ಮಧ್ಯಾಹ್ನ ಉಪಾಹಾರ (ಬಿಸಿಯೂಟ) ಯೋಜನೆ ಅನುಷ್ಠಾನಗೊಳಿಸುವಲ್ಲಿ ಮುಖ್ಯಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ್ ತಾಲ್ಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದಲ್ಲಿ ತಾಲ್ಲೂಕು ಪಂಚಾಯಿತಿಯ ಮಧ್ಯಾಹ್ನ ಉಪಾಹಾರ ಯೋಜನೆಯ ಸಹಾಯಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
“ವಿವಿಧ ಸಮಸ್ಯೆಗಳ ಕಾರಣ ಮುಖ್ಯಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಹೆಚ್ಚಾಗಿದೆ. ಆದರೂ, ಮೊಟ್ಟೆ ದರ ಪರಿಷ್ಕರಿಸಿಲ್ಲ. ಇದರಿಂದಾಗಿ ಮುಖ್ಯಶಿಕ್ಷಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ” ಎಂದು ತಿಳಿಸಿದರು.
“ಮೊಟ್ಟೆ ದರ ಪರಿಷ್ಕರಿಸಬೇಕು. ಶಾಲೆಗಳಿಗೆ ಸಕಾಲಕ್ಕೆ ಆಹಾರಧಾನ್ಯ ಪೂರೈಸಬೇಕು. 2-3 ತಿಂಗಳ ಯೋಜನೆಯ ಮುಂಗಡ ಹಣ ಮುಖ್ಯಶಿಕ್ಷಕರ ಖಾತೆಗೆ ಜಮೆ ಮಾಡಬೇಕು. ಮಕ್ಕಳ ನಿರಂತರ ಆನ್‍ಲೈನ್ ಹಾಜರಾತಿ ಕುರಿತು ಮುಖ್ಯಶಿಕ್ಷಕರಿಗೆ ತರಬೇತಿ ನೀಡಬೇಕು. ನಿರಂತರ ಹಾಜರಾತಿ ಆ್ಯಪ್‍ನಲ್ಲಿ ಆಗಾಗ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ಬಿಡುಗಡೆಯಾದ ಅನುದಾನದ ನಿಧಿವಾರು ಮಾಹಿತಿ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ : ಭಾಲ್ಕಿ | ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಲಾಠಿ ಜಾರ್ಜ್ ಖಂಡಿಸಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ
ಮನವಿಗೆ ಸ್ಪಂದಿಸಿದ ಸಹಾಯಕ ನಿರ್ದೇಶಕರು ಸೋಮವಾರದಿಂದಲೇ ಎಲ್ಲ ಶಾಲೆಗಳಿಗೆ ಆಹಾರಧಾನ್ಯ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಕೆಂಚಾ, ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಅಮಲಾಪುರ, ಖಜಾಂಚಿ ಅಶೋಕ ಪಾಟೀಲ, ತಾಲ್ಲೂಕು ಘಟಕದ ಉಪಾಧ್ಯಕ್ಷ ಸೂರ್ಯಕಾಂತ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಸ್ವಾಮಿ ಮತ್ತಿತರರು ಇದ್ದರು.





