ಪ್ರಧಾನ್, ಮೋದಿ, ಆರೆಸ್ಸೆಸ್ ಮಾತ್ರವಲ್ಲ. ಸುಪ್ರೀಮ್ ಕೋರ್ಟಿಗೂ ದೇಶ ಋಣಿಯಾಗಿರಬೇಕು. ಯಾಕಾಗಿ ಋಣಿಯಾಗಿರಬೇಕು ಎಂಬ ಪ್ರಶ್ನೆ ಏಳುತ್ತದೆ. ದೇಶದಲ್ಲಿ ನಡೆಯುತ್ತಿರುವ ವಿನಾಶಕಾರಿ ರಾಜಕಾರಣದ ಕುರಿತು, ಸಾಂವಿಧಾನಿಕ ಸಂಸ್ಥೆಗಳ ಪತನ, ಶಿಕ್ಷಣ ವ್ಯವಸ್ಥೆಯ ದುರ್ಗತಿ ಕುರಿತು ದೇಶದ ಯುವಜನರ ಕಣ್ಣು ತೆರೆಸಿದ್ದಕ್ಕಾಗಿ ಋಣಿಯಾಗಿರಬೇಕು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಪರಿವಾರ ಮತ್ತು ಸುಪ್ರೀಮ್ ಕೋರ್ಟಿಗೆ ಭಾರತ ದೇಶ ಋಣಿಯಾಗಿರಬೇಕಿದೆ. ಕತೆ ಕಟ್ಟಿ ಕೊಂಡಾಡಬೇಕಿದೆ. ಮನದಾಳದ ಕೃತಜ್ಞತೆಯನ್ನೂ ಸಲ್ಲಿಸಬೇಕಿದೆ. ದೇಶ ಎಲ್ಲ ರೀತಿಯಿಂದಲೂ ದಿವಾಳಿ ಏಳುವುದು ತಪ್ಪೀತು ಎಂಬ ಆಶಾಭಾವನೆ ಹುಟ್ಟಿಸಿರುವ ಇವರೆಲ್ಲರೂ ಮಾಡಿರುವ ಉಪಕಾರ ಮಹತ್ತಾದದ್ದು.
ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಯುವಜನರು ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಆದರೆ, ಅವರು ಈ ಆಗ್ರಹಕ್ಕೆ ಮಣಿಯಬಾರದು. ತಾವೇ ತಾವಾಗಿ ರಾಜೀನಾಮೆ ನೀಡಲೇಬಾರದು. ಈ ಆಗ್ರಹಕ್ಕೆ ಈವರೆಗೆ ಕಿವುಡಾಗಿರುವ ಮೋದಿಯವರು ಅತ್ಯಂತ ಅಭಿನಂದನೀಯರು. ಇನ್ನು ಮುಂದೆಯೂ ಅವರು ಇದೇ ನಿಲುವಿಗೆ ಗಟ್ಟಿಯಾಗಿ ಅಂಟಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರಧಾನ್ ಅವರಿಂದ ಶಿಕ್ಷಣ ಖಾತೆಯನ್ನು ಕಿತ್ತುಕೊಳ್ಳಬಾರದು.
ಹಾಗೆಯೇ ಪ್ರಧಾನ್ ಅವರ ಕೈಗೆ ಶಿಕ್ಷಣ ಖಾತೆಯನ್ನು ಒಪ್ಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ಆರೆಸ್ಸೆಸ್ ಅದ್ಭುತ ಕೆಲಸ ಮಾಡಿದೆ. ಅವರ ಕೈಯಿಂದ ಶಿಕ್ಷಣ ಖಾತೆಯನ್ನು ಕಿತ್ತುಕೊಳ್ಳುವಂತೆ ಮೋದಿಯವರ ಮೇಲೆ ಒತ್ತಡ ಹೇರಿಲ್ಲ. ದೇಶಹಿತದ ಈ ನಡೆಯನ್ನು ಜಾಗೃತ ನಾಗರಿಕರು ಮುಕ್ತ ಮನಸ್ಸಿನಿಂದ ಮೆಚ್ಚಬೇಕು.
ಪ್ರಧಾನ್, ಮೋದಿ, ಆರೆಸ್ಸೆಸ್ ಮಾತ್ರವಲ್ಲ. ಸುಪ್ರೀಮ್ ಕೋರ್ಟಿಗೂ ದೇಶ ಋಣಿಯಾಗಿರಬೇಕು. ಯಾಕಾಗಿ ಋಣಿಯಾಗಿರಬೇಕು ಎಂಬ ಪ್ರಶ್ನೆ ಏಳುತ್ತದೆ. ದೇಶದಲ್ಲಿ ನಡೆಯುತ್ತಿರುವ ವಿನಾಶಕಾರಿ ರಾಜಕಾರಣದ ಕುರಿತು, ಸಾಂವಿಧಾನಿಕ ಸಂಸ್ಥೆಗಳ ಪತನ, ಶಿಕ್ಷಣ ವ್ಯವಸ್ಥೆಯ ದುರ್ಗತಿ ಕುರಿತು ದೇಶದ ಯುವಜನರ ಕಣ್ಣು ತೆರೆಸಿದ್ದಕ್ಕಾಗಿ ಋಣಿಯಾಗಿರಬೇಕು.
ಶಿಕ್ಷಣ ವ್ಯವಸ್ಥೆಯನ್ನು ಹಳ್ಳ ಹಿಡಿಸಿದ ಪ್ರಧಾನ್, ಹಳ್ಳ ಹಿಡಿಸಲು ಬಿಟ್ಟು ಈಗ ಪ್ರಧಾನ್ ಅವರನ್ನು ರಕ್ಷಿಸುತ್ತಿರುವ ಪ್ರಧಾನಿ ಮೋದಿ, ಸಂಘಪರಿವಾರ ದೇಶದಲ್ಲಿ ಯುವಜನರ ಆಂದೋಲನವನ್ನು ಬಡಿದೆಬ್ಬಿಸಿದೆ. ಸತ್ಯ ಮತ್ತು ಮಿಥ್ಯೆಯನ್ನು ಬೇರ್ಪಡಿಸಿ ನೋಡುವ ಕಣ್ಣುಗಳನ್ನು ಅವರಿಗೆ ಕೊಟ್ಟಿದೆ. ಅಂತಹ ತಿಳಿವಳಿಕೆಯನ್ನು ದಯಪಾಲಿಸಿದೆ. ಇನ್ನು ಸುಪ್ರೀಮ್ ಕೋರ್ಟಿಗೆ ಯಾಕೆ ಧನ್ಯವಾದಗಳನ್ನು ಅರ್ಪಿಸಬೇಕು? ಯಾಕೆಂದರೆ ಯುವಜನರಲ್ಲಿ ಒಳಗೊಳಗೇ ಹರಿದ ಆಕ್ರೋಶ ಸಿಡಿಯಲು ಕಾರಣವಾದದ್ದೇ ಸುಪ್ರೀಮ್ ಕೋರ್ಟಿನ ಟೀಕೆ ಟಿಪ್ಪಣಿ. ದೇಶದ ನಿರುದ್ಯೋಗಿ ಯುವಜನರನ್ನು ಪರಾವಲಂಬಿ ಕಾಕ್ರೋಚ್ ಗಳು ಎಂದು ಕರೆದಿತು. ಈ ಟೀಕೆ ಟಿಪ್ಪಣಿ ದಿನ ಬೆಳಗಾಗುವುದರ ಒಳಗಾಗಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿಡಂಬನೆ ಸಾಮಾಜಿಕ ಜಾಲತಾಣಗಳಲ್ಲಿ ಜನಿಸಿತು. ದಿನ ಬೆಳಗಾಗುವುದರೊಳಗೆ ಭಾರತೀಯ ಜನತಾ ಪಾರ್ಟಿಗಿಂತ ಹೆಚ್ಚು ಸದಸ್ಯರನ್ನು ಗಳಿಸಿತು. ಅಪಾರ ಸಂಖ್ಯೆಯ ಮೀಮ್ ಗಳು ಆಳುವ ವ್ಯವಸ್ಥೆಯ ಜನ್ಮ ಜಾಲಾಡಲಾರಂಭಿಸಿದವು. ಪ್ರಧಾನ್ ವೈಫಲ್ಯಗಳು ಆನಂತರವೂ ಒಂದರ ನಂತರ ಮತ್ತೊಂದರಂತೆ ಹೊರ ಉರುಳಿದವು. ಪರಿಣಾಮ ಇಂದು ದೇಶದ ಮುಂದಿದೆ.
ದೇಶದ ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. JNU, TISS, AMU ಮೇಲೆ ನಿರ್ದಿಷ್ಟವಾಗಿ ಗುರಿಯಿಟ್ಟು ಒಳಗಿನಿಂದಲೇ ಗೆದ್ದಲು ಹಿಡಿಸಲಾಗಿದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾಗಿದ್ದವು. ದಲಿತ, ದುರ್ಬಲ, ಅಲ್ಪಸಂಖ್ಯಾತರೂ ಸೇರಿದಂತೆ ಬಹುಜನ ಸಮುದಾಯಕ್ಕೆ ಕೈಗೆಟುಕುವ ಶುಲ್ಕದಲ್ಲಿ ಅತ್ಯಂತ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುತ್ತಿದ್ದ ಈ ಸಂಸ್ಥೆಗಳನ್ನು ಹಾಳುಗೆಡವಲಾಗಿದೆ. ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ಶಿಕ್ಷಣಕ್ಕೆ ಮಾಡಲಾಗಿರುವ ಬಜೆಟ್ ಹಂಚಿಕೆ ಜಿಡಿಪಿಯ ಶೇ.3.1ರಿಂದ ಶೇ.2.7ಕ್ಕೆ ಕುಸಿದಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಧಾನ್ ಅಧಿಕಾರವಧಿಗೆ ಸೀಮಿತವಲ್ಲ. ಈ ಹಿಂದೆಯೂ ನಡೆದಿತ್ತು. ಆದರೆ ಪ್ರಧಾನ್ ಅವಧಿಯಲ್ಲಿ ಪರೀಕ್ಷಾ ವ್ಯವಸ್ಥೆಯೇ ಕುಸಿದು ಬಿದ್ದಿತು. ನೀಟ್ ಪರೀಕ್ಷಾ ಪ್ರಶ್ನಪತ್ರಿಕೆ ಸೋರಿಕೆ ಶಿಖರ ಮುಟ್ಟಿತು. ಮೌಲ್ಯಮಾಪನ ಅಕ್ರಮಗಳು ದೈತ್ಯ ಸ್ವರೂಪ ತಳೆದವು.
ಸರ್ಕಾರದ ಅದಕ್ಷತೆಯಿಂದಾಗಿ ಕೋಟ್ಯಂತರ ಯುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಆವರಿಸಿದೆ. ನಿರುದ್ಯೋಗ ಮೇರೆ ಮೀರಿದೆ.
ಸಾಂಸ್ಕೃತಿಕ ರಾಷ್ಟ್ರವಾದದ ತನ್ನ ಕಾರ್ಯಸೂಚಿಯನ್ನು ಜಾರಿಗೆ ತರುವುದು ಸಂಘಪರಿವಾರದ ಅತ್ಯಂತ ಪ್ರಧಾನ ಉದ್ದೇಶ. ದೇಶದ ಇಲ್ಲವೇ ರಾಜ್ಯದ ಜನಮನವನ್ನು ತನ್ನ ಸಿದ್ಧಾಂತಕ್ಕೆ ಬಗ್ಗಿಸಿಕೊಳ್ಳಲು ಶಿಕ್ಷಣ ವ್ಯವಸ್ಥೆಯೇ ಪ್ರಶಸ್ತ ದಾರಿ ಎಂಬುದನ್ನು ಆರೆಸ್ಸೆಸ್-ಬಿಜೆಪಿ ಬಹಳ ಹಿಂದೆಯೇ ಕಂಡುಕೊಂಡಿತ್ತು. ಹೀಗಾಗಿ ಶಿಕ್ಷಣ ವ್ಯವಸ್ಥೆಯನ್ನು ಹಿಂದುತ್ವಗೊಳಿಸುವುದು ಅದರ ಮುಖ್ಯ ಗುರಿ. ಅದರಲ್ಲಿ ವರ್ಣ ವ್ಯವಸ್ಥೆ, ಬ್ರಾಹ್ಮಣ್ಯದ ಶ್ರೇಷ್ಠತೆ, ದ್ವೇಷ, ಗಂಡಾಳಿಕೆ, ಪೂರ್ವಗ್ರಹಗಳು, ಹುಸಿ ಚರಿತ್ರೆಯ ಒಣ ಹೆಮ್ಮೆಯ ನಂಜನ್ನು ಬಿತ್ತಿ ಬೆಳೆದು, ಸಮಾಜವನ್ನು ಸಂಘ ಪರಿವಾರದ ಮಾನಸಿಕ ಗುಲಾಮಗಿರಿಯಲ್ಲಿ ಕೈದು ಮಾಡುವುದೇ ಅದರ ನಿಜ ಅಜೆಂಡಾ.
ಕೇಂದ್ರ ಬಿಜೆಪಿ ಸಚಿವ ಸಂಪುಟಗಳಿಂದ ಹಿಡಿದು, ರಾಜ್ಯ ಬಿಜೆಪಿ ಸಚಿವ ಸಂಪುಟಗಳ ತನಕ ಒಂದು ಸಮಾನ ಅಂಶವನ್ನು ಕಾಣಬಹುದು. ಅದೆಂದರೆ ಶಿಕ್ಷಣ ಮಂತ್ರಾಲಯಕ್ಕೆ ಬಿಜೆಪಿ ಆರೆಸ್ಸೆಸ್ ನೀಡುತ್ತ ಬಂದಿರುವ ಆದ್ಯತೆ. ಲಾಗಾಯಿತಿನಿಂದ ಆರೆಸ್ಸೆಸ್ ಮೂಲದ ಬಿಜೆಪಿ ಮಂತ್ರಿಗಳ ಕೈಗೆ ಒಪ್ಪಿಸುತ್ತ ಬಂದಿರುವುದನ್ನು ಕಾಣಬಹುದು.
ಡಾ.ಮುರಳೀ ಮನೋಹರ ಜೋಶಿಯಿಂದ ಹಿಡಿದು ಧರ್ಮೇಂದ್ರ ಪ್ರಧಾನ್ ತನಕ ಈ ಮಾತು ನಿಜ. ನಡುವೆ ಕಾಣಿಸಿಕೊಂಡ ಸ್ಮೃತಿ ಜುಬಿನ್ ಇರಾನಿ ವಿನಾ ಎಲ್ಲರೂ ಕಟ್ಟರ್ ಆರೆಸ್ಸೆಸ್ ಮೂಲದವರು. ಪ್ರಕಾಶ್ ಜಾವಡೇಕರ್, ರಮೇಶ್ ಪೋಖ್ರಿಯಾಲ್ ನಂತರ ಇದೀಗ ಧರ್ಮೇಂದ್ರ ಪ್ರಧಾನ್.
ಒಂದು ದೇಶ, ಒಂದು ಜನಾಂಗ, ಒಂದು ರಾಷ್ಟ್ರ ಎಂಬ ತಿರುಳು ತತ್ವ ಉಳ್ಳ ”ಸಾಂಸ್ಕೃತಿಕ ರಾಷ್ಟ್ರೀಯತೆ”ಯನ್ನು (Cultural Nationalism) ವಾಜಪೇಯಿ ಸರ್ಕಾರವೇ ಅಳವಡಿಸಿಕೊಂಡಿತ್ತು. ಉರ್ದು- ಮುಸ್ಲಿಂ- ಪಾಕಿಸ್ತಾನ ಎನ್ನುವಂತೆ ಹಿಂದಿ- ಹಿಂದು-ಹಿಂದುಸ್ತಾನ. ಆರ್ಯ ಪಾರಮ್ಯದ ಇದೇ ಸಾಂಸ್ಕೃತಿಕ ರಾಷ್ಟ್ರೀಯತೆಯು ಜರ್ಮನಿಯಲ್ಲಿ ಯಹೂದಿಗಳ ಸಾಮೂಹಿಕ ಮಾರಣ ಹೋಮಕ್ಕೆ ಕಾರಣ ಆಯಿತು. ಅನ್ನ, ಅರಿವೆ, ನೀರು, ನೆರಳಿಗಾಗಿ ಜನಸಾಮಾನ್ಯರ ಜಂಜಾಟವನ್ನು ಸಾಂಸ್ಕೃತಿಕ ರಾಷ್ಟ್ರೀಯತೆ ಲೆಕ್ಕಕ್ಕೇ ಇಡುವುದಿಲ್ಲ. ತುಳಿಸಿಕೊಂಡವರು- ದೀನ ದರಿದ್ರರ ಖಬರು ಮೊದಲೇ ಇಲ್ಲ. ಬದಲಾಗಿ ಅಸ್ಮಿತೆ, ಧರ್ಮ, ಸಂಸ್ಕೃತಿ, ರಾಷ್ಟ್ರೀಯತೆಯೇ ಪರಮ. ರಾಜ್ಯಾಧಿಕಾರಕ್ಕೆ ಸೋಪಾನ ಆಗುವ ಮತಭಂಡಾರಗಳನ್ನು ಕಟ್ಟಿ ನಿಲ್ಲಿಸುವುದಕ್ಕೂ ಸಾಂಸ್ಕೃತಿಕ ರಾಷ್ಟ್ರೀಯತೆ ಬಹು ಉಪಯೋಗಿ. ದೇಶದ ಸಂವಿಧಾನದಲ್ಲಿ ಈ ಬಗೆಯ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಎಡೆಯಿಲ್ಲ. ಮುಸಲ್ಮಾನರು, ಕ್ರೈಸ್ತರು, ಕಮ್ಯೂನಿಸ್ಟರ ಮಾತು ಹಾಗಿರಲಿ, ಹಿಂದೂ ಸಮಾಜದ ಅಂಗ ಎಂದು ಅವರ ಮೇಲೆ ಹಕ್ಕು ಸಾಧಿಸುವ ದಲಿತರು- ಆದಿವಾಸಿಗಳನ್ನೂ ಸಾಂಸ್ಕೃತಿಕ ರಾಜಕಾರಣ ಬೇಟೆಯಾಡಿದೆ. ಅವರ ಪರ ದನಿಯೆತ್ತುವವರನ್ನು ದೇಶದ್ರೋಹದ ಹೆಸರಿನಲ್ಲಿ ಜೈಲಿಗೆ ತಳ್ಳಲಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಿ ವಿರೂಪಗೊಳಿಸುವ ಪ್ರಯತ್ನಗಳು ನಡೆದಿವೆ.
ವಾಜಪೇಯಿ ಸರ್ಕಾರದಲ್ಲಿ ಆರಂಭವಾದ ಇಂತಹ ಸಾಂಸ್ಕೃತಿಕ ರಾಜಕಾರಣ, ಮೋದಿ ಕಾಲದಲ್ಲಿ ಅತಿರೇಕದ ಹೊಸ ಎತ್ತರಗಳನ್ನು ತಲುಪಿದೆ.
ಈ ಲೇಖನ ಓದಿದ್ದೀರಾ?: ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ
ಈ ಅಜೆಂಡಾವನ್ನು ಜಾರಿಗೊಳಿಸಲು ಧರ್ಮೇಂದ್ರ ಹಗಲಿರುಳು ದುಡಿದಿದ್ದಾರೆ. ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಎತ್ತಿ ಹಿಡಿಯುವ ಬದಲು ಅದರ ಕುಸಿತಕ್ಕೆ ಹತ್ತು ಹಲವು ದಾರಿಗಳನ್ನು ಯಶಸ್ವಿಯಾಗಿ ತೆರೆದಿದ್ದಾರೆ. ಅವರಿಗೆ ತಪ್ಪದೆ ಥ್ಯಾಂಕ್ಸ್ ಹೇಳಬೇಕಿದೆ.
ದೇಬೇಂದ್ರ ಪ್ರಧಾನ್ ಕಟ್ಟರ್ ಆರೆಸ್ಸೆಸ್ಸಿಗ. ಕೇಂದ್ರ ಮಂತ್ರಿ, ಮೂರು ಸಲ ಒಡಿಶಾ ಬಿಜೆಪಿ ಅಧ್ಯಕ್ಷರಾಗಿದ್ದವರು. ಅಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಇವರ ಮಗ ಧರ್ಮೇಂದ್ರ ಕೂಡ ಅಪ್ಪಟ ಆರೆಸ್ಸಿಸ್ಸಿಗ. 2014ರಿಂದ 2021ರ ತನಕ ಪೆಟ್ರೋಲಿಯಂ ಸಚಿವರಾಗಿದ್ದವರು. ಈ ಅವಧಿಯಲ್ಲಿ ಆಯಿಲ್ ಅಂಡ್ ನ್ಯಾಚ್ಯುರಲ್ ಗ್ಯಾಸ್ ಕಾರ್ಪೊರೇಷನ್ ಎಂಬ ಸರ್ಕಾರಿ ನಿಗಮದಿಂದ ಹತ್ತಿರ ಹತ್ತಿರ ಏಳುನೂರು ಕೋಟಿ ರುಪಾಯಿಗಳನ್ನು ಸಂಘಪರಿವಾರಕ್ಕೆ ದೇಣಿಗೆ ಕೊಡಿಸಿದ್ದು ಇವರ ಆರೆಸ್ಸೆಸ್ ಭಕ್ತಿಯ ಮುಕುಟಕ್ಕೆ ಸೇರಿದ ಮತ್ತೊಂದು ಗರಿ.
ಇಂತಹ ಹಿನ್ನೆಲೆ ಹೊಂದಿರುವ ಪ್ರಧಾನ್ ಅವರನ್ನು ರಕ್ಷಿಸಬೇಕೋ ಅಥವಾ ಅವರ ರಾಜೀನಾಮೆ ನೀಡಿ ಕೋಟ್ಯಂತರ ಯುವಜನ- ವಿದ್ಯಾರ್ಥಿಗಳ ಕೋಪವನ್ನು ತಣಿಸಬೇಕೋ? ಮೋದಿ ಮತ್ತು ಆರೆಸ್ಸೆಸ್ ಪರಿವಾರದ ಆಯ್ಕೆ ಪ್ರಧಾನ್ ರಕ್ಷಣೆ! ಅರ್ಥಾತ್ ಯುವಜನತೆಯ ಆಶೋತ್ತರಗಳ ನಿರ್ಲಕ್ಷ್ಯ.
ಈ ಎಲ್ಲ ಅಂಶಗಳು ಜೀವವಿರೋಧಿ ಶಕ್ತಿಗಳ ಮೆರೆದಾಟಕ್ಕೆ ಮಂಕು ಹಿಡಿಸುವುದು ನಿಶ್ಚಿತ. ಧರ್ಮ-ದ್ವೇಷದ ಅಮಲಿನಲ್ಲಿ ಮೈಮರೆತಿರುವ ಜನವರ್ಗಗಳ ಜಾಗೃತಿ.
ಹೇರಳ ಉದ್ಯೋಗಾವಕಾಶ ಕಲ್ಪಿಸುವ ಮತ್ತು ನೆಲಕಚ್ಚಿದ್ದ ಜನಕೋಟಿಯ ಬದುಕುಗಳನ್ನು ಎತ್ತಿ ನಿಲ್ಲಿಸುವ ಆಶೋತ್ತರ ರಾಜಕಾರಣದ ಕನಸನ್ನು ಬಿತ್ತಿ ಅಧಿಕಾರ ಹಿಡಿದವರು ಪ್ರಧಾನಮಂತ್ರಿ ಮೋದಿ. ಆದರೆ ಈ ದಾರಿಯಲ್ಲಿ ಬಹುದೂರ ಸಾಗಲಿಲ್ಲ. ಆಶೋತ್ತರ ರಾಜಕಾರಣವು ರಾಷ್ಟ್ರವಾದವೇ ಪರಮ ಎಂಬ ಸಾಂಸ್ಕೃತಿಕ ರಾಜಕಾರಣಕ್ಕೆ ಶರಣಾಯಿತು.
ಅದೇನೇ ಇರಲಿ,
ಥ್ಯಾಂಕ್ಯೂ ಮೋದಿ, ಬಿಜೆಪಿ, ಆರೆಸ್ಸೆಸ್, ಸುಪ್ರೀಮ್ ಕೋರ್ಟ್. ಥ್ಯಾಂಕ್ಯೂ!




