ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕಪೇಟ್ ರಿಂಗ್ರೋಡ್ ಸಮೀಪ ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿರುವ ಪೊಲೀಸರು, ಅವರಿಂದ ಒಟ್ಟು 5 ನಾಡ ಪಿಸ್ತೂಲ್, 26 ಜೀವಂತ ಗುಂಡುಗಳು, 5 ತಲ್ವಾರ್ ಸೇರಿದಂತೆ ₹6.73 ಲಕ್ಷ ಮೌಲ್ಯದ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಜುಲೈ 15ರಂದು ಸಂಜೆ ರಿಂಗ್ ರಸ್ತೆಯ ಖಾಸಗಿ ಶಾಲೆ ಸಮೀಪ ಇಬ್ಬರು ಶಸ್ತ್ರಾಸ್ತ್ರ ಮಾರಾಟಕ್ಕೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.
ಬೀದರ್ ನಗರದ ಗುರುದ್ವಾರ ಸಮೀಪದ ಅಮನ್ಜೀತ್ ಸಿಂಗ್ ರಂಜೀತ್ ಸಿಂಗ್ (21) ಹಾಗೂ ನಗರದ ಶಹಾಗಂಜ್ನ ವೆಂಕಟೇಶ್ ತುಕಾರಾಮ (21) ಬಂಧಿತರು. ಶಸ್ತ್ರಾಸ್ತ್ರ ಪೂರೈಸಿದ ನಾಂದೇಡ್ದಲ್ಲಿರುವ ಬಲಬೀರ್ ಸಿಂಗ್ ಪ್ರತಾಪ್ ಸಿಂಗ್ (23) ಮತ್ತು ನವಜೋತ್ ಸಿಂಗ್ ಇಂದೇರ್ ಸಿಂಗ್ (24) ಪತ್ತೆ ಕಾರ್ಯ ನಡೆದಿದೆ. ನಾಲ್ವರ ವಿರುದ್ಧ ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಪ್ರದೀಪ ಗುಂಟಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿವೈಎಸ್ಪಿಗಳಾದ ಎನ್.ಡಿ.ಸನದಿ, ದೂದ್ ಪೀರ್ ಹುಸೇನಸಾಬ್ ಮುಲ್ಲಾ, ಶರಣಪ್ಪ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಶಸ್ತ್ರಾಸ್ತ್ರಗಳ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 5 ನಾಡ ಪಿಸ್ತೂಲ್, 26 ಜೀವಂತ ಮದ್ದುಗುಂಡುಗಳು, 10 ಎಮ್.ಟಿ. ಕೇಸ್ಗಳು, 5 ತಲ್ವಾರ್, ಕೃತ್ಯ ಬಳಸಿದ ಒಂದು ಬೈಕ್ ಸೇರಿದಂತೆ ಒಟ್ಟು ₹6.73 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 8 ರೌಂಡ್ಸ್ ಇರುವ ಪಿಸ್ತೂಲ್ಗಳಾಗಿದ್ದು, 10 ರೌಂಡ್ಸ್ ಗುಂಡು ಬಳಸಿದ್ದಾರೆ ಎಂದು ತಿಳಿಸಿದರು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಬೀದರ್ ಗ್ರಾಮೀಣ ಠಾಣೆಯ ಪಿಎಸ್ಐ ತಸ್ಲಿಮಾ ಸುಲ್ತಾನಾ ಹಾಗೂ ಸಿಬ್ಬಂದಿಗಳಾದ ಎಮ್.ಡಿ. ಆರೀಫ್, ಪ್ರಶಾಂತ್, ಅನಿಲ್, ಹಣಮಂತ, ಮಲ್ಲಿಕಾರ್ಜುನ, ಮಂಜುನಾಥ, ವರದರಾಜ, ಎಎಸ್ಐ ನವಾಜ್, ಸಿಬ್ಬಂದಿ ಗುರುನಾಥ, ಶೇಖ್ ಮೊದಿನ್, ರಾಜಕುಮಾರ್ ದಾನಾ, ಮಲ್ಲಿಕಾರ್ಜುನ, ಶಿವಶರಣಪ್ಪ ಅವರು ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ. ಸಾರ್ವಜನಿಕರು ಯಾವುದೇ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡು ಅಥವಾ ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | ಉತ್ತಮ ಸಮಾಜ ಕಟ್ಟಲು ಪುಸ್ತಕ ಓದು ಅಗತ್ಯ : ಸಿದ್ರಾಮಪ್ಪಾ ಮಾಸಿಮಾಡೆ
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಸೇರಿದಂತೆ ಪೊಲೀಸ್ ಆಧಿಕಾರಿಗಳು ಉಪಸ್ಥಿತರಿದ್ದರು.




