ಮಕ್ಕಳಲ್ಲಿ ಭಾಷೆಯ ಬೆಳವಣಿಗೆ, ಗಣಿತದ ಕೌಶಲ್ಯಗಳು ಸರಿಯಾಗಿ ಕರಗತ ಮಾಡಿಕೊಳ್ಳಲು ಸೃಜನಾತ್ಮಕ ಕಲಿಕೆಗೆ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಸರಕಾರಿ ನೌಕರರ ಸಂಘದ ಕಮಲನಗರ ತಾಲ್ಲೂಕಾಧ್ಯಕ್ಷ ಸುನೀಲ ಕಸ್ತೂರೆ ಹೇಳಿದರು.
ಕಮಲನಗರ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತಾನಾಡಿದರು.
ʼಶಿಕ್ಷಕ ವೃತ್ತಿಯು ಬಹಳ ಪವಿತ್ರವಾದದ್ದು, ಮಕ್ಕಳ ಕಲಿಕೆಗೆ ಇಂತಹ ಚಟುವಟಿಕೆಗಳು ಜ್ಞಾನ ವೃದ್ಧಿಗೆ ತುಂಬಾ ಉಪಯುಕ್ತವಾಗಿವೆ. ಸರ್ಕಾರಿ ನೌಕರರ ಸಂಘದಿಂದ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಿಸಲಾಗುವುದುʼ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಸಂಜೀವಕುಮಾರ ಮೇತ್ರೆ ಮಾತನಾಡಿ, ʼಸರಕಾರಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ಓದುವ ಮಕ್ಕಳಿಗಾಗಿ ಶಿಕ್ಷಣ ಇಲಾಖೆಯ ಆದೇಶದಂತೆ ಕಲಿಕಾ ಹಬ್ಬವನ್ನು ಆಯೋಜಿಸಲಾಗಿದೆ. ಮಕ್ಕಳು ಉತ್ಸಾಹದಿಂದ ಕಲಿಯಲು ಕಲಿಕಾ ಹಬ್ಬ ತುಂಬಾ ಸಹಕಾರಿಯಾಗಿದೆʼ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಬಸವರಾಜ ಪಾಟೀಲ್, ʼಕ್ಲಸ್ಟರ್ ವಲಯದ ಎಲ್ಲಾ ಶಾಲೆಗಳ ಮಕ್ಕಳು ಕಲಿಕಾ ಹಬ್ಬದಲ್ಲಿ ಉಲ್ಲಾಸದಿಂದ ವಿವಿಧ ಚಟುವಟಿಕೆಗಲ್ಲಿ ಭಾಗವಹಿಸಿದರು. ಶಿಕ್ಷಕರು, ಮಕ್ಕಳು ಸೇರಿ ರಚಿಸಿರುವ ವಿವಿಧ ಪ್ರಕಾರದ ಪಾಠೋಪಕರಣಗಳ ಪ್ರದರ್ಶನ ಗಮನಸೆಳೆಯಿತುʼ ಎಂದರು.

ಪತ್ರಕರ್ತ ಎಸ್.ಎಸ್.ಮೈನಾಳೆ ಮಾತನಾಡಿ, ʼಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಹೊಸ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ಶಿಕ್ಷಕರು ಪ್ರಾಮಾಣಿಕ ಪ್ರಯತ್ನಿಸಿ ಮಕ್ಕಳಿಗೆ ಪ್ರೋತ್ಸಾಹಿಬೇಕುʼ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 7 ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು, ಯಾರು ಏನಂದ್ರು?
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಸಚಿನ ಸಿಂಧೆ, ಬಸವರಾಜ ಜಾಗಾವೆ, ರಾಜಕುಮಾರ ವಡಗಾವೆ, ಸಚಿನ್ ಸಿಂಧೆ, ಸಂಜುಕುಮಾರ ಮೇತ್ರೆ, ಬಸವರಾಜ ಮಹಾಜನ, ಬಸವರಾಜ ಜಾಗಾವೆ, ಸಿಆರ್‌ಪಿಗಳಾದ ರೋಹಿದಾಸ ಮೇತ್ರೆ, ನವನಾಥ ಬೊರೋಳೆ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಪಾಲಕರು, ಮಕ್ಕಳು ಪಾಲ್ಗೊಂಡಿದ್ದರು. ವಲಯ ಸಂಪನ್ಮೂಲ ವ್ಯಕ್ತಿ ಮಾದಪ್ಪಾ ಮಡಿವಾಳ ಸ್ವಾಗತಿಸಿದರು. ವಿಜಯಕುಮಾರ ನೂದನೂರೆ ವಂದಿಸಿದರು. ಗೋಪಾಳ ತೆಲಂಗೆ ನಿರೂಪಿಸಿದರು.