ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಬುಧವಾರ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆವರಣದಲ್ಲಿ ಬೀದರ ಜಿಲ್ಲಾಡಳಿತ, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ 36 ಕೋಟಿ ರೂ. ಮೊತ್ತದ 100 ಹಾಸಿಗೆಗಳ ಕಿದ್ವಾಯಿ ಫೆರಿಫರಲ್ ಕ್ಯಾನ್ಸರ ಚಿಕಿತ್ಸಾ ಘಟಕ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ʼಇತ್ತೀಚಿನ ದಿನಗಳಲ್ಲಿ ಗುಟ್ಕಾ, ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ಸ್ತನ ಕ್ಯಾನ್ಸರ್ ಪ್ರಮಾಣವು ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಅತ್ಯಂತ ಮುಖ್ಯ, ಸಾರ್ವಜನಿಕರು ಗುಟ್ಕಾ, ತಂಬಾಕು ಸೇರಿದಂತೆ ಆರೋಗ್ಯಕ್ಕೆ ಹಾನಿಕಾರವಾದ ದುಶ್ಚಟಗಳಿಂದ ದೂರವಿರಬೇಕುʼ ಎಂದು ಸಲಹೆ ನೀಡಿದರು.
ʼಬೀದರನಲ್ಲಿ ಕಿದ್ವಾಯಿ ಸಂಸ್ಥೆಯ ಸಹಯೋಗದೊಂದಿಗೆ ಆಧುನಿಕ ಮತ್ತು ಸುಧಾರಿತ ತಂತ್ರಜ್ಞಾನ ಹೊಂದಿದ ಹೊಸ ಕ್ಯಾನ್ಸರ್ ಚಿಕಿತ್ಸಾ ಘಟಕ ನಿರ್ಮಾಣ ಆಗುತ್ತಿರುವುದು ಜಿಲ್ಲೆಯ ಜನೆಗೆ ಮಹತ್ತರವಾದ ಆರೋಗ್ಯ ಸೇವೆಯಾಗಲಿದೆ. ಆರಂಭಿಕ ಹಂತದಲ್ಲೆ ರೋಗ ಪತ್ತೆ ಮತ್ತು ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಈ ಕೇಂದ್ರ ಸಹಕಾರಿ ಆಗಲಿದೆʼ ಎಂದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಾತನಾಡಿ, ʼಜಿಲ್ಲೆಯಲ್ಲಿ 4 ಆಸ್ಪತ್ರೆಗಳು ಪ್ರಾರಂಭವಾಗುತ್ತಿದ್ದು, ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು. ಅದೇ ರೀತಿಯಲ್ಲಿ ಜನರಿಗೆ ಕ್ಯಾನ್ಸರ್ ಮಾರಕ ರೋಗದ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲಿʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | 11ನೇ ದಿನ ಪೂರೈಸಿದ ಎಸ್‌ಐಆರ್, ಇವಿಎಂ ವಿರುದ್ಧದ ಉಪವಾಸ ಸತ್ಯಾಗ್ರಹ : ಬೆಂಬಲ
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಬ್ರಿಮ್ಸ್ ನಿರ್ದೇಶಕ ಡಾ.ಶಾಂತಲಾ ಕೌಜಲಗಿ, ಗುಲಬರ್ಗಾ ಕಿದ್ವಾಯಿ ಆಸ್ಪತ್ರೆಯ ಡಾ.ಗುರುರಾಜ ದೇಶಪಾಂಡೆ, ಹಿರಿಯ ವೈದ್ಯರಾದ ರಾಜೇಶ ಪಾರಾ, ವೈದ್ಯಕೀಯ ಅಧೀಕ್ಷಕ ಶಿವಯೋಗಿ ಎಸ್.ಬಾಳಿ, ಡಾ.ಅಹಮದ, ಡಾ.ವಿಜಯ ಅಂತಪ್ಪಾ, ಡಾ.ಉಮಾ ದೇಶಮುಖ ಸೇರಿದಂತೆ ಬ್ರಿಮ್ಸ್ ಸಿಬ್ಬಂದಿ ವರ್ಗ, ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





