯಾರ ಹಂಗೂ ಇಲ್ಲದಂಗ ಅಕ್ಕನೂರಿಗೆ ಹೋಗುತ್ತಿದ್ದೆ’ ಅನಕಂಡ. ಈ ಮಾತು ಶಾಂತಗೌಡುಗ ಇವತ್ತು ಮಾತ್ರ ಬಂದಿತ್ತು. ಶಾಂತಗೌಡ ತುಂಗಮ್ಮನ ದಂಡೆಮ್ಯಾಗ ನಿಂತು ಸುಮ್ಮನೆ ಕಣ್ಣಾಡಿಸಿದ. ದುರುಗನೂ ಸುಮ್ಮನೆ ನಿಂತುಕೊಂಡಿದ್ದ. ಇಂಥ ಗಳಿಗೆ ಅವರ ಜೀವನದಾಗ ಎಂದೂ ಬಂದಿದ್ದಿಲ್ಲ, ಬರತದಂತ ಕೂಡ ಕನಸು ಕಂಡಿದ್ದಿಲ್ಲ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
‘ದುರುಗಾ’ ಅಂದ ಶಾಂತಗೌಡ,
ಆ ಪುಣ್ಯದ ಕರೆಗೆ ‘ಯಪ್ಪಾ’ ಅಂದ ದುರುಗ.
‘ತುಂಗಮ್ಮಗ ನೀರು ಬಂದಿದ್ದಂಗಾವಲ್ಲ….?’
ದುರುಗ ತುಂಗಮ್ಮನ್ನ ನೋಡಿದ. ದುಮದರಿಯಿಂದ ಚೆಂದಾಗಿ ಯಾವುದು ಕಾಣಿದ್ದಿಲ್ಲ. ಕಿವಿಗೊಟ್ಟು ಕೇಳಿ ‘ಬಂದ್ರ ಮಣಕಾಲಮಟ ಬಂದಿರ್ತಾವ’ ಅಂದ. ಶಾಂತಗೌಡ ದುರುಗನ್ನ ದಿಟ್ಟಿಸಿ ನೋಡಿದ. ವಾರದ ಹಿಂದಿದ್ದ ದುರುಗ ಈಗಿಲ್ಲ. ಬಾಡಿ ಹೋಗಿದ್ದ. ಎಣ್ಣೆಗೆಂಪಿನ ಬಣ್ಣ ಹೋಗಿ ಮಾರೆ ಕಪ್ಪಿಟ್ಟಿತ್ತು. ಜಾಲೆ ಕೊರಡಿನಂಗಿದ್ದ ದೇಹ ಕುಸುದಂಗ ಕಂಡಿತು. ಸದಾ ಶಾಂತಗೌಡನ ಹಿಂದಿರುತ್ತಿದ್ದರಿಂದ ಜಳಜಳ ಬಟ್ಟಿ ಹಾಕ್ಕೊಂಡಿರುತ್ತಿದ್ದ. ದುರುಗ ಚೆಲುವಾದ ಮನುಷ್ಯ ಅಂತ ಊರುಕೇರಿಗೆ ಗೊತ್ತು.
‘ದುರುಗಾ, ನೀನು ಮೆತ್ತಗಾದಿ’ ಅಂದ ಶಾಂತಗೌಡ.
‘ಯಪ್ಪ, ಮಗ ಮಾಡದ್ಕ ನಾನೇನು ಮಾಡ್ಲಿ. ದೇವುರು ಮಾಡದ್ಕ ನಾನೇನು ಮಾಡ್ಲಿ. ನಾನೇನಾದ್ರ ನಿನಗ ಎಲ್ಡ ಬಗದೀನಾ?’ ಅಂದ, ದುರುಗ. ‘ನನ್ಗೂ ತಿಳಿವಲ್ದಂಗಾಗ್ಯಾದ, ದುರುಗ. ನಿನ್ನ ಮಗನ್ನ ಆವಾಗ ನೆನಿಸಿಗಂಡ್ರ ಮುದ್ದು ಬರ್ತಿತ್ತು. ಈಗ ನೆನಪಾಗಿ ಕಾಡ್ತಾನ. ನನ್ನ ಮನೆತನಕ್ಕ ಮಸಿ ಬಳ್ಯಾಕ ನಿಂತು ಬುಟ್ಟಾನ… ದುರುಗಾ, ಮಸಿ ಬಳ್ಯಾಕ!’ ಅಂದು ಹಲ್ಲು ಕಡುದ ಶಾಂತಗೌಡ.
‘ಯಪ್ಪ, ನನ್ಗ ನಿನ್ಗ ಬುಡುದ ನಂಟು, ನೀನಿದ್ದಲ್ಲಿ ನಾನು, ನಾನಿದ್ದಲ್ಲಿ ನೀನು. ನನ್ಗ ನಿನ್ಗ ಕುಲಯಿಲ್ಲ, ಜಾತಿಯಲ್ಲ. ಹಂಗ ನಡಕಂಡು ಬಂದೀವಿ…’ ಅಂದು ಸುಮ್ಮನಾದ.
‘ಹೋಗ್ಲಿ ಬುಡು. ಅಂದಂಗ, ತುಂಗಮ್ಮನ್ನ ದಾಟಿದಾತಾದಿಲ್ಲ ನೋಡು.’
ದುರುಗಗ ಅದಕ್ಕಿಂತ ಮೂರು ಪಟ್ಟು ನೀರಿದ್ದಾಗ ಹೊತಗಂಡು ದಾಟಿದ್ದ ಅನುಭವಯಿತ್ತು. ‘ನನ್ನ ಎದ್ಯಾಗ ಜೀವ ಇರತನ್ಕ ದಾಟ್ತೀನಿ, ಬಾಪ್ಪ’ ಅಂತ ಕುಂತ. ಶಾಂತಗೌಡ ಪಂಚೆ ಎತ್ತಿ ಕಟ್ಟಿಕೊಂಡು ಬೆನ್ನ ಹಿಂದೆ ಬಂದು ಕಾಲಾಕಿ ಭುಜದ ಮ್ಯಾಲೆ ಕುಂತು, ಎಡಕ್ಕೊಂಡು ಬಲಕ್ಕೊಂದು ಎದೆಮ್ಯಾಗ ಕಾಲಾಕಿ ದುರುಗನ ತಲೆ ಹಿಡಕಂಡು ಕುಂತ. ಅಗಲವಾದ ಭುಜದ ಮೇಲೆ ಆರಾಮಾಗಿ ಕುಂತದ್ದು ಕಂಡಮ್ಯಾಲೆ ದುರುಗ ಎದ್ದು ನಿಂತುಗಂಡು ತಂಗಮ್ಮನ ಊಡಿಗೆ ಇಳದ. ಯಾಕೋ ಶಾಂತಗೌಡ ಇವತ್ತು ವಜ್ಜ ಅನಿಸಿದ! ಸವಾರಿ ಸಾಗಿತ್ತು. ಹಿಂಗ ಸಾಗುವುದು ತುಂಗಮ್ಮ ಅದೆಷ್ಟು ಸಲ ನೋಡಿದ್ದಳೋ. ಇವತ್ತು ದುರುಗನ ಹೆಜ್ಜೆಗಳು ಸಲಿಸ ಅನಿಸಲಿಲ್ಲ ಶಾಂತಗೌಡುಗ. ಧೈರ್ಯದಿಂದ ಬಿಗಿದು ಕುಂತ. ಆದರೂ ಅಳುಕು ಸುರುವಾಯ್ತು. ದುರುಗ ತನಗ ಗೊತ್ತಿದ್ದ ಕಾಲು ದಾರಿಯಲ್ಲೇ ಹೆಜ್ಜೆ ಇಟಗಂತ ಸಾಗಿದ. ಗುಂಡು, ಬಂಡೆ, ಸಂದು, ಕೊರಕಲು ದಾಟುತ್ತ ನೀರಿನೊಳಗ ಅಂತರಗಂಗೆ ಬಂದಲ್ಲಿ ಕಾಲು ಸವರುತ್ತ ಎಲ್ಲವನ್ನು ದಾಟುತ್ತ ನಡೆದ. ಜಿನಿಜಿನಿ ಮಳೆ ಸುರುವಾಯ್ತು. ದಮದರಿ ಕರಗುವಂಗ ಕಂಡಿತು. ದುರುಗ ಮುಂದ ನೋಡಿ ದಾಟುವಲ್ಲಿ ದಾಟಿ, ಜಿಗಿವಲ್ಲಿ ಮಲ್ಲಕ ಜಿಗುದು, ಸರಿವಲ್ಲಿ ನೋಡಿ ಎಚ್ಚರಿಕೆಯಿಂದ ಸರುದು ಒಮ್ಮೊಮ್ಮೆ ದೊಡ್ಡ ದೊಡ್ಡ ಗುಂಡುಗಳ ನಡುಕ ಹೋಗುವಾಗ ಕೈಯಾಸರೆಗೆ ಗುಂಡುಗಳಿಗೆಯಿಟ್ಟು ಸಾಗುತ್ತಿದ್ದ.
ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ
ಹಿಂಗ ಸಾಗುವುದೆಂದರೆ ಅವುರಿಗೆ ಬಲು ಹಿಗ್ಗು. ಊರುಕೇರಿ ಸುದ್ದಿ, ಮಳೆ ಬೆಳೆ ಸುದ್ದಿ, ರುದ್ರಮ್ಮನ ವರ್ಚಸ್ಸಿನ ಸುದ್ದಿ, ಚೆನ್ನನ ಬೆಳವಣಿಗೆ ಸುದ್ದಿ ಇನ್ನೇನೇನೋ ತಮತಮಗೆ ತಿಳದಂಗ ಮಾತಾಡುತ್ತ ಸಾಗಿದರೆ ತುಂಗಮ್ಮನ್ನ ಎಷ್ಟೇ ಪ್ರಯಾಸದಿಂದ ದಾಟಿದರೂ ಗೊತ್ತಾತಿದ್ದಿಲ್ಲ. ಆದರೆ ಇವತ್ತು ಮಾತಿಲ್ಲ, ಕತೆಯಿಲ್ಲ. ದುರುಗ ದಾರಿ ಹಿಡಕಂಡು ಮೆಲ್ಲಕ ಹೊಂಟಿದ್ದ. ಅವನೆಂದು ದಾರಿ ಹುಡುಕಿದ್ದಿಲ್ಲ. ಹುಡುಕಿದ. ತುಂಗಮ್ಮನ ಮಧ್ಯ ದಮ್ಮು ಬಂದು ಇಳಿಸಿದ. ದಮ್ಮು ಆರಿಸಿಕೊಂಡು ಮತ್ತೆ ಹೊತಗೊಂಡು ಎದ್ದ. ಆ ದಂಡೆ ಬರಹೊತ್ತಿಗೆ ಮತ್ತೊಮ್ಮೆ ಇಳಿಸಿದ. ಶಾಂತಗೌಡುಗ ಎಂಗೆಂಗೋ ಅನಿಸಿತು. ಒಳ ಒಳಗ ಸಿಟ್ಟಿಗೆದ್ದ. ಬಿಳಿಜ್ವಾಳ ಕಣಮಾಡಿದ ಮ್ಯಾಲೆ ಹೊಸಮಳೆ ಬರತನ್ನ ತುಂಗಮ್ಮನ್ನ ಇವುರು ದಾಟುತ್ತಿದ್ದರು. ಮಳೆ ಬಂದು ತುಂಗಮ್ಮ ಇಳಿತಿದ್ದಳು. ಬೊಂಕದ ಮಟ್ಟ, ಎದಿಮಟ್ಟ, ನೀರಿದ್ದರೂ, ಇಂಥ ಕೊರಕಲಾಗ ದುರುಗ ದಾಟುತ್ತಿದ್ದವುನು ಈಗ ಹೆಂಗಾದನಲ್ಲ ಅಂತ ಶಾಂತಗೌಡುಗ ಅನಿಸಿ, ‘ನಾಕೈದು ಸಲ ಜೀವುಕ್ಕ ಅಪಾಯ ಬಂದಿದ್ದಾಗ ಪಾರು ಮಾಡಿ ದಾಟಿದವನು’ ಅಂತ ದುರುಗನ ಮ್ಯಾಲೆ ಅಭಿಮಾನ ಉಕ್ಕಿತು.
ಕೊನೆಗೂ ದುರುಗ ಶಾಂತಗೌಡನ್ನ ಹೊತಗಂಡು ತಂದು ದಂಡೆಗೆ ಇಳಿಸಿದ. ಆಯಾಸ ಅನಿಸಿ ಕುಂತ. ಶಾಂತಗೌಡ ಪಂಜೆ ಸರಿಮಾಡಿಕೊಂಡು, ‘ನೀನು ದಮ್ಮಾರಿಸಿಗಂಡು ಹಿಂದಿನಿಂದ ಬಾ’ ಅಂದು ಹೊರಟ. ಅಂಗ ಎಂದೂ ಅಂದಿರಲಿಲ್ಲ. ಆದರೂ ದುರುಗ, ‘ಬರ್ತೀನಿ’ ಅಂತ ಎದ್ದು ನಡೆದ. ಶಾಂತಗೌಡನ ಒಂದು ಕಾಲು ಸಣ್ಣದಿದ್ದರಿಂದ, ಕಾಲೆಳಕಂಡು ನಡಿತಿದ್ದ. ಇವತ್ತೂ ಎಂದಿನಂತೆ ಠೀವಿಲೇ ಸೆಟದು ನಡೆಯತೊಡಗಿದ. ದಾರಾಗ ಎದುರಾದವುರು ‘ಗೌಡ್ಸಾನಿ ತಮ್ಮ’ ಅಂಥ ಸಲಾಮು ಹಾಕುತ್ತಿದ್ದರು. ಊರ ನಡುಕ ರುದ್ರಮ್ಮನ ಮನೆ. ಅದು ನಾಕುದಿಕ್ಕಿನಿಂದ ಕಾಣುವಂತಿತ್ತು. ರುದ್ರಮ್ಮ ಹೊಸದಾಗಿ ಮದಿವಿಯಾದಗ ತನ್ನ ಮನೆಮಾಳಿಗಿ ಮ್ಯಾಗ ನಿಂತು ತವರೂರು ನೋಡುತ್ತಿದ್ದಳು. ಶಾಂತಗೌಡ ತನ್ನನ್ನು ಮಾತಾಡ್ಸಿ, ವಾಪಸು ಹೋಗುವಾಗ ಆಕಿ ದುರುಗನನ್ನು, ತಮ್ಮನನ್ನು ಮಾಳಿಗಿಮ್ಯಾಗ ನಿಂತು ತವರೂರು ನೋಡುತ್ತಿದ್ದಳು. ಅದಕಂಡು ಶಾಂತಗೌಡ ಹಿಗ್ಗುತ್ತಿದ್ದ. ಅಂಥ ದೊಡ್ಡ ಮನೆಯ ಅಕ್ಕನ ಅಂಗಳಕ್ಕೆ ಕಾಲಿಟ್ಟ. ನಾಕುದಿನದ ಜಿನಿಜಿನಿ ಮಳೆಗೆ ಅಂಗಳ ಕೆಸರಾಗಿತ್ತು. ಕಟ್ಟೆಗೆ ಕುಂತವುರು ಶಾಂತಗೌಡಗ ಎದ್ದು ಕೈಮುಗುದರು. ದುರುಗ ಅಲ್ಲಿದ್ದ ಕೆಲಮಂದಿ ಜತಿಗೆ ತಟತಟಗು ಮಾತಾಡುತ್ತ ನಿಂತ. ಅಂಗಳದಾಗ ತನ್ನ ಗಿಡಗಳಿಂದ ಮಾಡಿದ ಬಂಡಿ ನಿಂತಿತ್ತು. ಇವತ್ತು ಯಾಕೋ ಅದರ ಮ್ಯಾಗ ಕೈಯಿಟ್ಟು ಸವುರಿ ‘ಇನ್ನ ಜುಂ ಅಂದಿಲ್ಲ’ ಅಂದುಕೊಂಡು ಶಾಂತಗೌಡನ ಹಿಂದೆ ರುದ್ರಮ್ಮನ ಹನ್ನೆರಡೆತ್ತಿನ ಅಂಕಣದ ಮನೆಯೊಳಗ ಸುತ್ತಲೂರಿನ ಹತ್ತಾರು ಮಂದಿ ಗಣ್ಯರು ಆಕೆಯ ಎಡ ಬಲಕ್ಕೆ ಕುಂತಿದ್ದರು. ಶಾಂತಗೌಡ ಹೋಗಿ ಪಕ್ಕದಲ್ಲಿ ಕುಂತ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಅಲ್ಲಿದ್ದವರ ಜತಿಗೆ ಕುಶಲ ನಡಿತು. ದುರುಗ ಅಂಕಣ ಕಟ್ಟೆಗೆ ಕುಂತ. ರುದ್ರಮ್ಮ ತನ್ನನ್ನೇ ನೋಡಿದಂತೆ ಅನಿಸಿತು. ತಲೆ ಕೆಳಗ ಹಾಕಿದ. ದುರುಗ ರುದ್ರಮ್ಮನ್ನ ಎಳೇ ವಯಸ್ಸಿನಿಂದ ನೋಡಿದವನು. ಈ ಮನೆಗೆ ಬಂದಾಗಿನಿಂದಲೂ ನೋಡುತ್ತ ಬಂದವನು, ‘ಕಣ್ಣು ಮುಚ್ಚಿ ಕಣ್ಣು ತರೆದ್ರಾಗ ರುದ್ರಮ್ಮಮ್ಮ ಬೆಳುದು ಬುಟ್ಟಳು’ ಅಂತ ಅನಕಂತಿದ್ದ. ಆಕೆ ಈ ಮನೆ ಸೇರಿದ ಮ್ಯಾಲೆ, ಮ್ಯಾಲಿಂದ ಮ್ಯಾಲೆ ಆರೇಳು ವರ್ಷಕ್ಕೆ ನಾಲ್ಕೂ ಮಕ್ಕಳಾದುವು. ಎರಡು ಹೆಣ್ಣು, ಎರಡು ಗಂಡು. ಇಬ್ಬರು ಹೆಣ್ಣು ಮಕ್ಕಳ ಮದಿವಿ ಒಮ್ಮೆ ಆಯಿತು. ಮೂರು ವರ್ಷದ ಹಿಂದೆ ಒಬ್ಬ ಹುಡುಗನ ಮದಿವಿಯಾಗಿ ಆತ ಒಕ್ಕಲುತನ ಮಾಡಿಸುತ್ತಿದ್ದ. ಕೊನೆಯ ಮಗ ರಾಯಚೂರಲ್ಲಿ ಓದುತ್ತಿದ್ದ. ಈತನಿಗೆ ಶಾಂತಗೌಡನ ಮಗಳನ್ನು ತಂದುಕೊಳ್ಳಬೇಕಂತ ರುದ್ರಮ್ಮನ ಮನಸ್ಸಿತ್ತು. ಅದಕ್ಕಾಗಿ ಚಿಕ್ಕಂದಿನಿಂದ ತನ್ನ ಮಕ್ಕಳ ಜತೆ ಓದಲು ಇಟ್ಟುಕೊಂಡಿದ್ದಳು. ರುದ್ರಮ್ಮನ ಗಂಡ ಈಗ್ಯ ಆರೇಳು ವರ್ಷದಿಂದೆ ಸತ್ತ. ಸತ್ತಮ್ಯಾಲೆ ದೊಡ್ಡ ವತನವನ್ನು ರುದ್ರಮ್ಮ ಕೈಯಿಗೆ ತಗಂಡು ನಡೆಸಲು ನಿಂತಳು. ಮೂರು ನಾಲ್ಕು ವರ್ಷ ತಿರುಗುವುದರಲ್ಲಿ ಹತ್ತಾರ ಹಳ್ಳಿಗೆ ಹೆಸರು ಚಾಚಿದಳು. ಅಂದೆಂಗೋ ಏನೋ ಇದ್ದಬಿದ್ದ ಮಂದಿ ಬಂದು ಬಂದು ಬಗ್ಗಿದರು. ಜಗಳ-ಲೂಟಿ, ಕೊಲೆ-ಸುಲಿಗೆ, ಗಂಡ-ಹೇಣ್ತಿ ಜಗಳ ಮೊದಲು ಮಾಡಿ ಇಲ್ಲೆ ಬಗೆಹರಿಯಬೇಕು. ಹೆಚ್ಚು ಕಮ್ಮಿ ಸುತ್ತಲೂರಿನವರ ವ್ಯವಹಾರವೆಲ್ಲ ಈಕೆಯನ್ನು ಕೇಳಿಯೇ ನಡೆಯುತ್ತಿದ್ದವು. ಈಗೀಗಂತೂ ಆಕೆ ಹೊರಗ ಕಾಲಿಡದಿದ್ದರೂ ಆಕೆ ‘ಹೂಂ’ ಅಂತ ಒಪ್ಪಿಗೆ ಕೊಡದಿದ್ದರೆ ಒಂದು ಮದುವೆ ನಡಿತಿದ್ದಿಲ್ಲ. ಆ ಸುತ್ತಿನ ಸರಹದ್ದಿನಲ್ಲಿ ಒಂದು ಗುಬ್ಬಿ ಚಿಂವ್ ಅನಬೇಕೆಂದರೆ ‘ಅಮ್ಮ’ನ ಒಪ್ಪಿಗೆ ಬೇಕು ಅಂತ ಜನ ಮಾತಾಡುತ್ತಿದ್ದರು. ‘ನಿಂತುಗ’ ಅಂತ ಅಂದರೆ ಹರಿವ ತುಂಗಮ್ಮ ನಿಲ್ಲಬೇಕು. ಇಂಥ ವರ್ಚಸ್ಸು ಆಕೆದೀಗ. ಶಾಂತಗೌಡ ಬಂದು ಕುಂತಮ್ಯಾಲೆ ರುದ್ರಮ್ಮ ಮಾತಾಡಲಿಲ್ಲ. ಮನೆಯೆಂಬೋ ಮನೆ ‘ಗೌವ್’ ಅಂತು. ಆಗ ಒಬ್ಬೊಬ್ಬರೆ ಎದ್ದು ಹೊರಗೆ ಬಂದರು. ದುರುಗನಿಗೆ ಅಂಜಿಕೆಯಾಯಿತು… ‘ದುರುಗಪ್ಪ’ ಅಂದಳು ಅಮ್ಮ.
‘ಯಮ್ಮೊ… ಯವ್ವಾ…’ ಅಂದ, ಮಿಟ್ಟಿ ಬಿದ್ದು.
‘ಬೇಸಿದ್ದೇನು? ಯಾಕ ಮೆತ್ತಗಾದಂಗ ಕಾಣದ?’
‘ಇಲ್ಲ ತಾಯಿ, ಬೇಸೀನಿ… ನಿನ್ನ ನೆಳ್ಳಾಗ….’ ಅಂದ, ನಿಂತಲ್ಲೆ ಚಡಪಡಿಸಿ.
‘ನೀನು ನಮ್ಮವುನು. ತಣ್ಣಗಿರು. ಸಾಯತನ ಬೇಸಿರು, ಏನ…’ ಅಂದು ಎದ್ದಳು. ಶಾಂತಗೌಡ ಎದ್ದ. ಆಕೆ ತಮ್ಮನನ್ನು ಮಾಳಿಗೆ ಮನೆಗೆ ಕರಕೊಂಡು ಬಂದಳು. ಅಲ್ಲಿ ರುದ್ರಮ್ಮನ ಹಿತೈಸಿ ನಾಗಮ್ಮ ಕುಂತಿದ್ದಳು. ಈ ಸುತ್ತಿಗೆಲ್ಲ ಆಕೆ ಶರಣಿನಾಗಮ್ಮ ಎಂದೇ ಕರೆಸಿಕೊಂಡಿದ್ದಳು. ರುದ್ರಮ್ಮನ ವರ್ಚಸ್ಸು ಹೆಚ್ಚಿದ ಮ್ಯಾಲೆ ಆಕೆ ಇಲ್ಲಿ ಬಂದು ಸೇರಿದ್ದಳು. ರುದ್ರಮ್ಮ ಆಕೆಯ ಮಾತಿನಂತೆ ನಡಿತಿದ್ದಳು. ಶಾಂತಗೌಡ ಆಕೆಯ ಪಾದಕ್ಕೆ ಸಣಮಾಡಿದ. ‘ಶಾಂತಪ್ಪ, ದುರುಗ ಬದಿಕ್ಕೊಂಡು ನಮ್ಮಲ್ಲಿರ್ಲಿ. ಅವುನಿಗೆ ತ್ರಾಸು ಮಾಡದು ಬ್ಯಾಡ. ಚೆನಗ ನಾನೇ ಹೇಳಿ ಕಳಿಸಿದ್ದೆ ‘ನಮ್ಮ ತಂಟೆಗೆ ಬರಬ್ಯಾಡ. ಬೇಕಾದ್ರ ನೀನು ಬಯಸಿದ ಹೆಣ್ಣುನ್ನ ತಂದು ನಾನೇ ಮಾಡ್ತೀನಿ. ಯಾಕಂದ್ರ ನೀನು ನಮ್ಮ ದುರುಗನ ಮಗ. ಅದ್ಕಂತ ಹೇಳ್ತಿನಿ’ ಅಂತ. ಅವುನು, ‘ನೀವ್ಯಾರು ನನ್ನ ಮದಿವಿ ಮಾಡಲಿಕ್ಕೆ? ಬೇಕಾದ್ರೆ ಅಕ್ಕಮ್ಮ ನನ್ನ ಮಾಡ್ಕೆಂತೀನಿ ಅಂದಾಳಲ್ಲ. ನಿಂತು ಮಾಡ್ರಿ’ ಅಂತ ಅಂದನಂತ. ಶಾಂತಪ್ಪ, ಸುದ್ದಿ ನಾಕಮಂದಿ ಬಾಯಿಗೆ ಹೋಗದು ಬ್ಯಾಡ! ಪಾಪ… ಅಕ್ಕಮ್ಮ ಏನೋ ಮನಸುಕೊಟ್ಟಾಳ! ಅದಕ್ಕೇನು ತಿಳಿತಾದ? ನಮ್ಮ ಮರ್ಯಾದಿ, ಮನೆತನದ ಗೌರವವನ್ನ ನಾವು ಕಾಪಾಡಿಕೊಳ್ಳಬೇಕು. ನೋಡು, ಇದನ್ನು ಬೆಳಸದು ನನಗಿಷ್ಟಯಿಲ್ಲ. ಈ ವಾರಾದಾಗ ಅವನು ಊರಿಗೆ ಬರ್ತಾನ. ಕಾದುಕೊಂಡು ನೋಡಿ ನನ್ಗ ಬಂದು ಹೇಳು. ಚೆನ್ನನನ್ನ ಕಡಿಸಿ, ಸಣ್ಣಾಗಿ ಕಡಿಸಿ ತುಂಗಮ್ಮನಲ್ಲಿ ಚಲ್ಲಿಸಿ ಬಿಡ್ತೀನಿ! ಏನ? ಆಮ್ಯಾಲೆ ಜಲ್ದಿ ಅಕ್ಕಮ್ಮನ್ನ ಈ ಮನೆಗೆ ಸೊಸೆಯನ್ನಾಗಿ ಮಾಡ್ಕೊತೀನಿ. ನೀನು ಇವತ್ತು ಊರಿಗೆ ಹೋಗಿಬುಡು. ಚೆನ್ನ ಬಂದ್ರ ನನ್ಗ ಸುದ್ದಿ ತಿಳುಸು’ ಅಂದ, ರುದ್ರಮ್ಮ ಎದ್ದಳು. ಶಾಂತಗೌಡುಗ ಭಯಂಕರ ಭಯದಲ್ಲಿಯೂ ಹಿಗ್ಗಿದ! ಮೈ ತುಂಬಿ ಉಸುರಾಡಿದ!
ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ
ಇದಕೇಳಿ ನಾಗಮ್ಮ ಹೌಹಾರಿ, ‘ರುದ್ರಮ್ಮ, ದುಡುಕದು ಬ್ಯಾಡವ್ವ!’ ಅಂದಳು.
‘ಅಮ್ಮ, ನನ್ನ ಮಾರಿಗೆ ಮಸಿ ಬಳಿವ ಗಂಡಸು ಇರಬಾರದು! ನಾನು ಬದಿಕಿರುವ ತನಕ! ಚೆನ್ನ ಮಾದಿಗ. ಅಂದ್ರೂ ಅವುನು ಧೈರ್ಯವಂತನೇ ಸರಿ! ಆದ್ರೆ ನನ್ನ ಗತಿ?’ ಅಂತ ತಣ್ಣಗ ಅಂದಳು. ಮತ್ತೆ ಯಾರಿಗೂ ಮಾತು ಏಳಲಿಲ್ಲ!
ಸಲಪೊತ್ತು ಬಿಟ್ಟು ರುದ್ರಮ್ಮ, ‘ಶಾಂತಪ್ಪ, ನೀನು ಊರಿಗೆ ಹೋಗು. ಹೋಗುವಾಗ ಅಕ್ಕಮ್ಮನ್ನ ಮಾತಾಡಿಸಿ ಹೋಗು’ ಅಂದಳು. ಶಾಂತಗೌಡ ಮಗಳು ಅಕ್ಕಮಹಾದೇವಿ ಮಲಗಿದ್ದ ಕೋಣೆಗೆ ಬಂದ.
‘ಯಾವಾಗ ಬಂದೆಪ್ಪ’ ಅಂತ ಹಿಗ್ಗಿ ಕೇಳಿದಳು. ಆಕೆಗೆ ತಂದೆನ್ನ ಕಂಡು ಖುಷಿಯಾಯಿತು. ಶಾಂತಗೌಡ ಕಣ್ಣು ತುಂಬ ನೋಡಿದ. ತೆಳ್ಳಗೆ, ಬೆಳ್ಳಗೆ, ಎತ್ತರದ ನಿಲುವಿನ ಮಗಳನ್ನು ನೋಡಿ, ಹೆಣ್ತೇನ್ನ ನೆನಸಿಕೊಂಡು, ‘ಈಗ ಬಂದ್ನೆವ್ವ. ಬೇಸಿದ್ದೆಲ್ಲ…’ ಅಂತ ತಲಿಮ್ಯಾಗ ಕೈಯಿಟ್ಟ.
‘ಅಪ್ಪ, ನಾನು ನಿನ್ನಿಂದ ಊರಿಗೆ ಬರ್ತಿನಿ, ಕೂಡಿ ಹೋಗಮು’ ಅಂದಳು ಗಟ್ಟಿದನಿಯಲ್ಲಿ.
‘ಯಾವದಕ್ಕೆ ಕಮ್ಮಿ ಆದವ್ವ ಈ ಮನ್ಯಾಗ…? ನಾನೇ ಬಂದು ಬಂದು ಹೋಗ್ತಿನಲ್ಲ…’
‘ನನಗ ಸಾಕು ಈ ಮನೆ! ನಾನು ನಮ್ಮ ಮನ್ಯಾಗ, ನಿನ್ನ ಜತಿಗೆ ಇರ್ತೀನಿ!’
ಶಾಂತಗೌಡಗ ಚಿಂತಿಯಾಯಿತು. ಅಕ್ಕನ ಮಗ, (ಅಕ್ಕಮ್ಮನನ್ನು ಮದುವೆಯಾಗುವವ) ಮೊಮ್ಮಕ್ಕಳು ಎಲ್ಲರೂ ಕೂಡಿ ರಾಯಚೂರಿನಲ್ಲಿ ಓದುತ್ತಿದ್ದರು. ರುದ್ರಮ್ಮನೇ ಅಕ್ಕಮಹಾದೇವಿಯನ್ನು ಕರೆಸಿ ಇಟ್ಟುಕೊಂಡು ಓದಿಸುತ್ತಿದ್ದಳು. ಹಂಪಮ್ಮ ಸತ್ತಮ್ಯಾಲಿಂದಲೂ ಮಗಳು ಇಲ್ಲಿಯೇ ಉಳಿದುಕೊಂಡಿದ್ದಳು. ಅಕ್ಕಮಹಾದೇವಿ ಓದುವ ಕಾಲೇಜಿಗೆ ಚೆನ್ನ ಪಾಠಮಾಡಲು ಸೇರಿಕೊಂಡ ಮೇಲಿಂದ ಅವರಿಬ್ಬರ ನಡುವೆ ಮಾತುಕತೆ ನಡದು ಈಗ ಒಂದಾಗಲೂ ನಿಂತಿದ್ದರು. ಅಕ್ಕಮಹಾದೇವಿಗೆ ಚೆನ್ನ ದುರುಗನ ಮಗ ಅಂಬೋದು ಈಗೀಗ ಗೊತ್ತು. ರುದ್ರಮ್ಮನಿಗೆ ಇದು ಗೊತ್ತಾಗಿದ್ದೇ ತಡ, ಸೊಸೆಗೆ ಏನೂ ಅನ್ನದೆ ಒಳಒಳಗೆ ಬಂದೋಬಸ್ತು ಮಾಡಲು ಯೋಚಿಸಿದ್ದಳು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಶಾಂತಗೌಡ ಮಾತ್ರ ಇದಕೇಳಿ ದಿನಾಲು ಉರಿಯತೊಡಗಿದ್ದ! ‘ಅಪ್ಪ, ನಾನು ಬರ್ತೀನಿ ಅಂದೆ…! ನಿನ್ನ ಜತಿಗೆ ಮಾತಾಡುವದಿದೆ!’ ಅಂದಳು.
‘ಹೂಂನಮ್ಮ, ಬರವಂತಿಗಿ. ಆದ್ರ ಇದ್ದಕ್ಕಿದ್ದಂಗ ತಯಾರಾಗಿ ಬಂದ್ರ ಅಕ್ಕ ಏನಂತಾಳೋ…! ಅದ್ರಾಗ ಮಳೆ ಬ್ಯಾರೆ ಸುರುವಾದಂಗ ಕಾಣಸ್ತಾದ. ನೀನು ಬಸ್ಸು ಹಿಡಕಂಡು ಬರವಂತೀಗಿ. ನಾನು ಇವತ್ತು ಹೋಗಿ ನಾಳೆ ನಾಡದು ಬರ್ತೀನಿ. ಕೂಡಿ ಹೋಗಮು’ ಅಂತಂದ.
‘ನಾನು ದಾರಿ ನೋಡ್ತೀನಿ. ಬರ್ಲಿಲ್ಲಂದ್ರ… ನಾನೇ ಬಂದು ಬುಡ್ತೀನಿ’ ಅಂದಳು. ಶಾಂತಗೌಡ ಒಪ್ಪಿಗೊಂಡು ‘ಬೇಸಿರವ್ವ’ ಅಂದು. ಕಣ್ತುಂಬ ನೋಡಿ, ‘ಬರ್ತಿನವ್ವ’ ಅಂತಂದು ಹೊರಗೆ ಬಂದ.
ಪಡಸಾಲೆಯಲ್ಲಿದ್ದ ಅಕ್ಕ ‘ನಾ ಹೇಳಿದಂಗ ಮಾಡು’ ಅಂತ ನೆನಪಿಸಿದಳು.
‘ಹೂಂ’ ಅಂದು ಹೊರ ಅಂಗಳಕ್ಕೆ ಬಂದ. ಅದೇ ಯಥಾರೀತಿ ಮಾಡ ಮುಚ್ಚಿ ಮಬ್ಬು ಕವಿದಿತ್ತು. ಹೊತ್ತು ಮುಣುಗಲು ತಾಸತ್ತು ಇರಬೇಕು ಅನಿಸಿ, ‘ದುರುಗಾ’ ಅಂತ ಕರೆದ. ಅಲ್ಲಿದ್ದ ನಾಕಾರು ಮಂದಿ ಎದ್ದುನಿಂತರು. ಒಬ್ಬ, ‘ಯಪ್ಪ, ಈಗ ಇಲ್ಲೇಯಿದ್ದ. ನಾಗಮ್ಮವ್ವ ಕರೆದಳು. ಮ್ಯಾಗ ಹೋದ’ ಅಂದ.
ಗಡಿಬಿಡಿಯಲ್ಲಿದ್ದ ಶಾಂತಗೌಡ, ‘ನಾನು ಮೆಲ್ಲಕ ಹೋಗ್ತಿನಿ. ಅವುನಿಗೆ ಬಾ ಅಂತ ಹೇಳು. ತುಂಗಮ್ಮನ ದಂಡಿಗೆ’ ಅಂತ ಹೇಳಿ ಕಾಲೆಳಕಂಡು ನಡೆದ.
ಶಾಂತಗೌಡ ಎಂಥದೋ ಗುಂಗಿನ್ಯಾಗ ಮುಳುಗಿ ತುಂಗಮ್ಮನ ದಂಡೆಗೆ ಬಂದು ನಿಂತ. ಇನ್ನೂ ಬರಲಿಲ್ಲ ಇವುನು ಅನಕಂಡು ಸುತ್ತಮುತ್ತ ನೋಡಿದ. ಮುಗುಲು ಕರಿ ಮಾಡದಿಂದ ಮುಚ್ಚಿತ್ತು. ಪಡುವಣದಾಗ ಮುಗುಲು ನಿಚ್ಚಳ ಕಂಡಿತು. ಆದ್ರೆ ಸೂರಿಯ ಕಾಣಲಿಲ್ಲ, ಅಲ್ಲಿ ಬರೀ ಕೆಂಪು ತುಂಬತೊಡಗಿತ್ತು. ‘ದುರುಗ ಯಾಕ ಬರಲಿಲ್ಲ… ಜಲ್ದಿ ಹೋಗಬೇಕಂದ್ರ….’ ಅಂತ ಚಡಪಡಿಸಿದ. ಸಿಟ್ಟಿನಿಂದ ಉಸುರಾಡಿದ. ದುರುಗ ಊರ ದಾರಿಯಿಂದ ಬುಡುಬುಡು ಓಡಿ ಬರ್ತಿದ್ದ. ಶಾಂತಗೌಡ ನೋಡುತ್ತಿದ್ದಂಗೆ ಬಗಲಾಕ ಬಂದ. ದುರುಗಗ ಉಸುರುಗಟ್ಟಿ ದಮ್ಮು ಹತ್ತಿದಂಗಾಗಿತ್ತು. ಆತನನ್ನು ನೋಡಲು ಭಯವಾಯ್ತು! ಬಂದವನೆ ಮಾತಿಲ್ಲ ಕತೆಯಿಲ್ಲ ತುತುಗುಂಡೆಲೆ ಕುಂತ. ಅವುನು ಕುಂತ ಗತ್ತಿಗೆ, ‘ಕುಂತ್ಗಪ್ಪೋ ಬಡಾನ’ ಅಂತ ಗದರಿಸಿದಂಗಿತ್ತು. ಶಾಂತಗೌಡ ಹೆಗಲಮ್ಮಾಲ ಕುಂತ. ದುರುಗ, ಬಡಕ್ಕನೆ ಎದ್ದು ದಾಪುಗಾಲು ಹಾಕುತ್ತ ಅವಸರದಿಂದ ಬುಡುಬುಡು ಓಡಲು ನೋಡಿದ! ಸತುವು ಸಾಲದಾಯ್ತು! ಆದರೂ ಓಡಲು ತೊಡಗಿದ. ‘ಮೆಲ್ಲಕಲೇ, ದೆವ್ವ ಬಡ್ಕಂಡಂಗ ಮಾಡಕತ್ತಿದ್ದೆಲ್ಲ’ ಅಂತ ಗದಿರಿಸಿದ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ದುರುಗನ ಹೆಜ್ಜೆಗಳಿಗೆ ಕಾವು ಬಂದಿತ್ತೋ ಅಂಬಂಗ ದುಡುದುಡು ತುಂಗಮ್ಮಗೆ ಇಳದ. ಮಾತಿಲ್ಲ ಕತೆಯಿಲ್ಲ, ಮ್ಯಾಲೆ ಮಳೆ ಆಗಿದ್ದಂಗಾದ… ನೀರು ಬಂದಾವೊ ಅಂತ ದುರುಗನಿಗೆ ಒಂದು ಕ್ಷಣ ಅನಿಸಿದ್ರೂ, ಅವನ ಕ್ಯಾಲೇ ಅದರ ಕಡಿಗಿರಲಿಲ್ಲ. ‘ಮೆಲ್ಕ… ಮಲ್ಕಲೇ… ಕೆಡವಿಗಿ!’ ಅಂತ ಶಾಂತಗೌಡ ಗದರಿಸಿದ. ಅವನು ಕಲ್ಲುಬಂಡೆ ಕೊರಕಲಲ್ಲಿ ಸಾಗಿಬುಟ್ಟಿದ್ದ. ದಾರಿ ಹಿಡಿದಿದ್ದನೋ ಅವುನಿಗೆ ಗೊತ್ತಿದ್ದಿಲ್ಲ. ಪಡುವಣದಾಗ ಕರಿ ಮಾಡಗಳಿಗೆ ಸೂರಿಯನ ಕೆಂಪು ಬಣ್ಣ ತಗುಲಿ ಅವು ಕೆಂಡ ಕೆಂಡವಾಗಿ ವಿಕಾರವಾಗಿ ಕುಂತಿದ್ದವು. ದುರುಗ ಬುಳುಬುಳು ಅಂತಿದ್ದ ತುಂಗಮ್ಮನ ಮೈಮ್ಯಾಗ ಹೊಂಟಿದ್ದರೂ ಅವನ ಕ್ಯಾಲೇ ಬ್ಯಾರೆ ಕಡೆಗಿತ್ತು. ಶಾಂತಗೌಡ ಅದಕಂಡು ಭಯಗೊಂಡ. ಗಟ್ಟಿಯಾಗಿ ‘ಲೇ ದುರ್ಗಾ, ಮೆಲ್ಲಕ್ಕನಡೆಲೇ….’ ಅಂತು ಗಟ್ಟಿಯಾಗಿ ಅವುನ ತಲೆ ಹಿಡಕಂಡ, ಸುತ್ತಮುತ್ತ ನೋಡಕ ಆಗ್ಲಿಲ್ಲ. ಬಿದ್ದೇನಂತ ಎದೆ ನಡುಗಿತು. ಬಿಗುದು ಕುಂತ. ದುರುಗ ಏನಂದರೂ ಮಾತಾಡಲಿಲ್ಲ, ವಾಪಾಸು ತಿರುಗಲೇ ಅಂತ ಕೂಗಿಕೊಂಡ. ದುರುಗ ಮಾತ್ರ ಮುಂದಕ ಹೆಜ್ಜೆ ತುಳಿತಿದ್ದ. ಅವುನಿಗೆ ತುಂಗಮ್ಮ ಕೆಂಪಗ ಕಂಡಳು. ಯಾಕಂತ ಸಲುಪೊತ್ತು ನಿಂತು ನೋಡಿದ. ಸೂರಿಯ ಮುಣುಗುರಲ್ಲಿ ಕೆಂಪನ ಮಾಡಗಳು ರಕತದಾಗ ಅದ್ದಿಟ್ಟಂಗ! ಅದು ಸಮುದ್ರ ಕಂಡಂಗಾಯ್ತು! ಸಮುದ್ರದಾಗ ಜ್ವಾಲಾಮುಖಿ ಸಿಡದಂಗ ಚಿತ್ರ ಕಂಡಿತು. ದುರುಗ ನಿಂತುಗಂಡಾಗ ವಾಪಾಸು ತಿರುಗತಾನಂತ ಅನಕಂಡಿದ್ದ ಶಾಂತಗೌಡ. ಆದ್ರೆ ದುರುಗ ಬಡಕ್ಕನೆ ಕೊರಕಲಾಗ ಇಳದು ದಾಪುಗಾಲು ಹಾಕಿದ. ನೀರು ಶಾಂತಗೌಡನ ಕಾಲಿಗೆ ಬಡುದವು. ಶಾಂತಗೌಡುಗ ಕಣ್ಣಿಗೆ ಕತ್ತಲು ಗವುದಂಗಾಯ್ತು. ‘ನಿಂತ್ಗಲೇ’ ಅಂದು ಕಾಲು ಜಾಡಿಸಿದ. ದುರುಗನಿಗೆ ಜೋಲಿ ಹೋತಿತ್ತೋ ಗಟ್ಟಿಗಿ ನಿಂತ್ಗಂಡ. ‘ನನ್ನ ಎದ್ಯಾಗ ಇನ್ನೂ ಜೀವ ಐತಪ್ಪೋ’ ಅಂದ ಅವನು ಶಾಂತಗೌಡನ ತೊಡೆಗಳನ್ನು ಗಟ್ಟಿಯಾಗಿ ಹಿಡಕಂಡು ಹೆಜ್ಜೆಕಿತ್ತಿದ. ಅವರ ತಲಿಮ್ಯಾಗ ಎಂಥ ಎಂಥವೋ ಪಕ್ಷಿಗಳು ಒದರುತ್ತ ತಲಿಗೆ ಬಡಿಯಲು ಬಂದವು. ಶಾಂತಗೌಡ ತಡಿಲಾರದೆ ದುರುಗನ ತಲೆಗೆ ಜಜ್ಜ ತೊಡಗಿದ. ಜಾಡಿಸಿ ಒದೆಯಲು ನೋಡಿದ. ದುರುಗನಿಗೆ ನಾಗಮ್ಮ ನೆನಪಿಗೆ ಬಂದಳು! ಏನೇನೋ ಹೇಳಿದಂಗ ಕೇಳಿಸಿದವು! ಅವುನಿಗೆ ಯಾವುದರ ಅರಿವಿಲ್ಲದಂಗ ಹೆಜ್ಜೆ ಕಿತ್ತಿ ಕಿತ್ತಿ ಇಡುತ್ತಿದ್ದ. ದಾರಿ ತಪ್ಪಿತು! ಒಮ್ಮೆಲೇ ನೀರು ಎದೆಗೆ ಬಂದವು. ‘ದುರುಗಾ…’ ಅಂತ ಅಬ್ಬರಿಸಿದ ಶಾಂತಗೌಡನ ಕೂಗು ತುಂಗಮ್ಮನ ಉದ್ದಗಲಕ್ಕೂ ಅಡರಿತು. ‘ತಿರುಗಲೇ ಹಿಂದಕ’ ಅಂತ ದುರುಗನ ತಲೆ ಹಿಡಕಂಡು ಜಜ್ಜಿದ! ದುರುಗನ ಹೆಜ್ಜೆ ತಪ್ಪಿತೋ ಅವುನು ಮುಗ್ಗರಿಸಿ ನೀರಿಗೆ ಬಿದ್ದುಬುಟ್ಟ! ಶಾಂತಗೌಡ ಮ್ಯಾಲಿಂದ ತತ್ತರಿಸಿ ದಪ್ಪಂತ ನೀರಿಗೆ ಬಿದ್ದನೋ… ‘ದುರುಗಾ’…. ಅಂತ ಒದರಿದ… ‘ಯಪ್ಪೋ’…. ಅಂತ ಇವುನು ಅಂದ. ಒಬ್ಬರದು ಇನ್ನೊಬ್ಬರಿಗೆ ಕೇಳಿಸಲಿಲ್ಲ. ಅವುರು ಒಬ್ಬರಿಗೊಬ್ಬರು ತಗುಲಲಿಲ್ಲ…
ಬರೀ ನೀರಿನ ಸಪ್ಪಳ…! ಕೈಕಾಲು ಬಡದಂಗ… ಸಪ್ಪಳ!
ತುಂಗಮ್ಮ ಬುಳುಬುಳು ಅಂತ ಹರಿತಿದ್ದಳೋ…
ಆ ಮ್ಯಾಲೆ ಅದೇ ಸಪ್ಪಳ… ಆ ತುಂಗಮ್ಮನ ಉಡ್ಯಾಗ… ಸಲುಪೊತ್ತು ಅದೇ ಅದೇ ಸಪ್ಪಳ!
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಅಮರೇಶ ನುಗಡೋಣಿ (1960): ಜೂನ್ 2, 1960ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು. ಎಂ.ಎ. ಮತ್ತು ಪಿಎಚ್.ಡಿ ಪದವೀಧರರು. 1992ರಿಂದ ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿದ್ದಾರೆ. ಪ್ರಕಟಿತ ಕೃತಿಗಳು: ಮಣ್ಣು ಸೇರಿತು ಬೀಜ, ತಮಂಧದ ಕೇಡು, ಸವಾರಿ, ಒಡಲ ಹಂಗು, ಚುಕ್ಕಿ ಮದುವೆ ಪ್ರಸಂಗ, ಬುತ್ತಿ (ಬಾಲ್ಯದ ಅನುಭವ ಕಥನಗಳು), ದಡ ಸೇರಿಸು ತಂದೆ (ಕಥಾಸಂಕಲನ); ದಂದುಗ, ಗೌರಿಯರು(ಕಾದಂಬರಿ); ನೀನು ಅವರು ಪರಿಸರ(ಕವನ ಸಂಕಲನ); ಅರಿವು ನವಸಾಕ್ಷರಿಗಾಗಿ (ಕಥೆಗಳು), ಶ್ರೀಕೃಷ್ಣ ಆಲನಹಳ್ಳಿ (ವಿಮರ್ಶೆ), ನುಡಿವ ಬೆಡಗು (ತತ್ವಪದ ಸಾಂಸ್ಕೃತಿಕ ಅಧ್ಯಯನ), ರಾಯಚೂರು ಜಿಲ್ಲೆಯಲ್ಲಿ ಹೈದ್ರಾಬಾದು ಕರ್ನಾಟಕ ವಿಮೋಚನಾ ಚಳವಳಿ, ಹೈದ್ರಾಬಾದು ಕರ್ನಾಟಕ ಹಾಡುಪಾಡು, ನುಡಿವ ಪಾಡು (ವಿಮರ್ಶೆ), ನುಡಿ ದಂದುಗ (ಸಾಹಿತ್ಯ ಅಧ್ಯಯನ), ತತ್ವಪದ ಸಾಹಿತ್ಯ ಅಧ್ಯಯನ, ಸಣ್ಣಕಥೆ: ಸಾಮಾಜಿಕ ವಾಸ್ತವ, ಜೇಡರ ದಾಸಿಮಯ್ಯ (ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆ), ವಚನಗಳ ಅನುಸಂಧಾನ, ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ(ವಿಮರ್ಶೆ ಮತ್ತು ಸಂಶೋಧನೆ); ಬಿಸಿಲ ಹನಿಗಳು, ಸಣ್ಣಕಥೆ-1997, ಅಮರಚಿಂತ (ಜಂಬಣ್ಣ ಅಮರಚಿಂತರ ಗೌರವ ಗ್ರಂಥ) ಸಂ. ಮಹಾಂತೇಶ ಮಸ್ಕಿ ಜೊತೆಗೆ, ಕಲ್ಯಾಣ ಕರ್ನಾಟಕ, ನುಡಿ ಬಾಗಿನ (ಎಚ್.ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯ ಕುರಿತ ವಿಮರ್ಶಾ ಕೃತಿ), ಸಂ. ವಿಕ್ರಮ ವಿಸಾಜಿ ಜೊತೆಗೆ ಸಂಪಾದನೆ, ಬಸವಣ್ಣ(ಸಂಪಾದನೆ). ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಅಲ್ಲದೆ, ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಉಗ್ರಾಣ ಸಾಹಿತ್ಯ ಪ್ರಶಸ್ತಿ (ಪುತ್ತೂರು), ಕುಂ. ವೀರಭದ್ರಪ್ಪ ಕಥಾಸಾಹಿತ್ಯ ಪ್ರಶಸ್ತಿ, ಚದುರಂಗ ಸಾಹಿತ್ಯ ಪ್ರಶಸ್ತಿ, ಮಾಸ್ತಿ ಕಥಾಪುರಸ್ಕಾರ, ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳೂ ಸಂದಿದೆ. ಇವರ ಸವಾರಿ (ಕನಸೆಂಬೋ ಕುದುರೆಯನೇರಿ), ನೀರು ತಂದವರು, ದೈವಕ್ಕೆ ಮೊದಲು ಶರಣೆಂಬೆವು, ಧರೆ ಉರಿದರೆ ಕತೆಯಾಧರಿಸಿ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇವರ ಸಾಹಿತ್ಯವನ್ನು ಕುರಿತ ಮಹಾಪ್ರಬಂಧಗಳಿಗಾಗಿ ಅನೇಕರು ಪಿಎಚ್.ಡಿ ಗಳಿಸಿದ್ದಾರೆ.





