ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯಕ್ಕೆ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾದ ಎಲ್ಲ ಅಭ್ಯರ್ಥಿಗಳಿಗೆ ವಿಶೇಷ ಮರುಪರೀಕ್ಷೆ ನಡೆಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಬೀದರ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬೆಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆ ಹಾಜರಾಗಲು ವಿಜಯಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಅಭ್ಯರ್ಥಿಗಳು ವಿಜಯಪುರ–ಯಶವಂತಪುರ (16548) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ರೈಲು ನಾಲ್ಕು ಗಂಟೆಗೂ ಅಧಿಕ ಕಾಲ ವಿಳಂಬವಾದ ಪರಿಣಾಮ, 500ಕ್ಕೂ ಹೆಚ್ಚು ಅಭ್ಯರ್ಥಿಗಳು ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಡಿವೈಎಫ್ಐ ಜಿಲ್ಲಾ ಸಂಚಾಲಕ ಶಶಿಕಾಂತ್ ಡಾಂಗೆ ತಿಳಿಸಿದ್ದಾರೆ.
ವರ್ಷಗಟ್ಟಲೆ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಅಭ್ಯರ್ಥಿಗಳು ತಮ್ಮ ಯಾವುದೇ ತಪ್ಪಿಲ್ಲದೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದಾರೆ. ರೈಲ್ವೆ ಇಲಾಖೆಯ ತಾಂತ್ರಿಕ ದೋಷದಿಂದ ಉಂಟಾದ ಈ ಪರಿಸ್ಥಿತಿಗೆ ಪರೀಕ್ಷಾರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ನ್ಯಾಯಸಮ್ಮತವಲ್ಲ. ಹೀಗಾಗಿ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳನ್ನು ಗುರುತಿಸಿ, ಅವರ ಅರ್ಹತೆ ಅಥವಾ ಅವಕಾಶಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ವಿಶೇಷ ಮರುಪರೀಕ್ಷೆ ನಡೆಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಈಗಾಗಲೇ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಿರುವುದರಿಂದ ಮರುಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು. ಮರುಪರೀಕ್ಷೆಯ ದಿನಾಂಕ, ಸಮಯ ಹಾಗೂ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಕೆಇಎ ಕೂಡಲೇ ಪ್ರಕಟಿಸಬೇಕು. ಪರೀಕ್ಷೆಯಿಂದ ವಂಚಿತರಾದ ಪ್ರತಿಯೊಬ್ಬ ಅಭ್ಯರ್ಥಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ರೈಲ್ವೆ ಇಲಾಖೆಯ ತಾಂತ್ರಿಕ ದೋಷ ಅಥವಾ ಕಾಮಗಾರಿಗಳಿಂದಾಗಿ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ತಲುಪಲಾಗದ ಘಟನೆಗಳು ಈ ಹಿಂದೆಯೂ ನಡೆದಿವೆ. ಇಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಅಭ್ಯರ್ಥಿಗಳಿಗಾಗಿ ಹೆಚ್ಚುವರಿ ರೈಲು ಹಾಗೂ ಬಸ್ ಸೇವೆಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ಯಾವುದೇ ನೆಪ ಹೇಳದೆ, ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೆಇಎಗೆ ಸೂಕ್ತ ನಿರ್ದೇಶನ ನೀಡಿ ಮರುಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರೈಲು ಸಂಚಾರದಲ್ಲಿನ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಶಿಕಾಂತ್ ಡಾಂಗೆ ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ರಕ್ತದಾನವು ಜೀವ ಉಳಿಸುವ ಮಹತ್ವದ ಸೇವೆ
ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕ ರೈಲು ಹಾಗೂ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾರ್ಥಿಗಳ ಭವಿಷ್ಯದೊಂದಿಗೆ ನಿರ್ಲಕ್ಷ್ಯ ವಹಿಸದಂತೆ ಸರ್ಕಾರಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಶಿಕಾಂತ ಒತ್ತಾಯಿಸಿದ್ದಾರೆ.





