ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಗೊಳಿಸಬೇಕು, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ವಜಾಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬೀದರ್‌ನಲ್ಲಿ ಪ್ರತಿಭಟನೆ ಹಾಗೂ ತಿರಂಗಾ ಧ್ವಜ ಮೆರವಣಿಗೆ ನಡೆಯಿತು.
ಎಸ್‌ಐಆರ್ ವಿರೋಧಿ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರ ಎದುರುಗಡೆ ಪ್ರತಿಭಟನಾಕಾರರು ಜಮಾಯಿಸಿದರು. ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಎಸ್‌ಐಆರ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಷ್ಟ್ರಮಟ್ಟದ ಕರೆಯ ಮೇರೆಗೆ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ದೇಶಾದ್ಯಂತ ಜಂತರ್ ಮಂತರ್ ಮಾದರಿಯ ಪ್ರತಿಭಟನಾ ಸಭೆಗಳನ್ನು ಆಯೋಜಿಸುವ ಮೂಲಕ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಜನಾಂದೋಲನ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಘಟಕರು ತಿಳಿಸಿದರು.
ಪ್ರತಿಭಟನಾಕಾರರು ಮಾತನಾಡಿ, “ಕೇಂದ್ರ ಮುಖ್ಯ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಮತದಾರರ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸುತ್ತಿದೆ. ಸಂವಿಧಾನಬದ್ಧ ಹಕ್ಕುಗಳನ್ನು ಕಸಿಯುವ ಚುನಾವಣಾ ಆಯೋಗದ ನೀತಿ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹರ್ ಹಾಥ್ ಮೇ ತಿರಂಗಾ, ಹರ್ ಗಲಿ ಮೇ ಜಂತರ್ ಮಂತರ್’ ಘೋಷಣೆಯೊಂದಿಗೆ ಜನರನ್ನು ಸಂಘಟಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಸಾಮೂಹಿಕ ಶಕ್ತಿ ರೂಪಿಸಬೇಕಿದೆ. ದೇಶದ ಭವಿಷ್ಯ ಯುವಜನರ ಕೈಯಲ್ಲಿದ್ದು, ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಎಸ್‌ಐಆರ್ ರದ್ದತಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುವುದರ ಜತೆಗೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಮತದಾರರ ಪಟ್ಟಿಯಿಂದ ಅಳಿಸಲಾಗಿರುವ ಎಲ್ಲ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು ಹಾಗೂ ಚುನಾವಣಾ ಆಯುಕ್ತರ ಕಾಯ್ದೆ-2023ಕ್ಕೆ ಮಾಡಿರುವ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪಕ್ಷಪಾತರಹಿತ ಪ್ರಕ್ರಿಯೆಯ ಮೂಲಕ ಹೊಸ ಚುನಾವಣಾ ಆಯೋಗವನ್ನು ನೇಮಿಸಬೇಕು. ಮತದಾರರ ಪಟ್ಟಿಯನ್ನು ನ್ಯಾಯಸಮ್ಮತವಾಗಿ ಪರಿಷ್ಕರಿಸಬೇಕು. ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಕೇಂದ್ರದ ಬಿಜೆಪಿ ನೇತ್ರತ್ವದ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಮುಂದಿನ ದಿನಗಳಲ್ಲಿ ಜನವಿರೋಧಿ ಕೇಂದ್ರದ ಆಡಳಿತಕ್ಕೆ ತಕ್ಕ ಪಾಠ ಕಲಿಸಬೇಕಿದೆ.ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಭಗತ್ ಸಿಂಗ್ ವೃತ್ತದವರೆಗೆ ತಿರಂಗಾ ಧ್ವಜ ಹಿಡಿದು ಮೆರವಣಿಗೆ ನಡೆಸಿದರು. ಎಸ್‌ಐಆರ್ ರದ್ದಾಗಬೇಕು. ಜ್ಞಾನೇಶಕುಮಾರ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ : ಬೀದರ್ | ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: 4 ಗಂಟೆಯಲ್ಲಿ ಶೇ.39.16ರಷ್ಟು ಮತದಾನ
ಪ್ರತಿಭಟನೆಯಲ್ಲಿ ಮುಹಮ್ಮದ್ ನಿಜಾಮುದ್ದೀನ್, ಬಾಬುರಾವ್ ಹೊನ್ನಾ, ಮಾರುತಿ ಬೌದ್ಧೆ, ಓಂಪ್ರಕಾಶ ರೊಟ್ಟೆ, ವಿಠಲದಾಸ ಪ್ಯಾಗೆ, ಡಾ. ಮಕ್ಸೂದ್ ಚಂದಾ, ಡಾ. ದೇವಿದಾಸ ತುಮಕುಂಟೆ, ರೇಷ್ಮಾ ಹಂಸರಾಜ್, ಮುಹಮ್ಮದ್ ಆಷಿಪೋದ್ದೀನ್, ಎಂ.ಡಿ. ಶಫಾಯತ್ ಅಲಿ, ಗುರುನಾಥ ಗಡ್ಡೆ, ನಜೀರ್ ಸಾಬ್, ಡಾ. ಜಿಯಾವುಲ್ ಇಸ್ಲಾಂ, ಮುಹಮ್ಮದ್ ಇಸೂಫ್, ಮುಬಾಸೀರ್ ಸಿಂಧೆ, ಅರುಣ ಪಟೇಲ್, ಸೈಯದ್ ಮನ್ಸೂರ್ ಖಾದ್ರಿ, ಸಂತೋಷಕುಮಾರ ಜೋಳದಾಬಕೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







